ಕೊಡಗು: ಹಾರಂಗಿ ಡ್ಯಾಂ ಭರ್ತಿ, 1200 ಕ್ಯೂಸೆಕ್ ನೀರು ನದಿಗೆ ಬಿಡುಗಡೆ
* ಹಾರಂಗಿಗೆ ಬಾಗಿನ ಅರ್ಪಿಸಿದ ಶಾಸಕ ಅಪ್ಪಚ್ಚು ರಂಜನ್
* ಕೊಡಗು ಜಿಲ್ಲೆಗೆ ವಿಶೇಷ ಪ್ಯಾಕೇಜ್ ಘೋಷಿಸಲು ಸರ್ಕಾರಕ್ಕೆ ಮನವಿ
* ಹೂಳು ತೆಗೆಯಲು ಸರ್ಕಾರದಿಂದ 10 ಕೋಟಿ ರೂ. ಬಿಡುಗಡೆ
ಮಡಿಕೇರಿ(ಜು.03): ಕೊಡಗು ಜಿಲ್ಲೆಯ ಹಾರಂಗಿ ಜಲಾಶಯ ಭರ್ತಿಯಾಗುತ್ತಿದ್ದು, ಜಲಾಶಯದಿಂದ 1200 ಕ್ಯುಸೆಕ್ ನೀರನ್ನು ಶನಿವಾರ ನದಿಗೆ ಹರಿಯ ಬಿಡಲಾಯಿತು. ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ಹಾರಂಗಿ ಜಲಾಶಯ ಬಳಿ ಇರುವ ಕಾವೇರಿ ಮಾತೆಗೆ ವಿಶೇಷ ಪೂಜೆ ಸಲ್ಲಿಸಿದ ನಂತರ, ಹಾರಂಗಿ ಜಲಾಶಯಕ್ಕೆ ಬಾಗಿನ ಅರ್ಪಿಸಿದರು. ಬಳಿಕ ಜಲಾಶಯದ ನಾಲ್ಕು ಕ್ರೆಸ್ವ್ ಗೇಟ್‌ಗಳ ಮೂಲಕ ನೀರು ಬಿಡುಗಡೆಗೆ ಚಾಲನೆ ನೀಡಿದರು.
ಶಾಸಕ ರಂಜನ್ ಮಾತನಾಡಿ, 2018 ಮತ್ತು 2019ರಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಿಂದ ಜಿಲ್ಲೆಯ ಜನರು ತುಂಬಾ ನೊಂದಿದ್ದಾರೆ. ಮತ್ತೆ ಆ ರೀತಿ ಆಗದೆ, ಮಳೆಯೂ ಬರಲಿ ನಾಡಿನ ಜಲಾಶಯಗಳು ತುಂಬುವಂತಾಗಲಿ, ಕೃಷಿ ಚಟುವಟಿಕೆಗಳು ಕೂಡ ಸಮೃದ್ಧಿಯಾಗಲಿ ಎಂದರು. ಕಾವೇರಿ ನದಿ ಪಾತ್ರದಲ್ಲಿ ಉತ್ತಮ ಮಳೆಯಾಗಿ ಕರ್ನಾಟಕ, ತಮಿಳುನಾಡು, ಪಾಂಡಿಚೇರಿಗೆ ಕುಡಿಯುವ ನೀರು ಹಾಗೂ ಕೃಷಿ ಚಟುವಟಿಕೆಗೆ ಅನುಕೂಲವಾಗಲಿ ಎಂದು ಶಾಸಕರು ಆಶಯ ವ್ಯಕ್ತಪಡಿಸಿದರು.
ಸರಣಿ ಭೂಕಂಪನವಾದ ಕೊಡಗಿನ ಚೆಂಬು ಗ್ರಾಮದಲ್ಲಿ ಭೂಕುಸಿತ, ಗ್ರಾಮಸ್ಥರಲ್ಲಿ ಹೆಚ್ಚಾಯ್ತು ಆತಂಕ
ಕಳೆದ ಬಾರಿ ಜುಲೈ 16 ರಂದು ಜಲಾಶಯದಿಂದ ನೀರನ್ನು ನದಿಗೆ ಹರಿಯ ಬಿಡಲಾಗಿತ್ತು. ಈ ಬಾರಿ ಜಲಾಶಯ ತುಂಬಲು ಇನ್ನೂ 3 ಅಡಿ ಬಾಕಿ ಇರುವಾಗಲೇ ನದಿಗೆ ಜಲಾಶಯದಿಂದ ನೀರನ್ನು ಹರಿಯ ಬಿಡಲಾಗಿದೆ. ಇದರಿಂದ ಯಾರಿಗೂ ಯಾವುದೇ ರೀತಿಯಲ್ಲಿ ತೊಂದರೆ ಆಗದಂತೆ ಗಮನಹರಿಸಲಾಗಿದೆ ಎಂದು ಅಪ್ಪಚ್ಚು ರಂಜನ್ ತಿಳಿಸಿದರು.
ವಿಶೇಷ ಪ್ಯಾಕೇಜ್ ಪ್ರಕಟಿಸಲು ಮನವಿ: ಕೊಡಗು ಜಿಲ್ಲೆಯ ಕಾವೇರಿ ನದಿಪಾತ್ರದಿಂದ ಸುಮಾರು 450 ಟಿಎಂಸಿ ನೀರು ಹರಿದು ಹೋಗುತ್ತಿದೆ. ಒಂದು ಟಿಎಂಸಿ ನೀರನ್ನು 25 ಸಾವಿರ ಎಕರೆ ಕೃಷಿ ಚಟುವಟಿಕೆಗೆ ಒದಗಿಸಬಹುದಾಗಿದೆ. ಆ ನಿಟ್ಟಿನಲ್ಲಿ ಕೊಡಗು ಜಿಲ್ಲೆಯಲ್ಲಿ ಹೆಚ್ಚಿನ ಮಳೆಯಿಂದಾಗಿ ರಸ್ತೆ, ಸೇತುವೆ, ವಿದ್ಯುತ್ ಕಂಬಗಳು ಸೇರಿದಂತೆ ಅಪಾರ ಪ್ರಮಾಣದಲ್ಲಿ ಹಾನಿಯಾಗುತ್ತವೆ. ಆದ್ದರಿಂದ ಕೊಡಗು ಜಿಲ್ಲೆಗೆ ಸರ್ಕಾರ ವಿಶೇಷ ಪ್ಯಾಕೇಜ್ ಪ್ರಕಟಿಸಬೇಕು ಎಂದು ಅಪ್ಪಚ್ಚು ರಂಜನ್ ಇದೇ ಸಂದರ್ಭದಲ್ಲಿ ಮನವಿ ಮಾಡಿದರು.
ಹೂಳು ತೆಗೆಯಲು ಸರ್ಕಾರದಿಂದ 10 ಕೋಟಿ ರೂ. ಬಿಡುಗಡೆಯಾಗಿದ್ದು, ನವೆಂಬರ್ ತಿಂಗಳ ನಂತರ ಕುಶಾಲನಗರದ ಸಾಯಿ, ಕುವೆಂಪು ಹಾಗೂ ಇತರೆ ಬಡಾವಣೆ ಸೇರಿದಂತೆ ಕಾವೇರಿ ನದಿ ಪಾತ್ರದಲ್ಲಿ ಹೂಳು ತೆಗೆಯಲಾಗುವುದು ಎಂದರು.
ಕೊಡಗಿನ ಕಾಫಿ ತೋಟದಲ್ಲಿ ಹುಲಿ ಮೃತದೇಹ ಪತ್ತೆ
ಹಾರಂಗಿ ಜಲಾಶಯಕ್ಕೆ ಒಳಹರಿವು, ಜಲಾಶಯದ ನೀರಿನ ಪ್ರಮಾಣ, ಹೊರಹರಿವು ಹೀಗೆ ಪ್ರತಿಯೊಂದು ಮಾಹಿತಿಯನ್ನು ಪ್ರತಿನಿತ್ಯ ಎಂಜಿನಿಯರ್ ಅವರಿಂದ ಪಡೆದು, ಯಾವುದೇ ರೀತಿಯ ಸಮಸ್ಯೆಗಳು ಉಂಟಾಗದಂತೆ ಮುನ್ನೆಚ್ಚರ ವಹಿಸಲಾಗಿದೆ ಎಂದು ಶಾಸಕರು ತಿಳಿಸಿದರು.
ಜಿಲ್ಲೆಯ ಚೆಂಬು ಗಡಿ ಭಾಗದಲ್ಲಿ ಆಗಾಗ ಭೂಕಂಪನ ಸಂಭವಿಸುವುದರಿಂದ ಮುನ್ನೆಚ್ಚರ ವಹಿಸಬೇಕಿದೆ. ಹಾರಂಗಿ ಜಲಾಶಯ ಸುಭದ್ರವಾಗಿದೆ. ಯಾವುದೇ ತೊಂದರೆಯಿಲ್ಲ ಎಂದು ಪತ್ರಕರ್ತರ ಪ್ರಶ್ನೆಗೆ ಶಾಸಕರು ಪ್ರತಿಕ್ರಿಯಿಸಿದರು.
ಕುಶಾಲನಗರ ಪಟ್ಟಣ ಪಂಚಾಯಿತಿ ಅಧ್ಯಕ್ಷ ಜಯವರ್ದನ, ಕೂಡುಮಗಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಇಂದಿರಾ, ಕುಶಾಲನಗರ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಚರಣ್, ಪ್ರಮುಖರಾದ ಲೋಕೇಶ್ವರಿ ಗೋಪಾಲ್, ಮಂಜುಳಾ, ಹಾರಂಗಿ ಜಲಾಶಯದ ಕಾರ್ಯಪಾಲಕ ಎಂಜಿನಿಯರ್ ಐ.ಕೆ. ಪುಟ್ಟಸ್ವಾಮಿ, ಎಇಇ ಮಹೇಂದ್ರ ಕುಮಾರ್, ಎಇ ಸಿದ್ದರಾಜು, ಕಿರಣ್, ಸತ್ಯ, ಸ್ಥಳೀಯ ಮುಖಂಡರು ಇತರರು ಇದ್ದರು.