ಬೆಂಗಳೂರು(ಫೆ.13): ಬೆಂಗಳೂರಿನ ಅತಿ ಹೆಚ್ಚು ಸಂಚಾರಿ ದಟ್ಟಣೆ ಹೊಂದಿರುವ 12 ಪ್ರಮುಖ ರಸ್ತೆಗಳ ನಿರ್ವಹಣೆ ಜವಾಬ್ದಾರಿಯನ್ನು ಖಾಸಗಿ ಗುತ್ತಿಗೆ ಸಂಸ್ಥೆಗೆ ನೀಡುವ ಚಿಂತನೆ ಸರ್ಕಾರದ ಮಟ್ಟದಲ್ಲಿ ಆರಂಭವಾಗಿದ್ದು, ಒಂದು ವೇಳೆ ಈ ನೀತಿ ಕಾರ್ಯರೂಪಕ್ಕೆ ಬಂದರೆ ಇದು ದೇಶದಲ್ಲೇ ಮೊಟ್ಟಮೊದಲ ಪ್ರಯೋಗವಾಗಲಿದೆ.

ಅಮೆರಿಕ, ಯೂರೋಪ್‌ ಸೇರಿದಂತೆ ಮುಂದುವರೆದ ರಾಷ್ಟ್ರಗಳಲ್ಲಿ ಈ ರೀತಿ ನಗರದ ರಸ್ತೆಗಳ ನಿರ್ವಹಣೆಯನ್ನು ಖಾಸಗಿ ಸಂಸ್ಥೆಗೆ ನೀಡುವ ವ್ಯವಸ್ಥೆ ಜಾರಿಯಲ್ಲಿದೆ. ಈ ವರೆಗೆ ಭಾರತದ ಯಾವುದೇ ನಗರದ ರಸ್ತೆಗಳ ನಿರ್ವಹಣೆ ಜವಾಬ್ದಾರಿಯನ್ನು ಖಾಸಗಿ ಸಂಸ್ಥೆಗೆ ಅಥವಾ ಗುತ್ತಿಗೆದಾರರಿಗೆ ನೀಡಿದ ಉದಾಹರಣೆ ಇಲ್ಲ. ಅಂತಹದೊಂದು ಹೊಸ ಪ್ರಯತ್ನಕ್ಕೆ ರಾಜ್ಯ ಸರ್ಕಾರ ಮುಂದಾಗಿದ್ದು, ಎರಡು ಹಂತದಲ್ಲಿ ಈ ಯೋಜನೆ ಕಾರ್ಯರೂಪಕ್ಕೆ ತರಲು ರೂಪರೇಷೆ ಸಿದ್ಧಗೊಂಡಿದೆ.

ಗುಡ್‌ನ್ಯೂಸ್: ಖಾಸಗಿ ವೈದ್ಯ ಕಾಲೇಜು ಶುಲ್ಕ ಏರಿಕೆಗೆ ಬ್ರೇಕ್‌

ಮೊದಲ ಹಂತದಲ್ಲಿ ಬಿಬಿಎಂಪಿ ಅಭಿವೃದ್ಧಿ ಪಡಿಸಿ ನಿರ್ವಹಣೆ ಮಾಡುತ್ತಿರುವ ಅತಿ ಸಂಚಾರಿ ದಟ್ಟಣೆ ಹೊಂದಿರುವ 190 ಕಿ.ಮೀ. ಉದ್ದದ 12 ಪ್ರಮುಖ ರಸ್ತೆಗಳನ್ನು ಕೆಆರ್‌ಡಿಸಿಎಲ್‌ಗೆ ಹಸ್ತಾಂತರ ಮಾಡುವ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದೆ. 12 ರಸ್ತೆಗಳ ಹಸ್ತಾಂತರಕ್ಕೆ ಬೇಕಾದ ಸಿದ್ಧತೆಯನ್ನು ಬಿಬಿಎಂಪಿ ಹಾಗೂ ಕೆಆರ್‌ಡಿಸಿಎಲ್‌ ಆರಂಭಿಸಿದೆ. ಈ ಪ್ರಕ್ರಿಯೆ ನಿರೀಕ್ಷೆಯಂತೆ ಪೂರ್ಣಗೊಂಡರೆ ಮುಂಬರುವ ಏಪ್ರಿಲ್‌ ವೇಳೆಗೆ ಈ ರಸ್ತೆಗಳ ನಿರ್ವಹಣೆ ಉಸ್ತುವಾರಿ ಕೆಆರ್‌ಡಿಸಿಎಲ್‌ ಪಾಲಾಗಲಿದೆ.

ಇದಾದ ನಂತರ ಎರಡನೇ ಹಂತದಲ್ಲಿ ಕೆಆರ್‌ಡಿಸಿಎಲ್‌ ಈ ರಸ್ತೆಗಳ ನಿರ್ವಹಣೆಯನ್ನು ಖಾಸಗಿ ಸಂಸ್ಥೆಗಳಿಗೆ ಗುತ್ತಿಗೆ ನೀಡುವ ಪ್ರಕ್ರಿಯೆ ನಡೆಸಲಿದೆ.

ಶೇ.80 ನೀಲನಕ್ಷೆ ಸಿದ್ಧ:

ಖಾಸಗಿ ಸಂಸ್ಥೆಗಳಿಗೆ ಗುತ್ತಿಗೆ ನೀಡುವ ಕುರಿತ ನೀಲ ನಕ್ಷೆಯನ್ನು ಸಿದ್ಧಪಡಿಸುವ ಕಾರ್ಯವನ್ನು ಸಹ ಕೆಆರ್‌ಡಿಸಿಎಲ್‌ ಈಗಾಗಲೇ ಆರಂಭಿಸಿದ್ದು, ಶೇ.80ರಷ್ಟುನೀಲನಕ್ಷೆ ಸಿದ್ಧಗೊಂಡಿದೆ. ಮಾಹಿತಿ ಪ್ರಕಾರ 3 ಅಥವಾ 5 ವರ್ಷದ ಅವಧಿಗೆ ಈ 12 ರಸ್ತೆಗಳ ನಿರ್ವಹಣೆಯನ್ನು ಗುತ್ತಿಗೆ ನೀಡುವ ಉದ್ದೇಶವಿದೆ.

ದೇಶದಲ್ಲಿ ಮೊದಲ ಬಾರಿಗೆ ನಗರದ ರಸ್ತೆಗಳ ನಿರ್ವಹಣೆಗೆ ಟೆಂಡರ್‌ ಆಹ್ವಾನಿಸಬೇಕಾಗಿದೆ. ಆದ್ದರಿಂದ ಟೆಂಡರ್‌ ಷರತ್ತುಗಳು ಸೇರಿದಂತೆ ಎಲ್ಲವನ್ನು ಹೊಸದಾಗಿ ಸಿದ್ಧಪಡಿಸಬೇಕಾಗಿದೆ. ರಸ್ತೆ ನಿರ್ವಹಣೆಗೆ ಎಷ್ಟುಮೊತ್ತ ಬೇಕಾಗಲಿದೆ ಎಂಬುರ ಬಗ್ಗೆಯೂ ಅಂದಾಜು ಪಟ್ಟಿಸಿದ್ಧಪಡಿಸಲಾಗುತ್ತಿದೆ. ಬಳಿಕ ಸರ್ಕಾರಕ್ಕೆ ಅನುದಾನದ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಕೆಆರ್‌ಡಿಸಿಎಲ್‌ನ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

'ದರಿದ್ರ ಸರ್ಕಾರ' ಸಿದ್ದರಾಮಯ್ಯ ಸರ್ಕಾರಕ್ಕೆ ಅನ್ವಯಿಸುತ್ತೆ..'!.

ಶೀಘ್ರದಲ್ಲಿ 12 ರಸ್ತೆಗಳ ಹಸ್ತಾಂತರ ವಿಚಾರವಾಗಿ ಸರ್ಕಾರದ ಮುಖ್ಯ ಕಾರ್ಯದರ್ಶಿಗಳೊಂದಿಗಿನ ಸಭೆ ನಡೆಸಲಾಗುತ್ತದೆ. ಬಳಿಕ ರಸ್ತೆಗಳ ಹಸ್ತಾಂತರ ಹೇಗೆ ನಿರ್ವಹಣೆ ಮಾಡಬೇಕು ಎಂಬುದರ ಕುರಿತು ಅಂತಿಮ ತೀರ್ಮಾನ ಪ್ರಕಟಿಸುತ್ತೇವೆ ಎಂದು ನಗರ ಭೂ ಸಾರಿಗೆ ನಿರ್ದೇಶನಾಲಯ ಆಯುಕ್ತ ವಿ.ಪೊನ್ನುರಾಜ್‌ ಹೇಳಿದ್ದಾರೆ.

ಬಿಬಿಎಂಪಿ ನಿರ್ವಹಣೆ ಮಾಡುತ್ತಿರುವ 12 ಅತಿ ಹೆಚ್ಚು ಸಂಚಾರ ದಟ್ಟಣೆ ಇರುವ ರಸ್ತೆಗಳನ್ನು ಹಸ್ತಾಂತರಿಸುವ ಕುರಿತು ಕೆಆರ್‌ಡಿಸಿಎಲ್‌ ಅಧಿಕಾರಿಗಳೊಂದಿಗೆ ಚರ್ಚೆ ಮಾಡಲಾಗಿದೆ. ಕೆಆರ್‌ಡಿಸಿಎಲ್‌ ಈಗಾಗಲೇ ರಸ್ತೆ ನಿರ್ವಹಣೆಗೆ ಸಂಬಂಧಿಸಿದಂತೆ ನೀಲನಕ್ಷೆ ಸಿದ್ಧಪಡಿಸುತ್ತಿದೆ ಎಂದು ಬಿಬಿಎಂಪಿಯ ರಸ್ತೆ ಮತ್ತು ಮೂಲಸೌಕರ್ಯ ವಿಭಾಗ ಮುಖ್ಯ ಎಂಜಿನಿಯರ್‌ ಸೋಮಶೇಖರ್‌ ಹೇಳಿದ್ದಾರೆ.

12 ರಸ್ತೆಗಳ ವಿವರ

ಕಾರಿಡಾರ್‌ ಹೆಸರು ಎಲ್ಲಿಂದ ಎಲ್ಲಿಗೆ? ಕಿ.ಮೀ.

ಬಳ್ಳಾರಿ ರಸ್ತೆ ಚಾಲುಕ್ಯ ವೃತ್ತ- ಹೆಬ್ಬಾಳ 7.10

ಹಳೇ ಮದ್ರಾಸ್‌ ರಸ್ತೆ ಟ್ರಿನಿಟಿ ವೃತ್ತ- ಮೇದಹಳ್ಳಿ ಜಂಕ್ಷನ್‌ 21.60

ಓಲ್ಡ್‌ ಏರ್‌ಪೋರ್ಟ್‌ ರಸ್ತೆ ಎಎಸ್‌ಸಿ ಸೆಂಟರ್‌- ಕಾಡುಗೋಡಿ 19.50

ಸಜ್ಜಾಪುರ ರಸ್ತೆ ಸೆಂಟ್‌ ಜಾನ್ಸ್‌ ಆಸ್ಪತ್ರೆ- ಹರಳೂರು ಜಂಕ್ಷನ್‌ 8.85

ಹೊಸೂರು ರಸ್ತೆ ವೆಲ್ಲಾರ್‌ ಜಂಕ್ಷನ್‌- ಸೆಂಟ್ರಲ್‌ ಸಿಲ್ಕ್ ಬೋರ್ಡ್‌ 6.70

ಬನ್ನೇರುಘಟ್ಟರಸ್ತೆ ಆನೆಪಾಳ್ಯ ಜಂಕ್ಷನ್‌- ಕೋಳಿಫಾರಂ ಜಂಕ್ಷನ್‌ 13

ಕನಕಪುರ ರಸ್ತೆ ಕೆ.ಆರ್‌.ರಸ್ತೆ- ಸಾರಕ್ಕಿ(ನೈಸ್‌ ರಸ್ತೆವರೆಗೆ) 14.50

ಮೈಸೂರು ರಸ್ತೆ ಹಡ್ಸನ್‌ವೃತ್ತ- ಜ್ಞಾನಭಾರತಿ ಜಂಕ್ಷನ್‌ 09

ಮಾಗಡಿ ರಸ್ತೆ ಬಿನ್ನಿಮಿಲ್‌- ಅಂಜನನಗರ (ನೈಸ್‌ ರಸ್ತೆ ವರೆಗೆ) 11.50

ತುಮಕೂರು ರಸ್ತೆ ಸಂಗೋಳ್ಳಿ ರಾಯಣ್ಣ ವೃತ್ತ- ಗೊರಗುಂಟೆ ಪಾಳ್ಯ ಜಂಕ್ಷನ್‌ 7.85

ವೆಸ್ಟ್‌ ಆಫ್‌ ಕಾರ್ಡ್‌ ರೋಡ್‌ ಸೋಪ್‌ ಫ್ಯಾಕ್ಟರಿ- ಮೈಸೂರು ರಸ್ತೆ 8.65

ಹೊರವರ್ತುಲ ರಸ್ತೆ ಗೊರಗುಂಟೆ ಪಾಳ್ಯ ಜಂಕ್ಷನ್‌- ಕೆ.ಆರ್‌.ಪುರ- ಗೊರಗುಂಟೆ ಪಾಳ್ಯ ಜಂಕ್ಷನ್‌ 62

-ವಿಶ್ವನಾಥ ಮಲೇಬೆನ್ನೂರು