ನರಸಿಂಹರಾಜಪುರ (ಫೆ.01): ತಾಲೂಕಿನ ಗುಬ್ಬಿಗಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಬ್ಬುಗುಣಿಯ ಗೋವಿಂದಪ್ಪ ಎಂಬವರ ಮನೆ, ತೋಟದ ಹತ್ತಿರ ಬಂದಿದ್ದ 12 ಅಡಿಗಳ ಉದ್ದದ ಕಾಳಿಂಗ ಸರ್ಪವನ್ನು ಕುದುರೆಗುಂಡಿಯ ಉರಗತಜ್ಞ ಹರೀಂದ್ರ ಹಿಡಿದು ಸುರಕ್ಷಿತವಾಗಿ ಅರಣ್ಯಕ್ಕೆ ಬಿಟ್ಟಿದ್ದಾರೆ.

1 ವಾರದಿಂದಲೂ ದಬ್ಬುಗುಣಿಯ ಗೋವಿಂದಪ್ಪ ಅವರ ಮನೆಯ ಸಮೀಪ, ಅಡಕೆ ತೋಟಕ್ಕೆ ಕಾಳಿಂಗ ಬಂದು ಹೋಗುತ್ತಿತ್ತು. ಇದರಿಂದ ಭಯಭೀತರಾದ ಗೋವಿಂದಪ್ಪ ಅವರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಶುಕ್ರವಾರ ಸಂಜೆಯ ಹೊತ್ತಿಗೆ ಮತ್ತೆ ಕಾಳಿಂಗ ಸರ್ಪವು ಮನೆಯ ಹತ್ತಿರ ಬಂದು ಸುತ್ತಾಡಿದೆ. ಅನಂತರ ಸಮೀಪದ ತೋಟಕ್ಕೆ ಇಳಿದು ಬಿಲ ಒಂದಕ್ಕೆ ಸೇರಿಕೊಂಡಿತು. ಅರಣ್ಯಾಧಿಕಾರಿಗಳ ಸೂಚನೆಯಂತೆ ತಕ್ಷಣ ಹರೀಂದ್ರ ಅವರು ಆಗಮಿಸಿ ಕಾಳಿಂಗವನ್ನು ಸುರಕ್ಷಿತವಾಗಿ ಹಿಡಿದು, ಬಳಿಕ ಅಭಯಾರಣ್ಯಕ್ಕೆ ಬಿಟ್ಟುಬಂದಿದ್ದಾರೆ.

ಶೆಡ್‌ನಲ್ಲಿ ಕಾಣಿಸಿಕೊಂಡ ಬೃಹತ್ ಗಾತ್ರದ ಕಾಳಿಂಗ : ಅಬ್ಬಬ್ಬಾ ..! ..

ಹರೀಂದ್ರ ಅವರು ಕಳೆದ ಹತ್ತಾರು ವರ್ಷಗಳಿಂದ ಕಾಡಿನಿಂದ ನಾಡಿನಲ್ಲಿ ಅಲ್ಲಲ್ಲಿ ಕಾಣಿಸಿಕೊಳ್ಳುವ ಹಾವುಗಳನ್ನು ಹಿಡಿದು, ಅವುಗಳನ್ನು ಪುನಃ ಸುರಕ್ಷಿತವಾಗಿ ಅರಣ್ಯಕ್ಕೆ ಬಿಟ್ಟು ಬರುವ ಸೇವೆ ಮಾಡುತ್ತಿದ್ದಾರೆ. ಈಗ ರಕ್ಷಿಸಲಾದ ಕಾಳಿಂಗ ಸರ್ಪವು 326 ನೇ ಕಾಳಿಂಗವಾಗಿದೆ.