ಕೊರೋನಾ ಅಟ್ಟಹಾಸ: ಬೆಂಗ್ಳೂರಲ್ಲಿ 12 ಕೋವಿಡ್ ಆರೈಕೆ ಕೇಂದ್ರ ಶುರು
10 ಕೋವಿಡ್ ಆರೈಕೆ ಕೇಂದ್ರಗಳಲ್ಲಿ ಒಟ್ಟು 1,601 ಹಾಸಿಗೆಗಳ ಸಾಮರ್ಥ್ಯ| ಆರೈಕೆ ಪಡೆಯುತ್ತಿರುವ 546 ಮಂದಿ ಕೋವಿಡ್ ಸೋಂಕಿತರು| ಲಕ್ಷಣ ರಹಿತ ಸೋಂಕಿತರು ಮನೆಯಲ್ಲಿ ಪ್ರತ್ಯೇಕವಾಗಿ ಉಳಿದುಕೊಳ್ಳಲು ಸಾಧ್ಯವಾಗದವರು ಈ ಕೋವಿಡ್ ಆರೈಕೆ ಕೇಂದ್ರಗಳಿಗೆ ದಾಖಲಾಗಬಹುದು: ಗುಪ್ತಾ|
ಬೆಂಗಳೂರು(ಏ.24): ನಗರದಲ್ಲಿ ಕೊರೋನಾ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಲಕ್ಷಣ ರಹಿತ ಕೋವಿಡ್ ಸೋಂಕಿತರಿಗೆ ಮತ್ತು ಮನೆಯಲ್ಲಿ ಪ್ರತ್ಯೇಕ ವಾಸಕ್ಕೆ ಅನುಕೂಲವಿಲ್ಲದವರಿಗೆ ಚಿಕಿತ್ಸೆ ನೀಡಲು ವಲಯವಾರು ಒಟ್ಟು 12 ಕೋವಿಡ್ ಆರೈಕೆ ಕೇಂದ್ರಗಳನ್ನು ಬಿಬಿಎಂಪಿ ಆರಂಭಿಸಿದೆ.
ಶುಕ್ರವಾರ ಸುದ್ದಿಗಾರರಿಗೆ ಈ ಮಾಹಿತಿ ನೀಡಿದ ಮುಖ್ಯ ಆಯುಕ್ತ ಗೌರವ್ ಗುಪ್ತ ಅವರು, ಈಗಾಗಲೇ 10 ಆರೈಕೆ ಕೇಂದ್ರಗಳನ್ನು ಪ್ರಾರಂಭಿಸಿ ಸೆಂಟ್ರಲ್ ಹಾಸ್ಪಿಟಲ್ ಬೆಡ್ ಮ್ಯಾನೇಜ್‌ಮೆಂಟ್ ಸಿಸ್ಟಂನಲ್ಲಿ (ಸಿಎಚ್‌ಬಿಎಂಎಸ್) ಹಾಸಿಗೆಗಳ ಮಾಹಿತಿ ಅಳವಡಿಸಲಾಗಿದೆ. 10 ಕೋವಿಡ್ ಆರೈಕೆ ಕೇಂದ್ರಗಳಲ್ಲಿ ಒಟ್ಟು 1,601 ಹಾಸಿಗೆಗಳ ಸಾಮರ್ಥ್ಯವಿದೆ. ಇದುವರೆಗೆ 546 ಮಂದಿ ಕೋವಿಡ್ ಸೋಂಕಿತರು ಆರೈಕೆ ಪಡೆಯುತ್ತಿದ್ದಾರೆ. ಉಳಿಕೆ ಎರಡು ಕೋವಿಡ್ ಆರೈಕೆ ಕೇಂದ್ರಗಳನ್ನು ಶನಿವಾರದಿಂದ ಪ್ರಾರಂಭಿಸಿ ಅದರ ಮಾಹಿತಿಯನ್ನೂ ಸಿಎಚ್‌ಬಿಎಂಎಸ್‌ನಲ್ಲಿ ಹಾಸಿಗೆಗಳ ಮಾಹಿತಿ ಅಳವಡಿಸುತ್ತೇವೆ ಎಂದರು.
ಕೋವಿಡ್ ಶವ ಉಚಿತ ಸಾಗಾಣಿಕೆಗೆ ಸಹಾಯವಾಣಿ
ದಕ್ಷಿಣ ವಲಯದಲ್ಲಿ ಆಡುಗೋಡಿ ಬಾಷ್ ಸ್ಟೋರ್ಟ್ಸ್ ಕಾಂಪ್ಲೆಕ್ಸ್(ಖಾಲಿ ಇರುವ ಹಾಸಿಗೆ 80), ಕೋರಮಂಗಲ ಒಳಾಂಗಣ ಕ್ರೀಡಾಂಗಣ (100), ಪಶ್ಚಿಮ ವಲಯದಲ್ಲಿ ಸರ್ಕಾರಿ ಆಯುರ್ವೇದ ಮತ್ತು ವೈದ್ಯಕೀಯ ಕಾಲೇಜು (194), ಪೂರ್ವ ವಲಯದಲ್ಲಿ ಹೆಬ್ಬಾಳದ ಮಂಗಳ ರೈತ ಭವನ (60), ಯಲಂಹಕ ವಲಯದಲ್ಲಿ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕಿಯರ ಹಾಸ್ಟೆಲ್(50), ಹಜ್‌ಭವನ (19), ಮಹದೇವಪುರ ವಲಯದಲ್ಲಿ ನವ್ಯಾ ಇಂಟರ್‌ನ್ಯಾಷನಲ್ (ಖಾಲಿ ಇರುವ ಹಾಸಿಗೆ 111), ಎಚ್‌ಎಎಲ್ (21), ಆರ್‌ಆರ್ ನಗರ ವಲಯದಲ್ಲಿ ಎನ್‌ಇಆರ್‌ಜಿಎಚ್ ಜ್ಞಾನ ಭಾರತಿ ಕ್ಯಾಂಪಸ್(370) ಮತ್ತು ಬೊಮ್ಮನಹಳ್ಳಿ ವಲಯದಲ್ಲಿ ವಿಂಟೇಜ್ ಬ್ಲಾಸಮ್(50) ಸೇರಿದಂತೆ ಒಟ್ಟು 1055 ಹಾಸಿಗೆಗಳು ಖಾಲಿ ಇದ್ದು, 546 ಹಾಸಿಗೆಗಳು ಭರ್ತಿಯಾಗಿವೆ ಎಂದು ತಿಳಿಸಿದರು.
ಇಂದಿನಿಂದ 325 ಹಾಸಿಗೆ ಆರೈಕೆ ಕೇಂದ್ರ ಆರಂಭ
ಪೂರ್ವ ವಲಯದಲ್ಲಿ ಸರ್ಕಾರಿ ಹುಡುಗರ ಕಲಾ ಕಾಲೇಜು 200 ಹಾಸಿಗೆ, ಸಾಯಿ ಕಲ್ಯಾಣ ಮಂಟಪದ 125 ಹಾಸಿಗೆ ಸೇರಿದಂತೆ ಒಟ್ಟು 325 ಹಾಸಿಗೆಯ ಕೋವಿಡ್ ಆರೈಕೆ ಕೇಂದ್ರಗಳು ಶನಿವಾರದಿಂದ ಆರಂಭವಾಗಲಿವೆ. ಲಕ್ಷಣ ರಹಿತ ಸೋಂಕಿತರು ಮನೆಯಲ್ಲಿ ಪ್ರತ್ಯೇಕವಾಗಿ ಉಳಿದುಕೊಳ್ಳಲು ಸಾಧ್ಯವಾಗದವರು ಈ ಕೋವಿಡ್ ಆರೈಕೆ ಕೇಂದ್ರಗಳಿಗೆ ದಾಖಲಾಗಬಹುದು ಎಂದು ಹೇಳಿದರು.