Asianet Suvarna News Asianet Suvarna News

ಕಂಬಳದ ಕರೆಗೆ ಇಳಿದ ಪ್ರಥಮ ಬಾಲಕಿ ಚೈತ್ರಾ

ಮಿಯಾರಿನಲ್ಲಿ ನಡೆದ ಕಂಬಳದಲ್ಲಿ ತಲೆಗೊಂದು ಮುಂಡಾಸು ಕಟ್ಟಿ, ಗತ್ತಿನಿಂದ ಕೋಣಗಳ ಮೂಗುದಾರವನ್ನು ಹಿಡಿದು ಕಂಬಳ ಕರೆಗೆ ಇಳಿಸಿ ಪುಟ್ಟ ಬಾಲಕಿಯೊಬ್ಬಳು ಸುದ್ದಿಯಾಗಿದ್ದಾಳೆ. 

11 Year  Girl chaithra Participated in Udupi Kambala snr
Author
Bengaluru, First Published Mar 5, 2021, 3:59 PM IST

ಉಡುಪಿ (ಮಾ.05):  ಈ ಬಾರಿಯ ಕಂಬಳ ಕೂಟದ ಋುತುವಿನಲ್ಲಿ ಪುಟ್ಟಬಾಲಕಿಯೊಬ್ಬಳು ಕಂಬಳದ ಕರೆಯಲ್ಲಿ ಗಮನ ಸೆಳೆಯುತಿದ್ದಾಳೆ. ಕಳೆದ ವಾರ ಮಿಯಾರಿನಲ್ಲಿ ನಡೆದ ಕಂಬಳದಲ್ಲಿ ತಲೆಗೊಂದು ಮುಂಡಾಸು ಕಟ್ಟಿ, ಗತ್ತಿನಿಂದ ಕೋಣಗಳ ಮೂಗುದಾರವನ್ನು ಹಿಡಿದು ಕಂಬಳ ಕರೆಗೆ ಇಳಿಸಿ, ಈಗ ಸುದ್ದಿಗೆ ಕಾರಣವಾಗಿದ್ದಾಳೆ.

ಈಕೆ ಕುಂದಾಪುರ ತಾಲೂಕಿನ ಬೊಳ್ಳಂಪಳ್ಳಿ ಗ್ರಾಮದ ಪರಮೇಶ್ವರ ಭಟ್ಟಅವರ ಮಗಳು ಚೈತ್ರಾ ಭಟ್‌ (11). ಸಿಂಗರಿಸಿದ ಕೋಣಗಳನ್ನು ಅವುಗಳ ಯಜಮಾನ ಮುಂದಿನಿಂದ ಹಿಡಿದು ಕಂಬಳದ ಕರೆಗೆ ಇಳಿಸುವುದು ವಾಡಿಕೆ. ಈ ಬಾರಿಯ ಕಂಬಳಗಳಲ್ಲಿ ಪರಮೇಶ್ವರ ಭಟ್ಟರ ಕೋಣಗಳನ್ನು ಅವರ ಪರವಾಗಿ ಯಜಮಾನನ ನೆಲೆಯಲ್ಲಿ ಪುಟ್ಟಚೈತ್ರಾ ಕಂಬಳದ ಗದ್ದೆ ಇಳಿಸುತ್ತಿದ್ದಾಳೆ. ಪುರುಷರದ್ದೇ ಪಾರಮ್ಯ ಇರುವ ಕಂಬಳ ಗದ್ದೆಯಲ್ಲಿ ಬಾಲಕಿಯೊಬ್ಬಳು ಇಳಿದದ್ದು ಇದೇ ಮೊದಲು. ಈ ಕಾರಣಕ್ಕೆ ಆಕೆ ಸುದ್ದಿಯಾಗಿದ್ದಾಳೆ.

ಕಂಬಳದ ದಾಖಲೆ ವೀರ ವಿಶ್ವನಾಥ್ ಹೊಟ್ಟೆ ಪಾಡಿಗೆ ಮಾಡೋದು ಕೂಲಿ ...

ಮೂಲತಃ ಕೃಷಿಕರಾಗಿರುವ ಪರಮೇಶ್ವರ ಭಟ್ಟಅವರು 20 ವರ್ಷಗಳಿಂದ ಸಾಂಪ್ರದಾಯಿಕ ಕಂಬಳಗಳಲ್ಲಿ ಭಾಗವಹಿಸುತ್ತಿದ್ದಾರೆ. ಕಳೆದ 5 ವರ್ಷಗಳಿಂದ ಆಧುನಿಕ ವೃತ್ತಪರ ಜೋಡುಕರೆ ಕಂಬಳಗಳಲ್ಲಿ ಭಾಗವಹಿಸುತಿದ್ದಾರೆ. ಅದಕ್ಕಾಗಿ 5 ಕೋಣಗಳನ್ನು ಸಾಕುತ್ತಿದ್ದಾರೆ.

ಬಾಲ್ಯದಿಂದಲೂ ಮನೆಯ ಕೋಣಗಳನ್ನು ನೋಡುತ್ತಾ ಬೆಳೆದಿರುವ ಚೈತ್ರಾಳಿಗೆ ಕೋಣಗಳೆಂದರೇ ಪಂಚಪ್ರಾಣ. ಅವುಗಳ ಜೊತೆ ಅಕ್ಕರೆಯ ಒಡನಾಟವನ್ನು ಬೆಳೆಸಿಕೊಂಡಿದ್ದಾಳೆ. ಎಲ್ಲೆಲ್ಲಿ ಕಂಬಳ ನಡೆಯುತ್ತದೋ ಅಲ್ಲೆಲ್ಲಾ ಅವುಗಳ ಜೊತೆ ಹೋಗುತ್ತಿದ್ದಾಳೆ. ಕಂಬಳ ನಡೆಯುವ 2 ದಿನವೂ ಅವುಗಳ ಜೊತೆಯಲ್ಲಿಯೇ ಇದ್ದು ಆರೈಕೆ ಮಾಡುತ್ತಾಳೆ. ಮನೆಯಲ್ಲಿಯೂ ಮುಂಜಾನೆ ಬೇಗ ಎದ್ದು ಕೋಣಗಳಿಗೆ ಹುರುಳಿ, ಹುಲ್ಲು ಹಾಕುತ್ತಾಳೆ, ಉಜ್ಜಿ ಮೈತೊಳೆಯುತ್ತಾಳೆ, ಎಣ್ಣೆ ಹಾಕಿ ತಿಕ್ಕಿ ಉಪಚಾರ ಮಾಡುತ್ತಾಳೆ. ಕೋಣಗಳೂ ಅಷ್ಟೇ, ಆಕೆಯೊಂದಿಗೆ ಬಹಳ ಹೊಂದಿಕೊಂಡಿವೆ ಎನ್ನುತ್ತಾರೆ ಪರಮೇಶ್ವರ ಭಟ್ಟರು.

ಮಗಳ ಆಸಕ್ತಿಯನ್ನು ಗಮನಿಸಿದ ಪರಮೇಶ್ವರ ಭಟ್ಟಅವರು ಇತ್ತೀಚೆಗೆ ಗಣೇಶ ಎಂಬ ಹೆಸರಿನಿಂದ ಮರಿ ಕೋಣವೊಂದನ್ನು ಖರೀದಿಸಿ ತಂದಿದ್ದಾರೆ. ಆ ಕೋಣವನ್ನು ಚೈತ್ರಾ ಬಹಳ ಪ್ರೀತಿಯಿಂದ ಸಾಕುತ್ತಿದ್ದಾಳೆ. ಅದನ್ನು ಮನೆಯ ಬಳಿ ಇರುವ 110 ಮೀ. ಉದ್ದದ ಕಂಬಳ ಕರೆಯಲ್ಲಿ ಓಡಿಸುತ್ತಾ, ಅದರ ಜೊತೆಗೆ ತಾನು ಓಡುವ ಅಭ್ಯಾಸ ಮಾಡುತ್ತಿದ್ದಾಳೆ.

ಕಳೆದ ವಾರ ಮಿಯಾರಿನಲ್ಲಿ ನಡೆದ ಕಂಬಳದ ಸಂದರ್ಭದಲ್ಲಿ ಕಂಬಳ ಕೂಟದ ಉಸೇನ್‌ ಬೋಲ್ಟ… ಖ್ಯಾತಿಯ ಶ್ರೀನಿವಾಸ ಗೌಡರು ತಾವೇ ಬಂದು ಕೋಣ ಮತ್ತು ಆಕೆಯೊಂದಿಗೆ ಫೋಟೋ ತೆಗೆದುಕೊಂಡು ಹೋಗಿದ್ದಾರೆ. ಇದು ಆಕೆಗೆ ರೋಮಾಂಚನವನ್ನುಂಟು ಮಾಡಿದೆ. ಈಗ ತಾನು ಚಿಕ್ಕವಳು. ದೊಡ್ಡವಳಾದ ಮೇಲೆ ಕಂಬಳಕ ಕರೆಯಲ್ಲಿ ಕೋಣಗಳನ್ನು ಓಡಿಸುವ ಆಸೆ ಇದೆ ಎನ್ನುತ್ತಾಳೆ ಚೈತ್ರಾ.

Follow Us:
Download App:
  • android
  • ios