Asianet Suvarna News Asianet Suvarna News

ಬೆಳಗಾವಿ: ಘಟಪ್ರಭಾ ದಡದಲ್ಲಿ 108 ಅಡಿ ಬಸವಣ್ಣ ಪ್ರತಿಮೆ, ಸಿಎಂ ಬೊಮ್ಮಾಯಿ

ನಮ್ಮ ದೇಶಕ್ಕೆ ಚರಿತ್ರೆ ಇದೆ. ಚಾರಿತ್ರ್ಯಬೇಕಾಗಿದೆ, ಸಂಘರ್ಷವಿದೆ, ಸಮನ್ವಯ ಬೇಕಾಗಿದೆ. ಸಾಮಾಜಿಕ ಪರಿವರ್ತನೆಯಾಗುವಂತಹ, ವೈಚಾರಿಕವಾಗಿ ಮುನ್ನಡೆಯಲು ಬಸವ ತತ್ವಗಳು ಪ್ರೇರಣೆ ನೀಡಲಿವೆ ಎಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 

108 Feet Basavanna Statue on Ghataprabha Bank Says CM Basavaraj Bommai grg
Author
First Published Mar 16, 2023, 1:31 PM IST

ಬೆಳಗಾವಿ(ಮಾ.16):  ಘಟಪ್ರಭಾ ದಡದಲ್ಲಿ 108 ಅಡಿ ಎತ್ತರದ ಭವ್ಯವಾದ ಬಸವಣ್ಣನ ಪ್ರತಿಮೆಯನ್ನು ಸ್ಥಾಪಿಸುವ ಬಗ್ಗೆ ಸೂಕ್ತ ಆದೇಶ ನೀಡಲಾಗುವುದು. ಈ ಪ್ರದೇಶವನ್ನು ವಿಶ್ವಮಟ್ಟದ ಪ್ರವಾಸಿ ತಾಣವಾಗಿಸುವ ಧ್ಯೇಯ ಸರ್ಕಾರದ್ದಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ನಗರದ ಬಸವೇಶ್ವರ ವೃತ್ತದ ಬಳಿ ಶ್ರೀ ಬಸವೇಶ್ವರ ಪ್ರತಿಮೆ ನಿರ್ಮಾಣ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು. ಬೆಳಗಾವಿಯಲ್ಲಿ ಬಸವೇಶ್ವರರ ಪ್ರತಿಮೆ ಪ್ರತಿಷ್ಠಾಪಿಸಿರುವುದು ಅತ್ಯಂತ ಸಂತೋಷದ ಸಂಗತಿ. ಬಸವಣ್ಣನವರ ವಿಚಾರಧಾರೆಗಳು ನಮ್ಮೆಲ್ಲರ ಬದುಕಿನಲ್ಲಿ ಹಾಸುಹೊಕ್ಕಾಗಿವೆ. 12ನೇ ಶತಮಾನದಲ್ಲಿ ಬಸವಣ್ಣನವರು ಸನ್ಮಾರ್ಗವನ್ನು ತೋರಿದ್ದಾರೆ. ವಿಶ್ವದ ಮೊದಲ ಸಂಸತ್ತು ಎಂದೇ ಕರೆಸಿಕೊಳ್ಳುವ ಅನುಭವ ಮಂಟಪ ಸ್ಥಾಪಿಸಿದರು. ಅನುಭವ ಮಂಟಪದಲ್ಲಿ ಚರ್ಚಿಸಲಾಗುತ್ತಿದ್ದ ಎಲ್ಲ ವಿಷಯಗಳು ಇಂದಿಗೂ ಪ್ರಸ್ತುತ. ಅಸಮಾನತೆ, ಲಿಂಗಭೇದ, ಮೂಢನಂಬಿಕೆ, ಅನಿಷ್ಟಪದ್ಧತಿಗಳನ್ನು ವಿರೋಧಿಸಿದ್ದರು. ಈ ವಿಷಯಗಳ ಬಗ್ಗೆ ಸಮಾಜದಲ್ಲಿ ಸ್ಪಷ್ಟತೆ ದೊರೆಯುವ ತನಕ ಬಸವಣ್ಣನವರೂ ಪ್ರಸ್ತುತರಾಗಿಯೇ ಇರುತ್ತಾರೆ. ಬಸವಣ್ಣನವರ ತತ್ವಾದರ್ಶಗಳನ್ನು ಪಾಲಿಸುವ ಕೆಲಸವಾಗಬೇಕು ಎಂದರು.

ಓಲೈಕೆಗೆ ಮುಂದಾದ ಸರ್ಕಾರ: ಬೆಳಗಾವಿಯಲ್ಲಿ 15 ಅಡಿ ಎತ್ತರದ ಬಸವೇಶ್ವರರ ಕಂಚಿನ ಪ್ರತಿಮೆಗೆ ಸಿದ್ಧತೆ

ನಮ್ಮ ದೇಶಕ್ಕೆ ಚರಿತ್ರೆ ಇದೆ. ಚಾರಿತ್ರ್ಯಬೇಕಾಗಿದೆ, ಸಂಘರ್ಷವಿದೆ, ಸಮನ್ವಯ ಬೇಕಾಗಿದೆ. ಸಾಮಾಜಿಕ ಪರಿವರ್ತನೆಯಾಗುವಂತಹ, ವೈಚಾರಿಕವಾಗಿ ಮುನ್ನಡೆಯಲು ಬಸವ ತತ್ವಗಳು ಪ್ರೇರಣೆ ನೀಡಲಿವೆ ಎಂದರು.
ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾರಕ ಕೋರೆ ಮಾತನಾಡಿ, ನರ್ಮದಾ ನದಿ ದಡದಲ್ಲಿ ಸರ್ದಾರ ವಲ್ಲಭಬಾಯಿ ಪಟೇಲ್‌ ಅವರ ಮೂರ್ತಿ ಪ್ರತಿಷ್ಠಾಪಿಸಿ ಇತಿಹಾಸ ಸೃಷ್ಟಿಸಲಾಗಿದೆ. ಜಗತಿಗೆ ಮಹಾ ಪುರುಷರೆಂದರೆ ಬಸವಣ್ಣನವರು. ಅವರ ಪ್ರತಿಮೆಯನ್ನು ನಾವು ಲಂಡನ್‌ನಲ್ಲಿ ಪ್ರತಿಷ್ಠಾಪಿಸಲಾಗಿದೆ. ಅವರ ಸಂದೇಶಗಳನ್ನು ಜನರಿಗೆ ತಲುಪಿಸುವ ಹಿನ್ನೆಲೆಯಲ್ಲಿ ಘಟಪ್ರಭಾ ನದಿ ದಡದಲ್ಲಿ ಜಗಜ್ಯೋತಿ ಬಸವೇಶ್ವರರ ಬೃಹತ್‌ ಪ್ರತಿಮೆ ಸ್ಥಾಪಿಸಬೇಕು ಎಂದು ಮುಖ್ಯಮಂತ್ರಿಗೆ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಸಿಎಂ ಬೊಮ್ಮಾಯಿ ಅವರು, ಘಟಪ್ರಭಾ ನದಿ ದಡದಲ್ಲಿ 108 ಅಡಿ ಎತ್ತರದ ಬಸವಣ್ಣನವರ ಪ್ರತಿಮೆ ಸ್ಥಾಪಿಸಲಾಗುವುದು ಎಂದು ಭರವಸೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ ಮಾತನಾಡಿ, ಬಹಳ ದಿನದಿಂದ ಬಸವೇಶ್ವರ ವೃತ್ತದಲ್ಲಿ ಹೊಸ ಬಸವೇಶ್ವರರ ಪ್ರತಿಮೆ ಪ್ರತಿಷ್ಠಾಪನೆಗೆ ಅಖಿಲ ಭಾರತ ವೀರಶೈವ ಮಹಾಸಭೆಯಿಂದ ಪ್ರಯತ್ನ ನಡೆದಿತ್ತು. ಈ ಸಂಬಂಧ ಡಾ.ಪ್ರಭಾಕರ ಕೋರೆ ಮತ್ತು ಎಂ.ಬಿ.ಝಿರಲಿ ಅವರ ನೇತೃತ್ವದಲ್ಲಿ 8 ತಿಂಗಳ ಹಿಂದೆಯೇ ಸಭೆ ನಡೆದಿತ್ತು. .35 ಲಕ್ಷ ವೆಚ್ಚದಲ್ಲಿ ಬಸವೇಶ್ವರರ ಕಂಚಿನ ಪುತ್ಥಳಿ ನಿರ್ಮಾಣ ಕಾರ್ಯ ನಡೆದಿದೆ. ಅನಭವ ಮಂಟಪವನ್ನು ನಿರ್ಮಿಸುವ ಯೋಜನೆಯೂ ಇದೆ. ಇದನ್ನು ಪ್ರೇಕ್ಷಣೀಯ ಸ್ಥಳವನ್ನಾಗಿಸಲಾಗುವುದು. ಇದಕ್ಕೆ .5 ಕೋಟಿ ಅನುದಾನ ಬೇಕಾಗುತ್ತದೆ ಎಂದು ಹೇಳಿದರು.

ನಿಡಸೋಸಿ ಸಿದ್ಧಸಂಸ್ಥಾನ ಮಠದ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ, ಡಾ.ತೋಂಟದ ಸಿದ್ದರಾಮ ಸ್ವಾಮೀಜಿ, ಕಾರಂಜಿಮಠದ ಗುರುಸಿದ್ಧ ಸ್ವಾಮೀಜಿ ಮತ್ತು ನಾಗನೂರು ರುದ್ರಾಕ್ಷಿಮಠದ ಡಾ.ಅಲ್ಲಮಪ್ರಭು ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಈ ವೇಳೆ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಶಾಸಕರಾದ ಲಕ್ಷ್ಮೇ ಹೆಬ್ಬಾಳಕರ, ದುರ್ಯೋಧನ ಐಹೊಳೆ, ಮೇಯರ್‌ ಶೋಭಾ ಸೋಮನಾಚೆ, ಉಪಮೇಯರ್‌ ರೇಷ್ಮಾ ಪಾಟೀಲ, ವೀರಶೈವ ಮಹಾಸಭೆ ಜಿಲ್ಲಾಧ್ಯಕ್ಷೆ ರತ್ನಪ್ರಭಾ ಬೆಲ್ಲದ, ಎಂ.ಬಿ.ಝಿರಲಿ ಮೊದಲಾದವರು ಉಪಸ್ಥಿತರಿದ್ದರು. 

Follow Us:
Download App:
  • android
  • ios