ಕೊಪ್ಪಳ: ಕೊರೋನಾ ಗೆದ್ದಿದ್ದ ಶತಾಯುಷಿ ಕಮಲಮ್ಮ ಲಿಂಗೈಕ್ಯ
ಸ್ವ ಪ್ರೇರಣೆಯಿಂದ ದೇಹತ್ಯಾಗ ಮಾಡುವೆ ಎಂದಿದ್ದ ಅಜ್ಜಿ| ಕೊರೋನಾ ಪಾಸಿಟಿವ್ ದೃಢಪಟ್ಟಿದ್ದರೂ ಎದೆಗುಂದಿರಲಿಲ್ಲ ಅಜ್ಜಿ| 105 ವರ್ಷವಾಗಿದ್ದರೂ ಮನೆಯಲ್ಲಿಯೇ ಐಸೋಲೇಶನ್ ಆಗಿಯೇ ಚಿಕಿತ್ಸೆ ಪಡೆದು ಕೊರೋನಾ ಗೆದ್ದಿದ್ದ ಅಜ್ಜಿ|ಲಿಂಗ ದೀಕ್ಷೆ ಪಡೆದಿದ್ದರಿಂದ ಕಮಲಮ್ಮ ಅವರ ಅಂತ್ಯಸಂಸ್ಕಾರವನ್ನು ವಿಧಿವತ್ತಾಗಿ ನೆರವೇರಿಸಲಾಯಿತು|
ಕೊಪ್ಪಳ(ಸೆ.20): ಶತಾಯುಷಿಯಾಗಿಯೂ ಕೊರೋನಾ ಗೆದ್ದಿದ್ದ ಕಮಲಮ್ಮ ಲಿಂಗನಗೌಡ ಹಿರೇಗೌಡ್ರ (105) ಅವರು ಕಳೆದೊಂದು ವಾರದಿಂದ ಆಹಾರ ತ್ಯಜಿಸಿ, ಸ್ವಯಂ ಪ್ರೇರಣೆಯಿಂದಲೇ ಜೀವತ್ಯಾಗ ಮಾಡುವ ಮೂಲಕ ಶನಿವಾರ ಬೆಳಗ್ಗೆ ಲಿಂಗೈಕ್ಯರಾಗಿದ್ದಾರೆ.
ಕೊಪ್ಪಳ ನಗರದಲ್ಲಿರುವ ಪುತ್ರ ಶಂಕರಗೌಡ ಹಿರೇಗೌಡ್ರ ಅವರ ನಿವಾಸದಲ್ಲಿಯೇ ವಾಸವಾಗಿದ್ದ ಅವರು ಹಲವು ದಿನಗಳಿಂದ ನನಗೆ ಇನ್ನು ಬದುಕುವ ಆಸೆ ಇಲ್ಲ. ನನಗೆ ಯಾವ ಚಿಕಿತ್ಸೆಯನ್ನು ನೀಡಬೇಡಿ, ನಾನು ಸ್ವಯಂ ಪ್ರೇರಣೆಯಿಂದಲೇ ದೇಹತ್ಯಾಗ ಮಾಡುತ್ತೇನೆ ಎಂದು ಹೇಳುತ್ತಲೇ ಇದ್ದರು.
ಇತ್ತೀಚೆಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದ್ದರೂ ಎದೆಗುಂದಿರಲಿಲ್ಲ. 105 ವರ್ಷವಾಗಿದ್ದರೂ ಮನೆಯಲ್ಲಿಯೇ ಐಸೋಲೇಶನ್ ಆಗಿಯೇ ಚಿಕಿತ್ಸೆಯನ್ನು ಪಡೆದರೆ ವಿನಃ ಆಸ್ಪತ್ರೆಗೆ ದಾಖಲಾಗಲು ನಿರಾಕರಣೆ ಮಾಡಿದರು. ಅಚ್ಚರಿ ಎಂದರೆ ವಾರದಲ್ಲಿಯೇ ಕೊರೋನಾದಿಂದ ಗುಣಮುಖವಾಗಿದ್ದರು. ಮತ್ತೊಮ್ಮೆ ಪರೀಕ್ಷೆ ಮಾಡಿದಾಗ ವರದಿ ನೆಗೆಟಿವ್ ಬಂದಿತ್ತು. ಈ ಮೂಲಕ ಕೊರೋನಾ ಗೆದ್ದಿದ್ದರು.
ಕೊಪ್ಪಳ: ಮಹಾಮಾರಿ ಕೊರೋನಾ ಗೆದ್ದ 105 ವರ್ಷದ ಅಜ್ಜಿ..!
ಇದಾದ ಮೇಲೆಯೂ ಅವರು ಸಂಪೂರ್ಣ ಆಹಾರ ತ್ಯಜಿಸಿದರು. ಒತ್ತಾಯ ಮಾಡಿ ನೀಡಿದರೆ ಒಂದಿಷ್ಟುಗಂಜಿಯನ್ನು ಮಾತ್ರ ಸೇವನೆ ಮಾಡುತ್ತಿದ್ದರು. ತಮ್ಮ ಕೊನೆಯ ದಿನದವರೆಗೂ ತಮ್ಮ ಕರ್ಮಾದಿಗಳನ್ನು ತಾವೇ ಮಾಡಿಕೊಳ್ಳುತ್ತಿದ್ದರು. ಗಂಜಿಯನ್ನು ಬಾಯಲ್ಲಿ ಹಾಕುವ ಪ್ರಯತ್ನ ಮಾಡಿದರೆ ತಿರಸ್ಕಾರ ಮಾಡುತ್ತಿದ್ದರು. ತಾನೇ ತನ್ನ ಕೈಯಾರ ಮಾತ್ರ ಸೇವಿಸುತ್ತಿದ್ದಳು. ಸೇವಿಸುವ ಮುನ್ನ ಆಹಾರವೇನಾದರೂ ಇದೆಯಾ ಎಂದು ಬೆರಳಾಡಿಸಿ ನೋಡಿಯೇ ಸೇವಿಸುತ್ತಿದ್ದರು. ಅದು ಗಂಜಿಯಾಗಿದ್ದರೆ ಮಾತ್ರ ಸೇವನೆ ಮಾಡುತ್ತಿದ್ದರು.
ಗವಿಮಠ ಶ್ರೀಗಳಿಂದ ವಿಭೂತಿ
ಶನಿವಾರ ಬೆಳಗ್ಗೆ ನಿತ್ರಾಣಕ್ಕೆ ಹೋಗಿದ್ದರು. ಈ ವೇಳೆಯಲ್ಲಿ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಆಗಮಿಸಿ, ವಿಭೂತಿಯನ್ನು ಮಂತ್ರಿಸಿ ಕೊಟ್ಟರು. ಅದನ್ನು ಕಮಲಮ್ಮ ಅವರ ಹಣೆಗೆ ಹಚ್ಚುತ್ತಿದ್ದಂತೆ ಪ್ರಾಣಬಿಟ್ಟರು. ಗವಿಮಠ ಶ್ರೀಗಳ ಆಶೀರ್ವಾದಕ್ಕಾಗಿಯೇ ಇಷ್ಟುದಿನಗಳ ಕಾಲ ಜೀವ ಹಿಡಿದುಕೊಂಡಿದ್ದಳು ಎನಿಸುತ್ತದೆ ಎನ್ನುತ್ತಾರೆ ಮೊಮ್ಮಗ ಡಾ. ಶ್ರೀನಿವಾಸ ಹ್ಯಾಟಿ ಅವರು. ಬಳಿಕ ಕಳೇಬರವನ್ನು ಕೊಪ್ಪಳ ತಾಲೂಕಿನ ಕಾತರಕಿಗೆ ತೆಗೆದುಕೊಂಡು ಹೋಗಲಾಯಿತು. ಸ್ವಗ್ರಾಮದಲ್ಲಿಯೇ ನನ್ನ ಅಂತ್ಯಸಂಸ್ಕಾರ ನೆರವೇರಿಸಿ ಎನ್ನುವ ಸದಾಶಯ ಹೊಂದಿದ್ದರಿಂದ ಅದರಂತೆ ಸ್ವಗ್ರಾಮದಲ್ಲಿಯೇ ನೆರವೇರಿಸಲಾಯಿತು.
ಅಪ್ಪಟ ಸಿದ್ಧಾರೂಢರ ಭಕ್ತೆ
ಸ್ವಾತಂತ್ರ್ಯ ಹೋರಾಟಗಾರ್ತಿ ಕಮಲಮ್ಮ ಶಿವಭಕ್ತೆಯಾಗಿದ್ದಳು. ಲಿಂಗಪೂಜೆಯನ್ನು ಎಂದು ತಪ್ಪಿಸುತ್ತಿರಲಿಲ್ಲ. ಪ್ರತಿನಿತ್ಯ ಮನೆಯಲ್ಲಿ ಲಿಂಗಪೂಜೆಯನ್ನು ಮಾಡುತ್ತಲೇ ಇದ್ದರು. ಸಹಜಾನಂದ ಮಹಾಸ್ವಾಮಿಗಳಿಂದ ದೀಕ್ಷೆಯನ್ನು ಪಡೆದಿದ್ದ ಅವರು ಸಿದ್ಧಾರೂಢರ ಪರಮ ಭಕ್ತಳು. ಸದಾ ಹಸನ್ಮುಖಿಯಾಗಿರುತ್ತಿದ್ದ ಕಮಲಮ್ಮ ಅವರು ಈ ಇಳಿ ವಯಸ್ಸಿನಲ್ಲಿಯೂ ಮನೆಗೆ ಬಂದವರಿಗೆ ಆತಿಥ್ಯ ನೀಡುವುದರಲ್ಲಿ ಎತ್ತಿದ ಕೈ. ಮನೆಗೆ ಯಾರೇ ಬಂದರೂ ಪ್ರಸಾದ ಮಾಡಿ ಹೋಗಿ ಎನ್ನುತ್ತಿದ್ದರು. ಲಿಂಗ ದೀಕ್ಷೆ ಪಡೆದಿದ್ದರಿಂದ ಕಮಲಮ್ಮ ಅವರ ಅಂತ್ಯಸಂಸ್ಕಾರವನ್ನು ವಿಧಿವತ್ತಾಗಿ ನೆರವೇರಿಸಲಾಯಿತು.