ಕೇಂದ್ರ ಸರ್ಕಾರದ ಫೇಮ್-2 ಯೋಜನೆಯಡಿ ಎಲೆಕ್ಟ್ರಿಕ್ ಹವಾನಿಯಂತ್ರಣ ರಹಿತ ಬಸ್ ಖರೀದಿ, ಟಾಟಾ ಮೋಟಾರ್ಸ್ ಕಂಪನಿಯ ಮೊದಲ ಎಲೆಕ್ಟ್ರಿಕ್ ಬಸ್ ಪ್ರಾಯೋಗಿಕ ಸಂಚಾರಕ್ಕೆ ಸಾರಿಗೆ ಸಚಿವ ರೆಡ್ಡಿ ಚಾಲನೆ
ಬೆಂಗಳೂರು(ಜು.29): ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕು ನಿಗಮಗಳಿಗೆ ಮುಂದಿನ ಒಂದು ವರ್ಷದಲ್ಲಿ 5 ಸಾವಿರ ಹೊಸ ಬಸ್‌ಗಳನ್ನು ಸೇರ್ಪಡೆ ಮಾಡಲಾಗುವುದು ಹಾಗೂ 13 ಸಾವಿರ ಸಿಬ್ಬಂದಿ ನೇಮಕಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.
ಶಾಂತಿನಗರದ ಬಿಎಂಟಿಸಿ ಕೇಂದ್ರ ಕಚೇರಿಯ ಮುಂಭಾಗ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಟಾಟಾ ಮೋಟಾರ್ಸ್ ಲಿಮಿಟೆಡ್ ಬಿಎಂಟಿಸಿಗೆ ನೀಡಿರುವ ಮೊದಲ ಎಲೆಕ್ಟ್ರಿಕ್ ಪ್ರೋಟೊಟೈಪ್ ಬಸ್‌ಗೆ ಚಾಲನೆ ನೀಡಿ ಮಾತನಾಡಿ, ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಸೇವೆಯನ್ನು ಉತ್ತಮಗೊಳಿಸುವ ಸಲುವಾಗಿ ನಾಲ್ಕೂ ನಿಗಮಗಳಿಗೆ 5 ಸಾವಿರ ಬಸ್‌ಗಳನ್ನು ಖರೀದಿ ಮಾಡಲಾಗುವುದು. ಅದರಲ್ಲಿ ಬಿಎಂಟಿಸಿಗೆ ಹೊಸದಾಗಿ 1 ಸಾವಿರ ಬಸ್ ಸೇರ್ಪಡೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಕೆಎಸ್‌ಆರ್‌ಟಿಸಿ ಎಲೆಕ್ಟ್ರಿಕ್ ಬಸ್‌ಗಳಿಂದ 3 ತಿಂಗಳಿಗೇ ಬರೋಬ್ಬರಿ 4.25 ಕೋಟಿ ಗಳಿಕೆ..!
2013ರಿಂದ ಎಷ್ಟು ಬಸ್‌ಗಳು ಸ್ಕ್ರ್ಯಾಪ್ ಆಗಿವೆಯೋ ಅಷ್ಟುಬಸ್‌ಗಳನ್ನು ಹೊಸದಾಗಿ ಖರೀದಿಸಲಾಗುತ್ತಿದೆ. ಡಿಸೇಲ್ ವಾಹನಗಳಿಗೆ ಹೋಲಿಕೆ ಮಾಡಿದರೆ ಎಲೆಕ್ಟ್ರಿಕ್ ವಾಹನಗಳ ಖರ್ಚು ಕಡಿಮೆ. ಇದರಿಂದ ನಿಗಮಕ್ಕೂ ಹೆಚ್ಚಿನ ಲಾಭವಾಗಲಿದೆ. ಎಲೆಕ್ಟ್ರಿಕ್ ಬಸ್ ಪೂರೈಸುವ ಸಂಸ್ಥೆಯೇ ಆ ಬಸ್‌ಗಳ ಚಾಲಕರ ವೇತನ ಹಾಗೂ ಬಸ್‌ನ ನಿರ್ವಹಣಾ ವೆಚ್ಚ ಭರಿಸಲಿದೆ ಎಂದರು.
ಕೇಂದ್ರ ಸರ್ಕಾರದ ಫೇಮ್-2 ಯೋಜನೆಯಡಿ ಎಲೆಕ್ಟ್ರಿಕ್ ಹವಾನಿಯಂತ್ರಣ ರಹಿತ ಹೆಚ್ಚಿನ ಬಸ್ಸುಗಳು ಬಿಎಂಟಿಸಿಗೆ ಸೇರ್ಪಡೆಯಾಗಲಿವೆ. ಪ್ರಾಯೋಗಿಕವಾಗಿ ಟಾಟಾ ಕಂಪನಿಯವರು ಒಂದು ಬಸ್ಸನ್ನು ಹಸ್ತಾಂತರಿಸಿದ್ದಾರೆ. ಹಂತಹಂತವಾಗಿ ಬಿಎಂಟಿಸಿಗೆ 921 ಇವಿ ಬಸ್‌ಗಳು ಸೇರ್ಪಡೆಯಾಗಲಿದೆ. ಮುಂದಿನ ದಿನಗಳಲ್ಲಿ ನಾಲ್ಕು ನಿಗಮಗಳಲ್ಲಿಯೂ ಇವಿ ಬಸ್‌ಗಳನ್ನು ಸೇರ್ಪಡೆ ಮಾಡಲಾಗುವುದು ಎಂದು ಹೇಳಿದರು.
ನಿಗಮಗಳಲ್ಲಿ 2016ರ ನಂತರ ಸಿಬ್ಬಂದಿ ನೇಮಕಾತಿಯಾಗಿಲ್ಲ. ಹೀಗಾಗಿ ಹೊಸದಾಗಿ ಸಿಬ್ಬಂದಿ ನೇಮಕಾತಿಗೆ ಸಂಬಂಧಿಸಿದಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸರ್ಕಾರದಿಂದ ಅನುಮತಿ ಬಂದ ಕೂಡಲೇ ನೇಮಕಾತಿ ಪ್ರಕ್ರಿಯೆ ಆರಂಭಿಸಲಾಗುವುದು. ಚಾಲಕ, ನಿರ್ವಾಹಕ ಮತ್ತು ಮೆಕ್ಯಾನಿಕ್ ಸೇರಿದಂತೆ 13 ಸಾವಿರ ಸಿಬ್ಬಂದಿ ನೇಮಕ ಮಾಡಿಕೊಳ್ಳಲಾಗುವುದು ಎಂದು ವಿವರಿಸಿದರು.
ಸಾರಿಗೆ ಇಲಾಖೆ ಕಾರ್ಯದರ್ಶಿ ಡಾ. ಎನ್.ವಿ.ಪ್ರಸಾದ್, ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಸತ್ಯಾವತಿ, ಕೆಎಸ್ಸಾರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಅನ್ಬುಕುಮಾರ್, ಟಿಎಂಎಲ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಸೀಮ್ ಇದ್ದರು.
ಚಿಕ್ಕಮಗಳೂರಿನಿಂದ ಬೆಂಗಳೂರಿಗೆ 6 ಎಲೆಕ್ಟ್ರಿಕ್ ಬಸ್ ಆರಂಭ
ಶಕ್ತಿ ಯೋಜನೆ ಯಶಸ್ವಿ
ಶಕ್ತಿ ಯೋಜನೆ ನಿರೀಕ್ಷೆ ಮಿರಿ ಯಶಸ್ವಿಯಾಗಿದೆ. ನಾಲ್ಕು ನಿಗಮಗಳಲ್ಲಿ ಮೊದಲು 82 ಲಕ್ಷ ಜನರು ಪ್ರಯಾಣ ಮಾಡುತ್ತಿದ್ದರು. ಇದೀಗ 1.10 ಕೋಟಿ ಜನರು ಪ್ರಯಾಣಿಸುತ್ತಿದ್ದು, ಅದಕ್ಕೆ ತಕ್ಕಂತೆ ಬಸ್‌ಗಳ ಸಂಚಾರ ಹೆಚ್ಚಿಸಲಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಹೊಸ ಬಸ್ ಮಾರ್ಗ
ನೂತನವಾಗಿ ಕಾರ್ಯಾಚರಣೆಗೆ ನಿಯೋಜಿಸಲಾಗುತ್ತಿರುವ ಎಲೆಕ್ಟ್ರಿಕ್ ಬಸ್ ಮಾರ್ಗ ಸಂಖ್ಯೆ ‘96-ಎ’ ನಲ್ಲಿ ಸಂಚರಿಸಲಿದೆ. ಕೆಂಪೇಗೌಡ ಬಸ್ ನಿಲ್ದಾಣದಿಂದ ಹೊರಟು ಸುಜಾತ ಚಿತ್ರಮಂದಿರ, ರಾಜಾಜಿನಗರ ಕೈಗಾರಿಕಾ ಪ್ರದೇಶ, ಮೋದಿ ಆಸ್ಪತ್ರೆ, ಹರಿಶ್ಚಂದ್ರ ಘಾಟ್, ಸೆಂಟ್ರಲ್ ಮೂಲಕ ವಾಪಾಸು ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಬರಲಿದೆ.
