ಕುಷ್ಟಗಿ(ನ.28): ತಾಲೂಕಿನ ಹಿರೇಹಳ್ಳ ಮತ್ತು ಕಂದಕೂರ ಸೀಮಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ 100 ಟಿಪ್ಪರ್‌ನಷ್ಟು ಅಕ್ರಮ ಮರಳನ್ನು ಬುಧವಾರ ತಹಸೀಲ್ದಾರ್‌ ಸಿದ್ದೇಶ ಎಂ. ನೇತೃತ್ವದಲ್ಲಿ ದಾಳಿ ಮಾಡಿ ಮರಳನ್ನು ಲೋಕೋಪಯೋಗಿ ಇಲಾಖೆಗೆ ಒಪ್ಪಿಸಿದ್ದಾರೆ.

ರಾತ್ರೋರಾತ್ರಿ ಪಟ್ಟಣ ಸೇರಿದಂತೆ ಬೇರೆ ಜಿಲ್ಲೆಗೆ ಸಾಗಣೆಯಾಗುತ್ತಿದ್ದ ಮರಳು ಲಾರಿಗಳ ಮೂಲಕ ದಂಧೆಕೋರರು ಮರಳನ್ನು ಇಲ್ಲಿಂದ ಸಾಗಿಸುತ್ತಿದ್ದರು ಎನ್ನುವ ಮಾಹಿತಿ ಮೇರೆಗೆ ದಾಳಿ ನಡೆಸಲಾಗಿದೆ ಎಂದು ತಹಸೀಲ್ದಾರ್‌ ತಿಳಿಸಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಹಗಲು ವೇಳೆ ಹಳ್ಳಗಳಲ್ಲಿ ದೊರೆಯುವ ಮರಳನ್ನು ಹಳ್ಳದ ಪಕ್ಕದಲ್ಲಿ ಸಂಗ್ರಹಿಸಿ ಲಾರಿ ಮತ್ತು ಟ್ರ್ಯಾಕ್ಟರ್‌ಗಳ ಮೂಲಕ ಅಕ್ರಮವಾಗಿ ಸಾಗಿಸುತ್ತಿದ್ದರು. ಜತೆಗೆ ಕಳೆದ ಹಲವು ದಿನಗಳಿಂದ ತಾಲೂಕಿನ ವಿವಿಧ ಗ್ರಾಮಗಳ ಬಳಿ ಇರುವ ಹಳ್ಳಗಳಿಂದ ಅಕ್ರಮ ಮರಳು ಸಾಗಣೆಯಾಗುತ್ತಿದ್ದು, ಇದನ್ನು ತಡೆಯಬೇಕಾದ ಲೋಕೋಪಯೋಗಿ ಇಲಾಖೆ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ದಾಳಿಗೆ ಮುಂದಾಗದಿರುವುದು ಅಚ್ಚರಿಗೆ ಕಾರಣವಾಗಿತ್ತು. ಅಕ್ರಮ ಮರಳು ದಂಧೆಯಲ್ಲಿ ಕೆಲ ಕಾಣದ ಪ್ರಭಾವಿ ಕೈಗಳ ಕೈಚಳಕ ಇರುವುದರಿಂದ ತಾಲೂಕಿನಲ್ಲಿ ಹಗಲು, ರಾತ್ರಿ ಲೆಕ್ಕಕ್ಕಿಲ್ಲದೆ ಅಕ್ರಮ ಮರಳು ಸಾಗಾಣಿಕೆ ಪ್ರಕ್ರಿಯೆ ಮುಂದುವರಿದಿದೆ. ಅಪರೂಪಕ್ಕಾದರೂ ಲೋಕೋಪಯೋಗಿ ಮತ್ತು ಜಿಲ್ಲಾ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಅಕ್ರಮ ಮರಳು ಪತ್ತೆ ಹಚ್ಚಿರುವುದಾಗಲಿ ಮತ್ತು ವಾಹನಗಳನ್ನು ವಶಕ್ಕೆ ಪಡೆದ ಉದಾಹರಣೆಗಳಿಲ್ಲ. ಇಂಥದ್ದರಲ್ಲಿ ತಾಲೂಕಿಗೆ ನೂತನವಾಗಿ ಬಂದಿರುವ ತಹಸೀಲ್ದಾರ್‌ ಸಿದ್ದೇಶ ಎಂ. 100ಕ್ಕೂ ಹೆಚ್ಚು ಟಿಪ್ಪರ್‌ ಮರಳು ಸಂಗ್ರಹವಾಗಿರುವ ಖಚಿತ ಮಾಹಿತಿ ಪಡೆದು ದಾಳಿ ನಡೆಸಿದ್ದಾರೆ.

ಸ್ಥಳೀಯ ಪೊಲೀಸ್‌ ಠಾಣೆಗೆ ವರ್ಗವಾಗಿ ಬಂದಿರುವ ಪಿಎಸ್‌ಐ ಚಿತ್ತರಂಜ್‌ ಮತ್ತು ತಹಸೀಲ್ದಾರ್‌ ಸಿದ್ದೇಶ ಎಂ., ಅವರು ಅಕ್ರಮ ಮರಳು ಸಾಗಾಣೆಗೆ ಕಡಿವಾಣ ಹಾಕುವುದಕ್ಕೆ ಮುಂದಾಗಿದ್ದಾರೆ. ಇನ್ನಾದರೂ ಅಕ್ರಮ ಮರಳು ದಂಧೆಗೆ ಬ್ರೇಕ್‌ ಬೀಳುವುದೆ ಎಂದು ಕಾದು ನೋಡಬೇಕಿದೆ.