ದಸರೆಯಲ್ಲಿ 100 ಕಿ.ಮೀ. ದೀಪಾಲಂಕಾರ
- ಕೋವಿಡ್ ಹಿನ್ನೆಲೆಯಲ್ಲಿ ದಸರಾ ಮಹೋತ್ಸವವನ್ನು ಸರಳ ಮತ್ತು ಸಂಪ್ರದಾಯವಾಗಿ ಆಚರಣೆ
- ದಸರಾ ದೀಪಾಲಂಕಾರಕ್ಕೆ ಹೆಚ್ಚಿನ ಒತ್ತು - ಸಚಿವ ಸುನಿಲ್ ಕುಮಾರ್
ಮೈಸೂರು (ಅ.02): ಕೋವಿಡ್ ಹಿನ್ನೆಲೆಯಲ್ಲಿ ದಸರಾ (Dasara) ಮಹೋತ್ಸವವನ್ನು ಸರಳ ಮತ್ತು ಸಂಪ್ರದಾಯವಾಗಿ ಆಚರಿಸುತ್ತಿದ್ದರೂ ದಸರಾ ದೀಪಾಲಂಕಾರಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ.
2021ನೇ ದಸರಾ ಮಹೋತ್ಸವದಲ್ಲಿ ಸುಮಾರು 100 ಕಿ.ಮೀ. ದೀಪಾಲಂಕಾರ ಮಾಡಲು ಸೆಸ್ಕ್ ಮುಂದಾಗಿದ್ದು, ಈಗಾಗಲೇ 70 ಕಿ.ಮೀ. ದೀಪಾಲಂಕಾರ ಕಾರ್ಯವು ಪೂರ್ಣಗೊಂಡಿದ್ದು, ಉಳಿದ ಕಾರ್ಯವನ್ನು ಅ.5ರ ಒಳಗೆ ಪೂರ್ಣಗೊಳ್ಳಲಿದೆ ಎಂದು ಇಂಧನ, ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್‌ಕುಮಾರ್ (Sunil Kumar) ತಿಳಿಸಿದರು.
ಮೈಸೂರು (Mysuru) ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ದಸರಾ ಸಭೆಯಲ್ಲಿ ಮಾತನಾಡಿದ ಅವರು, ಕೋವಿಡ್ (Covid) ನಿಯಮಗಳನ್ನು ಗಮನದಲ್ಲಿಟ್ಟುಕೊಂಡು ಸರಳ ಮತ್ತು ಸಾಂಪ್ರದಾಯಿಕ ದಸರಾ ಆಚರಣೆ ಮಾಡಲಾಗುವುದು. ನಗರದ ಎಲ್ಲಾ ಪ್ರವೇಶ ದ್ವಾರಗಳಲ್ಲಿ ದೀಪಾಲಂಕಾರ ಮಾಡಲಾಗುತ್ತಿದೆ. ಪರಿಸರ ಸ್ನೇಹಿ ಎಲ್‌ಇಡಿ (LED) ಬಳಕೆ ಮಾಡಲಾಗುತ್ತದೆ ಎಂದರು.
ದಸರಾ : ಪಿರಂಗಿ ದಳದಿಂದ ಕುಶಾಲತೋಪು ಸಿಡಿತ- ಮೊದಲು ಗಲಿಬಿಲಿ ನಂತರ ಜಗ್ಗದೇ ನಿಂತ ಗಜಪಡೆ!
ಈ ಬಾರಿಯೂ ವಿಭಿನ್ನವಾಗಿ ಹಾಗೂ ವೈಭವದ ದೀಪಾಲಂಕಾರ ಮಾಡಲು ಸಿದ್ಧತೆ ಮಾಡಲಾಗಿದೆ. ನಗರದಲ್ಲಿ 80 ರಿಂದ 100 ಕಿ.ಮೀ.ವರೆಗೂ ದೀಪಾಲಂಕಾರ ಮಾಡಲಾಗುತ್ತಿದೆ. ನಗರದ 102 ವೃತ್ತಗಳಲ್ಲಿ ದೀಪಾಲಂಕಾರ ಜೊತೆಗೆ 41 ದೀಪಾಲಂಕಾರದ ಪ್ರತಿಕೃತಿಗಳು ನಿರ್ಮಾಣ ಮಾಡಲಾಗುತ್ತದೆ. ಸ್ವಾತಂತ್ರ್ಯ ಅಮೃತ ಮಹೋತ್ಸವ, ಒಲಂಪಿಕ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ (Neeraj Chopra), ಶ್ರೀಕೃಷ್ಣ ರಥ, ಚಾಮುಂಡೇಶ್ವರಿ, ಬುದ್ಧ, ಬಸವ, ಅಂಬಾರಿ, ವಿಧಾನಸೌಧ, ಕೆಆರ್‌ಎಸ್, ಅರಮನೆಯು ದೀಪಾಲಂಕಾರದಲ್ಲಿ ಪ್ರತಿಕೃತಿಯಾಗಿ ಮೂಡಿ ಬರಲಿದೆ ಎಂದು ಅವರು ವಿವರಿಸಿದರು.
2019ರ ರೀತಿಯಲ್ಲಿ ಈ ಬಾರಿಯು ವೈಭವದ ದೀಪಾಲಂಕಾರ ಮಾಡಲಯು ಯೋಜನೆ ರೂಪಿಸಲಾಗಿದೆ. ಅದು ಶೇ.80 ರಷ್ಟುಮುಗಿದಿದೆ. ಕೋವಿಡ್ (Covid)ನಿಯಮಗಳನ್ನು ಗಮನದಲ್ಲಿಟ್ಟುಕೊಂಡು ಸಣ್ಣಪುಟ್ಟ ಕಟ್ಟುಪಾಡುಗಳ ಜೊತೆಗೆ ಉತ್ಸವ ನಡೆಸಲು ತೀರ್ಮಾನಿಸಲಾಗಿದೆ. ಇದಕ್ಕೆ ಸಾರ್ವಜನಿಕರು ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು.
ಇನ್ನೆರಡು ದಿನದಲ್ಲಿ ದೀಪಾಲಂಕಾರ ಪೂರ್ಣಗೊಳ್ಳಲಿದೆ. ಅ.6ರ ಸಂಜೆ 6ಕ್ಕೆ ದಸರಾ ದೀಪಾಲಂಕಾರವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಉದ್ಘಾಟಿಸಿ ವೀಕ್ಷಿಸಲಿದ್ದಾರೆ. ಪ್ರತಿ ದಿನ ರಾತ್ರಿ 10 ಗಂಟೆಯವರೆಗೆ ದೀಪಾಲಂಕಾರ ಇರಲಿದೆ ಎಂದರು.