Asianet Suvarna News Asianet Suvarna News

ಕೆಂಪೇಗೌಡರ ಹೆಸರಲ್ಲಿ ಅಭಿವೃದ್ಧಿ ಪ್ರಾಧಿಕಾರ

‘ನಾಡಪ್ರಭು ಕೆಂಪೇಗೌಡ ದಿನಾಚರಣೆ’ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ 100 ಜನ ಗಣ್ಯರಿಗೆ ‘2019ನೇ ಸಾಲಿನ ನಾಡಪ್ರಭು ಕೆಂಪೇಗೌಡ ಪ್ರಶಸ್ತಿ’ ಪ್ರದಾನ ಮಾಡಲಾಯಿತು.

100 Achievers gets Kempegowda award
Author
Bengaluru, First Published Sep 5, 2019, 11:00 AM IST

ಬೆಂಗಳೂರು [ಸೆ.05]: ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರ ಹೆಸರಲ್ಲಿನ ಅಭಿವೃದ್ಧಿ ಪ್ರಾಧಿಕಾರ ರಚಿಸಿ, ಅದಕ್ಕೆ ನೂರು ಕೋಟಿ ರು. ಅನುದಾನ ಮೀಸಲಿಡಲಾಗುವುದು. ಈ ಪ್ರಾಧಿಕಾರದ ಮೂಲಕ ಕೆಂಪೇಗೌಡರ ನೆನಪಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ರೂಪಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಘೋಷಿಸಿದ್ದಾರೆ.

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಬುಧವಾರ ಪಾಲಿಕೆಯ ಡಾ.ರಾಜ್‌ಕುಮಾರ್‌ ಗಾಜಿನ ಮನೆಯಲ್ಲಿ ಆಯೋಜಿಸಿದ್ದ ‘ನಾಡಪ್ರಭು ಕೆಂಪೇಗೌಡ ದಿನಾಚರಣೆ’ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ 100 ಜನ ಗಣ್ಯರಿಗೆ ‘2019ನೇ ಸಾಲಿನ ನಾಡಪ್ರಭು ಕೆಂಪೇಗೌಡ ಪ್ರಶಸ್ತಿ’ ಪ್ರದಾನ ಮಾಡಿ ಅವರು ಮಾತನಾಡಿದರು.

ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರ ರಚಿಸಲು ಸರ್ಕಾರ ತೀರ್ಮಾನಿಸಿದೆ. ಪ್ರಾಧಿಕಾರಕ್ಕೆ 100 ಕೋಟಿ ರು. ಅನುದಾನ ಮೀಸಲಿಟ್ಟು, ಕೆಂಪೇಗೌಡರ ನೆನಪಿನ ಶಾಶ್ವತವಾಗಿ ಉಳಿಸುವಂತಹ ಇನ್ನಷ್ಟುಕಾರ್ಯಗಳಿಗೆ ಬಳಸಲಾಗುವುದು. ಆ ನಿಟ್ಟಿನಲ್ಲಿ ಏನೇನು ನೆನಪಿನ ಕಾರ್ಯಗಳು ಆಗಬೇಕೆಂಬುದನ್ನು ನಿರ್ಧರಿಸಲು ಉಪಮುಖ್ಯಮಂತ್ರಿ ಡಾ.ಸಿ.ಅಶ್ವತ್ಥ ನಾರಾಯಣ ಅವರ ನೇತೃತ್ವದಲ್ಲಿ ಸಮಿತಿ ರಚಿಸಲಾಗುವುದು ಎಂದು ತಿಳಿಸಿದರು.

ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ನಗರಕ್ಕೆ ಆಗಮಿಸುವ ವಿದೇಶಿಗರು, ಹೊರ ರಾಜ್ಯದವರಿಗೆ ಕೆಂಪೇಗೌಡರ ಸಾಧನೆ ಮತ್ತು ಕೊಡುಗೆ ಪರಿಚಯಿಸುವ ಕೆಲಸ ಮಾಡಲಾಗುತ್ತದೆ. ಅದಕ್ಕಾಗಿ ಬಿಡಿಎ ಮೂಲಕ ವಿಮಾನ ನಿಲ್ದಾಣದಲ್ಲಿ ಕೆಂಪೇಗೌಡರ ಬೃಹತ್‌ ಪ್ರತಿಮೆ ಸ್ಥಾಪಿಸಲಾಗುವುದು ಎಂದು ತಿಳಿಸಿದರು.

ಯೋಜನಾ ಪ್ರಾಧಿಕಾರ ಭರವಸೆ: ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ಪ್ರತ್ಯೇಕ ಯೊಜನಾ ಪ್ರಾಧಿಕಾರ ರಚಿಸುವ ಬಗ್ಗೆ ಪರಿಶೀಲಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದ ಮುಖ್ಯಮಂತ್ರಿ ಯಡಿಯೂರಪ್ಪ, ರಾಜ್ಯದ ಅಭಿವೃದ್ಧಿಗೆ ಗಣನೀಯ ಆರ್ಥಿಕ ಕೊಡುಗೆ ನೀಡುತ್ತಿರುವ ರಾಜಧಾನಿಯ ಪ್ರತಿಯೊಂದು ಸಮಸ್ಯೆಗಳ ಪರಿಹಾರಕ್ಕೂ ಕ್ರಮ ಕೈಗೊಳ್ಳಲಾಗುವುದು. ನಗರದ ವಾಹನ ದಟ್ಟಣೆ ಕಡಿಮೆ ಮಾಡಲು ಉಪನಗರ ರೈಲು ಯೋಜನೆ, ಪೆರಿಫೆರಲ್‌ ರಿಂಗ್‌ ರಸ್ತೆ, ಉಪನಗರಗಳ ಅಭಿವೃದ್ಧಿಗೆ ಒತ್ತು ನೀಡಲು ಅಗತ್ಯ ಕಾರ್ಯಕ್ರಮಗಳನ್ನು ರೂಪಿಸಲಾಗುವುದು. ಐಟಿ, ಬಿಟಿ ವಲಯದಲ್ಲಿ ಜಾಗತಿಕ ಮಟ್ಟದ ಮಾನ್ಯತೆ ಪಡೆದಿರುವ ನಗರವನ್ನು ಸ್ವಚ್ಛತೆ, ಮೂಲಸೌಕರ್ಯ ದೃಷ್ಟಿಯಿಂದಲೂ ವಿಶ್ವಮಾನ್ಯ ನಗರವನ್ನಾಗಿಸಬೇಕೆಂಬ ಅಭಿಲಾಷೆ ನನ್ನದಾಗಿದೆ. ಇದಕ್ಕಾಗಿ ಎಷ್ಟೇ ಖರ್ಚಾಗಲಿ ಇನ್ನೊಂದು ವರ್ಷದಲ್ಲಿ ಮುಕ್ತ ಸಲಹೆಗಳನ್ನು ಪಡೆದು ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತದೆ. ಬಿಬಿಎಂಪಿ ಸೇರಿದಂತೆ ನಗರದ ಅಭಿವೃದ್ದಿಗೆ ಕಾರ್ಯನಿರ್ವಹಿಸುವ ಎಲ್ಲ ಇತರೆ ಸಂಸ್ಥೆಗಳು ಈ ಆಶಯಕ್ಕೆ ಪೂರಕವಾಗಿ ಕಾರ್ಯನಿರ್ವಹಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್‌್ಥ ನಾರಾಯಣ, ಮೇಯರ್‌ ಗಂಗಾಂಬಿಕೆ ಮಲ್ಲಿಕಾರ್ಜುನ್‌, ಉಪಮೇಯರ್‌ ಬಿ.ಭದ್ರೇಗೌಡ, ಮುಖ್ಯಮಂತ್ರಿಗಳ ಕಾರ್ಯದರ್ಶಿ ಎಸ್‌.ಆರ್‌.ವಿಶ್ವನಾಥ್‌, ಶಾಸಕರಾದ ರವಿಸುಬ್ರಹ್ಮಣ್ಯ, ಸತೀಶ್‌ ರೆಡ್ಡಿ, ವಿಧಾನ ಪರಿಷತ್‌ ಸದಸ್ಯರಾದ ಟಿ.ಎ.ಶರವಣ, ಅ.ದೇವೇಗೌಡ, ಕೆಂಪೇಗೌಡ ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎ.ಜೆ.ಸದಾಶಿವ, ಬಿಬಿಎಂಪಿ ಆಡಳಿತ ಪಕ್ಷದ ನಾಯಕ ಅಬ್ದುಲ್‌ ವಾಜಿದ್‌, ವಿರೋಧ ಪಕ್ಷದ ನಾಯಕ ಪದ್ಮನಾಭರೆಡ್ಡಿ, ಜೆಡಿಎಸ್‌ ನಾಯಕಿ ನೇತ್ರಾ ನಾರಾಯಣ್‌ ಮತ್ತಿತರರು ಉಪಸ್ಥಿತರಿದ್ದರು.

ಅಚ್ಚುಕಟ್ಟಾಗಿ ನಡೆದ ಕಾರ್ಯಕ್ರಮ

ಬಿಬಿಎಂಪಿಯು ಈ ಬಾರಿಯ ಕೆಂಪೇಗೌಡ ದಿನಾಚರಣೆ ಕಾರ್ಯಕ್ರಮವನ್ನು ಅತ್ಯಂತ ವ್ಯವಸ್ಥಿತವಾಗಿ ಆಯೋಜಿಸಲಾಗಿತ್ತು. ಪ್ರಶಸ್ತಿ ಸಂಖ್ಯೆಗಳನ್ನೂ ಕಡಿಮೆ ಮಾಡಿ ಪ್ರಶಸ್ತಿ ಪ್ರದಾನದಲ್ಲೂ ಯಾವುದೇ ಗೊಂದಲಗಳಾಗದೆ ಅಚ್ಚುಕಟ್ಟಾಗಿ ಕಾರ್ಯಕ್ರಮ ಯಶಸ್ವಿಗೊಳಿಸಿದ್ದು ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಪಾತ್ರವಾಯಿತು.

ಕಳೆದ ಬಾರಿ 536 ಜನರಿಗೆ ಪ್ರಶಸ್ತಿ ನೀಡಿದ್ದಲ್ಲದೆ, ಕಾರ್ಯಕ್ರಮ ಆಯೋಜನೆ, ನಿರ್ವಹಣೆ, ನಿರೂಪಣೆ ಸೇರಿದಂತೆ ಇಡೀ ಕಾರ್ಯಕ್ರಮ ಅವ್ಯವಸ್ಥೆಯ ಆಗರವಾಗಿಹೋಗಿತ್ತು. ಇದರಿಂದ ಪ್ರಶಸ್ತಿ ಪುರಸ್ಕೃತರು ಸೇರಿದಂತೆ ಸಾರ್ವಜನಿಕ ವಲಯದಿಂದ ಭಾರಿ ಟೀಕೆಗೆ ಗುರಿಯಾಗಿತ್ತು. ಆದರೆ, ಈ ಬಾರಿ ಪ್ರಶಸ್ತಿ ಸಂಖ್ಯೆ 100 ದಾಟದಂತೆ ಮೇಯರ್‌ ಗಂಗಾಂಬಿಕೆ ಮಲ್ಲಿಕಾರ್ಜುನ್‌ ಕೊಟ್ಟಭರವಸೆಯಂತೆ ನಡೆದುಕೊಂಡರು. ಬಹಳ ಅಚ್ಚುಕಟ್ಟಾಗಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಕೆಂಪೇಗೌಡ ಪ್ರಶಸ್ತಿ ಪುರಸ್ಕೃತರೆಲ್ಲರಿಗೂ ಖುದ್ದು ಪ್ರಶಸ್ತಿ ಪ್ರದಾನ ಮಾಡಿ ತೆರಳಿದ್ದು ವಿಶೇಷವಾಗಿತ್ತು.

ಸಾಧಕರಿಗೆ ಪ್ರಶಸ್ತಿ ಪ್ರದಾನ

ಸಾಹಿತಿ ಚಂದ್ರಶೇಖರ ಪಾಟೀಲ, ಹಿರಿಯ ಕಲಾವಿದ ಡಾ.ಮುಖ್ಯಮಂತ್ರಿ ಚಂದ್ರು, ಗಾಯಕಿ ಮಂಜುಳಾ ಗುರುರಾಜ್‌, ಖ್ಯಾತ ತಬಲಾವಾದಕ ಹಾಗೂ ‘ಸಪ್ತಕ’ ಸಂಸ್ಥಾಪಕ ಜಿ.ಎಸ್‌.ಹೆಗಡೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ನೂರು ಗಣ್ಯರಿಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ‘ನಾಡಪ್ರಭು ಕೆಂಪೇಗೌಡ ಪ್ರಶಸ್ತಿ’ ಪ್ರದಾನ ಮಾಡಿ ಅಭಿನಂದಿಸಿದರು.

ಇದೇ ವೇಳೆ, ‘ಕನ್ನಡಪ್ರಭ’ದ ಹಿರಿಯ ಕಲಾವಿದ ಸುಧಾಕರ ದರ್ಬೆ, ಸುವರ್ಣ ನ್ಯೂಸ್‌ ಮೆಟ್ರೋ ಬ್ಯೂರೋ ಮುಖ್ಯಸ್ಥೆ ರಜನಿ ರಾವ್‌ ಅವರಿಗೂ ಕೆಂಪೇಗೌಡ ಪ್ರಶಸ್ತಿಗೆ ಭಾಜನರಾದರು. ಈ ವೇಳೆ ಮಾತನಾಡಿದ ದರ್ಬೆ ಅವರು ‘ಇದು, ಮಾಧ್ಯಮ ಕ್ಷೇತ್ರದಲ್ಲಿ ಸಲ್ಲಿಸಿದ ಸುದೀರ್ಘ ಸೇವೆ ಸಿಕ್ಕ ಫಲ, ಈ ಪ್ರಶಸ್ತಿ ತಮಗೆ ಮಾತ್ರವಲ್ಲ ಇಡೀ ಕನ್ನಡಪ್ರಭ ಮತ್ತು ಸುವರ್ಣ ನ್ಯೂಸ್‌ನ ಸಿಬ್ಬಂದಿ ಬಳಗಕ್ಕೆ ಸಲ್ಲುತ್ತದೆ’ ಎಂದು ಅಭಿಪ್ರಾಯಪಟ್ಟರು.

ಐಪಿಎಸ್‌ ಅಧಿಕಾರಿಗಳಿಗೆ ಪ್ರಶಸ್ತಿ: ಗೌರಿ ಲಂಕೇಶ್‌ ಹತ್ಯೆ ಪ್ರಕರಣ ಬೇಧಿಸಿದ ಡಿಸಿಪಿ ಅನುಚೇತ್‌ ಮತ್ತು ಆ ತಂಡದಲ್ಲಿದ್ದ ಡಿವೈಎಸ್‌ಪಿ ರಂಗಪ್ಪ, ಇನ್‌ಸ್ಪೆಕ್ಟರ್‌ಗಳಾದ ಎಚ್‌.ಡಿ.ಕುಲಕರ್ಣಿ, ಬಿ.ರಾಜು, ಅನಿಲ್‌, ಶ್ರೀಧರ್‌ ಪೂಜಾರ್‌ ಮತ್ತು ಕುಮಾರಸ್ವಾಮಿ ಅವರಿಗೆ ಕೆಂಪೇಗೌಡ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಡಿಸಿಪಿ ಅನುಚೇತ್‌ ಮತ್ತು ತಂಡದ ಸಾಧನೆಗೆ ವಿಶೇಷವಾಗಿ .1.15 ಲಕ್ಷ ನಗದು ಬಹುಮಾನ ನೀಡಿ ಪುರಸ್ಕರಿಸಲಾಯಿತು.

10 ಮಹಿಳಾ ಸಾಧಕಿಯರಿಗೆ ಲಕ್ಷ್ಮೇದೇವಿ ಪ್ರಶಸ್ತಿ, 5 ಶಿಕ್ಷಣ ಸಂಸ್ಥೆಗಳಿಗೆ ಶಿವಕುಮಾರ ಸ್ವಾಮೀಜಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

 ನಾಡಪ್ರಭು ಕೆಂಪೇಗೌಡರು ದೂರದೃಷ್ಟಿಯನ್ನಿಟ್ಟು ನಿರ್ಮಿಸಿದ ಬೆಂಗಳೂರಿಗೆ ಇರುವ ‘ಉದ್ಯಾನ ನಗರಿ’ ಪ್ರಸಿದ್ಧಿಯನ್ನು ಉಳಿಸುವ ನಿಟ್ಟಿನಲ್ಲಿ ನಗರದ ನಾಗರಿಕರು ಪ್ರತಿ ಮನೆಗಳಲ್ಲೂ ಕನಿಷ್ಠ ಎರಡು ಮರಗಳನ್ನು ನೆಟ್ಟು ಪಾಲಿಕೆಯೊಂದಿಗೆ ಕೈಜೋಡಿಸಬೇಕೆಂದು ಮನವಿ ಮಾಡುತ್ತೇನೆ. ಈ ಬಾರಿ ನಾಡಪ್ರಭು ಕೆಂಪೇಗೌಡರ ಪ್ರಶಸ್ತಿಗೆ ಪಾತ್ರರಾದ 100 ಜನ ಸಾಧಕರಿಗೆ ಹಾಗೂ ಮಹಾತ್ಯಾಗಿ ಲಕ್ಷ್ಮೇದೇವಿ ಪ್ರಶಸ್ತಿ ಪಡೆದ 10 ಜನ ಮಹಿಳೆಯರು ಮತ್ತು ಕರ್ನಾಟಕ ರತ್ನ ಡಾ.ಶಿವಕುಮಾರ ಸ್ವಾಮೀಜಿ ಅವರ ಹೆಸರಲ್ಲಿ ಪ್ರಶಸ್ತಿ ಪಡೆದ ಶಿಕ್ಷಣ ಸಂಸ್ಥೆಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ.

-ಗಂಗಾಂಬಿಕೆ ಮಲ್ಲಿಕಾರ್ಜುನ್‌, ಬಿಬಿಎಂಪಿ ಮೇಯರ್‌.

 ಸಚಿವರ ಗೈರು

ಕೆಂಪೇಗೌಡ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ನಗರದ ಸಚಿವರಾದ ಆರ್‌.ಅಶೋಕ್‌, ವಿ.ಸೋಮಣ್ಣ, ಸುರೇಶ್‌ಕುಮಾರ್‌ ಗೈರಾಗಿದ್ದರು. ಉಳಿದಂತೆ ಕಾಂಗ್ರೆಸ್‌, ಜೆಡಿಎಸ್‌ನ ಯಾವ ಶಾಸಕರು, ಸಂಸದರು ಕೂಡ ಕಾರ್ಯಕ್ರಮದಲ್ಲಿ ಹಾಜರಿರಲಿಲ್ಲ.

 ಸಿಎಂ ಪರಿಹಾರ ನಿಧಿಗೆ 5 ಕೋಟಿ ರು.

ರಾಜ್ಯದ ನೆರೆ ಪೀಡಿತ ಪ್ರದೇಶಗಳ ನೆರವಿಗಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಬಿಬಿಎಂಪಿ ವತಿಯಿಂದ ಇದೇ ವೇಳೆ 5 ಕೋಟಿ ರು. ನೀಡಲಾಯಿತು. ಮೇಯರ್‌ ಗಂಗಾಂಬಿಕೆ ಮತ್ತು ಪಾಲಿಕೆಯ ಇತರೆ ಗಣ್ಯರು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ 5 ಕೋಟಿ ರು. ಪರಿಹಾರದ ಚೆಕ್‌ನ್ನು ಹಸ್ತಾಂತರಿಸಿದರು.

Follow Us:
Download App:
  • android
  • ios