ಬೆಂಗಳೂರು(ಜು.22): ನಗರದಲ್ಲಿ ದಿನಕ್ಕೆ ಕನಿಷ್ಠ 10 ಸಾವಿರ ಸೋಂಕು ಪರೀಕ್ಷೆ ನಡೆಸಬೇಕು ಹಾಗೂ ಖಾಸಗಿ ಲ್ಯಾಬ್‌ಗಳಲ್ಲಿ ಪರೀಕ್ಷೆ ನಡೆಸಿದ ಸೋಂಕಿನ ವರದಿಯನ್ನು ತ್ವರಿತವಾಗಿ ಐಸಿಎಂಆರ್‌ ಪೋರ್ಟಲ್‌ಗೆ ಅಪ್‌ಡೇಟ್‌ ಮಾಡುವಂತೆ ಬಿಬಿಎಂಪಿ ಕೋವಿಡ್‌ ಕಾರ್ಯಪಡೆಯ ತಜ್ಞರ ಸಮಿತಿ ಸಲಹೆ ನೀಡಿದೆ.

ಮಂಗಳವಾರ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಬಿಬಿಎಂಪಿ ಕೋವಿಡ್‌ ಕಾರ್ಯಪಡೆಯ ಸಮಿತಿ ಮೊದಲ ಸಭೆ ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ್‌ ಪ್ರಸಾದ್‌ ಹಾಗೂ ಮೇಯರ್‌ ಗೌತಮ್‌ ಕುಮಾರ್‌ ಅಧ್ಯಕ್ಷತೆಯಲ್ಲಿ ನಡೆಯಿತು.

ಬೆಂಗ್ಳೂರು ಪೊಲೀಸರಿಗೆ ಕೊರೋನಾ ಭೀತಿ: ಠಾಣೆಯಲ್ಲಿ ವಿಶೇಷ ಪೂಜೆ

ಈ ವೇಳೆ ಸಮಿತಿಯ ತಜ್ಞರು ಮುಖ್ಯವಾಗಿ ಸೋಂಕಿತ ಪತ್ತೆಯಾದ ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿಲು, ಸಂಪರ್ಕಿತರ ಕ್ವಾರಂಟೈನ್‌ ಮಾಡಲು, ಸ್ವಾಬ್‌ ಸಂಗ್ರಹಿಸುವುದಕ್ಕೆ ಸಿಬ್ಬಂದಿ ಕೊರತೆ ನೀಗಿಸಿಕೊಳ್ಳುವುದಕ್ಕೆ ಸಲಹೆಗಳನ್ನು ನೀಡಿದ್ದಾರೆ.

ಪ್ರತಿ ವಾರ್ಡ್‌ಗೆ 25 ಸಿಬ್ಬಂದಿಯ ಅವಶ್ಯಕತೆ ಇದೆ. ಈ ಮೂಲಕ ಸದ್ಯ ಬಿಬಿಎಂಪಿಗೆ 4,500 ಮಂದಿ ಸಿಬ್ಬಂದಿ ತ್ವರಿತವಾಗಿ ಬೇಕಾಗಿದೆ. ಹೀಗಾಗಿ, ನರ್ಸಿಂಗ್‌, ಅರೇ ವೈದ್ಯಕೀಯ ಸಿಬ್ಬಂದಿಯನ್ನು ಮಂಡಳಿಯಿಂದ ಸಿಬ್ಬಂದಿ ಪಡೆಯಬೇಕು, ಪದವಿ ಮುಗಿಸಿದ ವಿದ್ಯಾರ್ಥಿಗಳು ನೇಮಕ ಮಾಡಿಕೊಳ್ಳುವಂತೆ ಸಲಹೆ ನೀಡಲಾಗಿದೆ. ಜತೆಗೆ ಸಂಪರ್ಕ ಕಾರ್ಯಕರ್ತರನ್ನು ಬಳಕೆ ಮಾಡಿಕೊಳ್ಳುವುದಕ್ಕೆ ಸೂಚನೆ ನೀಡಲಾಗಿದೆ. ಈ ಸಿಬ್ಬಂದಿ ಬಿಬಿಎಂಪಿಯ 135 ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯದೊಂದಿಗೆ ಕಾರ್ಯನಿರ್ವಹಿಸಲಿದ್ದಾರೆ.

10 ಸಾವಿರ ಪರೀಕ್ಷೆ:

ನಗರದಲ್ಲಿ ದಿನಕ್ಕೆ ಕನಿಷ್ಠ 10 ಸಾವಿರ ಮಂದಿಯನ್ನು ಸೋಂಕು ಪರೀಕ್ಷೆ ಮಾಡಬೇಕು. ಇದರಿಂದ ಸೋಂಕು ಹರಡುವಿಕೆ ಶೀಘ್ರದಲ್ಲಿ ಪತ್ತೆ ಮಾಡಿ ಚಿಕಿತ್ಸೆ ನೀಡಬಹುದು. ಹೀಗಾಗಿ, ಸ್ವಾಬ್‌ ಸಂಗ್ರಹಿಸುವುದಕ್ಕೆ ಬೇಕಾದ ಕ್ರಮವಹಿಸುವಂತೆ ಸಲಹೆ ನೀಡಲಾಗಿದೆ. ಜತೆಗೆ ಸಾರ್ವಜನಿಕರಲ್ಲಿ ಸೋಂಕಿನ ಬಗ್ಗೆ ಆತಂಕದ ಭಾವನೆ ಇದೆ. ಅದನ್ನು ದೂರ ಮಾಡಬೇಕು. ಪರೀಕ್ಷೆ ಮಾಡಿಕೊಂಡ ವ್ಯಕ್ತಿ ವರದಿ ಬರುವವರೆಗೆ ಕ್ವಾರಂಟೈನ್‌ನಲ್ಲಿ ಇರಬೇಕು. ಒಂದು ವೇಳೆ ಸೋಂಕು ಇಲ್ಲ ಎಂದು ಬಂದರೂ ಕನಿಷ್ಠ 5 ರಿಂದ 7 ರಿಂದ ಪ್ರತ್ಯೇಕವಾಗಿ ಇರುವಂತೆ ಕ್ರಮ ಕೈಗೊಳ್ಳಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ.

ಚಿತಾಗಾರದ ಮುಂದೆ ಸೋಂಕಿತೆ ಶವವಿಟ್ಟು ಆಸ್ಪತ್ರೆ ಸಿಬ್ಬಂದಿ ಪರಾರಿ

ಇನ್ನು ನಗರದಲ್ಲಿ ಖಾಸಗಿ ಲ್ಯಾಬ್‌ಗಳಲ್ಲಿ ಕೊರೋನಾ ಸೋಂಕಿತರ ಪರೀಕ್ಷೆ ಮಾಡಿದ ವರದಿಗಳನ್ನು ತ್ವರಿತವಾಗಿ ಐಸಿಎಂಆರ್‌ ಪೋರ್ಟಲ್‌ಗೆ ಅಪ್‌ಡೇಟ್‌ ಮಾಡುತ್ತಿಲ್ಲ. ಇದರಿಂದ ಸೋಂಕಿತ ಮನೆಯಲ್ಲಿಯೇ ಕಾಯಬೇಕಾದ ಪರಿಸ್ಥಿತಿ ಇದೆ. ಹೀಗಾಗಿ, ತ್ವರಿತವಾಗಿ ಫಲಿತಾಂಶದ ವರದಿಯನ್ನು ಐಸಿಎಂಆರ್‌ ಪೋರ್ಟಲ್‌ಗೆ ಅಪ್‌ಡೇಟ್‌ ಮಾಡಿಸುವ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಲಾಗಿದೆ.

ಮೊದಲ ಸಭೆಯಲ್ಲಿ ತಜ್ಞ ಡಾ. ಗಿರಿಧರ್‌ ಬಾಬು, ಸಾರ್ವಜನಿಕ ಆರೋಗ್ಯ ವಿಭಾಗದ (ಕ್ಲಿನಿಕಲ್‌) ಡಾ. ನಿರ್ಮಲಾ ಬುಗ್ಗಿ, ಡಾ. ರವಿ ಮೆಹ್ರಾ, ಡಾ. ಕೃಷ್ಣಮೂರ್ತಿ, ಡಾ. ವೆಂಕಟೇಶ್‌, ಡಾ. ಆಶೀಸ್‌ ಸತ್ಪತಿ, ಡಾ. ಎನ್‌.ಟಿ. ನಾಗರಾಜ, ಡಾ. ರಂಗನಾಥ್‌, ಡಾ. ರಮೇಶ್‌ ಮಿಸ್ತಿ, ಡಾ. ಜಿ.ಕೆ.ಸುರೇಶ್‌ ಉಪಸ್ಥಿತರಿದ್ದರು.