Mysuru : ಶೇ.10 ಮೀಸಲು ಕಾಂಗ್ರೆಸ್ ನಿಲುವು ಬದಲಾಗಲಿ
ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗದವರಿಗೆ ಶೇ.10 ಮೀಸಲಾತಿ ಬಗ್ಗೆ ಕಾಂಗ್ರೆಸ್ ತನ್ನ ನಿಲುವಿನ ಪುನರ್ ಪರಿಶೀಲಿಸಬೇಕು. ಈ ಸಂಬಂಧ ಸುಪ್ರೀಂಕೋರ್ಚ್‌ನಲ್ಲಿ ಮೇಲನ್ಮವಿ ಸಲ್ಲಿಸಬೇಕು ಎಂದು ಹಿರಿಯ ನ್ಯಾಯವಾದಿ ಪ್ರೊ. ರವಿವರ್ಮ ಕುಮಾರ್ ತಿಳಿಸಿದರು.
ಮೈಸೂರು (ನ.16): ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗದವರಿಗೆ ಶೇ.10 ಮೀಸಲಾತಿ ಬಗ್ಗೆ ಕಾಂಗ್ರೆಸ್ ತನ್ನ ನಿಲುವಿನ ಪುನರ್ ಪರಿಶೀಲಿಸಬೇಕು. ಈ ಸಂಬಂಧ ಸುಪ್ರೀಂಕೋರ್ಚ್‌ನಲ್ಲಿ ಮೇಲನ್ಮವಿ ಸಲ್ಲಿಸಬೇಕು ಎಂದು ಹಿರಿಯ ನ್ಯಾಯವಾದಿ ಪ್ರೊ. ರವಿವರ್ಮ ಕುಮಾರ್ ತಿಳಿಸಿದರು.
ಮೈಸೂರಿನ ರಾಮಕೃಷ್ಣನಗರದ ರಮಾಗೋವಿಂದ ರಂಗಮಂದಿರದಲ್ಲಿ ವಿಚಾರವಾದಿ ಬಳಗವು ಮಂಗಳವಾರ ಆಯೋಜಿಸಿದ್ದ ಸಮಾರಂಭದಲ್ಲಿ ಡಾ. ಹರೀಶ್‌ಕುಮಾರ್ ಅವರ ‘ಸಿದ್ದರಾಮಯ್ಯ- 75’ ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, 1885ರಲ್ಲಿ ಬ್ರಾಹ್ಮಣರ ಪ್ರಾಬಲ್ಯವನ್ನು ತಗ್ಗಿಸುವುದಕ್ಕಾಗಿಯೇ ಮೈಸೂರು ಸಂಸ್ಥಾನದಲ್ಲಿ ಮೀಸಲಾತಿ ಜಾರಿಗೊಂಡಿತು. ನಂತರ ಮಿಲ್ಲರ್ ಸಮಿತಿ ರಚಿಸಲಾಯಿತು. ಆದರೆ, ಇದೀಗ ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗದವರಿಗೆ ಶೇ. 10 ಮೀಸಲಾತಿ ನೀಡಲಾಗಿದೆ. ಅದು ಬ್ರಾಹ್ಮಣರಿಗಾಗಿ ಅಲ್ಲದೇ ಮತ್ತೇನು ಎಂದು ಪ್ರಶ್ನಿಸಿದರು.
ಆರ್ಥಿಕವಾಗಿ ಹಿಂದುಳಿದ ಸಮುದಾಯಕ್ಕೆ ಮೀಸಲಾತಿಯನ್ನು ಸಂಸತ್‌ನಲ್ಲಿ ಚರ್ಚೆ ನಡೆಯದೇ ಅನುಮೋದನೆಗೊಂಡಿತು. ಸುಪ್ರೀಂಕೋರ್ಚ್‌ನಲ್ಲಿ ತೀರ್ಪು ಮರುಪರಿಶೀಲನಾ ಅರ್ಜಿಯನ್ನು ಕಾಂಗ್ರೆಸ್ ಹಾಕಬೇಕು. ರಾಷ್ಟ್ರದ ಎಲ್ಲಾ ಸಂಸ್ಥೆಗಳಲ್ಲಿ ಮೀಸಲಾತಿ ಇದ್ದರೂ, ನ್ಯಾಯಾಂಗದಲ್ಲಿ ಮೀಸಲಾತಿ ಇಲ್ಲ. ಹೀಗಾಗಿ ಅಲ್ಲಿಯೂ ಮೀಸಲಾತಿ ತರಲು ಪಕ್ಷ ಹೋರಾಟ ನಡೆಸಬೇಕು ಎಂದು ಅವರು ಸಲಹೆ ನೀಡಿದರು.
ದಲಿತ ಕ್ರೈಸ್ತರು ಹಾಗೂ ಮುಸ್ಲಿಮರನ್ನು ಪರಿಶಿಷ್ಟಮೀಸಲಾತಿ ಕೊಡುವ ಕುರಿತು ಜಸ್ಟೀಸ್ ಬಾಲಕೃಷ್ಣ ಆಯೋಗ ರಚಿಸಲಾಗಿದ್ದು, ಅದರ ಬಗ್ಗೆ ಪಕ್ಷದ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ಅವರು ಆಗ್ರಹಿಸಿದರು.
ಸಿದ್ದರಾಮಯ್ಯ ಅವರ ಕಾಲದಲ್ಲಿ ಆದ ಸಾಧನೆ ಹಾಗೂ ಕಾರ್ಯಕ್ರಮಗಳನ್ನು ದಾಖಲಿಸುವಾಗ ಮೌಲ್ಯಮಾಪನದ ಕಾರ್ಯವನ್ನು ಲೇಖಕರು ಮಾಡಬೇಕಿತ್ತು. ಅನ್ನಭಾಗ್ಯ ಬಡವರ ಹಸಿವು ತಪ್ಪಿಸಿದ್ದಷ್ಟೇ ಅಲ್ಲ. ಬಾಲಕಾರ್ಮಿಕ ಪದ್ಧತಿ ಕ್ಷೀಣಿಸಿ ಸರ್ವ ಶಿಕ್ಷಣ ಅಭಿಯಾನ ಸಾಕ್ಷಾತ್ಕಾರಗೊಳ್ಳುವ ಸಹಾಯ ಮಾಡಿತು. ಮಕ್ಕಳು ಶಾಲೆಗೆ ಹೋದರು. ದಾಖಲಾತಿ ಹೆಚ್ಚಾಯಿತು ಎಂದರು.
ಯುವಕರಿಗೆ ಭವಿಷ್ಯವೇ ಇಲ್ಲ:
ಸಮಾಜವಾದಿ ಪ. ಮಲ್ಲೇಶ್ ಮಾತನಾಡಿ, ದಿಕ್ಕೆ ಇಲ್ಲದ ಸಮಾಜವನ್ನು ಪ್ರಧಾನಿ ಕಟ್ಟುತ್ತಿದ್ದಾರೆ. ಆರ್‌ಎಸ್‌ಎಸ್, ಬಿಜೆಪಿಗೆ ಮಾತ್ರ ಪ್ರಧಾನಿಯಾಗಿದ್ದಾರೆ. ಮಕ್ಕಳು, ಯುವಕರಿಗೆ ಭವಿಷ್ಯವೇ ಇಲ್ಲವಾಗಿದೆ. ದೇಶವನ್ನು ಹಾಳು ಮಾಡಿದ್ದು ಬ್ರಾಹ್ಮಣರು, ಬ್ರಾಹ್ಮಣ್ಯ. ಅವರನ್ನು ಎಂದಿಗೂ ನಂಬಬಾರದು ಎಂದರು.
ಅನ್ಯಾಯ ಕಣ್ಣ ಮುಂದೆಯೇ ಇದ್ದಾಗ ಪ್ರಶ್ನಿಸುತ್ತಿಲ್ಲ. ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ನಡೆಯುತ್ತಿದೆ. ಮುರುಘಾ ಮಠದ ಸ್ವಾಮೀಜಿ ಮಕ್ಕಳ ಮೇಲೆ ಅನ್ಯಾಯ ಎಸಗಿದ್ದಾರೆ. ಯುವಕರು ಬೀದಿಗಿಳಿಯಬೇಕಿತ್ತು. ಕೇವಲ ಸುದ್ದಿಯನ್ನು ಚಪ್ಪರಿಸುತ್ತಿದ್ದಾರೆ ಎಂದು ಅವರು ವ್ಯಂಗ್ಯವಾಡಿದರು.
ಕೃತಿ ಕುರಿತು ಹಿರಿಯ ಪತ್ರಕರ್ತ ದಿನೇಶ್ ಅಮಿನ್ ಮಟ್ಟು ಮಾತನಾಡಿ, ದೇಶದ ಯಾವುದೇ ಸರ್ಕಾರವು ಚುನಾವಣೆ ಮುನ್ನ ನೀಡಿದ್ದ ಪ್ರಣಾಳಿಕೆಯ ಎಲ್ಲ ಭರವಸೆಗಳನ್ನು ಈಡೇರಿಸಿದ್ದು, ನುಡಿದಂತೆ ನಡೆದ ಸರ್ಕಾರ ಇದ್ದರೆ, ಅದು ಸಿದ್ದರಾಮಯ್ಯ ಸರ್ಕಾರ ಮಾತ್ರ. ರಾಜಕಾರಣಿಗಳು ಜಾತಿವಾದಿ ಆಗಿರುತ್ತಾರೆ. ಆದರೆ, ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ, ಇಬ್ಬರು ಅಧಿಕಾರಿಗಳನ್ನು ಬಿಟ್ಟರೆ ತಮ್ಮದೇ ಜಾತಿಯ ಅಧಿಕಾರಿಗಳು ಇರಲಿಲ್ಲ. ಸಚಿವ ಸಂಪುಟದಲ್ಲೂ ಅವಕಾಶ ನೀಡಿರಲಿಲ್ಲ. ಹೀಗಾಗಿ ಅವರನ್ನು ಜಾತಿವಾದಿ ಎನ್ನಲಾಗದು ಎಂದು ಹೇಳಿದರು.
ಕಾಂಗ್ರೆಸ್‌ನಲ್ಲಿಯೇ ಮುಖಂಡರಿಗೆ ಸೈದ್ಧಾಂತಿಕ ಸ್ಪಷ್ಟತೆಯಿಲ್ಲ. ಆದರೆ, ಸಿದ್ದರಾಮಯ್ಯಗೆ ಇದೆ. ಹೀಗಾಗಿ, ಅವರ ಸಿದ್ಧಾಂತ, ಪಕ್ಷದ ಮೂಲ ಸಿದ್ಧಾಂತಕ್ಕೆ ಹೊಂದಿಕೆಯಾಗುತ್ತದೆ. ನೆಹರೂ ಹಾಗೂ ಸಿದ್ದರಾಮಯ್ಯ ಅವರ ಸಿದ್ಧಾಂತಗಳೆರಡೂ ಒಂದೇ ಎಂದರು.
ವಿಪಕ್ಷ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಸಚಿವ ಡಾ.ಎಚ್.ಸಿ. ಮಹದೇವಪ್ಪ, ವಿಧಾನಪರಿಷತ್ತು ಸದಸ್ಯ ಡಾ.ಡಿ. ತಿಮ್ಮಯ್ಯ, ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ.ಎಸ್. ಶಿವರಾಮು, ಕೆ.ಆರ್. ಗೋಪಾಲಕೃಷ್ಣ, ಲೇಖಕ ಡಾ. ಹರೀಶ್‌ಕುಮಾರ್ ಇದ್ದರು.
ಬ್ರಾಹ್ಮಣರ ಬ್ರಾಹ್ಮಣ್ಯಕ್ಕಿಂತ ಶೂದ್ರರ ಬ್ರಾಹ್ಮಣ್ಯ ಹೆಚ್ಚು ಅಪಾಯಕಾರಿ. ಶೂದ್ರರ ಬ್ರಾಹ್ಮಣ್ಯದ ವಿರುದ್ಧ ಪ್ರತಿಭಟಿಸದಿದ್ದರೆ ಸಮಸ್ಯೆಯಾಗಲಿದೆ. ಸರ್ವಾಧಿಕಾರಿ ಧೋರಣೆಯ ಆಡಳಿತ ಮುನ್ನಲೆಗೆ ಬಂದಿದೆ. ಪ್ರಾದೇಶಿಕ ಪಕ್ಷಗಳು ರಾಷ್ಟ್ರೀಯ ದೃಷ್ಟಿಕೋನವನ್ನು ಹೊಂದದೆ, ಜಾತಿ ಆಧಾರಿತ, ಧರ್ಮಾಧಾರಿತ ಪಕ್ಷವಾಗುತ್ತಿವೆ. ಹೀಗಾಗಿ, ಸಿದ್ದರಾಮಯ್ಯ ಮತ್ತು ಅವರ ಸ್ನೇಹಿತರ ಕೈ ಬಲಪಡಿಸಬೇಕು.
- ಡಾ.ಎಚ್.ಸಿ. ಮಹದೇವಪ್ಪ, ಮಾಜಿ ಸಚಿವರು