ಕೋವಿಡ್ ಎಫೆಕ್ಟ್: ಅವಿಭಜಿತ ಬಳ್ಳಾರಿಯ 10 ಥೇಟರ್ ಬಂದ್!
* ಚಿತ್ರಮಂದಿರ ಕೆಡವಿ ವಾಣಿಜ್ಯ ಕಟ್ಟಡ ನಿರ್ಮಿಸುತ್ತಿರುವ ಮಾಲೀಕರು
* ಬಳ್ಳಾರಿ-ವಿಜಯನಗರ ಜಿಲ್ಲೆಗಳಲ್ಲಿದ್ದ 24 ಚಿತ್ರಮಂದಿರಗಳು
* ಮತ್ತಷ್ಟು ಚಿತ್ರಮಂದಿರಗಳು ಕಾಯಂ ಬಾಗಿಲು ಮುಚ್ಚುವ ಸಾಧ್ಯತೆ
ಕೆ.ಎಂ. ಮಂಜುನಾಥ್
ಬಳ್ಳಾರಿ(ಜು.11): ಕೊರೋನಾ ಮೊದಲ ಹಾಗೂ 2ನೇ ಅಲೆಯ ದಾಳಿಗೆ ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಬಳ್ಳಾರಿ-ವಿಜಯನಗರ ಜಿಲ್ಲೆಗಳ ಚಿತ್ರಮಂದಿರಗಳ ಮಾಲೀಕರು, ಅನೇಕ ವರ್ಷಗಳಿಂದ ಜನರಿಗೆ ಮನರಂಜನೆ ನೀಡುತ್ತಾ ಬಂದಿದ್ದ ಚಿತ್ರಮಂದಿರಗಳನ್ನು ಸಂಪೂರ್ಣ ಮುಚ್ಚುವ ನಿರ್ಧಾರ ಕೈಗೊಂಡಿದ್ದಾರೆ!
ಈಗಾಗಲೇ ಜಿಲ್ಲೆಯ ಅನೇಕ ಚಿತ್ರಮಂದಿರಗಳನ್ನು ಕೆಡವಿ, ವಾಣಿಜ್ಯ ಕಟ್ಟಡ, ಕಲ್ಯಾಣಮಂಟಪ ನಿರ್ಮಿಸಲಾಗುತ್ತಿದ್ದು, ಇನ್ನು ಕೆಲವೇ ದಿನಗಳಲ್ಲಿ ಮತ್ತಷ್ಟು ಚಿತ್ರಮಂದಿರಗಳು ಕಾಯಂ ಬಾಗಿಲು ಮುಚ್ಚುವ ಸಾಧ್ಯತೆಗಳಿವೆ. ಬಳ್ಳಾರಿ-ವಿಜಯನಗರ ಜಿಲ್ಲೆಗಳಲ್ಲಿ 24 ಚಿತ್ರಮಂದಿರಗಳಿದ್ದವು. ಈ ಪೈಕಿ 10 ಈಗಾಗಲೇ ಬಂದ್ ಆಗಿವೆ. ಜಿಲ್ಲೆಯ ಕೆಲವು ತಾಲೂಕು ಕೇಂದ್ರಗಳಲ್ಲಿ ಇದ್ದ ಒಂದೆರಡು ಚಿತ್ರಮಂದಿರಗಳೂ ಸಹ ಬಾಗಿಲು ಮುಚ್ಚಿವೆ.
ಕೊರೋನಾ ಸಂಕಷ್ಟದಲ್ಲಿದ್ದ ಚಿತ್ರಮಂದಿರಗಳಿಗೆ ಸರ್ಕಾರದಿಂದ ಗುಡ್ ನ್ಯೂಸ್
ಕೋವಿಡ್ ಹೊಡೆತ:
ಕೋವಿಡ್ ದಾಳಿ ಹಿನ್ನೆಲೆಯಲ್ಲಿ ಸುಮಾರು ಒಂದೂವರೆ ವರ್ಷಗಳ ಕಾಲ ಚಿತ್ರಮಂದಿರಗಳು ಸಮರ್ಪಕವಾಗಿ ಪ್ರದರ್ಶನ ಕಾಣಲಿಲ್ಲ. ಕಳೆದ ವರ್ಷ ಕೋವಿಡ್ ಪ್ರಕರಣಗಳು ತಗ್ಗಿದ ಬಳಿಕ ಪ್ರದರ್ಶನಕ್ಕೆ ಸರ್ಕಾರ ಅನುಮತಿ ನೀಡಿದರೂ ಸ್ಟಾರ್ ನಟರ ಹೆಚ್ಚಿನ ಚಿತ್ರಗಳು ಬಿಡುಗಡೆಯಾಗದ ಹಿನ್ನೆಲೆಯಲ್ಲಿ ಸಿನಿಪ್ರಿಯರು ಚಿತ್ರಮಂದಿರಗಳ ಕಡೆ ಮುಖ ಮಾಡಲಿಲ್ಲ. ಈ ವರ್ಷವೂ ಅದೇ ಸ್ಥಿತಿಯಿದೆ. ಒಂದೆಡೆ ವಿದ್ಯುತ್ ಶುಲ್ಕ ಪಾವತಿಯ ಸಂಕಷ್ಟ, ಸ್ಥಳೀಯ ಸಂಸ್ಥೆಗಳ ತೆರಿಗೆ ಭಾರದ ಜತೆಗೆ ಕಾರ್ಮಿಕರಿಗೆ ವೇತನ ನೀಡಬೇಕಾದ ಅನಿವಾರ್ಯತೆಗೆ ಕುಗ್ಗಿ ಹೋದ ಮಾಲಿಕರು, ಚಿತ್ರಮಂದಿರದ ಕಟ್ಟಡಗಳನ್ನು ಕೆಡವಿ ವಾಣಿಜ್ಯ ಕಟ್ಟಡಗಳನ್ನು ನಿರ್ಮಿಸಲು ಮುಂದಾಗಿದ್ದಾರೆ.
ಕೋವಿಡ್‌ನಿಂದಾಗಿ ತೀವ್ರ ಆರ್ಥಿಕ ಸಂಕಷ್ಟ ಎದುರಿಸಿದ ಮಾಲೀಕರು ಅನಿವಾರ್ಯವಾಗಿ ಚಿತ್ರಮಂದಿರಗಳನ್ನು ಕೆಡವಿ ವಾಣಿಜ್ಯ ಕಟ್ಟಡ ನಿರ್ಮಿಸುತ್ತಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಮತ್ತಷ್ಟೂಚಿತ್ರಮಂದಿರಗಳನ್ನು ಮುಚ್ಚಲಿವೆ ಎಂದು ಬಳ್ಳಾರಿ ತ್ರಮಂದಿರ ಮಾಲೀಕರ ಸಂಘದ ಅಧ್ಯಕ್ಷ ಲಕ್ಷ್ಮಿಕಾಂತ ರೆಡ್ಡಿ ತಿಳಿಸಿದ್ದಾರೆ.