ಬೆಂಗಳೂರು :  ಅಬಕಾರಿ ಇಲಾಖೆಯಲ್ಲಿ ಸಬ್‌ ಇನ್ಸ್‌ಪೆಕ್ಟರ್‌ ಹುದ್ದೆ ಕೊಡಿಸುವುದಾಗಿ ನಿವೃತ್ತ ಪೊಲೀಸರೊಬ್ಬರ ಪುತ್ರನಿಗೆ ನಂಬಿಸಿ 10 ಲಕ್ಷಗಳನ್ನು ಪಡೆದು ವಂಚಿಸಿದ್ದಾರೆ ಎಂಬ ಆರೋಪದ ಮೇರೆಗೆ ಕೆಪಿಎಸ್‌ಸಿ (ಕರ್ನಾಟಕ ಲೋಕಸೇವಾ ಆಯೋಗ) ಮಾಜಿ ಅಧ್ಯಕ್ಷ ಶ್ಯಾಂ ಭಟ್‌ ಸೇರಿದಂತೆ ಮೂವರ ವಿರುದ್ಧ ಉಪ್ಪಾರಪೇಟೆ ಪೊಲೀಸ್‌ ಠಾಣೆಯಲ್ಲಿ ಸೋಮವಾರ ಪ್ರಕರಣ ದಾಖಲಾಗಿದೆ.

ತುಮಕೂರಿನ ಕ್ಯಾತಸಂದ್ರ ಸಮೀಪದ ಮೈದಾಳ ನಿವಾಸಿ, ಸಶಸ್ತ್ರ ಮೀಸಲು ಪಡೆಯ ನಿವೃತ್ತ ಆರ್‌ಎಸ್‌ಐ ಸಿದ್ದಯ್ಯ ಎಂಬುವರೇ ವಂಚನೆಗೊಳಗಾಗಿದ್ದು, ಎರಡು ವರ್ಷಗಳ ಹಿಂದೆ ಈ ಕೃತ್ಯ ನಡೆದಿದೆ. ಸಿದ್ದಯ್ಯ ಅವರು ನೀಡಿದ ದೂರಿನ ಮೇರೆಗೆ ಕೆಪಿಎಸ್‌ಸಿ ಮಾಜಿ ಅಧ್ಯಕ್ಷ ಶ್ಯಾಂ ಭಟ್‌, ನಿವೃತ್ತ ಆರ್‌ಎಸ್‌ಐ ಪ್ರದೀಪ್‌ ಹಾಗೂ ಧನರಾಜ್‌ ವಿರುದ್ಧ ವಂಚನೆ ಆರೋಪದಡಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಎಫ್‌ಐಆರ್‌ನಲ್ಲೇನಿದೆ?

ಮೈಸೂರು ರಸ್ತೆಯಲ್ಲಿರುವ ಕೇಂದ್ರ ಸಶಸ್ತ್ರ ಮೀಸಲು ಪಡೆಯಲ್ಲಿ ಆರ್‌ಎಸ್‌ಐ ಆಗಿ ಸಿದ್ದಯ್ಯ ನಿವೃತ್ತರಾಗಿದ್ದಾರೆ. ಅವರು ಸೇವೆಯಲ್ಲಿದ್ದಾಗ ಸಹೋದ್ಯೋಗಿ ಎಆರ್‌ಎಸ್‌ಐ ಪ್ರದೀಪ್‌ ಮೂಲಕ ಧನರಾಜ್‌ ಪರಿಚಯವಾಗಿತ್ತು. ‘ನನಗೆ ಕೆಪಿಎಸ್‌ಸಿ ಅಧ್ಯಕ್ಷ ಶ್ಯಾಂ ಭಟ್‌ ಸ್ನೇಹಿತರು. ನೀವು 20 ಲಕ್ಷ ರು. ನೀಡಿದರೆ ನಿಮ್ಮ ಮಗನಿಗೆ ಅಬಕಾರಿ ಇಲಾಖೆಯಲ್ಲಿ ಸಬ್‌ ಇನ್ಸ್‌ಪೆಕ್ಟರ್‌ ಹುದ್ದೆ ಕೊಡಿಸುತ್ತೇನೆ. ಈ ಸಂಬಂಧ ಶ್ಯಾಂ ಭಟ್‌ ಅವರನ್ನೇ ನೇರವಾಗಿ ಭೇಟಿ ಮಾಡಿಸಿ ಭರವಸೆ ಕೊಡಿಸುತ್ತೇನೆ’ ಎಂದು ಸಿದ್ದಯ್ಯ ಅವರಿಗೆ ಧನರಾಜ್‌ ಹೇಳಿದ್ದ.

‘ಅಲ್ಲದೆ ಮೊದಲ ಕಂತಿನಲ್ಲಿ 10 ಲಕ್ಷ ರು. ನೀಡಬೇಕು. ಕೆಲಸವಾದ ನಂತರ ಬಾಕಿ ಹಣ ನೀಡಿದರಾಗುತ್ತದೆ. ನನಗೆ ವೈಯಕ್ತಿಕವಾಗಿ 5 ಲಕ್ಷ ರು. ಕೊಡಬೇಕು’ ಎಂದು ಧನರಾಜ್‌ ಬೇಡಿಕೆ ಇಟ್ಟಿದ್ದ. ಈ ಮಾತಿಗೆ ಒಪ್ಪಿದ ಸಿದ್ದಯ್ಯ ಅವರು, 2017ರ ಜೂನ್‌ನಲ್ಲಿ 4.5 ಲಕ್ಷ ರು.ಗಳನ್ನು ಗಾಂಧಿನಗರದ ದಿವಾ ರೆಸಿಡೆನ್ಸಿ ಹೋಟೆಲ್‌ನಲ್ಲಿ ಧನರಾಜ್‌ಗೆ ಕೊಟ್ಟಿದ್ದರು. ಹೀಗೆ ಮೂರು ಹಂತದಲ್ಲಿ ಆತನಿಗೆ ಹಣ ಸಂದಾಯವಾಗಿತ್ತು. ಈ ಹಣವನ್ನು ಶ್ಯಾಂ ಭಟ್‌ ಅವರಿಗೆ ತಲುಪಿಸಿರುವುದಾಗಿ ಸಹ ಧನರಾಜ್‌ ತಿಳಿಸಿದ್ದ ಎಂದು ದೂರಿನಲ್ಲಿ ಉಲ್ಲೇಖವಾಗಿದೆ.

ಹಣ ನೀಡಿದರೂ ಪುತ್ರನಿಗೆ ಕೆಲಸ ಸಿಗದೆ ಹೋದಾಗ ಅವರು, ಈ ಬಗ್ಗೆ ಪ್ರಶ್ನಿಸಿದ್ದಕ್ಕೆ ಎರಡನೇ ಲಿಸ್ಟ್‌ನಲ್ಲಿ ಕೆಲಸ ಗ್ಯಾರಂಟಿ ಅಂತಾ ಶ್ಯಾಂ ಭಟ್‌ ಭರವಸೆ ಕೊಟ್ಟಿದ್ದಾರೆ ಎಂದು ಧನರಾಜ್‌ ಸುಳ್ಳು ಹೇಳಿದ್ದ. ಆತನ ನಡವಳಿಕೆಯಿಂದ ಬೇಸತ್ತು ಹಣ ಮರಳಿಸುವಂತೆ ಸಿದ್ದಯ್ಯ ಪಟ್ಟು ಹಿಡಿದರು. ಕೊನೆಗೆ ಇದೇ ಏಪ್ರಿಲ್‌ನಲ್ಲಿ 3 ಲಕ್ಷ ರು. ಮರಳಿಸಿದ ಧನರಾಜ್‌, ನಂತರ ಸಂಪರ್ಕ ಕಡಿದುಕೊಂಡಿದ್ದ. ನನಗೆ ಧನರಾಜ್‌, ಶ್ಯಾಂ ಭಟ್‌ ಹಾಗೂ ಪ್ರದೀಪ್‌ ಸೇರಿ ಸಂಚು ರೂಪಿಸಿ 7 ಲಕ್ಷ ರು. ವಂಚಿಸಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮ ಜರುಗಿಬೇಸಬೇಕು ಎಂದು ಸಿದ್ದಯ್ಯ ಮನವಿ ಮಾಡಿದ್ದಾರೆ.