Asianet Suvarna News Asianet Suvarna News

ಕಾಂಗ್ರೆಸ್ ಮತ್ತೊಮ್ಮೆ ಅಧಿಕಾರಕ್ಕೆ ತರಲು ಸಿದ್ದರಾಮಯ್ಯ ಕೊಟ್ಟ ಬಂಪರ್ ಆಫರ್

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಮತ್ತೆ ತರುವ ಸಲುವಾಗಿ ಸಿದ್ದರಾಮಯ್ಯ ಬಂಪರ್ ಆಫರ್ ಕೊಟ್ಟಿದ್ದಾರೆ

10 kg rice for poor if I become CM again Says Siddaramaiah snr
Author
Bengaluru, First Published Oct 23, 2020, 11:16 AM IST

 ಶಿರಾ (ಅ.23):  ಕಳೆದ ಬಾರಿ ನಾನು ಮುಖ್ಯಮಂತ್ರಿಯಾಗಿದ್ದಾಗ ಈ ಸಮಾಜದ ಎಲ್ಲ ಬಡವರಿಗೆ ಸಹಾಯ ಮಾಡುವ ಕಾರ್ಯಕ್ರಮ ಅನ್ನಭಾಗ್ಯ ಯೋಜನೆ ತಂದು 7 ಕೆಜಿ ಅಕ್ಕಿ ಕೊಟ್ಟಿದ್ದೆ, ಮತ್ತೊಮ್ಮೆ ಕಾಂಗ್ರೆಸ್‌ ಪಕ್ಷವನ್ನು ಜನತೆ ಅಧಿಕಾರಕ್ಕೆ ತನ್ನಿ 10 ಕೆಜಿ ಉಚಿತ ಅಕ್ಕಿ ನೀಡುತ್ತೇನೆ. ಅದಕ್ಕೆ ಶಿರಾ ಉಪಚುನಾವಣೆ ದಿಕ್ಸೂಚಿಯಾಗಿದೆ. ಇಲ್ಲಿನ ಕಾಂಗ್ರೆಸ್‌ ಅಭ್ಯರ್ಥಿ ಗೆಲ್ಲಿಸುವ ಮೂಲಕ ಮುಂದೆ ಕಾಂಗ್ರೆಸ್‌ ಸರಕಾರ ಬರಲು ಮುನ್ನುಡಿ ಬರೆಯಿರಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಅವರು ತಾಲೂಕಿನ ಕಾಡಜ್ಜನಪಾಳ್ಯ, ಮಾನಂಗಿ ತಾಂಡ, ತಾವರೆಕೆರೆ, ಹುಣಸೆಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಟಿ.ಬಿ.ಜಯಚಂದ್ರ ಅವರ ಪರ ಮತಪ್ರಚಾರ ನಡೆಸಿ ಮಾತನಾಡಿದರು.

ತಾವು 7 ಕೆಜಿ ಅಕ್ಕಿ ಕೊಟ್ಟಿಈಗ ಯಡಿಯೂರಪ್ಪ 5 ಕೆಜಿ ಕೊಡುತ್ತಿದ್ದಾರೆ. 2 ಕೆಜಿ ಕಡಿಮೆ ಮಾಡಿದ್ದಾರೆ. ಯಡಿಯೂರಪ್ಪ ಅವರಿಗೆ ಕೇಳುತ್ತೇನೆ ಯಾಕೆ ಕಡಿಮೆ ಮಾಡಿದ್ದೀರಿ? ನಿಮ್ಮ ಮನೆಯಿಂದ ತಂದು ಕೋಡುತ್ತಿರಾ ಎಂದು ಹರಿಹಾಯ್ದರು.

'ಹುಲಿಯಾ VS ಕಾಡು ಮನುಷ್ಯ' ಸಿದ್ದು ಮಾತಿಗೆ ಕಟೀಲ್ ಅದ್ಭುತ ಕೌಂಟರ್! ..

ಇಡೀ ದೇಶದ ಯಾವ ರಾಜ್ಯದಲ್ಲೂ ಉಚಿತ ಅಕ್ಕಿ ಕೊಡುತ್ತಿಲ್ಲ. ನಾನು ಮುಖ್ಯಮಂತ್ರಿಯಾದಾಗ ಅನ್ನಭಾಗ್ಯ ಯೋಜನೆಯ ಮೂಲಕ ಉಚಿತ ಅಕ್ಕಿ ಕೊಡುವ ಘೋಷಣೆ ಮಾಡಿದೆ. ಆ ಯೋಜನೆ ಈಗಲೂ ಜನರನ್ನು ಹಸಿವಿನಿಂದ ಕಾಪಾಡುತ್ತಿದೆ ಎಂದರು.

ಎಲ್ಲ ಜಾತಿಯ ಬಡವರಿಗೂ ಅನುಕೂಲವಾಗುವ ಕಾರ್ಯಕ್ರಮಗಳನ್ನು ಜಾರಿಗೆ ತಂದೆ. ಹಾಲಿಗೆ 5 ರು. ಪ್ರೋತ್ಸಾಹ ಧನ ಕೊಟ್ಟಿದ್ದು, ಕೃಷಿ ಭಾಗ್ಯ ಮಾಡಿದ್ದು, ವಿದ್ಯಾಸಿರಿ ಯೋಜನೆ ತಂದು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಕೊಟ್ಟಿದ್ದು, ಹಟ್ಟಿತಾಂಡಾಗಳನ್ನು ಕಂದಾಯ ಗ್ರಾಮ ಮಾಡಿದ್ದು ನಮ್ಮ ಸರಕಾರ. ಇಂದಿರಾ ಕ್ಯಾಂಟಿನ್‌ ತಂದಿದ್ದು ಹೀಗೆ ಎಲ್ಲ ಭರವಸೆಗಳನ್ನು ಈಡೇರಿಸಿದ ಸರಕಾರವೆಂದರೆ ಅದು ನಮ್ಮ ಕಾಂಗ್ರೆಸ್‌ ಸರಕಾರ ಎಂದರು.

ಉಪಚುನಾವಣೆ ಮೂರು ಪಕ್ಷದವರಿಗೆ ಪ್ರತಿಷ್ಠೆಯಾಗಿದೆ. ಕಳೆದ ಚುನಾವಣೆಯಲ್ಲಿ ಜೆಡಿಎಸ್‌ನ ಬಿ.ಸತ್ಯನಾರಾಯಣ ಶಾಸಕರಾಗಿದ್ದರು. ಅವರು ಏನು ಅಭಿವೃದ್ಧಿ ಮಾಡಿಲ್ಲ. ಈ ರಾಜ್ಯದಲ್ಲಿ ನಾನು ಸಿಎಂ ಆಗಿದ್ದೆ, ನಂತರ ಕುಮಾರಸ್ವಾಮಿ, ಈಗ ಯಡಿಯೂರಪ್ಪ ಆಗಿದ್ದಾರೆ. ಜನತೆ ನಮ್ಮ ಆಡಳಿತ ಒಮ್ಮೆ ನೆನಪಿಸಿಕೊಳ್ಳಿ. ಯಡಿಯೂರಪ್ಪ ಯಾವುದಾದರೂ ಯೋಜನೆಗಳಿಗೆ ದುಡ್ಡು ಕೇಳಿದರೆ ಖಜಾನೆ ಖಾಲಿ ಎನ್ನುತ್ತಾರೆ. ಆದರೆ ಇಲ್ಲಿ ಚುನಾವಣೆಗೆ ಖರ್ಚು ಮಾಡಲು ತಂದಿದ್ದಾರೆ. ಜನರು ಯಾರೂ ಬಿಜೆಪಿ ಮಾತಿಗೆ ಮರುಳಾಗಬಾರದು. ಈ ಬಾರಿ ಉಪಚುನಾವಣೆಯಲ್ಲಿ ಜಯಚಂದ್ರ ಅವರಿಗೆ ಆಶೀರ್ವಾದ ಮಾಡಿ, ನಾನು ಸಿಎಂ ಆದ್ರೆ 10 ಕೆಜಿ ಕೊಡುತ್ತೇನೆ ಎಂದರು.

ಬಿಜೆಪಿ ಅಭ್ಯರ್ಥಿ ರಾಜೇಶ್‌ ಗೌಡ ನಮ್ಮ ಬಳಿಯೂ ಟಿಕೆಟ್‌ ಕೇಳಿಕೊಂಡು ಬಂದಿದ್ದರು. ನಾನು ಆಗಲ್ಲಪ್ಪ ಅಲ್ಲಿ ಜಯಚಂದ್ರ ಇದ್ದಾರೆ. ಇನ್ನೂ ಸ್ವಲ್ಪ ಪಕ್ಷದಲ್ಲಿ ಕೆಲಸ ಮಾಡು ಮುಂದೆ ನೋಡೋಣ ಎಂದಿದ್ದೆ. ಆದರೆ ಅವನು ಬಿಜೆಪಿಗೆ ಹೋದ. ಎಲ್ಲಿಯೂ ಸಲ್ಲದವರು ಬಿಜೆಪಿಯಲ್ಲಿ ಸಲ್ಲುತ್ತಾರೆ. ಅದು ಜನರ ಹತ್ತಿರ ನಡೆಯುವುದಿಲ್ಲ. ಬಿಜೆಪಿ ಯಿಂದ ಬಿ.ಕೆ.ಮಂಜುನಾಥ್‌ಗೆ ಟಿಕೆಟ್‌ ಕೊಡಲಿಲ್ಲ. ಬಿಜೆಪಿಯವರು ಮಾತೆತ್ತಿದರೆ ಕಾರ್ಯಕರ್ತರ ರಕ್ಷಣೆ ಮಾಡುತ್ತೇವೆ ಎನ್ನುತ್ತಾರೆ ಏಲ್ಲಿ ಮಾಡಿದ್ರು ಎಂದು ಟೀಕಿಸಿದರು.

ಟಿ.ಬಿ.ಜಯಚಂದ್ರ ಅವರನ್ನು ಜನ ಆಧುನಿಕ ಭಗೀರಥ ಎಂದು ಕರೆಯುತ್ತಾರೆ. ಈ ರೀತಿ ಅನ್ವರ್ಥ ನಾಮ ಸಿಗಬೇಕಾದ್ರೆ ಸುಮ್ಮನೆ ಬರಲ್ಲ ಅದಕ್ಕೆ ಜಯಚಂದ್ರ ಶ್ರಮ ವಹಿಸಿದ್ದಾರೆ. ಹೇಮಾವತಿ ನೀರನ್ನು ತುಮಕೂರಿಗೆ, ಶಿರಾಕ್ಕೆ ತಂದರು. ಮತ್ತು ಅಪ್ಪರ್‌ ಭದ್ರ ಯೋಜನೆಯ ತುಮಕೂರುನಾಲೆಯನ್ನು ಶಿರಾದ 65 ಕೆರೆಗಳಿಗೆ ಹರಿಸುವ ಕಾರ್ಯ ಮಾಡಿದರು. ಆದ್ದರಿಂದ ಅವರಿಗೆ ಆಧುನಿಕ ಭಗೀರಥ ಎಂಬ ಹೆಸರು ಬಂದಿರೋದು ಎಂದರು.

ಈ ಉಪಚುನಾವಣೆಯಲ್ಲಿ ಕೆಲವರು ಅಳಲು ಬರುತ್ತಾರೆ. ಅವರನ್ನು ಜನತೆ ನಂಬಬೇಡಿ ಅದು ಬರೀ ಮೊಸಳೆ ಕಣ್ಣೀರು. ಅದನ್ನು ಯಾರೂ ನಂಬಬೇಡಿ ಎಂದು ಕುಮಾರಸ್ವಾಮಿ ಅವರನ್ನು ವ್ಯಂಗ್ಯ ಮಾಡಿದರು. ಬಿಜೆಪಿ ಪಕ್ಷದವರೇ ಆಗಲಿ, ಜೆಡಿಎಸ್‌ನವರೇ ಆಗಲಿ ಯಾರೇ ಬಂದು ಮತ ಕೇಳಿದರೂ ನೀವು ಕಾಂಗ್ರೆಸ್‌ಗೆ ಮತ ಹಾಕಬೇಕು. ಕಾಂಗ್ರೆಸ್‌ ಗೆಲ್ಲಿಸಬೇಕು. ಮುಂದೆ ಕಾಂಗ್ರೆಸ್‌ ಗೆದ್ದಾಗ ನಾನು ಧನ್ಯವಾದಗಳು ಹೇಳಲು ಬರುತ್ತೇನೆ ಎಂದರು.

ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಕೆ.ಎನ್‌.ರಾಜಣ್ಣ ಮಾತನಾಡಿ, ಈ ಉಪಚುನಾವಣೆಯಲ್ಲಿ ನಾವು ಸುಮ್ಮನೆ ಮತ ಕೇಳುತ್ತಿಲ್ಲ. ನಾವು ಮಾಡಿರುವ ಅಭಿವೃದ್ಧಿ ಕೆಲಸಕ್ಕೆ ನಿಮ್ಮಗಳ ಆರ್ಶೀವಾದ ಕೇಳಲು ಬಂದಿದ್ದೇವೆ. ಸಾಲಮನ್ನಾ ಸೌಲಭ್ಯ ಎಲ್ಲರಿಗೂ ತಲುಪಿಸಿರುವ ಯಶಸ್ಸು ಕಾಂಗ್ರೆಸ್‌ ಪಕ್ಷಕ್ಕೆ ಸೇರುತ್ತದೆ. ಸಿದ್ದರಾಮಯ್ಯ ಅವರನ್ನು ಅನ್ನರಾಮಣ್ಣ ಎನ್ನುತ್ತಾರೆ ಎಲ್ಲರು. ಏಕೆಂದರೆ ಅನ್ನಭಾಗ್ಯ ಯೋಜನೆ ತಂದ ಕಾರಣ ಯಾರೂ ಹಸಿವಿನಿಂದ ಬಳುತ್ತಿಲ್ಲ. ಅವರು ತಂದ ಕಾರ್ಯಕ್ರಮಗಳು ಬಡವರ ಪರವಾದರು. ಪಶು ಭಾಗ್ಯ, ಶಾದಿ ಭಾಗ್ಯ, ಅನ್ನಭಾಗ್ಯ ಹೀಗೆ ಹಲವಾರು ಕಾರ್ಯಕ್ರಮ ಕೊಟ್ಟಿದ್ದಾರೆ. ಶೋಷಿತ ಸಮುದಾಯಗಳ ಯೋಗಕ್ಷೇಮ ನೋಡಿಕೊಳ್ಳುವ ಕಾರ್ಯಕ್ರಮ ಕೊಟ್ಟಿರುವುದು ಕಾಂಗ್ರೆಸ್‌ ಸರಕಾರ. ಜನ ಯಾವುದೇ ಆಸೆ ಆಮೀಷಗಳಿಗೆ ಒಳಗಾಗಬಾರದು ಕಾಂಗ್ರೆಸ್‌ಗೆ ಮತ ನೀಡಬೇಕು ಎಂದರು.

ಕಾಂಗ್ರೆಸ್‌ ಅಭ್ಯರ್ಥಿ ಟಿ.ಬಿ.ಜಯಚಂದ್ರ ಮಾತನಾಡಿ, ಶಿರಾದಲ್ಲಿ ನಾನು ಅಧಿಕಾರದಲ್ಲಿದ್ದಾಗ 120ಕ್ಕೂ ಹೆಚ್ಚು ಬ್ಯಾರೇಜ್‌ಗಳನ್ನು ಮಾಡಿದ ಪರಿಣಾಮ ಅಂತರ್ಜಲ ಹೆಚ್ಚಿದೆ. ಎಲ್ಲೆಲ್ಲೂ ಹಸಿರಿನ ವಾತಾರಣ ಕಾಣುತ್ತಿದೆ. ಆದರೂ ನಾನು ಅಪಪ್ರಚಾರಕ್ಕೆ ಒಳಗಾಗಿದೆ. ಅದರಿಂದ ಚುನಾವಣೆಯಲ್ಲಿ ಸೋಲಬೇಕಾಯಿತು. ತಾಲೂಕಿನ ಚೀಲನಹಳ್ಳಿಯಲ್ಲಿ ಆಧುನಿಕ ಕುರಿ ಮತ್ತು ಮೇಕೆಗಳ ವಧಾಗಾರ ಮಾಡಿದ್ದೇವೆ. ಇದರಿಂದ ಕಾಡುಗೊಲ್ಲರಿಗೆ, ಕುರಿಗಾಹಿಗಳಿಗೆ ಅನುಕೂಲವಾಗುತ್ತದೆ. ತಮ್ಮ ಕುರಿಗಳಿಗೆ ವೈಜ್ಞಾನಿಕ ಬೆಲೆ ಸಿಗುತ್ತದೆ. ಇಂತಹ ಹತ್ತಾರು ಕಾರ್ಯಕ್ರಮ ಮಾಡಿದ್ದೇನೆ. ಈ ಬಾರಿ ನನಗೆ ಆರ್ಶೀವದಿಸಿದರೆ ಇನ್ನೂ ಸಮಗ್ರ ಅಭಿವೃದ್ಧಿ ಮಾಡುತ್ತೇನೆ ಎಂದರು.

ಈ ಸಂದರ್ಭದಲ್ಲಿ ಶಾಸಕ ಪಿ.ಬಿ.ಪರಮೇಶ್ವರನಾಯ್ಕ, ಕಾಂಗ್ರೆಸ್‌ ಮುಖಂಡ ಕಲ್ಕೆರೆ ರವಿಕುಮಾರ್‌, ಕೆಪಿಸಿಸಿ ಕಾರ್ಯದರ್ಶಿ ಕಾಂತನಾಯಕ್‌, ಚಿಕ್ಕಮಗಳೂರು ಜಿ.ಪಂ. ಉಪಾಧ್ಯಕ್ಷೆ ಕವಿತಾ ರಮೆಶ್‌, ಮಾಜಿ ವಿಧಾನಪರಿಷತ್‌ ಸದಸ್ಯೆ ಗಾಯಿತ್ರೀ ಶಾಂತೇಗೌಡ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಪಿ.ಆರ್‌.ಮಂಜುನಾಥ್‌, ಗ್ರಾಮಾಂತರ ಅಧ್ಯಕ್ಷ ಬರಗೂರು ನಟರಾಜ್‌, ವಿನಯ್‌ ತ್ಯಾಗರಾಜ್‌, ಮಾಜಿ ಎಪಿಎಂಸಿ ಅಧ್ಯಕ್ಷ ಸತ್ಯನಾರಾಯಣ, ಶೇಷಾನಾಯ್ಕ, ಜನಾರ್ಧನ್‌, ದೇವಾನಾಯ್ಕ ಸೇರಿದಂತೆ ಹಲವರು ಭಾಗವಹಿಸಿದ್ದರು.

Follow Us:
Download App:
  • android
  • ios