ಬೆಂಗಳೂರು : ರೈಲಿನಲ್ಲಿ 10 ಅಡಿ ಉದ್ದದ ಜೀವಂತ ಹೆಬ್ಬಾವು ಪತ್ತೆ!
ಬೆಂಗಳೂರು ‘ಲಾಲ್‌ಬಾಗ್ ಎಕ್ಸ್‌ಪ್ರೆಸ್’ ರೈಲಿನಲ್ಲಿ ಚೀಲವೊಂದರಲ್ಲಿ ಸುಮಾರು 10 ಅಡಿ ಉದ್ದದ ಜೀವಂತ ಹೆಬ್ಬಾವನ್ನು ಸಂರಕ್ಷಿಸಲಾಗಿದೆ.
ಬೆಂಗಳೂರು [ಅ.01]: ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ (ಕೆಎಸ್‌ಆರ್) ಚೆನ್ನೈ- ಬೆಂಗಳೂರು ‘ಲಾಲ್‌ಬಾಗ್ ಎಕ್ಸ್‌ಪ್ರೆಸ್’ ರೈಲಿನಲ್ಲಿ ಚೀಲವೊಂದರಲ್ಲಿ ಭಾನುವಾರ ರಾತ್ರಿ ಪತ್ತೆಯಾಗಿದ್ದ ಸುಮಾರು 10 ಅಡಿ ಉದ್ದದ ಜೀವಂತ ಹೆಬ್ಬಾವನ್ನು ಸಂರಕ್ಷಿಸಿರುವ ರೈಲ್ವೆ ಪೊಲೀಸರು ಸೋಮವಾರ ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ.
ಭಾನುವಾರ ಚೆನ್ನೈನಿಂದ ಹೊರಟ ರೈಲು ರಾತ್ರಿ 9.45ರ ಸುಮಾರಿಗೆ ನಗರದ ಕೆಎಸ್‌ಆರ್ ರೈಲು ನಿಲ್ದಾಣದ ಐದನೇ ಪ್ಲಾಟ್‌ಫಾಮ್‌ರ್‍ಗೆ ಬಂದಿದೆ. ಈ ವೇಳೆ ಡಿ-11 ಬೋಗಿಯ ಸೀಟಿನ ಮೇಲೆ ವಾರಸುದಾರರಿಲ್ಲದ ಚೀಲ ಇರುವುದನ್ನು ಪ್ರಯಾಣಿಕರು ಗಮನಿಸಿದ್ದಾರೆ. ಅದನ್ನು ತೆರೆದು ನೋಡಿದಾಗ ಹೆಬ್ಬಾವು ಇರುವುದು ಕಂಡು ಬಂದಿದೆ. ರೈಲ್ವೆ ಪೊಲೀಸರು, ಆ ಹಾವನ್ನು ಅದೇ ಚೀಲದಲ್ಲಿ ಸುರಕ್ಷಿತವಾಗಿ ಠಾಣೆಗೆ ತೆಗೆದುಕೊಂಡು ಹೋಗಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಹಿರಿಯ ಅಧಿಕಾರಿಗಳ ಮಾರ್ಗದರ್ಶನ ಮೇರೆಗೆ ಅರಣ್ಯ ಇಲಾಖೆ ವಶಕ್ಕೆ ಒಪ್ಪಿಸಲಾಗಿದೆ. ಕಳ್ಳರು ರೈಲಿನಲ್ಲಿ ಈ ಹಾವನ್ನು ಸಾಗಿಸಿ, ಕಡೆ ಕ್ಷಣದಲ್ಲೇ ಚೀಲವನ್ನು ರೈಲಿನಲ್ಲಿ ಬಿಟ್ಟು ಪರಾರಿಯಾಗಿರುವ ಸಾಧ್ಯತೆಯಿದೆ. ಆರೋಪಿಗಳ ಪತ್ತೆಗೆ ಶೋಧ ಕೈಗೊಳ್ಳಲಾಗಿದೆ ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ.