ಹೊಸಪೇಟೆ(ಮಾ.01): ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ಅಭಿವೃದ್ಧಿಗೆ ಕರ್ನಾಟಕ ಗಣಿ ಪರಿಸರ ಪುನಶ್ಚೇತನ ನಿಗಮ (ಕೆಇಎಂಆರ್‌ಸಿ)ದ 10 ಸಾವಿರ ಕೋಟಿ ಬಳಕೆ ಮಾಡಲಾಗುವುದು ಎಂದು ಮೂಲಸೌಕರ್ಯ, ಹಜ್‌ ಮತ್ತು ವಕ್ಫ್ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಆನಂದ್‌ ಸಿಂಗ್‌ ಹೇಳಿದ್ದಾರೆ. 

ನಗರದ ಪಟೇಲ್‌ನಗರದ ಬಿಜೆಪಿ ಕಚೇರಿಯಲ್ಲಿ ಭಾನುವಾರ ನಡೆದ ಒಬಿಸಿ ಮೋರ್ಚಾ ಬಳ್ಳಾರಿ ಜಿಲ್ಲಾ ಕಾರ್ಯಕಾರಿಣಿ ಸಭೆಯನ್ನು ಚರಕದಲ್ಲಿ ನೂಲುವ ಮೂಲಕ ಉದ್ಘಾಟಿಸಿ ಮಾತನಾಡಿದರು. ವಿಜಯನಗರ ಜಿಲ್ಲೆ ಯಾವತ್ತೂ ಯಾದಗಿರಿ ಜಿಲ್ಲೆಯಂತೆ ಆಗುವುದಿಲ್ಲ. ಪ್ರತಿಪಕ್ಷದ ಮುಖಂಡರು ಬಾಯಿ ಮಾತಿಗೆ ಟೀಕೆ ಮಾಡುವುದು ಸರಿಯಲ್ಲ. ಅವಳಿ ಜಿಲ್ಲೆಗಳ ಅಭಿವೃದ್ಧಿಗೆ 5 ಸಾವಿರ ಕೋಟಿ ಮೀಸಲಿಡಲು ಆಗ್ರಹಿಸಿದ್ದಾರೆ. ಅವರಿಗೆ ಗೊತ್ತಿರಲಿ ಕೆಇಎಂಆರ್‌ಸಿಯಲ್ಲಿ 13 ಸಾವಿರ ಕೋಟಿ ಇದ್ದು, 3 ಕೋಟಿ ಬಡ್ಡಿ ಬೆಳೆದಿದೆ. ಸುಪ್ರೀಂಕೋರ್ಟ್‌ಗೆ ಅಫಿಡೆವಿಟ್‌ ಸಲ್ಲಿಸಿ ನಿವೃತ್ತ ನ್ಯಾಯಮೂರ್ತಿ ಅವರ ನೇತೃತ್ವದಲ್ಲಿ ಸಮಿತಿ ರಚಿಸಿ ಒಡಿಶಾ ಸರ್ಕಾರದ ಮಾದರಿಯಲ್ಲಿ ಅವಳಿ ಜಿಲ್ಲೆಗಳ ಅಭಿವೃದ್ಧಿಗೆ 10 ಸಾವಿರ ಕೋಟಿ ಅನುದಾನ ಬಳಕೆ ಮಾಡಲಾಗುವುದು ಎಂದರು.

371 (ಜೆ) ಸೌಲಭ್ಯ:

ವಿಜಯನಗರ ಜಿಲ್ಲೆ ರಚನೆಯಾಗಿ ತಿಂಗಳೊಳಗೆ ಕಲ್ಯಾಣ ಕರ್ನಾಟಕದ 371 (ಜೆ) ಸೌಲಭ್ಯ ದೊರೆತಿದೆ. ಇದರಿಂದ ಈ ಭಾಗದ ಜನರಲ್ಲಿದ್ದ ಆತಂಕ ದೂರಾಗಿದೆ. ವಿಜಯನಗರ ಜಿಲ್ಲೆಗೆ 371 (ಜೆ) ಸೌಲಭ್ಯ ಲಭಿಸುವುದಿಲ್ಲ ಎಂದು ವದಂತಿ ಹಬ್ಬಿಸಲಾಗಿತ್ತು. ಅದಕ್ಕೆ ಸರ್ಕಾರದ ಅಧಿಕೃತ ಆದೇಶದ ಮೂಲಕ ತಕ್ಕ ಪ್ರತ್ಯುತ್ತರವನ್ನೇ ನೀಡಲಾಗಿದೆ ಎಂದರು.

ಸಚಿವ ಸ್ಥಾನ ಬಿಟ್ಟುಕೊಡಲು ಸಿದ್ಧ : ಆನಂದ್ ಸಿಂಗ್

ಇತಿಹಾಸಪುಟದಲ್ಲಿ ಸಿಎಂ ಹೆಸರು:

ವಿಜಯನಗರ ಜಿಲ್ಲೆ ರಚನೆಯಿಂದ ಗತವೈಭವ ಮರುಕಳಿಸಿದ ಮುಖ್ಯಮಂತ್ರಿ ಯಡಿಯೂರಪ್ಪ ಹೆಸರು ಇತಿಹಾಸ ಪುಟದಲ್ಲಿ ದಾಖಲಾಗಿದೆ. ಇದೊಂದು ಸುವರ್ಣಾಕ್ಷರದಲ್ಲಿ ಬರೆದಿಡುವ ಕಾರ್ಯವಾಗಿದೆ. ಮುಖ್ಯಮಂತ್ರಿ ಅವರು ನುಡಿದಂತೆ ಜಿಲ್ಲೆ, ಏತ ನೀರಾವರಿ ಸೇರಿದಂತೆ ನಾನಾ ಯೋಜನೆಗಳನ್ನು ಸಾಕಾರಗೊಳಿಸಿದ್ದಾರೆ. ಹೀಗಾಗಿ ರಾಜ್ಯದಲ್ಲೇ ವಿಜಯನಗರ ಮಾದರಿ ಜಿಲ್ಲೆಯಾಗಿ ಹೊರಹೊಮ್ಮಲಿದೆ ಎಂದರು.

ವಿಶೇಷಾಧಿಕಾರಿ ನೇಮಕ:

ವಿಜಯನಗರ ಜಿಲ್ಲೆಯ ವಿಶೇಷಾಧಿಕಾರಿಯಾಗಿ ಅನಿರುದ್ಧ ಶ್ರವಣ್‌, ಮೇಲುಸ್ತುವಾರಿಯಾಗಿ ರಜನೀಶ್‌ ಗೋಯಲ್‌ ಅವರನ್ನು ನೇಮಿಸಿ ಆದೇಶಿಸಲಾಗಿದೆ. ಜಿಲ್ಲೆ ಖಂಡಿತ ಸಮಗ್ರ ಅಭಿವೃದ್ಧಿ ಹೊಂದಲಿದೆ ಎಂದರು. ಒಬಿಸಿ ಮೋರ್ಚಾ ರಾಜ್ಯಾಧ್ಯಕ್ಷ ನೆ.ಲ. ನರೇಂದ್ರ ಬಾಬು ಅಧ್ಯಕ್ಷತೆ ವಹಿಸಿ ಮಾತನಾಡಿ, ಹಿಂದುಳಿದ ವರ್ಗಗಳು ಶ್ರಮಿಕ ವರ್ಗಗಳಾಗಿವೆ. ದೇಶಕಟ್ಟುವ ಕಾಯಕದಲ್ಲಿ ತೊಡಗಿಸಿಕೊಂಡಿವೆ. ಈ ಸಮುದಾಯಗಳ ಅಭಿವೃದ್ಧಿಗೆ ಎಲ್ಲರೂ ಮುಂದಾಗಬೇಕು. ಪಕ್ಷದ ಕಾರ್ಯಕರ್ತರು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವ ಕಾರ್ಯ ಮಾಡಬೇಕು ಎಂದರು.

ಬಳ್ಳಾರಿ ಜಿಲ್ಲಾ ಒಬಿಸಿ ಮೋರ್ಚಾದ ಜಿಲ್ಲಾಧ್ಯಕ್ಷ ಅಯ್ಯಾಳಿ ತಿಮ್ಮಪ್ಪ, ಮುಖಂಡರಾದ ಸಿದ್ದೇಶ್‌ ಯಾದವ್‌, ಅನಿಲ್‌ ನಾಯ್ಡು, ವಿವೇಕಾನಂದ, ಉಮೇಶ್‌ ಸಜ್ಜನ್‌, ಅನಂತ ಪದ್ಮನಾಭ, ಧನಂಜಯ, ಈಟಿ ಲಿಂಗರಾಜ, ಸತ್ಯನಾರಾಯಣ, ಎ. ಗೋವಿಂದರಾಜ್‌, ವೀರಾಂಜನೇಯ ಮತ್ತಿತರರಿದ್ದರು.