ರಾಜಧಾನಿ ಬೆಂಗಳೂರಿನಲ್ಲಿ ಪ್ರವಾಹ ಸೃಷ್ಟಿಗೆ ಭಾರೀ ಮಳೆಯೇ ಬೇಕಾಗಿಲ್ಲ, ಕೇವಲ ಒಂದೇ ಒಂದು ಸೆಂ.ಮೀ ಮಳೆ ಬಿದ್ದರೆ ಸಾಕು ನಗರದ ಐದು ಪ್ರದೇಶಗಳು ಮುಳುಗಡೆ ಭೀತಿ ಎದುರಿಸಲಿವೆ. 

ವಿಶ್ವನಾಥ ಮಲೇಬೆನ್ನೂರು

ಬೆಂಗಳೂರು (ಏ.10): ರಾಜಧಾನಿ ಬೆಂಗಳೂರಿನಲ್ಲಿ ಪ್ರವಾಹ ಸೃಷ್ಟಿಗೆ ಭಾರೀ ಮಳೆಯೇ ಬೇಕಾಗಿಲ್ಲ, ಕೇವಲ ಒಂದೇ ಒಂದು ಸೆಂ.ಮೀ ಮಳೆ ಬಿದ್ದರೆ ಸಾಕು ನಗರದ ಐದು ಪ್ರದೇಶಗಳು ಮುಳುಗಡೆ ಭೀತಿ ಎದುರಿಸಲಿವೆ. ಹೀಗೆಂದು, ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕೆಎಸ್‌ಎನ್‌ಡಿಎಂಸಿ) ಪಟ್ಟಿಸಿದ್ಧಪಡಿಸಿ ಬಿಬಿಎಂಪಿಗೆ ಕೊಟ್ಟಿದೆ. ಕೆಎಸ್‌ಎನ್‌ಡಿಎಂಸಿ ನಗರದಲ್ಲಿ ನಡೆಸಲಾದ ಪರಿಶೀಲನೆ ವೇಳೆ 24 ಗಂಟೆ ಅವಧಿಯಲ್ಲಿ 10 ಸೆಂ.ಮೀ ವರೆಗೆ ಮಳೆ ಬಂದರೆ ಬಿಬಿಎಂಪಿಯ ಎಂಟು ವಲಯದಲ್ಲಿ 2,023 ಸ್ಥಳಗಳಲ್ಲಿ ಸಮಸ್ಯೆ ಆಗಲಿದೆ ಎಂದು ಗುರುತಿಸಿದೆ. 

ಗುರುತಿಸಿರುವ ಪಟ್ಟಿಯನ್ನು ಪಡೆದುಕೊಂಡಿರುವ ಬಿಬಿಎಂಪಿಯ ಅಧಿಕಾರಿಗಳು 7 ಸೆಂ.ಮೀ.ವರೆಗೆ ಮಳೆ ಬಿದ್ದರೆ ತೊಂದರೆ ಎದುರಾಗುವ 226 ತಗ್ಗು ಪ್ರದೇಶದಲ್ಲಿ ಪರಿಹಾರ ಕಾರ್ಯ ಕೈಗೊಳ್ಳುವುದಕ್ಕೆ ಮುಂದಾಗಿದೆ. ಈ ಪೈಕಿ ರಾಜಕಾಲುವೆಗೆ ನೀರು ನುಗ್ಗಿ 109 ತಗ್ಗು ಸ್ಥಳಗಳಲ್ಲಿ ಸಮಸ್ಯೆ ಉಂಟಾಗಲಿದೆ. ಉಳಿದಂತೆ ರಸ್ತೆ, ಅಂಡರ್‌ ಪಾಸ್‌ ಹಾಗೂ ಜಂಕ್ಷನ್‌ ಸೇರಿದಂತೆ 117 ಸ್ಥಳಗಳು ಮಳೆ ನೀರು ನಿಂತು ಸಮಸ್ಯೆ ಉಂಟಾಗುತ್ತಿದೆ ತಿಳಿದು ಬಂದಿದೆ.

ಕೋಲಾರದಲ್ಲಿ ಇಂದು ಬೃಹತ್ ಜೆಡಿಎಸ್ ಸೇರ್ಪಡೆ ಕಾರ್ಯಕ್ರಮ: ಎಚ್.ಡಿ.ಕುಮಾರಸ್ವಾಮಿ ಭಾಗಿ

1 ಸೆಂ.ಮೀ ಮಳೆಗೂ ಪ್ರವಾಹ: ಕೆಎಸ್‌ಎನ್‌ಡಿಎಂಸಿ ಮಾಹಿತಿ ಪ್ರಕಾರ ನಗರದಲ್ಲಿ ಕೇವಲ 1 ಸೆಂ.ಮೀ ಮಳೆ ಬಿದ್ದರೆ ಸಾಕು ಬಿಬಿಎಂಪಿಯ ಮೂರು ವಲಯದ ಐದು ಪ್ರದೇಶಗಳು ಜಲಾವೃತಗೊಳ್ಳುತ್ತವೆ. ಇದರಲ್ಲಿ ಮಹದೇವಪುರ ವಲಯದ ವರ್ತೂರು ವಾರ್ಡ್‌ನ ಪಣತ್ತೂರು ಮುಖ್ಯ ರಸ್ತೆ, ದೊಡ್ಡಾನೆಕುಂದಿ ವಾರ್ಡ್‌ನ ವಿಬ್‌ ಗಯಾರ್‌ ಹೈಸ್ಕೂಲ್‌ ರಸ್ತೆ, ಯಲಹಂಕ ವಲಯದ ತಣಿಸಂದ್ರ ವಾರ್ಡ್‌ನ ಜಕ್ಕೂರು ಹಾಗೂ ರಾಚೇನಹಳ್ಳಿ ಮುಖ್ಯ ರಸ್ತೆ ಮತ್ತು ಪೂರ್ವ ವಲಯದ ಸಿ.ವಿ.ರಾಮನ್‌ನಗರ ವಾರ್ಡ್‌ನ ಎಪಿಜೆ ಅಬ್ದುಲ್‌ ಕಲಾಂ ರಸ್ತೆಯಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಬಿಬಿಎಂಪಿಗೆ ತಿಳಿಸಿದೆ.

ಮೆಜೆಸ್ಟಿಕ್‌ ಜಲಾವೃತಕ್ಕೆ 2 ಸೆಂಮೀ ಮಳೆ ಸಾಕು!: ಮೆಜೆಸ್ಟಿಕ್‌ನಲ್ಲಿ ಕೇವಲ 2 ಸೆಂ.ಮೀ. ಮಳೆ ಬಂದರೆ ಸಾಕು ಪ್ರವಾಹ ಪರಿಸ್ಥಿತಿ ಉಂಟಾಗಲಿದೆ. ಇದಲ್ಲದೇ, ಓಕಳಿಪುರ ಅಂಡರ್‌ಪಾಸ್‌, ಶಿವಾನಂದ ಜಂಕ್ಷನ್‌, ಮಲ್ಲೇಶ್ವರ, ಶೇಷಾದ್ರಿಪುರ ಅಂಡರ್‌ ಪಾಸ್‌, ರೇಸ್‌ ಕೋರ್ಸ್‌ ಲೇಔಟ್‌, ಶ್ರೀರಾಮಪುರ ಅಂಡರ್‌ ಪಾಸ್‌ ಸೇರಿದಂತೆ ಮೊದಲಾದ ಕಡೆ ಪ್ರವಾಹ ಸೃಷ್ಟಿಯಾಗಿ ಮನೆಗಳಿಗೆ ರಾಜಕಾಲುವೆ ನೀರು ನುಗ್ಗಲಿದೆ. ರಸ್ತೆ ಅಕ್ಷರಶಃ ಕೆರೆಗಳಾಗಲಿವೆ. ಹೀಗೆ, 2 ಸೆಂ.ಮೀ. ಮಳೆ ಬಂದರೆ, ನಗರದ 22 ಸ್ಥಳಗಳಲ್ಲಿ ಸಮಸ್ಯೆ ಉಂಟಾಗಲಿದೆ ಎಂದು ಕೆಎಸ್‌ಎನ್‌ಡಿಎಂಸಿ ಎಚ್ಚರಿಸಿದೆ.

ಕಡಿಮೆ ಆಗದ ಪ್ರವಾಹ ಸಮಸ್ಯೆ: ಪ್ರತಿವರ್ಷ ನಗರದ ಪ್ರವಾಹ ಪರಿಸ್ಥಿತಿ ಸುಧಾರಿಸುವುದಕ್ಕೆ ಬಿಬಿಎಂಪಿ ಕೋಟ್ಯಂತರ ರುಪಾಯಿ ವೆಚ್ಚ ಮಾಡುತ್ತಿದೆ. ಆದರೂ ಕಳೆದ ಐದಾರು ವರ್ಷಗಳಿಂದ 200ರ ಅಸುಪಾಸಿನಲ್ಲಿ ಪ್ರವಾಹ ಭೀತಿ ಉಂಟಾಗುವ ಸ್ಥಳಗಳು ಪತ್ತೆ ಆಗುತ್ತಿವೆ. ಪ್ರತಿ ವರ್ಷ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳುತ್ತೇವೆ. ಬಳಿಕ ಮತ್ತೊಂದು ಸ್ಥಳದಲ್ಲಿ ಸಮಸ್ಯೆಎದುರಾಗುತ್ತಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳುತ್ತಾರೆ.

ಕೆಎಸ್‌ಎನ್‌ಡಿಎಂಸಿ ನೀಡಿರುವ ಮಾಹಿತಿ ಆಧಾರಿಸಿ ಬಿಬಿಎಂಪಿಯಿಂದ ಈಗಾಗಲೇ ಹಲವು ಸ್ಥಳದಲ್ಲಿ ಪರಿಹಾರ ಕಾಮಗಾರಿ ಕೈಗೊಳ್ಳಲಾಗಿದೆ. ರಾಜಕಾಲುವೆ ವಿಭಾಗದಿಂದ 109 ಸ್ಥಳದಲ್ಲಿ ಪರಿಹಾರ ಮಾಡಲಾಗುತ್ತಿದೆ. ಉಳಿದ ಸ್ಥಳದಲ್ಲಿ ರಸ್ತೆ ಮತ್ತು ಮೂಲಸೌಕರ್ಯ ವಿಭಾಗದಿಂದ ಕೈಗೊಳ್ಳಲಾಗುತ್ತದೆ.
-ಬಸವರಾಜ ಕಬಾಡೆ, ಮುಖ್ಯ ಎಂಜಿನಿಯರ್‌, ಬಿಬಿಎಂಪಿ ರಾಜಕಾಲುವೆ ವಿಭಾಗ

ಸ್ಥಳೀಯ ಮುಖಂಡರಿಗೆ ಈಗ ಡಿಮ್ಯಾಂಡಪ್ಪೋ ಡಿಮ್ಯಾಂಡ್: ಮತಬೇಟೆಗೆ ಗ್ರಾಮಗಳತ್ತ ಹೆಜ್ಜೆ ಹಾಕುತ್ತಿರುವ ಆಕಾಂಕ್ಷಿಗಳು

ಎಲ್ಲಿ ಎಷ್ಟು ಪ್ರವಾಹ ಪೀಡಿತ ಸ್ಥಳ ? (7 ಸೆಂ.ಮೀ ಮಳೆಗೆ)
ವಲಯ ಪ್ರವಾಹ ಪೀಡಿತ ಸ್ಥಳ

ಪೂರ್ವ 61
ಪಶ್ಚಿಮ 40
ದಕ್ಷಿಣ 40
ಮಹದೇವಪುರ 24
ಆರ್‌.ಆರ್‌.ನಗರ 23
ದಾಸರಹಳ್ಳಿ 03
ಯಲಹಂಕ 11
ಬೊಮ್ಮನಹಳ್ಳಿ 24
ಒಟ್ಟು 226