ಬೆಂಗಳೂರು [ಜು.08] : ರಾಜಧಾನಿ ಬೆಂಗಳೂರಿನ ಹೊರವಲಯದ ಮನೆಯೊಂದರ ಮೇಲೆ ಕೊಲ್ಕತ್ತಾ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ದಾಳಿ ವೇಳೆ 10 ಸಜೀವ್ ಬಾಂಬ್  ಹಾಗೂ ಪಿಸ್ತೂಲು ಸೇರಿದಂತೆ ಸ್ಫೋಟಕ ವಸ್ತುಗಳು ಪತ್ತೆಯಾಗಿದ್ದು, ಜನತೆಯಲ್ಲಿ ಆತಂಕ ಸೃಷ್ಟಿಸಿದೆ. ಇತ್ತೀಚೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರದ ಮಸೀದಿಯಲ್ಲಿ ಸಿಕ್ಕಿ ಬಿದ್ದಿದ್ದ ಶಂಕಿತ ಜಮಾತ್-ಉಲ್-ಮುಜಾಹಿದೀನ್- ಬಾಂಗ್ಲಾದೇಶ್ (ಜೆಎಂಬಿ) ಸಂಘಟನೆಯ ಉಗ್ರ ಹಬೀಬುರ್ ರೆಹಮಾನ್ ವಾಸವಿದ್ದ ಚಿಕ್ಕಬಾಣಾವರದ ರೈಲು ನಿಲ್ದಾಣದ ಸಮೀಪವಿರುವ ಮನೆಯಲ್ಲಿ ಈ ಬಾಂಬ್‌ಗಳು ಸಿಕ್ಕಿವೆ ಎಂದು ಹೇಳಲಾಗಿದೆ. 

ಆದರೆ  ಭಾನುವಾರ ತಡರಾತ್ರಿವರೆಗೂ ಶೋಧ ಕಾರ್ಯ ನಡೆಸಿರುವ ಎನ್‌ಐಎ ತಂಡ ಶಂಕಿತ ಹಬೀಬುರ್ ರೆಹಮಾನ್ ಮನೆಯಲ್ಲಿ ದೊರೆತಿರುವ ಬಾಂಬ್ ಮತ್ತು ಸ್ಫೋಟಕ ವಸ್ತುಗಳ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.

ಕೊಲ್ಕತ್ತಾದಿಂದ ಭಾನುವಾರ ನಗರಕ್ಕೆ ಹಬೀಬುರ್ ನನ್ನು ಕರೆ ತಂದಿರುವ ಎನ್‌ಐಎ ತಂಡ ನಗರದಲ್ಲಿ ಶಂಕಿತ ನೆಲೆಸಿದ್ದ ಮನೆಗಳನ್ನು ಶೋಧಿಸಿದೆ. ಶಂಕಿತ ಉಗ್ರ ಹಬೀಬುರ್ ರೆಹಮಾನ್ ಒಂದು ಕಡೆ ವಾಸ ಮಾಡುತ್ತಿರಲಿಲ್ಲ. ಪ್ರತಿ ಬಾರಿಯೂ ಒಂದು ಕಡೆಯಿಂದ ಮತ್ತೊಂದು ಕಡೆಗೆ ನೆಲೆ ಬದಲಿಸುತ್ತಿದ್ದ. 

ಎರಡು ವರ್ಷದ ಹಿಂದೆ ಹಬೀಬುರ್ ರೆಹಮಾನ್ ಹೆಸರಘಟ್ಟ ಮುಖ್ಯರಸ್ತೆಯಲ್ಲಿರುವ ಚಿಕ್ಕಬಾಣಾವರದ ಬಾಡಿಗೆ ಮನೆಯೊಂದರಲ್ಲಿ ನೆಲೆಸಿದ್ದ. ಈ ಮನೆ  ಮುಸ್ತಾಫ್ ಎಂಬುವರಿಗೆ ಸೇರಿದ್ದು ಎನ್ನಲಾಗುತ್ತಿದೆ. ಈ ಮನೆಯಲ್ಲಿ ಹಬೀಬುರ್ ಜತೆ ಬಿಹಾರ ಮೂಲದ ಇನ್ನು ಮೂವರು ಶಂಕಿತ ಉಗ್ರರಿದ್ದರು. ಈ ವೇಳೆ ಶಂಕಿತರು ಬಾಂಬ್ ತಯಾರಿಸಿದ್ದರು ಎಂದು ತಿಳಿದುಬಂದಿದೆ.

ಒಂದೂವರೆ ತಿಂಗಳ ಹಿಂದೆ ಮನೆ ಖಾಲಿ: ಬಂಧಿತ ಆರೋಪಿ ಹಬೀಬುರ್‌ನನ್ನು ಎನ್‌ಐಎ ತಂಡ ಬಂಧಿಸಿ, ವಿಚಾರಣೆಗೊಳಪಡಿಸಿದಾಗ ಚಿಕ್ಕಬಾಣಾವರದಲ್ಲಿ ತನ್ನ ಜತೆಗಿದ್ದ ಮೂವರು ಶಂಕಿತರ ಬಗ್ಗೆ ಬಾಯ್ಬಿಟ್ಟಿದ್ದ. ಹಬೀಬುರ್ ಕೊಟ್ಟ ಮಾಹಿತಿ ಮೇರೆಗೆ ಕೆಲ ದಿನಗಳ ಹಿಂದೆ ಕೊಲ್ಕತ್ತಾ ರಾಷ್ಟ್ರೀಯ ದಳದ ಅಧಿಕಾರಿಗಳು ಬಿಹಾರ ಮೂಲದ ಮೂವರ ಶಂಕಿತರನ್ನು ಬಂಧಿಸಿತ್ತು. 

ಅಲ್ಲದೆ, ಒಂದೂವರೆ ತಿಂಗಳ ಹಿಂದೆಯಷ್ಟೇ ಶಂಕಿತ ಮೂವರು ಚಿಕ್ಕಬಾಣಾವರದಲ್ಲಿನ ಮನೆ ಖಾಲಿ ಮಾಡಿದ್ದರು. ಇದೀಗ ಹಬೀಬುರ್ ರೆಹಮಾನ್‌ನನ್ನು ಕರೆ ತಂದು ಬಾಡಿಗೆ ಮನೆ ಶೋಧಿಸಲಾಗಿದೆ. ಶಂಕಿತ ಹಬೀಬುರ್‌ನನ್ನು ಎನ್‌ಐಎ ತಂಡ ದೊಡ್ಡಬಳ್ಳಾಪುರದ  ಲ್ಲಿನ ಮಸೀದಿಗೆ ಕೂಡ ಭೇಟಿ ನೀಡಿ ಶೋಧ ನಡೆಸಲಿದೆ. ಅಲ್ಲದೆ, ತಮಿಳುನಾಡು ಹಾಗೂ ಇನ್ನಿತರ ಪ್ರದೇಶಗ ಳಿಗೂ ಶಂಕಿತನನ್ನು ಎನ್‌ಐಎ ತಂಡ ಕರೆದೊಯ್ಯಲಿದೆಎಂದು ಮೂಲಗಳು ತಿಳಿಸಿವೆ.

2014 ರಲ್ಲಿ ಪಶ್ವಿಮ ಬಂಗಾಳದ ಬುರ್ದ್ವಾನ್‌ನಲ್ಲಿ ಸಂಭವಿಸಿದ ಬಾಂಬ್ ಸ್ಫೋಟ ಪ್ರಕರಣದ ಆರೋಪಿ ಯಾಗಿದ್ದ ಹಬೀಬುರ್ ತಲೆಮರೆಸಿಕೊಂಡಿದ್ದ. ಶಂಕಿತ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರದ ಪ್ರಾರ್ಥನಾ ಮಂದಿರದಲ್ಲಿ ಆಶ್ರಯ ಪಡೆದಿದ್ದ ಮಾಹಿತಿ ಕಲೆ ಹಾಕಿದ್ದ ಎನ್‌ಐಎ ತಂಡ ಜೂ. 25ರಂದು  ಆತನನ್ನು ಬಂಧಿಸಿತ್ತು. ವಿಚಾರಣೆ ವೇಳೆ ಹಬೀಬುರ್ ನೀಡಿದ ಮಾಹಿತಿ ಮೇರೆಗೆ ರಾಮನಗರದ ಟಿಪ್ಪು ನಗರ ಬಡಾವಣೆಯ ಸೇತುವೆ ಬಳಿ ಹುದುಗಿಸಿಟ್ಟಿದ್ದ ಸುಧಾರಿತ ಸ್ಫೋಟಕ ವಸ್ತುಗಳನ್ನು ಎನ್‌ಐಎ ತಂಡ ಜಪ್ತಿ ಮಾಡಿತ್ತು. 

ಇನ್ನು ಭಾನುವಾರ ರಾತ್ರಿ ಬಾಂಬ್ ನಿಷ್ಕ್ರಿಯದಳ ದಾಳಿ ವೇಳೆ ಬಾಣಾವರದ ಮನೆಯಲ್ಲಿ ಸಿಕ್ಕ ಸಜೀವ್ ಬಾಂಬ್ ಮತ್ತು ಸುಧಾರಿತ ಸ್ಫೋಟಕ ವಸ್ತುಗಳನ್ನು ನಿಷ್ಕ್ರಿಯಗೊಳಿಸಿದೆ ಎನ್ನಲಾಗಿದೆ.