ದರೋಡೆ ಮಾಡಲೇ ಬೇಕೆಂದು ಶಟರ್ ಒಡೆದು ಒಳ ನುಗ್ಗಿದ್ದರು. ಆದರೆ ಅವರಿಗೆ ಸಿಕ್ಕಿದ್ದು ಹಳೆ ಫೋನ್ ಮತ್ತು ವಾಯರ್ ಗಳು. ಪ್ರಯತ್ನ ಬಿಡಬೇಡ ಎಂದ ಕಳ್ಳರು ಅಂತಿಮವಾಗಿ ಪಕ್ಕದ ಸೊಸೈಟಿಗೆ ನುಗ್ಗಿ ಕಳ್ಳತನ ಮಾಡಿ ಪರಾರಿಯಾಗಿದ್ದಾರೆ.

ಚಿಕ್ಕೋಡಿ(ಜು.27] ಬ್ಯಾಂಕ್ ದರೋಡೆ ಮಾಡಲೆಂದು ಕಚೇರಿಯ ಶಟರ್‌ನ ಬೀಗಿ ಒಡೆದು ಒಳನುಗ್ಗಿರುವ ಕಳ್ಳರಿಗೆ ಸಿಕ್ಕಿದ್ದು ಹಳೆ ಫೋನ್‌ಗಳು, ವೈರ್‌ಗಳು ಮಾತ್ರ! ಇದರಿಂದ ಆಶ್ಚರ್ಯಗೊಂಡ ಕಳ್ಳರು ಇದ್ಯಾವ ಬ್ಯಾಂಕ್ ಎಂದು ಹೊರಗೆ ಬಂದು ನೋಡಿದ್ದಾರೆ. ಆಗ ಅದು ಬಿಎಸ್‌ಎನ್‌ಎಲ್ ಕಚೇರಿಯಾಗಿತ್ತು.

ನಂತರ ಕಳ್ಳರು ಬಿಎಸ್‌ಎನ್‌ಎಲ್ ಕಚೇರಿಯ ಪಕ್ಕದಲ್ಲಿಯೇ ಇದ್ದ ಕ್ರೆಡಿಟ್ ಸೌಹಾರ್ದ ಸಹಕಾರಿ ಬ್ಯಾಂಕ್‌ಗೆ ನುಗ್ಗಿ ₹10.56 ಲಕ್ಷ ನಗದು, ₹4 ಲಕ್ಷ ಮೌಲ್ಯದ ಚಿನ್ನಾಭರಣವನ್ನು ದೋಚಿದ್ದಾರೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಬೆಳಕೂಡ ಗ್ರಾಮದಲ್ಲಿ ಗುರುವಾರ ತಡರಾತ್ರಿ ಕಳ್ಳತನ ಮಾಡಲಾಗಿದೆ.

ಬಿಎಸ್‌ಎನ್‌ಎಲ್ ಕಚೇರಿಗೆ ಏಕೆ ನುಗ್ಗಿದರು?:
ಬೆಳಕೂಡ ಗ್ರಾಮದ ಸಿದ್ದೇಶ್ವರ ಅರ್ಬನ್ ಕ್ರೆಡಿಟ್ ಸೌಹಾರ್ದ ಸಹಕಾರಿ ಬ್ಯಾಂಕ್‌ನ ಕಟ್ಟಡದಲ್ಲಿಯೇ ಬಿಎಸ್‌ಎನ್‌ಎಲ್ ಕಚೇರಿ ಬಾಡಿಗೆ ಪಡೆದುಕೊಂಡಿದೆ. ಹೀಗಾಗಿ ಇಲ್ಲಿರುವ ಎಲ್ಲ ಕಟ್ಟಡಗಳೂ ಬ್ಯಾಂಕಿನದ್ದೇ ಇರಬೇಕೆಂದು ಊಹಿಸಿಕೊಂಡು ಕಳ್ಳರು ಬಿಎಸ್‌ಎನ್‌ಎಲ್ ಕಚೇರಿಗೆ ನುಗ್ಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ನಂತರ ಬಿಎಸ್‌ಎನ್‌ಎಲ್ ಕಚೇರಿ ಪಕ್ಕದಲ್ಲಿಯೇ ಇದ್ದ ಕ್ರೆಡಿಟ್ ಸೌಹಾರ್ದ ಸಹಕಾರಿ ಬ್ಯಾಂಕ್‌ಗೆ ನುಗ್ಗಿ ಕಳ್ಳತನ ಮಾಡಿದ್ದಾರೆ. ಈ ಕುರಿತು ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.