ಬೆಂಗಳೂರು [ಸೆ.12]:  ‘ಸಲಿಂಗಕಾಮಿ ಆ್ಯಪ್‌’ ಮೂಲಕ ಪರಿಚಯವಾಗಿದ್ದ ಸಲಿಂಗಿಯೊಬ್ಬ ತನ್ನ ಸಹಚರರೊಂದಿಗೆ ಮನೆಗೆ ನುಗ್ಗಿ ಖಾಸಗಿ ಕಂಪನಿ ಉದ್ಯೋಗಿಗೆ ಥಳಿಸಿ ಹಣ ಕಸಿದುಕೊಂಡು ಹೋಗಿರುವ ಘಟನೆ ಬಂಡೆಪಾಳ್ಯ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಈ ಸಂಬಂಧ 26 ವರ್ಷದ ಸಲಿಂಗಕಾಮಿಯೊಬ್ಬರು ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಖಾಸಗಿ ಕಂಪನಿ ಉದ್ಯೋಗಿಯಾಗಿರುವ ವ್ಯಕ್ತಿಗೆ ‘ಸಲಿಂಗಕಾಮಿ ಆ್ಯಪ್‌’ ಮೂಲಕ ಸಲಿಂಗಿ ಎಂದು ರಾಹುಲ್‌ ಎಂಬಾತ ಕೆಲ ತಿಂಗಳ ಹಿಂದೆ ಪರಿಚಯವಾಗಿದ್ದ. ಆ್ಯಪ್‌ನಲ್ಲಿ ಸಂದೇಶ ವಿನಿಮಯ ಮಾಡಿ ಕೊಳ್ಳುತ್ತಿದ್ದವರ ನಡುವೆ ಆತ್ಮೀಯತೆ ಬೆಳೆದು ಇಬ್ಬರು ಮೊಬೈಲ್‌ ಸಂಖ್ಯೆ ವಿನಿಮಯ ಮಾಡಿಕೊಂಡಿದ್ದರು. ನಂತರ ಇಬ್ಬರು ನಿತ್ಯ ಮೊಬೈಲ್‌ನಲ್ಲಿ ಸಂಭಾಷಣೆ ನಡೆಸುತ್ತಿದ್ದರು. ರಾಹುಲ್‌ ದೂರುದಾರನಿಗೆ ಕರೆ ಮಾಡಿ ನಿಮ್ಮ ಜೊತೆ ವೈಯಕ್ತಿಕವಾಗಿ ಮಾತನಾಡಬೇಕು ಎಂದು ಹೇಳಿದ್ದ. ಇದಕ್ಕೆ ಒಪ್ಪಿದ್ದ ದೂರುದಾರ, ತಮ್ಮ ಮನೆ ವಿಳಾಸ ಕೊಟ್ಟು ಫ್ಲ್ಯಾಟ್‌ಗೆ ಬರುವಂತೆ ಹೇಳಿದ್ದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಅದರಂತೆ ಆರೋಪಿ ರಾಹುಲ್‌ ಸೆ.5ರಂದು ತನ್ನ ಇಬ್ಬರು ಸ್ನೇಹಿತರ ಜತೆ ಫ್ಲ್ಯಾಟ್‌ಗೆ ಬಂದು ಹಣ ನೀಡುವಂತೆ ಪೀಡಿಸಿದ್ದ. ಹಣ ನೀಡಲು ನಿರಾಕರಿಸಿದಾಗ ನನ್ನ ಮೇಲೆ ಹಲ್ಲೆ ನಡೆಸಿದ್ದರು. ವಾಲೆಟ್‌, ಮೊಬೈಲ್‌, ಎಟಿಎಂಎ ಕಾರ್ಡ್‌ ಪಾಸ್‌ವರ್ಡ್‌ ಹಾಗೂ ಬ್ಯಾಂಕ್‌ ಖಾತೆ ವಿವರಗಳನ್ನು ಪಡೆದುಕೊಂಡರು. ನನ್ನ ಖಾತೆಯಲ್ಲಿ ಹಣ ಖಾಲಿಯಾದ ಬಳಿಕ ಬೆದರಿಸಿ ತನ್ನ ಸ್ನೇಹಿತರಿಗೆ ನನ್ನಿಂದ ಕರೆ ಮಾಡಿಸಿ ಖಾತೆಗೆ ಹಣ ಹಾಕಿಸಿಕೊಂಡರು. ಆರೋಪಿಗಳು ನನ್ನ ಖಾತೆಯಲ್ಲಿದ್ದ 1.35 ಲಕ್ಷ ರು. ಡ್ರಾ ಮಾಡಿಕೊಂಡು ಹೋಗಿದ್ದಾರೆ. ಮನೆಗೆ ಬಲವಂತವಾಗಿ ಅತಿಕ್ರಮ ಪ್ರವೇಶ ಮಾಡಿ, ನನ್ನನ್ನು ಅಕ್ರಮ ಬಂಧನದಲ್ಲಿರಿಸಿ ಬೆದರಿಸಿ ಹಣ ದೋಚಿಕೊಂಡು ಹೋಗಿರುವ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಬಂಧನಕ್ಕೆ ಕ್ರಮಕೈಗೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.