ಮಂಡ್ಯ(ಆ.11): ಕೆ.ಆರ್‌.ಪೇಟೆಯಲ್ಲಿ ಗೊರೂರಿನ ಹೇಮಾವತಿ ಜಲಾಶಯದಿಂದ ನದಿಗೆ ಸುಮಾರು 1 ಲಕ್ಷ ಕ್ಯುಸೆಕ್‌ ನೀರು ಬಿಟ್ಟಿರುವ ಕಾರಣ ತಾಲೂಕಿನ ಅನೇಕ ಹಳ್ಳಿಗಳ ತಗ್ಗು ಪ್ರದೇಶಗಳು ಜಲಾವೃತವಾಗಿವೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಆದರೆ ನೀರು ನುಗ್ಗಿರುವುದರಿಂದ ಕೋಟ್ಯಂತರ ರು. ಬೆಳೆ ನಷ್ಟವಾಗಿದೆ.

ತಾಲೂಕಿನಲ್ಲಿ ಸುಮಾರು 45ಕಿ.ಮೀ ದೂರದಷ್ಟುಹರಿಯುವ ಹೇಮಾವತಿ ನದಿ ಪಾತ್ರದಲ್ಲಿ ಹೊಂದಿರುವ ತಾಲೂಕಿನಲ್ಲಿ ಹೇಮಗಿರಿ ದೇವಾಲದ ನದಿ ತೀರದಲ್ಲಿ ಗುಡಿಸಲು ನಿರ್ಮಿಸಿಕೊಂಡು ವಾಸವಾಗಿದ್ದ ಮೀನುಗಾರರ ಕುಟುಂಬಗಳನ್ನು ಮುಂಜಾಗ್ರತ ಕ್ರಮವಾಗಿ ಪಾಂಡವಪುರ ಉಪವಿಭಾಗಾಧಿಕಾರಿ ಎಂ.ಶೈಲಜಾ ಮತ್ತು ತಹಸೀಲ್ದಾರ್‌ ಎಂ.ಶಿವಮೂರ್ತಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ್ದಾರೆ.

ಜಲ ವಿದ್ಯುತ್‌ ಘಟಕ ನೀರಿನಲ್ಲಿ:

ತಾಲೂಕಿನ ಬಂಡಿಹೊಳೆ ಸಮೀಪ ನಿರ್ಮಾಣ ಮಾಡಿದ್ದ ತ್ರಿಶೂಲ, ಜಲ ವಿದ್ಯುತ್‌ ಕೇಂದ್ರ ನದಿ ನೀರಿನಲ್ಲಿ ಮುಳುಗಿದ್ದು, ಅಪಾರ ನಷ್ಟಸಂಭವಿಸಿದೆ. ಮಣ್ಣು ಮಿಶ್ರಿತ ನದಿಯ ನೀರು ಜಲ ವಿದ್ಯುತ್‌ ಕೇಂದ್ರಕ್ಕೆ ನುಗ್ಗಿರುವುದರಿಂದ ಟರ್ಬೈನ್‌ ಗಳು ಮುಳುಗಿವೆ.  ನೀರು ಹೊರ ಹಾಕಲು ಸಾಧ್ಯವಾಗದೆ ಅಧಿಕಾರಿಗಳು ಮತ್ತು ನೌಕರರು ಕೇಂದ್ರದಿಂದ ಹೊರ ಬಂದಿದ್ದಾರೆ.

ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಗ್ರಾಮಕ್ಕೆ ನುಗ್ಗಿದ ನೀರು:

ನೂರಾರು ಎಕರೆ ಜಮೀನುಗಳಿಗೂ ನೀರು ನುಗ್ಗಿ ಅಪಾರ ಬೆಳೆ ನಷ್ಟಸಂಭವಿಸಿದೆ. ಚಿಕ್ಕಮಂದಗೆರೆ ಗ್ರಾಮದ ಬಳಿ ನೂರಾರು ಎಕರೆ ಜಮೀನಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಬೆಳೆ ಹಾನಿ ಉಂಟಾಗಿದೆ. ನದಿಯ ನೀರಿನ ರಭಸಕ್ಕೆ ಬೆಳೆಗಳು ಕೊಚ್ಚಿ ಹೋಗಿವೆ. ಕಿರು ಸೇತುವೆಗಳು ಮುಚ್ಚಿ ಹೋಗಿವೆ. ಮುಳುಗಡೆ ಭೀತಿಯಲ್ಲಿರುವ ಚಿಕ್ಕಮಂದಗೆರೆ ಗ್ರಾಮಕ್ಕೆ ನೀರು ನುಗ್ಗಿದ್ದು ಹಲವಾರು ಮನೆಗಳು ಜಲಾವೃತವಾಗಿವೆ. ಗ್ರಾಮಸ್ಥರೇ ಮುಂದೆ ನಿಂತು ಸಹಾಯಹಸ್ತ ಚಾಚುತ್ತಿದ್ದಾರೆ.

ಅಪಾಯ ಅಂಚಿನಲ್ಲಿ ಅಕ್ಕಿಹೆಬ್ಬಾಳು ಸೇತುವೆ:

ಸುಮಾರು 100ವರ್ಷಗಳ ಹಿಂದೆ ನಿರ್ಮಿಸಲಾಗಿರುವ ಅಕ್ಕಿಹೆಬ್ಬಾಳು ಸೇತುವೆಯು ಶೇ.75ರಷ್ಟುಹೇಮಾವತಿ ನದಿ ನೀರಿನಿಂದ ಮುಳುಗಿದೆ. ಇದೇ ರೀತಿ ನೀರು ಯಥೇಚ್ಚವಾಗಿ ಹರಿದರೆ ಸೇತುವೆಗೆ ಅಪಾಯ ಬರುವ ಸಾಧ್ಯತೆ ಇದೆ. ಸೇತುವೆ ಮೇಲೆ ಎರಡೂ ಬದಿಯಲ್ಲಿ ಗಿಡಗಂಟಿಗಳ ಬೇರು ಬಿಟ್ಟುಕೊಂಡಿವೆ. ಸೇತುವೆಯಲ್ಲಿ ಸಣ್ಣ ಸಣ್ಣ ಬಿರುಕು ಕಾಣಿಸಿಕೊಂಡಿದೆ.

ಜಿಲ್ಲಾಧಿಕಾರಿ ವೆಂಕಟೇಶ್‌ ಭೇಟಿ:

ತಾಲೂಕಿನ ಬಂಡಿ ಹೊಳೆ ಸಮೀಪದ ಹೇಮಗಿರಿ ಫಾಲ್ಸ್‌ ನಲ್ಲಿ ಹೇಮಾವತಿ ನದಿಯು ಉಕ್ಕಿ ಹರಿಯುತ್ತಿರುವ ಸ್ಥಳವೂ ಸೇರಿ ನದಿಪಾತ್ರದ ವಿವಿಧ ಗ್ರಾಮಗಳಿಗೆ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ ಮತ್ತು ಪಾಂಡವಪುರ ಉಪವಿಭಾಗಾಧಿಕಾರಿ ಶೈಲಜಾ, ತಹಸೀಲ್ದಾರ್‌ ಎಂ.ಶಿವಮೂರ್ತಿ ನೇತೃತ್ವದ ಅಧಿಕಾರಿಗಳ ತಂಡವು ಶನಿವಾರ ಭೇಟಿ ನೀಡಿ, ಪ್ರವಾಹ ಪರಿಸ್ಥಿತಿಯನ್ನು ಅವಲೋಕನ ಮಾಡಿತು.

ಎಚ್ಚರಿಕೆ ಫಲಕ:

ಹೇಮಾವತಿ ನದಿಯಲ್ಲಿ ನೀರು ಹೆಚ್ಚಿರುವ ಹಿನ್ನೆಲೆಯಲ್ಲಿ ಅಪಾಯವಿರುವ ಸ್ಥಳಗಳಲ್ಲಿ ಜಿಲ್ಲಾಡಳಿತ ಮತ್ತು ಪೊಲೀಸ್‌ ಇಲಾಖೆ ಹಾಗೂ ಅಕ್ಕಿಹೆಬ್ಬಾಳು, ಮಂದಗೆರೆ, ಬಂಡಿಹೊಳೆ ಗ್ರಾಮ ಪಂಚಾಯಿತಿಗಳು ಎಚ್ಚರಿಕೆಯ ಫಲಕ ಅಳವಡಿಸಿ ರಕ್ಷಣೆಗೆ ಪೊಲೀಸರನ್ನು ನಿಯೋಜನೆ ಮಾಡಿ ಸಾರ್ವಜನಿಕರಿಗೆ ತಿಳಿವಳಿಕೆ ನೀಡಲಾಗುತ್ತಿದೆ.

115 ಅಡಿ ತಲುಪಿದ KRS: 60 ಸಾವಿರ ಕ್ಯುಸೆಕ್ ನೀರು ಬಿಡುಗಡೆ

ನೋಡಲ್‌ ಅಕಾರಿಗಳ ನೇಮಕ:

ಹೇಮಾವತಿ ಪ್ರವಾಹ ನಿಯಂತ್ರಣ ಕರ್ತವ್ಯ ನಿರ್ವಹಣೆಗಾಗಿ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ತಾಪಂ ಇಒ, ಹೇಮಾವತಿ ನೀರಾವರಿ ಅಧಿಕಾರಿಗಳು, ರಾಜಸ್ವ ನಿರೀಕ್ಷಕರು, ಗ್ರಾಮ ಲೆಕ್ಕಾಧಿಕಾರಿಗಳು, ಕೃಷಿ ಇಲಾಖೆ ಸಹಾಯಕ ನಿರ್ದೇಶಕರು, ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕರು, ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕರನ್ನು ನೇಮಕ ಮಾಡಲಾಗಿದೆ. ಪ್ರವಾಹ ಪರಿಸ್ಥಿತಿಯನ್ನು ನಿಯಂತ್ರಿಸುವ ಜೊತೆಗೆ ಹಾನಿಯ ಬಗ್ಗೆ ನಿತ್ಯ ವರದಿ ನೀಡಲು ಸೂಚನೆ ನೀಡಲು ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆಂದು ತಹಸೀಲ್ದಾರ್‌ ಎಂ.ಶಿವಮೂರ್ತಿ ತಿಳಿಸಿದ್ದಾರೆ.