Asianet Suvarna News Asianet Suvarna News

RR ನಗರ ಕ್ಷೇತ್ರದ ಚುನಾವಣೆ : ಸೋಂಕಿತರ ಮತದಾನಕ್ಕೆ 1 ಗಂಟೆ ಮೀಸಲು, ವಿಶೇಷ ವ್ಯವಸ್ಥೆ

ಆರ್‌ ಆರ್‌ ನಗರದಲ್ಲಿ ಚುನಾವಣೆ ನಡೆಯುತ್ತಿದ್ದು  ಪಕ್ಷಗಳ ನಡುವೆ ಭಾರೀ ಹಣಾಹಣಿಯೇ ನಡೆಯುತ್ತಿದೆ. ಅಭ್ಯರ್ಥಿಗಳು ತಮ್ಮದೇ ಗೆಲುವಿಗಾಗಿ ಶತ ಪ್ರಯತ್ನ ಮಾಡುತ್ತಿದ್ದಾರೆ

1 Hour Reserved for Corona Patients Voting in RR Nagar snr
Author
Bengaluru, First Published Nov 3, 2020, 9:42 AM IST | Last Updated Nov 3, 2020, 9:42 AM IST

ಬೆಂಗಳೂರು (ನ.03):  ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಬೇಕಾದ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, 678 ಮತಗಟ್ಟೆಗಳಲ್ಲಿ ನ.3ರ ಬೆಳಗ್ಗೆ 7ರಿಂದ ಸಂಜೆ 6ರವರೆಗೆ ಮತದಾನ ನಡೆಯಲಿದೆ. ಸಂಜೆ 5ರಿಂದ 6ರವರೆಗೆ ಕೊರೋನಾ ಸೋಂಕಿತರ ಮತದಾನಕ್ಕೂ ವ್ಯವಸ್ಥೆ ಮಾಡಲಾಗಿದೆ ಎಂದು ಬೆಂಗಳೂರು ನಗರ ಜಿಲ್ಲಾ ಚುನಾವಣಾಧಿಕಾರಿ ಎನ್‌.ಮಂಜುನಾಥ ಪ್ರಸಾದ್‌ ತಿಳಿಸಿದ್ದಾರೆ.

ಆರ್‌.ಆರ್‌.ನಗರ ಉಪಚುನಾವಣೆ ಹಿನ್ನೆಲೆಯಲ್ಲಿ ಸೋಮವಾರ ಜ್ಞಾನಾಕ್ಷಿ ವಿದ್ಯಾನಿಕೇತನ್‌ ಶಾಲೆಯ ಮಸ್ಟರಿಂಗ್‌ ಸೆಂಟರ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಮಾತನಾಡಿದ ಅವರು, ಸೋಂಕು ಭೀತಿ ಹಾಗೂ ಸುಗಮ ಚುನಾವಣೆ ನಡೆಸುವ ಉದ್ದೇಶದಿಂದ ಹೆಚ್ಚುವರಿಯಾಗಿ ಶೇ.20ರಷ್ಟುಚುನಾವಣಾ ಸಿಬ್ಬಂದಿ ನೇಮಕ ಮಾಡಿಕೊಳ್ಳಲಾಗಿದೆ. ಶಾಂತಿಯುತ ಮತದಾನ ನಡೆಯಲು ಎಲ್ಲ ರೀತಿಯ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಮಂಗಳವಾರ ಬೆಳಗ್ಗೆ 6ಕ್ಕೆ ಮತಗಟ್ಟೆಏಜೆಂಟ್‌ಗಳ ಸಮ್ಮುಖದಲ್ಲಿ ಅಣಕು ಮತದಾನ ನಡೆಯಲಿದೆ. ಅದಾದ ಬಳಿಕ ಬೆಳಗ್ಗೆ 7ಕ್ಕೆ ಮತದಾನ ಆರಂಭವಾಗಿ ಸಂಜೆ 6ರವರೆಗೆ ನಡೆಯಲಿದೆ.

ಶಿರಾದಲ್ಲಿ ಮತದಾರರಿಗೆ ರೆಡ್ ಕಾರ್ಪೆಟ್ ವ್ಯವಸ್ಥೆ..! ..

ಸೋಂಕು ದೃಢಪಟ್ಟಹಾಗೂ ಕೊರೊನಾ ಸೋಂಕಿನ ಲಕ್ಷಣ ಇರುವವರಿಗೆ ಸಂಜೆ 5ರಿಂದ 6ರವರೆಗೆ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ. ಸೋಂಕು ದೃಢಪಟ್ಟವರ ಮನೆಗಳಿಂದ ಆ್ಯಂಬುಲೆನ್ಸ್‌ನ ಮೂಲಕ ಸೋಂಕಿತರನ್ನು ಕರೆದುಕೊಂಡು ಬಂದು ಚುನಾವಣೆ ಪ್ರಕ್ರಿಯೆ ಮುಗಿದ ಮೇಲೆ ಮನೆಗೆ ಕರೆದುಕೊಂಡು ಹೋಗಿ ಬಿಡಲಿದ್ದೇವೆ ಎಂದು ತಿಳಿಸಿದರು.

ಸೋಂಕಿತ ಮತದಾರರು:

ಮತದಾನ ಚೀಟಿ ನೀಡುವ ಸಂದರ್ಭದಲ್ಲಿಯೂ ಸೋಂಕಿತರ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಈವರೆಗೆ ಆರ್‌ಆರ್‌ ನಗರ ಕ್ಷೇತ್ರದಲ್ಲಿ ಕೊರೋನಾ ಸೋಂಕು ದೃಢಪಟ್ಟವರ ಪೈಕಿ 148 ಸೋಂಕಿತ ಮತದಾರರನ್ನು ಗುರುತಿಸಲಾಗಿದೆ. ಆದರೆ, ಅವರು ಮತದಾನ ಮಾಡುವ ಬಗ್ಗೆ ದೃಢಪಡಿಸಿಲ್ಲ. ಮತದಾನ ಮಾಡುವುದಕ್ಕೆ ಇಚ್ಛೆ ವ್ಯಕ್ತಪಡಿಸುವ ಕೊರೋನಾ ಸೋಂಕಿತರು ಮತ್ತು ಶಂಕಿತರನ್ನು ಮತಗಟ್ಟೆಕರೆತಂದು ಮತದಾನಕ್ಕೆ ಅವಕಾಶ ಮಾಡಿಕೊಡಲು 90 ಆ್ಯಂಬುಲೆನ್ಸ್‌ ವ್ಯವಸ್ಥೆ ಮಾಡಲಾಗಿದೆ. ಸೋಂಕಿತರ ಮತದಾನಕ್ಕೆ ಸಂಜೆ 5ರಿಂದ 6ರವರೆಗೆ ವ್ಯವಸ್ಥೆ ಮಾಡಲಾಗಿದೆ. ಈ ವೇಳೆ ಏನಾದರೂ ಸಾಮಾನ್ಯ ಮತದಾರರು ಮತಗಟ್ಟೆಗೆ ಆಗಮಿಸಿದರೆ ಇಡೀ ಮತಗಟ್ಟೆಯನ್ನು ಸೋಂಕು ನಿವಾರಕ ಸಿಂಪಡಿಸಿ ನಂತರ ಮತದಾನಕ್ಕೆ ಅವಕಾಶ ನೀಡಲಾಗುತ್ತದೆ.

ಮತಗಟ್ಟೆಹೆಚ್ಚಳ:

ಆರ್‌.ಆರ್‌.ನಗರ ಕ್ಷೇತ್ರದಲ್ಲಿ ಒಟ್ಟು 381 ಮತಗಟ್ಟೆಗಳಿವೆ. ಒಂದು ಸಾವಿರ ಮತದಾರರಿಗಿಂತ ಹೆಚ್ಚಿರುವ 297 ಮತಗಟ್ಟೆಗಳಿವೆ. ಕೊರೋನಾ ಹಿನ್ನೆಲೆಯಲ್ಲಿ ಹೆಚ್ಚುವರಿಯಾಗಿ 297 ಮತಗಟ್ಟೆಆರಂಭಿಸಲಾಗಿದ್ದು, ಮತಗಟ್ಟೆಗಳ ಸಂಖ್ಯೆಯನ್ನು 678ಕ್ಕೆ ಹೆಚ್ಚಳ ಮಾಡಲಾಗಿದೆ. ಈ ಪೈಕಿ 88 ಮತಗಟ್ಟೆಗಳನ್ನು ಸೂಕ್ಷ್ಮ ಮತಗಟ್ಟೆಗಳು ಎಂದು ಪರಿಗಣಿಸಲಾಗಿದೆ. ಒಟ್ಟು 144 ಕಡೆ ಮತಗಟ್ಟೆವ್ಯವಸ್ಥೆ ಮಾಡಲಾಗಿದೆ.

ಮದ್ಯ ನಿಷೇಧ: ಚುನಾವಣೆ ಹಿನ್ನೆಲೆಯಲ್ಲಿ ಆರ್‌ಆರ್‌ನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ನ.3ರ ಮಧ್ಯರಾತ್ರಿ 12ರವರೆಗೆ ಮದ್ಯ ಮಾರಾಟ ನಿಷೇಧಿಸಲಾಗಿದೆ.

16 ಅಭ್ಯರ್ಥಿಗಳು ಕಣದಲ್ಲಿ:

ಉಪ ಚುನಾವಣೆಗೆ ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ಸೇರಿದಂತೆ ಒಟ್ಟು 16 ಅಭ್ಯರ್ಥಿಗಳು ಚುನಾವಣೆ ಸ್ಪರ್ಧಿಸಿದ್ದಾರೆ. ಮಾನ್ಯತೆ ಪಡೆದ ರಾಷ್ಟ್ರೀಯ ಮತ್ತು ರಾಜ್ಯ ಪಕ್ಷದಿಂದ ಮೂವರು, ನೋಂದಾಯಿತ ರಾಜಕೀಯ ಪಕ್ಷದಿಂದ ನಾಲ್ವರು, ಪಕ್ಷೇತರ ಅಭ್ಯರ್ಥಿಗಳಾಗಿ 9 ಮಂದಿ ಸ್ಪರ್ಧಿಸಿದ್ದಾರೆ.

ಮತದಾರರ ವಿವರ

ಪುರುಷರು: 2,41,049

ಮಹಿಳೆ: 2,21,073

ಇತರೆ: 79

ಸೇವಾ ಮತದಾರರು: 35

ಒಟ್ಟು ಮತದಾರರು: 4,62,236

ಮತದಾರರಿಗೆ ಉಚಿತ ಗ್ಲೌಸ್‌

ಆರ್‌ಆರ್‌ನಗರ ವಿಧಾನಸಭಾ ಕ್ಷೇತ್ರದ ಮತದಾನದಲ್ಲಿ ಭಾಗವಹಿಸುವ ಪ್ರತಿಯೊಬ್ಬ ಮತದಾರರಿಗೆ ಕೊರೋನಾ ಹಿನ್ನೆಲೆಯಲ್ಲಿ ಬಲಗೈಗೆ ಗ್ಲೌಸನ್ನು ಉಚಿತವಾಗಿ ವಿತರಣೆ ಮಾಡಲಾಗುತ್ತಿದೆ. ಮತದಾರರಿಗೆ ಎಡಗೈನ ಮಧ್ಯ ಬೆರಳಿಗೆ ಶಾಹಿ ಹಾಕಲಾಗುತ್ತದೆ.

ಟೋಕನ್‌ ವ್ಯವಸ್ಥೆ

ಪ್ರತಿ ಮತಗಟ್ಟೆಯಲ್ಲಿ ಸಹಾಯ ಕೇಂದ್ರ ಸ್ಥಾಪಿಸಲಾಗುವುದು. ಮತದಾನದ ವೇಳೆ ಜನದಟ್ಟಣೆ ಉಂಟಾದರೆ ಟೋಕನ್‌ ನೀಡಲಾಗುವುದು. ಟೋಕನ್‌ ಪಡೆದವರಿಗೆ ಹಾಗೂ ಥರ್ಮಲ್‌ ಸ್ಕಾ್ಯನಿಂಗ್‌ನಲ್ಲಿ ಉಷ್ಣಾಂಶ ಹೆಚ್ಚು ಕಂಡು ಬಂದ ಮತದಾರರಿಗೆ ಮತದಾನ ಕೊನೆಯ ಒಂದು ಗಂಟೆಯ (ಸ.5ರಿಂದ ಸ.6) ಅವಧಿಯಲ್ಲಿ ಮತದಾನಕ್ಕೆ ಅವಕಾಶ ನೀಡಲಾಗುತ್ತದೆ.

ಮತಗಟ್ಟೆಬೂತ್‌ ಒಳಗೆ ಒಬ್ಬ ಮತದಾರರಿಗೆ ಮಾತ್ರ ಅವಕಾಶ. ಪ್ರತಿ ಮತದಾರರಿಗೆ ಸಹಿ ಮತ್ತು ಇವಿಎಂನಲ್ಲಿ ಮತ ಚಲಾವಣೆ ವೇಳೆ ಗ್ಲೌಸ್‌ ಬಳಕೆ ಕಡ್ಡಾಯಗೊಳಿಸಲಾಗುವುದು. ಸಾಮಾಜಿಕ ಅಂತರಕ್ಕೆ ಆರು ಅಡಿ ದೂರಕ್ಕೆ ವೃತ್ತ ಮಾರ್ಕಿಂಗ್‌ (ಗುರುತು) ಮಾಡಲಾಗಿದೆ.

ಪರ್ಯಾಯ ದಾಖಲೆಗಳು

ಚುನಾವಣಾ ಆಯೋಗ ನೀಡಿದ ಮತದಾರ ಗುರುತಿನ ಚೀಟಿ ಇಲ್ಲದಿದ್ದರೆ ಪರ್ಯಾಯವಾಗಿ ಪಾಸ್‌ ಫೋರ್ಟ್‌, ವಾಹನ ಚಾಲನಾ ಪರವಾನಗಿ, ಕೇಂದ್ರ ಮತ್ತು ರಾಜ್ಯ ಸರ್ಕಾರಿ ಇಲಾಖೆ ನೀಡಿರುವ ಭಾವಚಿತ್ರ ಇರುವ ಗುರುತಿನ ಚೀಟಿ, ನರೇಗಾ ಜಾಬ್‌ ಕಾರ್ಡ್‌, ಪಾನ್‌ ಕಾರ್ಡ್‌, ಭಾವಚಿತ್ರವಿರುವ ಪಿಂಚಣಿ ದಾಖಲಾತಿ, ಬ್ಯಾಂಕ್‌ ಪಾಸ್‌ ಬುಕ್‌, ಕಾರ್ಮಿಕ ಇಲಾಖೆಯ ಆರೋಗ್ಯ ವಿಮೆ ಕಾರ್ಡ್‌, ಆಧಾರ್‌ ಕಾರ್ಡ್‌ ತೆಗೆದುಕೊಂಡು ಹೋಗಿ ಮತದಾನ ಮಾಡಬಹುದು.

ಸಹಾಯವಾಣಿ ಸಂಖ್ಯೆ

ಸೋಂಕಿತರ ಜೊತೆಗೆ ಪ್ರಾಥಮಿಕ ಮತ್ತು ಪರೋಕ್ಷ ಸಂಪರ್ಕಿತರು ಹಾಗೂ ಕೊರೋನಾ ಸೋಂಕಿನ ಲಕ್ಷಣ ಹೊಂದಿರುವವರು, ಸೋಂಕು ಪರೀಕ್ಷೆಗೆ ಒಳಗಾಗಿ ಫಲಿತಾಂಶಕ್ಕಾಗಿ ಕಾಯುತ್ತಿರುವವರಿಗೆ ಆ್ಯಂಬುಲೆನ್ಸ್‌ ವ್ಯವಸ್ಥೆಗಾಗಿ ಸಹಾಯವಾಣಿ ಸಂಖ್ಯೆ 080-28600954/ 28604331/ 28601050, ಮೊಬೈಲ್‌ ಸಂಖ್ಯೆ 94822 24474ಗೆ ಸಂಪರ್ಕಿಸಬಹುದಾಗಿದೆ.

10ಕ್ಕೆ ಮತ ಏಣಿಕೆ

ಆರ್‌ಆರ್‌ನಗರದ ವಿಧಾನಸಭಾ ಕ್ಷೇತ್ರ ಮತ ಏಣಿಕೆ ಕಾರ್ಯ ನ.10 ರಂದು ಕೆಂಚೇನಹಳ್ಳಿಯ ಜ್ಞಾನಾಕ್ಷಿ ವಿದ್ಯಾನಿಕೇತನ ಶಾಲೆಯಲ್ಲಿ ಬೆಳಗ್ಗೆ 8ರಿಂದ ಆರಂಭಗೊಳ್ಳಲಿದೆ. ಮತದಾನದ ಬಳಿಕ ಮತ ಯಂತ್ರಗಳನ್ನು ಇದೇ ಶಾಲೆಯಲ್ಲಿ ಸುರಕ್ಷಿತವಾಗಿ ಸಂಗ್ರಹಿಸಲಾಗುತ್ತದೆ.

Latest Videos
Follow Us:
Download App:
  • android
  • ios