ಚಿಕ್ಕಬಳ್ಳಾಪುರ (ಮಾ.02]:  ಮದುವೆಮನೆಯೊಂದರಲ್ಲಿ ಊಟ ಮಾಡಿದವರಲ್ಲಿ ಒಬ್ಬರು ಮೃತಪಟ್ಟು 53 ಮಂದಿ ತೀವ್ರ ಅಸ್ವಸ್ಥರಾಗಿರುವ ಘಟನೆ ಚಿಕ್ಕಬಳ್ಳಾಪುರ ಹೊರವಲಯದ ಕಂದವಾರ ಗ್ರಾಮದಿಂದ ವರದಿಯಾಗಿದೆ. ಅಸ್ವಸ್ಥಗೊಂಡವರಲ್ಲಿ 10 ಮಂದಿ ಸ್ಥಿತಿ ಗಂಭೀರವಾಗಿದ್ದು ಇವರುಗಳನ್ನು ಬೆಂಗಳೂರಿನ ಆಸ್ಪತ್ರೆ ದಾಖಲಿಸಲಾಗಿದೆ. 

ಚಿಕ್ಕಬಳ್ಳಾಪುರ ಹೊರವಲಯದ ಕಂದವಾರ ಗ್ರಾಮದಲ್ಲಿರುವ ಕಲ್ಯಾಣ ಮಂಟಪವೊಂದರಲ್ಲಿ ಶನಿವಾರ ರಾತ್ರಿ ಮದುವೆ ಸಮಾರಂಭದಲ್ಲಿ ಒಂದು ಪಂಕ್ತಿಯಲ್ಲಿ ಕುಳಿತಿದ್ದ 53 ಮಂದಿ ಅಸ್ವಸ್ಥರಾಗಿದ್ದರಿಂದ ಆಸ್ಪತ್ರೆಗೆ ಸೇರಿಸಲಾಯಿತು. ಇವರಲ್ಲಿ ಪೈಲಹಳ್ಳಿಯ ನಾರಾಯಣಪ್ಪ (60) ಎಂಬವರು ಮೃತಪಟ್ಟಿದ್ದು ಗ್ರಾಮದಲ್ಲಿ ತೀವ್ರ ಆತಂಕ ಸೃಷ್ಟಿಯಾಗಿದೆ. ನರಸಿಂಹ ಮೂರ್ತಿ ಹಾಗೂ ರಾಮಾಂಜಿ ಎಂಬವರ ಪರಿಸ್ಥಿತಿ ಚಿಂತಾಜನಕವಾಗಿದ್ದು, ಬೆಂಗಳೂರಿನ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.

ಒಂದೇ ಗ್ರಾಮದ 50ಕ್ಕೂ ಹೆಚ್ಚು ಮಂದಿ ವಾಂತಿ, ಭೇದಿಯಿಂದ ನರಳುತ್ತಿದ್ದಾರೆ. ಗ್ರಾಮಕ್ಕೆ ತಾಲೂಕು ಆರೋಗ್ಯಾಧಿಕಾರಿ ಡಾ.ಯೋಗೇಶ್‌ ಸಿಬ್ಬಂದಿಯೊಂದಿಗೆ ತೆರಳಿ ಶಾಲೆ ಹಾಗೂ ಅಂಗನವಾಡಿಯಲ್ಲಿ ತುರ್ತು ಚಿಕಿತ್ಸಾ ಕೇಂದ್ರ ತೆರೆದಿದ್ದಾರೆ. ಎಲ್ಲರಿಗೂ ಔಷಧಗಳನ್ನು ನೀಡಿ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಗ್ರಾಮಸ್ಥರಿಗೆ ವಿವರಿಸಿದ್ದಾರೆ. ವಾಂತಿ ಭೇದಿಯಿಂದ ಅಸ್ವಸ್ಥರಾಗಿರುವ 53 ಮಂದಿ ಶಿಡ್ಲಘಟ್ಟ, ಚಿಕ್ಕಬಳ್ಳಾಪುರ, ದೇವನಹಳ್ಳಿ, ಹೊಸಕೋಟೆ ಹಾಗೂ ಬೆಂಗಳೂರು ಸೇರಿದಂತೆ ಅನುಕೂಲವಿರುವ ಆಸ್ಪತ್ರೆಗಳಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಊಟದಲ್ಲಿ ಅವಧಿ ಮೀರಿದ ಆಹಾರ ಪದಾರ್ಥಗಳ ಬಳಕೆ, ಅಶುದ್ಧ ನೀರಿನ ಬಳಕೆಯೇ ಘಟನೆಗೆ ಕಾರಣ ಇರಬಹುದು ಎಂದು ಆರೋಗ್ಯಾಧಿಕಾರಿಗಳು ಶಂಕಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಆಹಾರ ಪದಾರ್ಥ ಮತ್ತು ನೀರು ಪರೀಕ್ಷೆಗೆ ಕಳುಹಿಸಿದ್ದು, ವರದಿ ಬಂದ ನಂತರ ನಿಖರ ಕಾರಣ ತಿಳಿಯಲಿದೆ.

ಚಿಕ್ಕಮಗಳೂರು: ಆಸ್ಪತ್ರೆಯಲ್ಲೇ ಬೆತ್ತಲಾಗಿ ಮಲಗಿದ ಸರ್ಕಾರಿ ಡಾಕ್ಟರ್!..

ಕಂದವಾರ ಗ್ರಾಮದಲ್ಲಿ ನಡೆದ ಮದುವೆಯಲ್ಲಿ ಊಟ ಸೇವಿಸಿದ 53 ಮಂದಿ ತೀವ್ರ ಅಸ್ವಸ್ಥರಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಒಬ್ಬರು ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಆರೋಗ್ಯ ಇಲಾಖೆ ಗ್ರಾಮದ ಮನೆಮನೆಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದ್ದು, ಪ್ರಸ್ತುತ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಸ್ವಚ್ಛತೆ, ಅವಧಿ ಮೀರಿದ ಆಹಾರ ಪದಾರ್ಥ ಬಳಸಿರುವುದು ಕಾರಣ ಇರಬಹುದು ಎಂದು ಮೇಲ್ನೋಟಕ್ಕೆ ಕಂಡುಬಂದಿದೆ.

-ಡಾ.ಯೋಗೇಶ್‌, ಜಿಲ್ಲಾ ಆರೋಗ್ಯಾಧಿಕಾರಿ, ಚಿಕ್ಕಬಳ್ಳಾಪುರ