ಬೆಂಗಳೂರು [ಅ.04]:  ಸಚಿವರು, ಅಧಿಕಾರಿಗಳ ಪರಿಚಯವಿದ್ದು, ಆಸ್ಪತ್ರೆ ನಿರ್ಮಾಣಕ್ಕೆ ಸರ್ಕಾರದಿಂದ ಜಮೀನು ಮಂಜೂರು ಮಾಡಿಸುವುದಾಗಿ ವೈದ್ಯರೊಬ್ಬರಿಗೆ ನಂಬಿಸಿ ಒಂದೂವರೆ ಕೋಟಿ ಹಣ ಪಡೆದು ವಂಚಿರುವ ಘಟನೆ ಫ್ರೇಜರ್‌ಟೌನ್‌ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಫ್ರೇಜರ್‌ಟೌನ್‌ ನಿವಾಸಿ ವೈದ್ಯ ಅಶ್ಫಕ್‌ ಅಹಮ್ಮದ್‌ ವಂಚನೆಗೆ ಒಳಗಾದವರು. ಈ ಸಂಬಂಧ ನಟರಾಜ್‌, ಶಿಲ್ಪಶ್ರೀ ಮತ್ತು ಸಲಾಹುದ್ದೀನ್‌ ಎಂಬುವರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ವೈದ್ಯ ಅಶ್ಫಕ್‌ ಅಹಮದ್‌ ಆಸ್ಪತ್ರೆ ನಿರ್ಮಾಣಕ್ಕೆಂದು ಜಮೀನು ಖರೀದಿಗಾಗಿ ಓಡಾಡುತ್ತಿದ್ದರು. ಈ ವಿಚಾರ ತಿಳಿದ ಪರಿಚಯಸ್ಥ ಆರೋಪಿ ಸಲಾಹುದ್ದೀನ್‌, ನಟರಾಜ್‌ನನ್ನು ವೈದ್ಯರಿಗೆ ಪರಿಚಯ ಮಾಡಿಸಿದ್ದ. ಈ ವೇಳೆ ಆರೋಪಿ, ನಟರಾಜ್‌ಗೆ ಸಚಿವರು ಹಾಗೂ ಹಿರಿಯ ಅಧಿಕಾರಿಗಳ ಪರಿಚಯವಿದ್ದು, ಒಳ್ಳೆ ಸ್ಥಳದಲ್ಲಿ ಜಮೀನು ಕೊಡಿಸುತ್ತಾರೆ ಎಂದು ಹೇಳಿದ್ದ. ಇದನ್ನು ಅಶ್ಫಕ್‌ ಅವರು ನಂಬಿದ್ದರು.

ನಟರಾಜ್‌ ಆಸ್ಪತ್ರೆ ಕಟ್ಟಿಸಲು ಸೂಕ್ತವಾದ ಸ್ಥಳವಿದೆ. ಅದನ್ನು ಭೂ ಮಾಲಿಕರ ಹೆಸರಿನಲ್ಲಿಯೇ ಜಮೀನು ಭೂಪರಿವರ್ತನೆ ಮಾಡಿಸಿ, ನಂತರ ನಿಮ್ಮ ಹೆಸರಿಗೆ ನೋಂದಣಿ ಮಾಡಿಸಿಕೊಡುತ್ತೇನೆ. ಇದಕ್ಕೆ ಹಣ ಖರ್ಚಾಗುತ್ತದೆ ಎಂದು ಅಶ್ಫಕ್‌ ಅವರಿಂದ ನಗದು ರೂಪದಲ್ಲಿಯೇ ಹಣ ಪಡೆದಿದ್ದ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಮಾಗಡಿ ಮುಖ್ಯರಸ್ತೆಯಲ್ಲಿರುವ ಬ್ಯಾಡರಹಳ್ಳಿ ಬಳಿ ಅಶ್ಫಕ್‌ ಅವರನ್ನು ಕರೆದುಕೊಂಡು ಹೋಗಿದ್ದ ನಟರಾಜ್‌, ಬೇರೆಯವರ ಮಾಲಿಕತ್ವದ 20 ಎಕರೆ ಜಮೀನು ತೋರಿಸಿ ಸರ್ಕಾರಿ ಜಮೀನು ಎಂದಿದ್ದ. ಸರ್ಕಾರದಿಂದ ಭೂ ಪರಿವರ್ತನೆ ಮಾಡಿಸಲು 75 ಲಕ್ಷ ರು. ತೆಗೆದುಕೊಂಡಿದ್ದ. ಬಳಿ ಆತನ ಪತ್ನಿ ಶಿಲ್ಪಶ್ರೀ ಮತ್ತು ಸ್ನೇಹಿತ ಸಲಾಹುದ್ದೀನ್‌ ಸೇರಿ ಹಂತ ಹಂತವಾಗಿ 1.50 ಕೋಟಿ ರು. ಪಡೆದಿದ್ದರು. ಜಮೀನು ನೋಂದಣಿ ಮಾಡಿಸಿ ಕೊಡದೆ ಆರೋಪಿಗಳು ಸಬೂಬು ಹೇಳುತ್ತಿದ್ದರು. ವೈದ್ಯ ಅಶ್ಫಕ್‌ ಅವರಿಗೆ ತಮಗೆ ವಂಚನೆ ಆಗಿರುವ ವಿಷಯ ತಿಳಿದು ಠಾಣೆಗೆ ದೂರು ನೀಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದರು.