ಬಿಬಿಎಂಪಿಯ 2023-24ನೇ ಸಾಲಿನ ಬಜೆಟ್‌ನಲ್ಲಿ ಹೊಸದಾಗಿ ರಚನೆಗೊಂಡ 45 ವಾರ್ಡ್‌ಗಳಲ್ಲಿ ಕಚೇರಿ ನಿರ್ಮಾಣ ಸೇರಿದಂತೆ ಮೂಲ ಸೌಕರ್ಯಕ್ಕೆ ತಲಾ 1 ಕೋಟಿ ರು. ಸೇರಿದಂತೆ ಅಧಿಕಾರಿ- ಸಿಬ್ಬಂದಿ ವೇತನಕ್ಕೆ ಅನುದಾನ ಮೀಸಲಿಡಲು ನಿರ್ಧರಿಸಲಾಗಿದೆ.
ವಿಶ್ವನಾಥ ಮಲೇಬೆನ್ನೂರು
ಬೆಂಗಳೂರು (ಫೆ.24): ಬಿಬಿಎಂಪಿಯ 2023-24ನೇ ಸಾಲಿನ ಬಜೆಟ್‌ನಲ್ಲಿ ಹೊಸದಾಗಿ ರಚನೆಗೊಂಡ 45 ವಾರ್ಡ್‌ಗಳಲ್ಲಿ ಕಚೇರಿ ನಿರ್ಮಾಣ ಸೇರಿದಂತೆ ಮೂಲ ಸೌಕರ್ಯಕ್ಕೆ ತಲಾ 1 ಕೋಟಿ ರು. ಸೇರಿದಂತೆ ಅಧಿಕಾರಿ- ಸಿಬ್ಬಂದಿ ವೇತನಕ್ಕೆ ಅನುದಾನ ಮೀಸಲಿಡಲು ನಿರ್ಧರಿಸಲಾಗಿದೆ. ರಾಜ್ಯ ಸರ್ಕಾರವು ಬಿಬಿಎಂಪಿಯ 198 ವಾರ್ಡ್‌ಗಳನ್ನು ಮರುವಿಂಗಡಣೆ ಮಾಡಿ ವಾರ್ಡ್ ಸಂಖ್ಯೆಯನ್ನು 243ಕ್ಕೆ ಹೆಚ್ಚಿಸಿ ಆದೇಶಿಸಿದೆ. ಇದರಿಂದ ಬಿಬಿಎಂಪಿ ವ್ಯಾಪ್ತಿಯಲ್ಲಿ 45 ಹೊಸ ವಾರ್ಡ್‌ಗಳು ಹುಟ್ಟಿಕೊಂಡಿವೆ.
ಹೊಸದಾಗಿ ರಚನೆ ಆಗಿರುವ 45 ವಾರ್ಡ್‌ಗಳ ಕಚೇರಿ ನಿರ್ಮಾಣಕ್ಕೆ ಈಗಾಗಲೇ ಸ್ಥಳ ಗುರುತಿಸಲಾಗಿದೆ. ವಾರ್ಡ್‌ಗಳಿಗೆ ಕಚೇರಿ ನಿರ್ಮಾಣಕ್ಕೆ ಬಿಬಿಎಂಪಿಯ 2023-24ನೇ ಸಾಲಿನ ಆಯವ್ಯಯದಲ್ಲಿ ತಲಾ 1 ಕೋಟಿ ರು. ಅನುದಾನ ನೀಡುವುದಕ್ಕೆ ತೀರ್ಮಾನಿಸಲಾಗಿದೆ. ವಾರ್ಡ್ ಕಚೇರಿಯಲ್ಲಿ ಅಧಿಕಾರಿ ಸಿಬ್ಬಂದಿಗೆ ಕೊಠಡಿ, ಅಗತ್ಯ ಪೀಠೋಪಕರಣ, ಶೌಚಾಲಯ ಹಾಗೂ ವಾರ್ಡ್ ಸಭೆ ನಡೆಸುವುದಕ್ಕೆ ಅಗತ್ಯವಿರುವ ಸಭಾಂಗಣ ಕೊಠಡಿ ಸೇರಿದಂತೆ ಇನ್ನಿತರೆ ಸೌಲಭ್ಯ ಕಲ್ಲಿಸಲಾಗುತ್ತದೆ.
ಮಹಿಳಾ ನೌಕರರು, ನಿರಾಶ್ರಿತ ವೃದ್ಧರಿಗೆ ವಸತಿ?: ಬಿಬಿಎಂಪಿ ಬಜೆಟ್‌ನಲ್ಲಿ ಘೋಷಣೆ ಸಾಧ್ಯತೆ
ವಲಯ ಆಯುಕ್ತರ ಕಚೇರಿಗೂ ಹಣ: ವಾರ್ಡ್ ಕಚೇರಿ ನಿರ್ಮಾಣದ ಜತೆಗೆ, ಬಿಬಿಎಂಪಿಯ ಎಂಟು ವಲಯಗಳಲ್ಲಿ ವಲಯ ಆಯುಕ್ತರ ಕಚೇರಿ ನಿರ್ಮಾಣಕ್ಕೂ ಸಹ ಬಿಬಿಎಂಪಿಯ ಬಜೆಟ್‌ನಲ್ಲಿ ಅನುದಾನ ಮೀಸಲಿಡಲಾಗುತ್ತಿದೆ. ಈಗಾಗಲೇ ಆಯುಕ್ತರು ಆದೇಶಿಸಿರುವಂತೆ ಎಂಟು ವಲಯದ ಆಯುಕ್ತರು ಪ್ರತಿ ದಿನ ಮಧ್ಯಾಹ್ನದ ಅವಧಿಯಲ್ಲಿ ವಲಯ ಕಚೇರಿಯಲ್ಲಿ ಕುಳಿತು ಕಾರ್ಯನಿರ್ವಹಿಸುವುದಕ್ಕೆ ಬೇಕಾದ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತದೆ.
ಹಳೇ ವಾರ್ಡ್ ಕಚೇರಿಗಳಿಗೂ ಅನುದಾನ: ಹೊಸದಾಗಿ ರಚನೆ ಆಗಿರುವ ವಾರ್ಡ್ ಕಚೇರಿ ನಿರ್ಮಾಣದ ಜತೆಗೆ, ಈಗಾಗಲೇ ಅಸ್ಥಿತ್ವದಲ್ಲಿರುವ ವಾರ್ಡ್‌ಗಳ ಕಚೇರಿಗಳ ದುರಸ್ಥಿಗೆ, ಮೂಲ ಸೌಕರ್ಯಕ್ಕೂ ಬಜೆಟ್‌ನಲ್ಲಿ ಹಣ ನೀಡುವುದಕ್ಕೆ ತೀರ್ಮಾನಿಸಲಾಗಿದೆ. ಯಾವ ವಾರ್ಡ್‌ಗೆ ಎಷ್ಟುಹಣ ಬೇಕಾಗಲಿದೆ ಎಂಬುದರ ಬಗ್ಗೆ ವಲಯ ಆಯುಕ್ತರು ತೀರ್ಮಾನಿಸಲಿದ್ದಾರೆ. ವಲಯ ವಾರು ಅನುದಾನ ನೀಡಲು ಆಯುಕ್ತರು ಚಿಂತನೆ ನಡೆಸಿದ್ದಾರೆ ಎಂದು ಮೂಲಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿವೆ.
ಸಂಬಳಕ್ಕೂ ಅನುದಾನ ನಿಗದಿ: ವಾರ್ಡ್ ಮರು ವಿಂಗಡಣೆಯಿಂದಾಗಿ ವಾರ್ಡ್ ಮಟ್ಟದಲ್ಲಿ ಕೆಲಸ ಮಾಡುವ ಸಹಾಯಕ ಕಂದಾಯ ಅಧಿಕಾರಿ, ಕಾರ್ಯಪಾಲಕ ಎಂಜಿನಿಯರ್, ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್, ಸಹಾಯಕ ಕಂದಾಯ ಅಧಿಕಾರಿಗಳು ಸೇರಿದಂತೆ 45 ವಾರ್ಡ್‌ಗೆ 2,845 ಅಧಿಕಾರಿ, ಸಿಬ್ಬಂದಿಯ ಅವಶ್ಯಕತೆಯಿದೆ. ಈ ಅಧಿಕಾರಿ ಸಿಬ್ಬಂದಿಗೆ ಮಾಸಿಕ 100 ಕೋಟಿ ರು. ವೇತನ ಹೆಚ್ಚುವರಿ ಪಾವತಿ ಮಾಡಬೇಕಾಗುತ್ತದೆ. ಹುದ್ದೆ ನೇಮಕಕ್ಕೆ ಸಂಬಂಧಿಸಿದಂತೆ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ ಮಾಡಲಾಗಿದೆ. ಹೊಸದಾಗಿ ನೇಮಕಗೊಂಡ ಅಧಿಕಾರಿ ಸಿಬ್ಬಂದಿ ವೇತನಕ್ಕೂ ಪ್ರಸಕ್ತ ಸಾಲಿನ ಬಿಬಿಎಂಪಿ ಆಯವ್ಯಯದಲ್ಲಿ ಹೆಚ್ಚಿನ ಅನುದಾನ ಮೀಸಲಿಡಲಾಗುತ್ತಿದೆ.
ಹೊಸ 45 ವಾರ್ಡ್‌ಗೆ ಅಗತ್ಯವಿರುವ ಅಧಿಕಾರಿ-ಸಿಬ್ಬಂದಿ ವಿವರ
ವಿಭಾಗ ಹುದ್ದೆ ಸಂಖ್ಯೆ ವೇತನ(ಕೋಟಿ ರು.)
ಕಂದಾಯ 163 7.92
ಎಂಜಿನಿಯರಿಂಗ್ 71 5.77
ಆರೋಗ್ಯ/ಘನ ತ್ಯಾಜ್ಯ 2,340 74.95
ಸಾಮಾನ್ಯ ಆಡಳಿತ 271 10.44
ಒಟ್ಟು 2,845 99.04
ಹೊಸ ವಾರ್ಡ್ ಕಚೇರಿ ನಿರ್ಮಾಣಕ್ಕೆ ಸೇರಿದಂತೆ ಹಳೇ ವಾರ್ಡ್‌ಗಳ ದುರಸ್ಥಿಗೆ ಬಜೆಟ್‌ನಲ್ಲಿ ಅನುದಾನ ನೀಡಲಾಗುತ್ತಿದ್ದು, ವಲಯ ಆಯುಕ್ತರು, ಈ ಬಗ್ಗೆ ಯೋಜನೆ ರೂಪಿಸಿ ಮುಂದಿನ ತೀರ್ಮಾನ ತೆಗೆದು ಕೊಳ್ಳಲಿದ್ದಾರೆ.
- ತುಷಾರ್ ಗಿರಿನಾಥ್, ಮುಖ್ಯ ಆಯುಕ್ತರು, ಬಿಬಿಎಂಪಿ
