ಗಂಗಾಧರ ಹಿರೇಮಠ 

ಆಲಮಟ್ಟಿ(ಆ.08): ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳಲ್ಲಿ ಹಾಗೂ ಕರ್ನಾಟಕದ ಕೃಷ್ಣಾ ಕಣಿವೆಯಲ್ಲಿ ಸುರಿಯುತ್ತಿರುವ ಮಳೆಯಯಿಂದಾಗಿ ಆಲಮಟ್ಟಿ ಜಲಾಶಯ ಒಳಹರಿವು ಹೆಚ್ಚಿದ್ದರಿಂದ ಮುಂಜಾಗ್ರತೆ ಕ್ರಮವಾಗಿ ಈ ವರ್ಷದಲ್ಲಿ ಇದೇ ಮೊದಲ ಬಾರಿಗೆ ಜಲಾಶಯದ ಎಲ್ಲಾ 26 ಗೇಟ್‌ಗಳನ್ನು ತೆರೆದು ನೀರನ್ನು ನದಿ ಪಾತ್ರಕ್ಕೆ ಹರಿಸಲಾಗುತ್ತಿದೆ.

ಜಲಾಶಯದ ಒಳಹರಿವಿನಲ್ಲಿ  ಭಾರಿ ಏರಿಕೆಯಾಗಿದ್ದು, ಸಂಜೆ ವೇಳೆಗೆ 1,41,389 ಕ್ಯುಸೆಕ್‌ ನೀರು ಜಲಾಶಯಕ್ಕೆ ಹರಿದು ಬರುತ್ತಿದೆ. 519.60 ಮೀ. ಗರಿಷ್ಠ ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಸಂಜೆ ವೇಳೆಗೆ 517.91 ಮೀವರೆಗೆ ನೀರು ಸಂಗ್ರಹವಾಗಿದೆ. ಭರ್ತಿಗೆ ಇನ್ನೂ 1.7 ಮೀ. ಬಾಕಿಯಿದ್ದರೂ, ಮುಂಜಾಗ್ರತೆ ಕ್ರಮವಾಗಿ ಜಲಾಶಯದ 26 ಗೇಟ್‌ಗಳ ಮೂಲಕ 1,42,000 ಕ್ಯುಸೆಕ್‌ ಹಾಗೂ ಕೆಪಿಸಿಎಲ್‌ ಮೂಲಕ 38,000 ಕ್ಯುಸೆಕ್‌ ಸೇರಿ 1,80,000 ಕ್ಯುಸೆಕ್‌ ನೀರನ್ನು ನದಿ ತಳಪಾತ್ರಕ್ಕೆ ಹಾಗೂ 2000 ಕ್ಯುಸೆಕ್‌ ನೀರನ್ನು ಕಾಲುವೆಗೆ ಹರಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಭಾರೀ ಮಳೆ: ಆಲಮಟ್ಟಿ ಡ್ಯಾಂನ 22 ಗೇಟ್‌ ಮೂಲಕ ನೀರು ಹೊರಕ್ಕೆ

ಜಲಾಶಯದ ಬಲಭಾಗದ ಆಲಮಟ್ಟಿ ಜಲವಿದ್ಯುತ್‌ ಉತ್ಪಾದನಾ ಕೇಂದ್ರ ಪೂರ್ಣ ಪ್ರಮಾಣದಲ್ಲಿ ಉತ್ಪಾದನೆಯಾಗಲು 45,000 ಕ್ಯುಸೆಕ್‌ ನೀರು ಅಗತ್ಯವಿತ್ತು. ಆದರೆ ಕೆಲ ತಾಂತ್ರಿಕ ತೊಂದರೆಯ ಕಾರಣ 38,000 ಕ್ಯುಸೆಕ್‌ ನೀರನ್ನು ಪಡೆದು ಅದರ ಮೂಲಕ 250 ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದನೆಯಾಗುತ್ತಿದೆ ಎಂದು ಕೆಪಿಸಿಎಲ್‌ ಅಧಿಕಾರಿಗಳು ಸ್ಪಷ್ಟಪಡಿಸಿದರು.

ಪ್ರವಾಹದ ಆತಂಕವಿಲ್ಲ:

ಪ್ರತಿ ವರ್ಷ ಆಲಮಟ್ಟಿಯಲ್ಲಿ 2 ಲಕ್ಷ ಕ್ಯುಸೆಕ್‌ವರೆಗೂ ನೀರು ಬರುವುದು. ಹೊರಬಿಡುವುದು ಸಾಮಾನ್ಯ ಪ್ರಕ್ರಿಯೆ, ಕಳೆದ ವರ್ಷವಷ್ಟೇ 5.65 ಲಕ್ಷ ಕ್ಯುಸೆಕ್‌ ದಾಖಲೆಯ ನೀರು ಹರಿದು ಬಂದಿದ್ದರಿಂದ ಪ್ರವಾಹ ಸ್ಥಿತಿ ಇತ್ತು. ಈಗ ಆ ಪರಿಸ್ಥಿತಿಯಿಲ್ಲ. ಮಹಾರಾಷ್ಟ್ರ ಅಲ್ಲದೇ ಜಲಾಶಯದ ಮುಂಭಾಗದ ಕರ್ನಾಟಕ ಹಾಗೂ ಆಂಧ್ರಪ್ರದೇಶದ ಅಧಿಕಾರಿಗಳ ಜತೆಯೂ ಸತತ ಸಂಪರ್ಕದಲ್ಲಿದ್ದೇವೆ ಎಂದು ಅಣೆಕಟ್ಟು ವಲಯದ ಮುಖ್ಯ ಎಂಜಿನಿಯರ್‌ ಆರ್‌.ಪಿ. ಕುಲಕರ್ಣಿ ತಿಳಿಸಿದರು.

ಮುಂಜಾಗ್ರತೆ ಕ್ರಮವಾಗಿ ಜಲಾಶಯ ಇನ್ನೂ ಪೂರ್ಣ ಪ್ರಮಾಣದಲ್ಲಿ ಭರ್ತಿ ಮಾಡಿಲ್ಲ. ಒಳಹರಿವು ಇನ್ನಷ್ಟುಹೆಚ್ಚಾದರೆ ಶುಕ್ರವಾರ ತಡರಾತ್ರಿಯಿಂದ ಹೊರಹರಿವನ್ನು ಇನ್ನಷ್ಟುಹೆಚ್ಚಿಸಲಾಗುವುದು ಎಂದು ತಿಳಿಸಿದರು. ಅಲ್ಲದೇ ನಾರಾಯಣಪುರ ಜಲಾಶಯದಿಂದಲೂ 1.80 ಲಕ್ಷ ಕ್ಯುಸೆಕ್‌ ನೀರು ಹೊರಕ್ಕೆ ಬಿಡಲಾಗುತ್ತಿದ್ದು, ಅಲ್ಲಿಯ ನೀರಿನ ಮಟ್ಟವೂ ಕಡಿಮೆ ಮಾಡಲಾಗಿದೆ. ಇದರಿಂದ ಪ್ರವಾಹ ಸ್ಥಿತಿ ತಗ್ಗಿದೆ.

ಮಹಾರಾಷ್ಟ್ರದಲ್ಲಿ ಮುಂದುವರಿದ ಮಳೆಯ ಅಬ್ಬರ:

ಮಹಾರಾಷ್ಟ್ರದ ಕೃಷ್ಣಾ ಕಣಿವೆಯಲ್ಲಿ ಮಳೆಯ ಅಬ್ಬರ ಮುಂದುವರಿದಿದ್ದು, ಕೊಯ್ನಾ, ಧೂದಗಂಗಾ, ಪಾತಗಾಂವ, ಕಾಸರಿ ಸೇರಿದಂತೆ ನಾನಾ ಕಡೆ ಭಾರೀ ಮಳೆಯಾಗಿದೆ. ಕರ್ನಾಟಕಕ್ಕೆ ಬಂದು ಸೇರುವ ರಾಜಾಪುರ ಬ್ಯಾರೇಜ್‌ ಬಳಿ ಕೃಷ್ಣೆಯ ಹರಿವು 1,17,500 ಕ್ಯುಸೆಕ್‌ ಇದೆ. ಇದರಿಂದಾಗಿ ಮುಂದಿನ ಎರಡು ಮೂರು ದಿನಗಳ ಕಾಲ ಆಲಮಟ್ಟಿ ಜಲಾಶಯದ ಒಳಹರಿವು ಇಷ್ಟೇ ಪ್ರಮಾಣದಲ್ಲಿ ಇರಲಿದೆ ಎಂದು ಜಲಾಶಯದ ಮೂಲಗಳು ತಿಳಿಸಿವೆ.

ಅಧಿಕಾರಿಗಳ ಸತತ ನಿಗಾ:

ಕೆಬಿಜೆಎನ್‌ಎಲ್‌ ಅಧಿಕಾರಿಗಳು ಆಲಮಟ್ಟಿ ಜಲಾಶಯದ ಒಳಹರಿವು, ಹೊರಹರಿವನ ಮೇಲೆ ದಿನದ 24 ಗಂಟೆಯೂ ನಿಗಾ ಇಟ್ಟಿದ್ದು, ಮಾಹಿತಿ ರವಾನೆಯೂ ತ್ವರಿತಗೊಂಡಿದೆ. ಜಲಾಶಯಕ್ಕೆ ಸಂಬಂಧಿಸಿದ ಅಧಿಕಾರಿಗಳೆಲ್ಲ ಸಮನ್ವಯತೆಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ.