50 ದಿನದಲ್ಲಿ 1.35 ಲಕ್ಷ ಜನರಿಗೆ ಕೊರೋನಾ ಸೋಂಕು: ಆತಂಕದಲ್ಲಿ ಬೆಂಗಳೂರಿನ ಜನತೆ..!
ಆಗಸ್ಟ್ 1ರಿಂದ ಸೆ.19ರ ವರೆಗೆ ಒಟ್ಟು 6.75 ಲಕ್ಷ ಮಂದಿಗೆ ಪರೀಕ್ಷೆ| 1596 ಮಂದಿಗೆ ಕೊರೋನಾಗೆ ಬಲಿ| ಕಳೆದ 50 ದಿನಗಳ ಅಂಕಿ ಅಂಶ ಗಮನಿಸಿದರೆ ಸಾವಿನ ಪ್ರಮಾಣ ಶೇ.1.17 ರಷ್ಟು ಇದ್ದು, ಸೋಂಕಿತ ಪತ್ತೆ ಪ್ರಮಾಣ ಶೇ.20ರಷ್ಟಕ್ಕೆ ಏರಿಕೆಯಾಗಿರುವುದು ಆತಂಕ ಮೂಡಿಸಿದೆ|
ವಿಶ್ವನಾಥ ಮಲೇಬೆನ್ನೂರು
ಬೆಂಗಳೂರು(ಸೆ.21): ರಾಜಧಾನಿ ಬೆಂಗಳೂರಿನಲ್ಲಿ ಕಳೆದ 50 ದಿನದಲ್ಲಿ (ಆಗಸ್ಟ್ 1ರಿಂದ ಸೆ.19ರವರೆಗೆ) ಬರೋಬ್ಬರಿ 1.35 ಲಕ್ಷ ಮಂದಿಯಲ್ಲಿ ಕೊರೋನಾ ಸೋಂಕು ದೃಢಪಟ್ಟಿದ್ದು, 1596 ಜನರು ಸೋಂಕಿನಿಂದ ಮರಣ ಹೊಂದಿರುವುದು ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ.
ಕಳೆದ 50 ದಿನದಲ್ಲಿ ಒಟ್ಟು 6,75,636 ಮಂದಿಯನ್ನು ಸೋಂಕು ಪರೀಕ್ಷೆಗೆ ಒಳಪಡಿಸಲಾಗಿದೆ. ಈ ಪೈಕಿ 1,35,894 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. 1,596 ಮಂದಿ ಮೃತಪಟ್ಟಿದ್ದಾರೆ. 1,30,509 ಮಂದಿ ಸೋಂಕಿತರು ಗುಣಮುಖರಾಗಿದ್ದಾರೆ. ಈ ಅವಧಿಯಲ್ಲಿ ಸೋಂಕಿತರ ಪತ್ತೆ ಪ್ರಮಾಣ ಶೇ.20ಕ್ಕೆ ಏರಿಕೆಯಾಗಿದ್ದು, ಮೃತಪಡುವವರ ಪ್ರಮಾಣ ಶೇ.1.17ಕ್ಕೆ ಏರಿಕೆಯಾಗಿದೆ.
ಇದೇ ಅವಧಿಯಲ್ಲಿ 72,126 ಮಂದಿ ಮಹಿಳೆಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, 51,632 ಮಂದಿ ಮಹಿಳೆಯರು ಸೋಂಕಿನಿಂದ ಗುಣಮುಖರಾದರೆ 555 ಮಂದಿ ಮೃತಪಟ್ಟಿದ್ದಾರೆ. ಇನ್ನು 85,073 ಮಂದಿ ಪುರುಷರಲ್ಲಿ ಸೋಂಕು ಕಾಣಿಸಿಕೊಂಡಿದೆ. 78,837 ಮಂದಿ ಗುಣಮುಖರಾಗಿದ್ದು, 1039 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.
ಈ ಅವಧಿಯಲ್ಲಿ ಪತ್ತೆಯಾದ ಕೊರೋನಾ ಸೋಂಕಿತರೊಂದಿಗೆ ಪ್ರಾಥಮಿಕ ಮತ್ತು ಪರೋಕ್ಷವಾಗಿ ಸಂಪರ್ಕ ಹೊಂದಿದ 9,33,123 ಪತ್ತೆ ಮಾಡಲಾಗಿದೆ. ಅದರಲ್ಲಿ ಪ್ರಾಥಮಿಕ 4,17,732 ಪತ್ತೆಯಾಗಿದೆ. ಇನ್ನು ಪರೋಕ್ಷವಾಗಿ ಸಂಪರ್ಕ ಹೊಂದಿದ 5,15,391 ಮಂದಿಯನ್ನು ಪತ್ತೆ ಮಾಡಿ ಕ್ವಾರಂಟೈನ್ ಮಾಡಲಾಗಿದೆ.
ಕೊರೋನಾ ಚೇತರಿಕೆ: ಜಗತ್ತಿನಲ್ಲೇ ಭಾರತ ನಂ.1, ಅಮೆರಿಕವೂ ಹಿಂದಕ್ಕೆ!
19 ದಿನದಲ್ಲಿ 660 ಮಂದಿ ಸಾವು
ನಗರದಲ್ಲಿ ಕೊರೋನಾ ಸೋಂಕಿತರ ಪರೀಕ್ಷೆ ಹಾಗೂ ಸೋಂಕಿತರ ಪತ್ತೆ ಪ್ರಮಾಣದಲ್ಲಿ ಏರಿಕೆಯಾದ ಹಿನ್ನೆಲೆಯಲ್ಲಿ ಸಾವಿನ ಪ್ರಮಾಣ ಕಡಿಮೆ ಕಂಡು ಬರುತ್ತಿದೆ. ಕಳೆದ ಸೆ.1ರಿಂದ ಸೆ.19ರವರೆಗೆ ನಗರದಲ್ಲಿ ಒಟ್ಟು 2.75 ಲಕ್ಷ ಮಂದಿಗೆ ಕೊರೋನಾ ಸೋಂಕು ಮಾಡಲಾಗಿದೆ. 64,103 ಮಂದಿಯಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿದ್ದು, ಬರೋಬ್ಬರಿ 660 ಮಂದಿ ಮೃತಪಟ್ಟಿದ್ದಾರೆ.
ಸೋಂಕಿತರ ಪತ್ತೆ ಹೆಚ್ಚಳ:
ಮಾರ್ಚ್‌ನಿಂದ ಸೆ.19ರವರೆಗೆ ಅಂಕಿ ಅಂಶದ ಪ್ರಕಾರ ನಗರದಲ್ಲಿ ಶೇ.13.97ರಷ್ಟು ಪ್ರಮಾಣದಲ್ಲಿ ಸೋಂಕಿತರು ಪತ್ತೆಯಾದರೆ, ಶೇ.1.37 ರಷ್ಟು ಮಂದಿ ಕೊರೋನಾ ಸೋಂಕಿಗೆ ಬಲಿಯಾಗುತ್ತಿದ್ದಾರೆ. ಆದರೆ, ಕಳೆದ 50 ದಿನಗಳ ಅಂಕಿ ಅಂಶ ಗಮನಿಸಿದರೆ ಸಾವಿನ ಪ್ರಮಾಣ ಶೇ.1.17 ರಷ್ಟು ಇದ್ದು, ಸೋಂಕಿತ ಪತ್ತೆ ಪ್ರಮಾಣ ಶೇ.20ರಷ್ಟಕ್ಕೆ ಏರಿಕೆಯಾಗಿರುವುದು ಆತಂಕ ಮೂಡಿಸಿದೆ.
ತಿಂಗಳು ಸೋಂಕಿತರ ಪತ್ತೆ(ಶೇ,) ಸಾವಿನ ಪ್ರಮಾಣ (ಶೇ.)
ಮಾ.8ರಿಂದ ಮೇ 31 1.17 3.11
ಜೂನ್ 6.91 1.69
ಜುಲೈ 24.15 1.85
ಆಗಸ್ಟ್ 13.45 1.27
ಸೆ.1-ಸೆ.19 23.30 1.02
ನಗರದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದಕ್ಕೆ ಆತಂಕ ಪಡಬೇಕಾಗಿಲ್ಲ. ಲಾಕ್‌ಡೌನ್ ಸಂದರ್ಭದಲ್ಲಿ ಅನುಸರಿಸುವ ಮುನ್ನೆಚ್ಚರಿಕಾ ಕ್ರಮಗಳಿಗಿಂತ ಹೆಚ್ಚಿನ ಎಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕಾಗಿದೆ ಎಂದು ರಾಜ್ಯ ಮತ್ತು ಬಿಬಿಎಂಪಿ ಕೋವಿಡ್ ಕಾರ್ಯಪಡೆಯ ತಜ್ಞ ಸಮಿತಿಯ ಸದಸ್ಯ ಡಾ.ಗಿರಿಧರ್ ಬಾಬು ಅವರು ತಿಳಿಸಿದ್ದಾರೆ.
ಲಾಕ್‌ಡೌನ್ ಸಂದರ್ಭದಲ್ಲಿ ಹೆಚ್ಚಿನ ಜನದಟ್ಟಣೆ ಇರುತ್ತಿರಲ್ಲ. ಹಾಗಾಗಿ, ಸೋಂಕಿತರ ಸಂಖ್ಯೆಕಡಿಮೆ ಇತ್ತು. ಆದರೀಗ ಸಂಪೂರ್ಣ ಅನ್‌ಲಾಕ್ ಆಗಿದೆ. ಸುರಕ್ಷತಾ ಕ್ರಮಗಳನ್ನು ಅನುಸರಿಸದ ಹಿನ್ನೆಲೆಯಲ್ಲಿ ಸೋಂಕಿತ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ ಪ್ರಸಾದ್ ಅವರು ತಿಳಿಸಿದ್ದಾರೆ.
146 ದಿನಗಳಲ್ಲಿ 55,000 ಕೇಸ್
ಮಾ.8ರಿಂದ ಜು.31ರ ವರೆಗೆ (146 ದಿನ) ನಗರದಲ್ಲಿ ಒಟ್ಟು 3,17,417 ಮಂದಿಯನ್ನು ಕೊರೋನಾ ಸೋಂಕು ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ಪೈಕಿ 55,544 ಮಂದಿಯಲ್ಲಿ ಕೊರೋನಾ ಸೋಂಕಿ ಪತ್ತೆಯಾಗಿ 1,029 ಮಂದಿ ಸೋಂಕಿಗೆ ಬಲಿಯಾಗಿದ್ದರು. ಈ ಅವಧಿಯಲ್ಲಿ ಕೊರೋನಾ ಸೋಂಕಿತರು ಪತ್ತೆ ಪ್ರಮಾಣ 17.5ರಷ್ಟು ಇತ್ತು. ಸಾವಿನ ಪ್ರಮಾಣ 1.85 ರಷ್ಟಿತ್ತು.
ಕೊರೋನಾದಿಂದ ಗುಣಮುಖ ಆದವರ ಸಂಖ್ಯೆ 1.5 ಲಕ್ಷಕ್ಕೇರಿಕೆ
ರಾಜಧಾನಿ ಬೆಂಗಳೂರಿನಲ್ಲಿ ಭಾನುವಾರ ಸೋಂಕಿನಿಂದ ಗುಣಮುಖರಾದ 2,970 ಮಂದಿಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದ್ದು, ಇದರೊಂದಿಗೆ ನಗರದಲ್ಲಿ ಇದುವರೆಗೆ ಗುಣಮುಖರಾದವರ ಒಟ್ಟು ಸಂಖ್ಯೆ 1.5 ಲಕ್ಷ ದಾಟಿದೆ.
ಭಾನುವಾರ ಒಂದೇ ದಿನ ನಗರದಲ್ಲಿ ಹೊಸದಾಗಿ 3,322 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಅಲ್ಲದೆ, 12 ವರ್ಷದ ಬಾಲಕ, 19 ವರ್ಷದ ಯುವತಿ ಸೇರಿದಂತೆ 32 ಮಂದಿ ಸೋಂಕಿತರು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಈ ಮಧ್ಯೆ ಭಾನುವಾರ ಸೋಂಕಿನಿಂದ ಗುಣಮುಖರಾದ 2,970 ಮಂದಿಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.
ಇದರೊಂದಿಗೆ ನಗರದಲ್ಲಿ ಇದುವರೆಗಿನ ಒಟ್ಟು ಸೋಂಕಿತರ ಸಂಖ್ಯೆ ಎರಡು ಲಕ್ಷದ ಗಡಿ ಸಮೀಪಿಸುತ್ತಿದ್ದು 1,94,760 ತಲುಪಿದೆ. ಈ ಪೈಕಿ ಇದುವರೆಗೆ ಒಟ್ಟು 1,50,348 ಮಂದಿ ಸೋಂಕಿನಿಂದ ಗುಣಮುಖರಾಗಿ ಮನೆಗೆ ಮರಳಿದ್ದಾರೆ. ಇನ್ನು ಇದುವರೆಗೆ ಕೋವಿಡ್‌ಗೆ ಬಲಿಯಾದವರ ಸಂಖ್ಯೆ 2657ಕ್ಕೆ ಏರಿದೆ. ಉಳಿದ 41,754 ಮಂದಿ ಸಕ್ರಿಯ ಸೋಂಕಿತರು ವಿವಿಧ ಆಸ್ಪತ್ರೆ, ಕೋವಿಡ್ ನಿಗಾ ಕೇಂದ್ರ ಹಾಗೂ ಹೋಂ ಐಸೋಲೇಷನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ 258 ಮಂದಿಯ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು ಅವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆರೋಗ್ಯ ಇಲಾಖೆಯ ವರದಿಯಲ್ಲಿ ತಿಳಿಸಲಾಗಿದೆ.