ಮಂಡ್ಯದ ಮಿಮ್ಸ್ ಆಸ್ಪತ್ರೆ ಬಿಲ್ಲಿಂಗ್ ಕೌಂಟರ್‌ನಲ್ಲಿ ₹1.20 ಲಕ್ಷ ಕಳ್ಳತನವಾಗಿರುವ ಪ್ರಕರಣ ತಡವಾಗಿ ವರದಿಯಾಗಿದೆ.

ಮಂಡ್ಯ: ಮಂಡ್ಯದ ಮಿಮ್ಸ್ ಆಸ್ಪತ್ರೆ ಬಿಲ್ಲಿಂಗ್ ಕೌಂಟರ್‌ನಲ್ಲಿ ₹1.20 ಲಕ್ಷ ಕಳ್ಳತನವಾಗಿರುವ ಪ್ರಕರಣ ತಡವಾಗಿ ವರದಿಯಾಗಿದೆ.

ಕಳೆದ ಶುಕ್ರವಾರ ರಾತ್ರಿ ಪಾಳಿಯಲ್ಲಿ ಭದ್ರತಾ ಸಿಬ್ಬಂದಿ ಕಾರ್ತಿಕ್ ಮತ್ತು ರಕ್ಷಿತ್ ಕೌಂಟರ್‌ನಲ್ಲಿ ಕೆಲಸ ಮಾಡುತ್ತಿದ್ದರು. ತಡರಾತ್ರಿಯಾಗಿದ್ದ ವೇಳೆ ಒಬ್ಬರು ವಿಶ್ರಾಂತಿಗೆ ತೆರಳಿದ್ದಾರೆ. ಮತ್ತೋರ್ವ ಸಿಬ್ಬಂದಿ ಶೌಚಾಲಯಕ್ಕೆ ತೆರಳಿದಾಗ ಮುಖಕ್ಕೆ ಬಟ್ಟಿಕಟ್ಟಿಕೊಂಡು ಬಂದ ವ್ಯಕ್ತಿ ಬಿಲಿಂಗ್ ಕೌಂಟರ್ ಪ್ರವೇಶಿಸಿ ಅಲ್ಲಿದ್ದ ₹1.20 ಲಕ್ಷ ಹಣವನ್ನು ದೋಚಿ ಪರಾರಿಯಾಗಿದ್ದಾನೆ. ಮುಖಕ್ಕೆ ಬಟ್ಟಿ ಕಟ್ಟಿಕೊಂಡಿದ್ದ ವ್ಯಕ್ತಿ ಹಣ ದೋಚಿದ್ದ ದೃಶ್ಯಾವಳಿಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಮಂಡ್ಯ ವೈದ್ಯಕೀಯ ಕಾಲೇಜಿನ ಭದ್ರತಾ ಸಿಬ್ಬಂದಿ ಸೇವೆಯನ್ನು ಕೆ.ಎಸ್.ಎಫ್-9 ಏಜೆನ್ಸಿ ನೀಡಿದ್ದು, ಮುದ್ದನಘಟ್ಟ ಮಹಾಲಿಂಗೇಗೌಡ ಎಂಬುವರು ಟೆಂಡರ್ ಪಡೆದಿದ್ದಾರೆ. ರಾತ್ರಿ ಪಾಳಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸಿಬ್ಬಂದಿ ಶೌಚಾಲಯಕ್ಕೆ ತೆರಳಿದ್ದ ವೇಳೆ ಕಾದು ಕುಳಿತಿದ್ದ ಅಪರಿಚಿತ ವ್ಯಕ್ತಿ ಈ ದುಷ್ಕೃತ್ಯ ಎಸಗಿ ಪರಾರಿಯಾಗಿದ್ದಾನೆ.

ಈ ಸಂಬಂಧ ಪೂರ್ವ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸ್ಥಳಕ್ಕೆ ಉನ್ನತ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಅವ್ಯವಸ್ಥೆ ಆಗರ ಮಂಡ್ಯ ಮಿಮ್ಸ್

ಮಂಡ್ಯ : ಕೊರೋನಾ ಸಮಯದಲ್ಲಿ ಕೊಟ್ಟಹಾಸಿಗೆಗಳು ಹೆಗ್ಗಣಗಳ ಪಾಲು. ಹೆರಿಗೆ ವಾರ್ಡ್‌ನೊಳಗಿರುವವರ ಗೋಳು ಕೇಳೋರಿಲ್ಲ. ಎಂಆರ್‌ಐ ಸ್ಕಾ್ಯನಿಂಗ್‌ ರಿಪೋರ್ಚ್‌ ಸಕಾಲಕ್ಕೆ ಸಿಗುತ್ತಿಲ್ಲ, ಬಡವರಿಗೆ ಐಸಿಯು ಬೆಡ್‌ ಕೊಡುತ್ತಿಲ್ಲ, ಔಷಧಗಳನ್ನು ಹೊರಗೆ ಬರೆದುಕೊಡುವುದಾದರೆ ಆಸ್ಪತ್ರೆಯೊಳಗಿನ ಔಷಧಗಳು ವ್ಯರ್ಥವೇ? - ಹೀಗೆ ನಗರಸಭಾ ಸದಸ್ಯರಿಂದ ನೂರೆಂಟು ಪ್ರಶ್ನೆಗಳು ಮಿಮ್ಸ್‌ ಆಸ್ಪತ್ರೆ ಆರ್‌ಎಂಒ ಡಾ.ವೆಂಕಟೇಶ್‌ ಕಡೆ ತೂರಿಬಂದವು. ರೋಗಿಗಳಿಗೆ ಆಸ್ಪತ್ರೆಯಿಂದ ತೃಪ್ತಿದಾಯಕ ಸೇವೆ ದೊರೆಯದಿರುವುದನ್ನು ಒಪ್ಪಿಕೊಂಡು ಕೊರತೆಗಳನ್ನು ವಿವರಿಸುತ್ತಾ ತಮ್ಮ ಅಸಹಾಯಕತೆ ವ್ಯಕ್ತಪಡಿಸಿದರು.

ಮಂಗಳವಾರ ನಗರಸಭೆಯ ಧರಣಪ್ಪ ಸಭಾಂಗಣದಲ್ಲಿ ಅಧ್ಯಕ್ಷ ಹೆಚ್‌.ಎಸ್‌.ಮಂಜು ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯಸಭೆಯಲ್ಲಿ ಸದಸ್ಯ ಶ್ರೀಧರ್‌ ಜಿಲ್ಲಾಸ್ಪತ್ರೆಯೊಳಗಿನ ಲೋಪ-ದೋಷಗಳನ್ನು ವಿವರಿಸಿದರು. ಇದಕ್ಕೆ ಉತ್ತರಿಸಿದ ಆರ್‌ಎಂಒ ವೆಂಕಟೇಶ್‌, ಆಸ್ಪತ್ರೆಯಲ್ಲಿ ವೈದ್ಯರು, ದಾದಿಯರ ಕೊರತೆ ಬಹಳಷ್ಟಿದೆ. 280 ಶೌಚಾಲಯಗಳಿಗೆ 16 ಜನರಷ್ಟೇ ಸ್ವಚ್ಛತಾ ನೌಕರರಿದ್ದಾರೆ. 120 ನಾನ್‌ ಕ್ಲಿನಿಕಲ್‌ ಸಿಬ್ಬಂದಿ ನೇಮಕಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ ಎಂದು ಹೇಳಿದರು.

ಹೆರಿಟೇಜ್‌ ಕಟ್ಟಡ ದುರಸ್ತಿಗೆ 1.17 ಕೋಟಿ ರು.:

ಮಳೆ ಬಂದರೆ ಹೆರಿಗೆ ವಾರ್ಡ್‌ನೊಳಗೆ ನೀರು ತುಂಬಿಕೊಳ್ಳುತ್ತದೆ. ಅಲ್ಲಿನ ಗರ್ಭಿಣಿಯರು, ಬಾಣಂತಿಯರ ಗತಿ ಏನು. ಈ ವ್ಯವಸ್ಥೆ ಸರಿಪಡಿಸುವಂತೆ ಹಿಂದೆ ಇದ್ದ ಮಿಮ್ಸ್‌ ನಿರ್ದೇಶಕರಿಗೂ ಪತ್ರ ಮೂಲಕ ತಿಳಿಸಿದ್ದೆ. ಇದುವರೆಗೂ ಕ್ರಮ ವಹಿಸಿಲ್ಲ ಎಂದು ಸದಸ್ಯೆ ಸೌಭಾಗ್ಯ ದನಿ ಎತ್ತಿದರು.

ಹೆರಿಗೆ ವಾರ್ಡ್‌ನಲ್ಲಿರುವುದೇ 18 ಬೆಡ್‌ಗಳು. ದಿನಕ್ಕೆ 25 ಹೆರಿಗೆಗಳಾಗುತ್ತವೆ. ಅನಿವಾರ್ಯ ಸಂದರ್ಭದಲ್ಲಷ್ಟೇ ಇಬ್ಬಿಬ್ಬರನ್ನು ಒಂದು ಹಾಸಿಗೆ ಮೇಲೆ ಮಲಗಿಸಲಾಗುತ್ತದೆ. ಉಳಿದಂತೆ ಬೇರಡೆ ಹಾಸಿಗೆ ಕೊಟ್ಟು ಅನುಕೂಲ ಮಾಡಿಕೊಡಲಾಗುತ್ತಿದೆ ಎಂದು ಡಾ.ವೆಂಕಟೇಶ್‌ ಸಮಜಾಯಿಷಿ ನೀಡಿದರು.

ಹೆರಿಗೆ ವಾರ್ಡ್‌ ಇರುವ ಕಲ್ಲು ಕಟ್ಟಡ ಪಾರಂಪರಿಕ ಕಟ್ಟಡವಾಗಿದೆ. ಇದನ್ನು ದುರಸ್ತಿಪಡಿಸಲು ನಿರ್ಮಿತಿ ಕೇಂದ್ರದ ಮೂಲಕ 1.17 ಕೋಟಿ ರು. ವೆಚ್ಚದ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳುಹಿಸಲಾಗಿದೆ. ಸರ್ಕಾರದ ಮಂಜೂರಾತಿ ದೊರಕಿದ ಕೂಡಲೇ ದುರಸ್ತಿಗೆ ಕ್ರಮ ವಹಿಸಲಾಗುವುದು. ಮುಂದಿನ ಮಳೆಗಾಲದ ವೇಳೆಗೆ ಕಟ್ಟಡವನ್ನು ಸುಸ್ಥಿತಿಗೆ ತರಲಾಗುವುದು ಎಂದು ಡಾ.ವೆಂಕಟೇಶ್‌ ಉತ್ತರಿಸಿದರು