ಶ್ರೀಕಾಂತ್ ಎನ್.ಗೌಡಸಂದ್ರ, ಕನ್ನಡಪ್ರಭ 
ಬೆಂಗಳೂರು[ಮೇ.09]: ಬೆಂಗಳೂರಿನ ದೇವಸ್ಥಾನಗಳ ಬಡಾವಣೆ ಎಂದೇ ಪ್ರಸಿದ್ಧಿ ಪಡೆದಿರುವ ಕ್ಷೇತ್ರ ‘ಮಹಾಲಕ್ಷ್ಮೀ ಲೇಔಟ್’. ಸುಪ್ರಸಿದ್ಧ ಏಕಶಿಲಾ ಹನುಮ ದೇವಸ್ಥಾನ, ಇಸ್ಕಾನ್ ದೇವಸ್ಥಾನ ಸೇರಿದಂತೆ 20ಕ್ಕೂ ಹೆಚ್ಚು ಪ್ರಮುಖ ದೇವಾಲಯಗಳ ತವರು. ‘ಅವಳಿ ಬಡಾವಣೆ’, ‘ದೇವಾಲಯಗಳ ಬಡಾವಣೆ’, ‘ಬೆಟ್ಟಗಳ ಬಡಾವಣೆ’ ಎಂಬ ಹಲವು ಉಪಮೇಯಗಳನ್ನೂ ಹೊತ್ತಿರುವ ಕ್ಷೇತ್ರ. ಬೆಟ್ಟಗುಡ್ಡಗಳ ನಡುವೆ ಅರಳಿದ ನಗರದ ಅತಿದೊಡ್ಡ ಬಡಾವಣೆ ಎಂದು ಹೆಸರು ಪಡೆದಿರುವ ‘ಲೇಔಟ್ ಆಫ್ ಹಿಲ್ಸ್’ನಲ್ಲಿ ಮೂಲಸೌಕರ್ಯ ಸಮಸ್ಯೆಗೆ ಕೊರತೆಯಿಲ್ಲ.
ವರನಟ ಡಾ.ರಾಜ್‌ಕುಮಾರ್ ಸಮಾಧಿ ಸ್ಥಳ ಹೊಂದಿರುವ ಪುಣ್ಯ ಕ್ಷೇತ್ರವಾಗಿರುವ ಇಲ್ಲಿ ಕಂಠೀರವ ಸ್ಟುಡಿಯೋ, ಸುಂದರ ಉದ್ಯಾನಗಳೂ ಕೂಡ ಇವೆ. ಇಂತಹ ‘ಟೆಂಪಲ್ ಲೇಔಟ್’ನಲ್ಲಿ’ ರಾಜಕೀಯ ಕಣ ರಂಗೇರಿದ್ದು ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಅಭ್ಯರ್ಥಿಗಳ ನಡುವೆ ‘ಟೆಂಪಲ್ ರನ್’ ರೇಸ್ ಶುರುವಾಗಿದೆ.
ಜೆಡಿಎಸ್‌’ನಿಂದ ಹಾಲಿ ಶಾಸಕ ಕೆ. ಗೋಪಾಲಯ್ಯ ಮತ್ತೊಮ್ಮೆ ಕಣದಲ್ಲಿದ್ದಾರೆ. ಕಳೆದ ಬಾರಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಸೋತಿದ್ದ ಮಾಜಿ ಶಾಸಕ ನೆ.ಲ. ನರೇಂದ್ರಬಾಬು ಈ ಬಾರಿ ಬಿಜೆಪಿ
ಅಭ್ಯರ್ಥಿ. ಕಾಂಗ್ರೆಸ್‌ನಿಂದ ಎನ್‌’ಎಸ್‌’ಯುಐ ರಾಜ್ಯಾಧ್ಯಕ್ಷ ಎಚ್.ಎಸ್. ಮಂಜುನಾಥ್ ಕೊನೆಯ ಹಂತದಲ್ಲಿ ಟಿಕೆಟ್ ಗಿಟ್ಟಿಸಿದ್ದಾರೆ. 2.90 ಲಕ್ಷ ಮತದಾರರನ್ನು ಹೊಂದಿರುವ ಕ್ಷೇತ್ರದಲ್ಲಿ ಒಕ್ಕಲಿಗ ಹಾಗೂ ಹಿಂದುಳಿದ ವರ್ಗಗಳ ಮತಗಳು ನಿರ್ಣಾಯಕ. 55 ಸಾವಿರ ಒಕ್ಕಲಿಗ, 45 ಸಾವಿರ ಎಸ್‌’ಸಿ-ಎಸ್‌’ಟಿ, 80 ಸಾವಿರ ಹಿಂದುಳಿದ ವರ್ಗ, 18 ಸಾವಿರ ಮುಸ್ಲಿಂ ಮತ ಇದೆ.
ಒಕ್ಕಲಿಗರು ನಿರ್ಣಾಯಕ ಎಂಬ ಕಾರಣಕ್ಕೆ ಜೆಡಿಎಸ್ ಹಾಗೂ ಕಾಂಗ್ರೆಸ್ ಒಕ್ಕಲಿಗ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. ಬಿಜೆಪಿ ತಿಗಳ ಸಮುದಾಯದ ನೆ.ಲ. ನರೇಂದ್ರಬಾಬು ಅವರಿಗೆ ಟಿಕೆಟ್ ನೀಡಿದೆ.
2008ರಲ್ಲಿ ಕಾಂಗ್ರೆಸ್‌’ನಿಂದ ನೆ.ಲ. ನರೇಂದ್ರ ಬಾಬು 2900 ಮತಗಳ ಅಂತರದಿಂದ ಜಯ ಗಳಿಸಿದ್ದರು. ಈ ವೇಳೆ ಮೂರನೇ ಸ್ಥಳಕ್ಕೆ ದೂಡಲ್ಪಟ್ಟಿದ್ದ ಕೆ. ಗೋಪಾಲಯ್ಯ 2013ರ ಚುನಾವಣೆಯಲ್ಲಿ 16 ಸಾವಿರ ಮತಗಳ ಅಂತರದಿಂದ ಗೆದ್ದರು. ಶಾಸಕರಾಗಿ ಆಯ್ಕೆಯಾದ ಬಳಿಕ 2015ರ ಪಾಲಿಕೆ ಚುನಾವಣೆಯಲ್ಲಿ ಪತ್ನಿ ಹೇಮಲತಾ ಗೋಪಾಲಯ್ಯರನ್ನು ಕಣಕ್ಕಿಳಿಸಿ ಗೆಲ್ಲಿಸಿಕೊಂಡು ಉಪಮೇಯರ್ ಆಗಿಯೂ ಮಾಡಿದರು. ಅಲ್ಲದೆ, ಕ್ಷೇತ್ರದಲ್ಲಿರುವ ಏಳು ವಾರ್ಡ್‌ಗಳ ಪೈಕಿ ನಾಲ್ಕು ಮಂದಿ ಜೆಡಿಎಸ್ ಸದಸ್ಯರನ್ನು ಗೆಲ್ಲಿಸಿಕೊಳ್ಳುವ ಮೂಲಕ ಕ್ಷೇತ್ರದ ಮೇಲೆ ಪ್ರಭುತ್ವ ಸಾಧಿಸಿ ಈ ಬಾರಿಯೂ ಗೆಲುವಿನ ವಿಶ್ವಾಸದಲ್ಲಿದ್ದಾರೆ. ಜತೆಗೆ ಕ್ಷೇತ್ರದಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳನ್ನು ಇಟ್ಟುಕೊಂಡು ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ.
ಕೆ.ಗೋಪಾಲಯ್ಯ ಗೆಲುವಿಗೆ ತಡೆ ಹಾಕಲು ಕಾಂಗ್ರೆಸ್ ಪಕ್ಷವು ಎನ್‌’ಎಸ್‌’ಯುಐ ರಾಜ್ಯಾಧ್ಯಕ್ಷ ಹಾಗೂ ಯುವನಾಯಕ ಎಚ್.ಎಸ್. ಮಂಜುನಾಥ್ ಅವರನ್ನು ಕಣಕ್ಕಿಳಿಸಿದೆ. ತಮ್ಮ ಅನುಯಾಯಿಗೆ ಟಿಕೆಟ್ ಕೊಡಿಸಿರುವ ಡಿ.ಕೆ. ಶಿವಕುಮಾರ್ ಸಹೋದರ ಡಿ.ಕೆ. ಸುರೇಶ್‌’ಗೆ ಕ್ಷೇತ್ರದ ಉಸ್ತುವಾರಿ ವಹಿಸಿ ಗೆಲ್ಲಿಸಿಕೊಂಡು ಬರುವಂತೆ ಸೂಚನೆ ನೀಡಿದ್ದಾರೆ. ಇದು 27 ವರ್ಷದ
ಯುವಕ ಮಂಜುನಾಥ್ ಬಲ ಹೆಚ್ಚಿಸಿದೆ. ಎಚ್.ಎಸ್. ಮಂಜುನಾಥ್ ಬಿರುಸಿನ ಪ್ರಚಾರದ ಮೂಲಕ ಜನರ ಜತೆ ಬೆರೆಯುವ ಮೂಲಕ ಜೆಡಿಎಸ್‌’ಗೆ ಪೈಪೋಟಿ ನೀಡುತ್ತಿದ್ದಾರೆ.
ಇನ್ನು ಮೋದಿ ಅಲೆ ಹಾಗೂ ಕ್ಷೇತ್ರದಲ್ಲಿ ಒಮ್ಮೆ ಸೇರಿದಂತೆ ಎರಡು ಬಾರಿ ಶಾಸಕ ಹಾಗೂ ಪಾಲಿಕೆ ಸದಸ್ಯರಾಗಿ ಅನುಭವವುಳ್ಳ ನೆ.ಲ. ನರೇಂದ್ರಬಾಬು ಬಿಜೆಪಿಯಿಂದ ಕಣಕ್ಕಿಳಿದಿದ್ದಾರೆ. 2004ರಲ್ಲಿ ರಾಜಾಜಿನಗರದಿಂದ ಕಾಂಗ್ರೆಸ್ ಶಾಸಕರಾಗಿದ್ದ ಅವರು, 2008ರಲ್ಲಿ ಮಹಾಲಕ್ಷ್ಮೀ ಬಡಾವಣೆಯಿಂದ ಶಾಸಕರಾಗಿದ್ದರು. 2013ರಲ್ಲಿ ಕೆ. ಗೋಪಾಲಯ್ಯ ವಿರುದ್ಧ ಸೋತ ಬಳಿಕ ಬಿಜೆಪಿಗೆ ಸೇರ್ಪಡೆಗೊಂಡರು. ಅಲ್ಲದೆ, ಕೊನೆ ಕ್ಷಣದಲ್ಲಿ ಟಿಕೆಟ್ ರೇಸ್‌ನಲ್ಲಿದ್ದ ಎಂ.ನಾಗರಾಜ್, ಎಸ್. ಹರೀಶ್ ಹಿಂದಿಕ್ಕಿ ಟಿಕೆಟ್ ಪಡೆದರು. ಇದು ಪಕ್ಷದಲ್ಲೇ ಬಂಡಾಯ ಸೃಷ್ಟಿಗೆ ನಾಂದಿ ಹಾಡಿದೆ. ಟಿಕೆಟ್ ಆಕಾಂಕ್ಷಿಯಾಗಿದ್ದ ಬಿಬಿಎಂಪಿ ವಿರೋಧ ಪಕ್ಷದ ಮಾಜಿ ನಾಯಕ ಎಂ.ನಾಗರಾಜ್ ಅವಕಾಶ ಕಸಿದುಕೊಂಡಿದ್ದಕ್ಕೆ, ಮಾಜಿ ಉಪಮೇಯರ್ ಎಸ್.ಹರೀಶ್ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದಾರೆ. ಹಿರಿಯ ನಾಯಕರು ಬಂದು ತೇಪೆ ಹಚ್ಚುವ ಕೆಲಸ ಮಾಡಿದ್ದರೂ ನಾಗರಾಜ್, ಹರೀಶ್ ಪ್ರಚಾರದಲ್ಲಿ ಕಾಣಿಸಿಕೊಳ್ಳದಿರುವುದು ಹಾಗೂ ನೆ.ಲ. ನರೇಂದ್ರಬಾಬು ಕ್ಷೇತ್ರದಲ್ಲಿ ಹಿಡಿತ ಕಳೆದುಕೊಂಡಿರುವುದು ತೀವ್ರಹಿನ್ನಡೆ ಉಂಟು ಮಾಡಿದೆ. ಹೀಗಾಗಿ ಈ ಕ್ಷೇತ್ರದಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ನಡುವೆ ನೇರ ಹಣಾಹಣಿ ಕಂಡು ಬರುತ್ತಿದೆ.
ಪ್ಲಸ್ - ಮೈನಸ್ 
* ಕೆ. ಗೋಪಾಲಯ್ಯ ಕ್ಷೇತ್ರದ ಜನರೊಂದಿಗೆ ಹೊಂದಿರುವ ಉತ್ತಮ ಸಂಪರ್ಕ ಹಾಗೂ ಅಭಿವೃದ್ಧಿ ಕಾರ್ಯ ಕೈ ಹಿಡಿಯುವ ಸಾಧ್ಯತೆ ಇದೆ. ಜತೆಗೆ ಒಕ್ಕಲಿಗ ಸಮುದಾಯ ಹಾಗೂ ಪಕ್ಷದ ನಾಲ್ಕು ಪಾಲಿಕೆ ಸದಸ್ಯರಿರುವುದು ಪೂರಕ ವಾತಾವರಣ ಸೃಷ್ಟಿಸಿದೆ. ಆದರೆ, ಕಾಂಗ್ರೆಸ್‌ನಿಂದಲೂ ಒಕ್ಕಲಿಗ ಸಮುದಾಯದ ಅಭ್ಯರ್ಥಿಯೇ ಕಣದಲ್ಲಿರುವುದರಿಂದ ಮತ ವಿಭಜನೆಯಾದರೆ ಬಿಜೆಪಿಗೆ ಲಾಭವಾಗಬಹುದು.
* ಮಂಜುನಾಥ್ ಎನ್‌ಎಸ್‌’ಯುಐ ಅಧ್ಯಕ್ಷರಾಗಿದ್ದು ಹಾಗೂ ಡಿಕೆ ಶಿವಕುಮಾರ್, ಡಿಕೆ ಸುರೇಶ್ ಬೆಂಬಲವಾಗಿ ನಿಂತಿರುವುದು ಗೆಲುವಿನ ವಿಶ್ವಾಸ ಮೂಡಿಸಿದೆ. ಆದರೆ, ಗೋಪಾಲಯ್ಯ ಪ್ರಭುತ್ವ ಸಾಧಿಸಿರುವುದು ಸಮಸ್ಯೆಯಾಗಬಹುದು.
 

ಒಟ್ಟು ಮತದಾರರು
2,92,332
ಪುರುಷ ಮತದಾರರು
1,51,006
ಮಹಿಳಾ ಮತದಾರರು
1,41,274
ಇತರೆ
52