ದಯಾಶಂಕರ ಮೈಲಿ

ಹಾಸನ :  ಈ ಬಾರಿಯ ಚುನಾವಣೆಯಲ್ಲಿ ರಾಜ್ಯದ ಗಮನಸೆಳೆದಿರುವ ಪ್ರಮುಖ ಕ್ಷೇತ್ರಗಳಲ್ಲಿ ಹಾಸನ ಜಿಲ್ಲೆಯ ಹೊಳೆನರಸೀಪುರವೂ ಒಂದು. ಇದಕ್ಕೆ ಕಾರಣ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರ ಪುತ್ರ, ಜೆಡಿಎಸ್‌ನ ‘ತೆರೆಮರೆಯ ಹೈಕಮಾಂಡ್‌’ ಎಚ್‌.ಡಿ. ರೇವಣ್ಣ ಸ್ಪರ್ಧೆ. ಈ ಕ್ಷೇತ್ರ ಮಾತ್ರವಲ್ಲದೆ, ಜಿಲ್ಲೆಯ ಸಮಸ್ತ ನರನಾಡಿಯನ್ನೂ ಬಲ್ಲ ರೇವಣ್ಣನವರು ಇದೀಗ 6ನೇ ಬಾರಿ ಅಖಾಡಕ್ಕೆ ಇಳಿದಿದ್ದಾರೆ. ಅವರ ಎದುರಾಳಿಯಾಗಿರುವವರು ರಾಜ್ಯ ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಬಾಗೂರು ಮಂಜೇಗೌಡ.

2008ರ ಕ್ಷೇತ್ರ ಮರುವಿಂಗಡಣೆ ಬಳಿಕ ರೇವಣ್ಣ ಪಾಲಿಗೆ ಒಂದು ರೀತಿ ‘ವೈದ್ಯ ಹೇಳಿದ್ದೂ ಹಾಲು ಅನ್ನ, ರೋಗಿ ಬಯಸಿದ್ದೂ ಹಾಲು ಅನ್ನ’ ಎಂಬಂತಾಗಿದೆ. ಒಕ್ಕಲಿಗರು ಅಧಿಕವಾಗಿರುವ ದುದ್ದ ಹಾಗೂ ಶಾಂತಿ ಗ್ರಾಮ ಹೋಬಳಿಗಳು ಹೊಳೆನರಸೀಪುರಕ್ಕೆ ಸೇರ್ಪಡೆಯಾಗಿದ್ದರೆ, ಕುರುಬ ಹಾಗೂ ವೀರಶೈವ ಸಮಾಜದವರು ಹೆಚ್ಚಿರುವ ಹಳ್ಳಿ ಮೈಸೂರು ಹೋಬಳಿ ಅರಕಲಗೂಡಿಗೆ ಸ್ಥಳಾಂತರಗೊಂಡು ರೇವಣ್ಣಗೆ ಅನುಕೂಲವಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತರೂ ಆಗಿರುವ ಬಾಗೂರು ಮಂಜೇಗೌಡರನ್ನು ಕಣಕ್ಕಿಳಿಸುವ ಸಲುವಾಗಿ ಕಳೆದ ಬಾರಿ ರೇವಣ್ಣ ಅವರಿಗೆ ಉತ್ತಮ ಪೈಪೋಟಿ ನೀಡಿದ್ದ ಮಾಜಿ ಸಚಿವ ದಿ. ಜಿ. ಪುಟಸ್ವಾಮಿಗೌಡರ ಸೊಸೆ ಜಿ. ಅನುಪಮಾ ಅವರಿಗೆ ಕಾಂಗ್ರೆಸ್‌ ಟಿಕೆಟ್‌ ನಿರಾಕರಿಸಿದೆ. ಈ ನಿರ್ಧಾರದ ಬಗ್ಗೆ ಆರಂಭದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದ ಅನುಪಮಾ, ಈಗ ಪಕ್ಷದ ಅಭ್ಯರ್ಥಿ ಪರ ಪ್ರಚಾರ ಮಾಡುವುದಾಗಿ ಹೇಳಿರುವುದರಿಂದ ಮಂಜೇಗೌಡರು ಕೊಂಚ ನಿಟ್ಟುಸಿರು ಬಿಡುವಂತಾಗಿದೆ. ಮೂಲತಃ ಚನ್ನರಾಯಪಟ್ಟಣ ತಾಲೂಕಿನವರಾದ ಮಂಜೇಗೌಡರಿಗೆ ಇದು ಪ್ರಥಮ ಚುನಾವಣೆ. ಹಾಸನ ಜಿಲ್ಲೆಯವರಾದರೂ ಹೊಳೆನರಸೀಪುರ ಕ್ಷೇತ್ರಕ್ಕೆ ಮಾತ್ರ ಅವರು ಅಚ್ಚ ಹೊಸ ಮುಖ. ಹಾಗಾಗಿ ಇಡೀ ಹೊಳೆನರಸೀಪುರ ಕ್ಷೇತ್ರವನ್ನು ಕಡಿಮೆ ದಿನಗಳಲ್ಲಿ ಪರಿಚಯಿಸಿಕೊಂಡು ಪ್ರಚಾರ ಮಾಡುವುದು ಅವರ ಪಾಲಿಗೆ ಒಂದು ರೀತಿ ಸವಾಲು.

ಬೇಗ ಟಿಕೆಟ್‌ ಸಿಕ್ಕಿದ್ದಿದ್ದರೆ...

ಮಂಜೇಗೌಡರಿಗೆ ಕಾಂಗ್ರೆಸ್‌ ಟಿಕೆಟ್‌ ಬೇಗ ನೀಡಲು ಅನೇಕ ಅಡಚಣೆಗಳು ಎದುರಾದವು. ಲೋಕಾಯುಕ್ತದಲ್ಲಿ ಭ್ರಷ್ಟಾಚಾರ ಪ್ರಕರಣವೊಂದರ ಸಂಬಂಧ ವಿಚಾರಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಅವರ ರಾಜೀನಾಮೆ ಅಂಗೀಕಾರವಾಗುವುದು ವಿಳಂಬವಾಯಿತು. ಇಲ್ಲದಿದ್ದರೆ ಪ್ರಚಾರ ಮಾಡಲು ಹೆಚ್ಚಿನ ಅವಧಿ ಸಿಗುತ್ತಿತ್ತು. ಸದ್ಯದ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ, ಈ ಚುನಾವಣೆಯಲ್ಲಿ ಒಕ್ಕಲಿಗರು ಜೆಡಿಎಸ್‌ಗಿಂತ ಹೆಚ್ಚಾಗಿ ಮಾಜಿ ಪ್ರಧಾನಿ ದೇವೇಗೌಡರ ಪರವಾಗಿ ಒಗ್ಗೂಡಿದಂತೆ ಕಾಣುತ್ತಿದೆ. ಹೀಗಾಗಿ ರೇವಣ್ಣ ಅವರನ್ನು ಸೋಲಿಸುವುದು ಕಾಂಗ್ರೆಸ್‌ಗೆ ಕಬ್ಬಿಣದ ಕಡಲೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.

ಇಲ್ಲಿ ಬಿಜೆಪಿ ಅಭ್ಯರ್ಥಿ ರಾಜುಗೌಡರು ಪಿಚ್‌ಗೆ ಬಂದು ಉತ್ತಮ ಪ್ರದರ್ಶನ ನೀಡುವಂತೆ ಕಾಣುತ್ತಿಲ್ಲ. ಹಾಗಾಗಿ ರೇವಣ್ಣ ಮತ್ತು ಬಾಗೂರು ಮಂಜೇಗೌಡರ ನಡುವೆಯೇ ನೇರ ಹಣಾಹಣಿ ನಿಶ್ಚಿತ ಎಂಬಂತಾಗಿದೆ. ಮತ್ತೊಂದೆಡೆ ಬಾಗೂರು ಮಂಜೇಗೌಡರ ಪ್ರಭಾವಕ್ಕಿಂತ ಕಾಂಗ್ರೆಸ್‌ ಪ್ರಭಾವ ಹೆಚ್ಚು. ಆದ್ದರಿಂದ ಮಂಜೇಗೌಡರಿಗೆ ಕಾಂಗ್ರೆಸ್‌ ಎಂಬುದೇ ಶ್ರೀರಕ್ಷೆ ಮತ್ತು ಬೆನ್ನೆಲುಬು.

ಕಾಂಗ್ರೆಸ್ಸೊಳಗೇ ಒಳೇಟು?:

ಅಲ್ಲದೆ 2008 ಮತ್ತು 2013ರ ಚುನಾವಣೆಯಲ್ಲಿ 63 ಸಾವಿರ ಮತಗಳನ್ನು ಪಡೆದಿದ್ದ ಅನುಪಮಾ ಮೇಲ್ನೋಟಕ್ಕೆ ಪಕ್ಷದ ಪರ ಪ್ರಚಾರ ಮಾಡುವುದಾಗಿ ಹೇಳಿರಬಹುದು. ಆದರೆ ಅವರ ಬೆಂಬಲಿಗರು ಎಷ್ಟರ ಮಟ್ಟಿಗೆ ಬದ್ಧತೆಯಿಂದ ಮಂಜೇಗೌಡ ಪರ ಕೆಲಸ ಮಾಡುತ್ತಾರೆ ಎಂಬುದು ಅತ್ಯಂತ ಗೌಪ್ಯವಾಗಿದೆ. ಒಂದು ವೇಳೆ ಅವರು ಒಳ ಏಟು ನೀಡಿದರೆ ಮಂಜೇಗೌಡರು ರೇವಣ್ಣ ಅವರನ್ನು ಮಣಿಸಲು ಹರಸಾಹಸವನ್ನೇ ಮಾಡಬೇಕಾಗುತ್ತದೆ. ಆರ್ಥಿಕವಾಗಿ ಬಲಾಢ್ಯವಾಗಿರುವ ಮಂಜೇಗೌಡರು ಈಗಾಗಲೇ ನಿರೀಕ್ಷೆಗಿಂತ ಹೆಚ್ಚಾಗಿಯೇ ಪ್ರಚಾರದಲ್ಲಿ ತೊಡಗಿದ್ದಾರೆ. ಇದು ಎಷ್ಟರ ಮಟ್ಟಿಗೆ ಮತಗಳನ್ನು ತಂದುಕೊಡುತ್ತದೆ ಎಂಬುದು ಕೂಡ ಮಂಜೇಗೌಡರ ಎಷ್ಟರ ಮಟ್ಟಿಗೆ ಹೋರಾಟ ನೀಡುತ್ತಾರೆ ಎಂದು ನಿರ್ಧರಿತವಾಗುತ್ತದೆ.

ಅಭಿವೃದ್ಧಿ ವಿಷಯ ನಾಸ್ತಿ:

‘ಹೊಳೆನರಸೀಪುರ ಕ್ಷೇತ್ರದಲ್ಲಿ ಜನರಿಗೆ ಸ್ವಾತಂತ್ರ್ಯವಿಲ್ಲ’ ಎಂದು ಈಗಾಗಲೇ ಬಾಗೂರು ಮಂಜೇಗೌಡರು ರೇವಣ್ಣ ವಿರುದ್ಧ ಹರಿಹಾಯ್ದಿದ್ದರೆ, ‘ಮಂಜೇಗೌಡ ವಿರುದ್ಧ ಭ್ರಷ್ಟಾಚಾರ ಪ್ರಕರಣಗಳಿದ್ದು, ಅವರ ಸಹೋದರು ಹವಾಲಾ ಹಣ ತಂದು ಹಂಚುತ್ತಿದ್ದಾರೆ. ಈ ಬಗ್ಗೆ ಸಿಬಿಐ ತನಿಖೆಯನ್ನೇ ನಡೆಸಬೇಕು’ ಎಂದು ಮಂಜೇಗೌಡರ ವಿರುದ್ಧ ರೇವಣ್ಣ ತೀವ್ರತರನಾಗಿ ಟೀಕೆ ಮಾಡುತ್ತಿದ್ದಾರೆ. ಇಬ್ಬರ ನಡುವೆ ಟೀಕೆ, ಟಿಪ್ಪಣೆ, ಆರೋಪ-ಪ್ರತ್ಯಾರೋಪಗಳ ಸುರಿಮಳೆ ಸುರಿಯುತ್ತಿದೆ. ಅಭಿವೃದ್ಧಿ ವಿಷಯ ಮಾತ್ರ ಇಲ್ಲಿ ಗೌಣವಾಗಿದ್ದು ವೈಯಕ್ತಿಕ ನೆಲೆಗಟ್ಟಿನಲ್ಲೇ ಟೀಕೆಗಳು ನಡೆಯುತ್ತಿವೆ.

ನಾಲ್ಕು ಬಾರಿ ಗೆದ್ದು, ಒಂದು ಬಾರಿ ಸೋತಿರುವ ರೇವಣ್ಣನವರು ಕ್ಷೇತ್ರದ ಒಳ ಮತ್ತು ಹೊರ ಮರ್ಮವನ್ನು ಚೆನ್ನಾಗಿ ಬಲ್ಲವರೇ. ಆಗಾಗ್ಗೆ ಮುಂಗೋಪ ಪ್ರದರ್ಶಿಸುವ ಬಗ್ಗೆ ಕಾರ್ಯಕರ್ತರಲ್ಲಿ ಅಸಮಾಧಾನವಿದೆ. ಆದರೆ ಕ್ಷೇತ್ರದ ನಂಟು ಮತ್ತು ಅಭಿವೃದ್ಧಿಯನ್ನು ಕಡೆಗಣಿಸಿಲ್ಲ. ಕ್ಷೇತ್ರದ ಗ್ರಾಮೀಣ ಭಾಗದ ಎಲ್ಲಾ ರಸ್ತೆಗಳು ಡಾಂಬರೀಕರಣಗೊಂಡಿವೆ. ಅನೇಕ ಕಡೆ ಕಾಂಕ್ರೀಟ್‌ ರಸ್ತೆಗಳೂ ಆಗಿವೆ. ಅಲ್ಲದೇ ಕಾಲೇಜು, ನರ್ಸಿಂಗ್‌ ಸೇರಿದಂತೆ ಶಿಕ್ಷಣ ಕ್ಷೇತ್ರದ ಬಗ್ಗೆಯೂ ಗಮನಹರಿಸಿರುವುದುಂಟು. ಕ್ಷೇತ್ರದಲ್ಲಿ ನೈತಿಕತೆ ಮತ್ತು ಅಭಿವೃದ್ಧಿಗಿಂತ ಆರ್ಥಿಕತೆ ಮಾನದಂಡವಾದರೆ ಮಾತ್ರ ಕಾಂಗ್ರೆಸ್‌- ಜೆಡಿಎಸ್‌ ನಡುವೆ ತೀವ್ರ ಹಣಾಹಣಿ ನಡೆಯುವುದನ್ನು ತಳ್ಳಿಹಾಕುವಂತಿಲ್ಲ.

ಈ ಹಿಂದೆ ನಡೆದ ಐದು ಚುನಾವಣೆಗಳಲ್ಲೂ ಸಚಿವ ದಿವಂಗತ ಜಿ.ಪುಟ್ಟಸ್ವಾಮಿಗೌಡರು ಮತ್ತು ಅವರ ಸೊಸೆ ಅನುಪಮಾ ಅವರೇ ರೇವಣ್ಣನವರಿಗೆ ಸಾಂಪ್ರದಾಯಿಕ ಎದುರಾಳಿಗಳು ಆಗಿದ್ದರು. ಈಗ ಕ್ಷೇತ್ರಕ್ಕೆ ಹೊಸ ಮುಖವಾದ ಆರ್ಥಿಕವಾಗಿಯೂ ಜೋರಾಗಿರುವ ಬಾಗೂರು ಮಂಜೇಗೌಡರು ರೇವಣ್ಣನರಿಗೆ ಪ್ರತಿಸ್ಪರ್ಧಿ. ಅಂತಿಮವಾಗಿ ಇಲ್ಲಿ ಫೈಟ್‌ ನಡೆಯುವುದು ಜೆಡಿಎಸ್‌ ಮತ್ತು ಕಾಂಗ್ರೆಸ್‌ ನಡುವೆ ಮಾತ್ರ.

2013 ರ ಫಲಿತಾಂಶ

ಎಚ್‌ .ಡಿ. ರೇವಣ್ಣ (ಜೆಡಿಎಸ್‌ ) - 92,713

ಎಸ್‌ .ಜಿ. ನಿರುಪಮ (ಕಾಂಗ್ರೆಸ್‌ )- 62, 655

ಜೆ.ಟಿ. ಹೇಮಂತಕುಮಾರ್‌ (ಬಿಜೆಪಿ)- 1277

ಜಾತಿವಾರು ಲೆಕ್ಕಾಚಾರ

ಒಕ್ಕಲಿಗರು- 1 ಲಕ್ಷ

ಪರಿಶಿಷ್ಟಜನಾಂಗ- 30 ಸಾವಿರ

ಕುರುಬರು-20 ಸಾವಿರ

ಮುಸ್ಲಿಂ-12 ಸಾವಿರ

ಇತರೆ- 20 ಸಾವಿರ