Asianet Suvarna News Asianet Suvarna News

ಕಾಫಿನಾಡು ಚಿಕ್ಕಮಗಳೂರಿನಲ್ಲಿ ಅರಳಿದ ಕಮಲ

ಶೃಂಗೇರಿಯಲ್ಲಿ ಕಾಂಗ್ರೆಸ್‌ನ ಟಿ.ಡಿ. ರಾಜೇಗೌಡ, ಮೂಡಿಗೆರೆಯಲ್ಲಿ ಬಿಜೆಪಿಯ ಎಂ.ಪಿ.ಕುಮಾರಸ್ವಾಮಿ, ಚಿಕ್ಕಮಗಳೂರಿನಲ್ಲಿ ಬಿಜೆಪಿಯ ಸಿ.ಟಿ. ರವಿ, ಕಡೂರಿನಲ್ಲಿ ಬಿಜೆಪಿಯ ಬೆಳ್ಳಿಪ್ರಕಾಶ್, ತರೀಕೆರೆಯಲ್ಲಿ ಬಿಜೆಪಿಯ ಡಿ.ಎಸ್. ಸುರೇಶ್ ಗೆಲುವು ಸಾಧಿಸಿದ್ದಾರೆ.

Karnataka Assembly Election 2018 Chikmagalur Results

* ಆರ್. ತಾರಾನಾಥ್ 
ಚಿಕ್ಕಮಗಳೂರು[ಮೇ.16]: ಕಾಫಿ ನಾಡು ಚಿಕ್ಕಮಗಳೂರಿನಲ್ಲಿ 2008ರ ಹಿಸ್ಟರಿ ರಿಪೀಟ್ ಆಗಿದೆ. ಇಲ್ಲಿನ ಐದರಲ್ಲಿ 4 ಕ್ಷೇತ್ರಗಳಲ್ಲಿ ಬಿಜೆಪಿ, ಒಂದರಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ.
ಶೃಂಗೇರಿಯಲ್ಲಿ ಕಾಂಗ್ರೆಸ್‌ನ ಟಿ.ಡಿ. ರಾಜೇಗೌಡ, ಮೂಡಿಗೆರೆಯಲ್ಲಿ ಬಿಜೆಪಿಯ ಎಂ.ಪಿ.ಕುಮಾರಸ್ವಾಮಿ, ಚಿಕ್ಕಮಗಳೂರಿನಲ್ಲಿ ಬಿಜೆಪಿಯ ಸಿ.ಟಿ. ರವಿ, ಕಡೂರಿನಲ್ಲಿ ಬಿಜೆಪಿಯ ಬೆಳ್ಳಿಪ್ರಕಾಶ್, ತರೀಕೆರೆಯಲ್ಲಿ ಬಿಜೆಪಿಯ ಡಿ.ಎಸ್. ಸುರೇಶ್ ಗೆಲುವು ಸಾಧಿಸಿದ್ದಾರೆ. 2013ರಲ್ಲಿ ಗೆಲವು ಸಾಧಿಸಿದ್ದ ನಾಲ್ಕು ಶಾಸಕರಿಗೆ ಸೋಲಾಗಿದೆ. ಶೃಂಗೇರಿ ಶಾಸಕ ಡಿ.ಎನ್. ಜೀವರಾಜ್, ಮೂಡಿಗೆರೆ ಶಾಸಕ ಬಿ.ಬಿ. ನಿಂಗಯ್ಯ, ಕಡೂರು ಶಾಸಕ ವೈಎಸ್‌ವಿ ದತ್ತ, ತರೀಕೆರೆ ಶಾಸಕ ಶ್ರೀನಿವಾಸ್ ಪರಾಭವಗೊಂಡಿದ್ದಾರೆ. ಶಾಸಕ ಸಿ.ಟಿ. ರವಿ ನಾಲ್ಕನೇ ಬಾರಿಗೆ ಗೆಲುವು ಸಾಧಿಸಿದ್ದಾರೆ.
2008ರಲ್ಲಿ ಶೃಂಗೇರಿ, ಮೂಡಿಗೆರೆ, ಚಿಕ್ಕಮಗಳೂರು ಹಾಗೂ ತರೀಕೆರೆ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು. 2013ರಲ್ಲಿ ಬಿಜೆಪಿ ತನ್ನ ಎರಡು ಕ್ಷೇತ್ರಗಳನ್ನು ಕಳೆದುಕೊಂಡಿತು. ಆ ಕ್ಷೇತ್ರಗಳಲ್ಲಿ ಜೆಡಿಎಸ್ ಗೆಲುವು ಸಾಧಿಸಿತು. ಆಗಲೂ ಕಾಂಗ್ರೆಸ್ ಒಂದು ಸ್ಥಾನಕ್ಕೆ ತೃಪ್ತಿ ಪಡುವಂತಾಯಿತು. ಈ ಚುನಾವಣೆಯಲ್ಲಿ ಬಿಜೆಪಿ ತನ್ನ ಸ್ಥಾನಗಳ ಸಂಖ್ಯೆ 4ಕ್ಕೆ ಏರಿಸಿಕೊಂಡಿದೆ. ಕಾಂಗ್ರೆಸ್ ಒಂದು ಕ್ಷೇತ್ರದಲ್ಲಿ ಗೆಲುವು ಸಾಧಿಸಿದೆ. ಜೆಡಿಎಸ್ ತನ್ನ 2 ಸ್ಥಾನ ಕಳೆದುಕೊಂಡಿದೆ. 
ಶೃಂಗೇರಿಯಲ್ಲಿ ಶಾಸಕರ ವಿರೋಧಿ ಅಲೆ ಕೆಲಸ ಮಾಡಿದ್ದು, ಡಿ.ಎನ್. ಜೀವರಾಜ್ 60791 ಮತ, ಕಾಂಗ್ರೆಸ್‌’ನ ಟಿ.ಡಿ. ರಾಜೇಗೌಡ 62780 ಮತ ಪಡೆದು ಜಯಗಳಿಸಿದರು. ಜೆಡಿಎಸ್‌’ನ ಎಚ್.ಜಿ. ವೆಂಕಟೇಶ್ 9799 ಮತ ಪಡೆವ ಮೂಲಕ ಮೂರನೇ ಸ್ಥಾನಕ್ಕೆ ಬಂದಿದ್ದಾರೆ. ಮೂಡಿಗೆರೆಯಲ್ಲಿ ಬಿಜೆಪಿಯ ಎಂ.ಪಿ. ಕುಮಾರಸ್ವಾಮಿ ಹಾಗೂ ಕಾಂಗ್ರೆಸ್ ಅಭ್ಯರ್ಥಿ ನಡುವೆ ನೇರ ಸ್ಪರ್ಧೆ ನಡೆಯಿತು. ಇಲ್ಲೂ ಕೂಡ ಜೆಡಿಎಸ್‌’ನ ಬಿ.ಬಿ. ನಿಂಗಯ್ಯ ಮೂರನೇ ಸ್ಥಾನದಲ್ಲಿದ್ದರು. ಚಿಕ್ಕಮಗಳೂರು ಕ್ಷೇತ್ರದಲ್ಲಿ ಪ್ರಥಮ ದಲ್ಲೇ ಸಿ.ಟಿ.ರವಿ ಮುನ್ನಡೆ ಸಾಧಿಸುತ್ತಾ ಬಂದರು. ಜೆಡಿಎಸ್‌’ನ ಹರೀಶ್ ಎರಡನೇ ಸ್ಥಾನದಿಂದ 6ನೇ ಸುತ್ತಿನವರೆಗೆ ಇದ್ದು ನಂತರದಲ್ಲಿ 3 ನೇ ಸ್ಥಾನಕ್ಕೆ ಇಳಿದರು.
ತರೀಕೆರೆ ಕ್ಷೇತ್ರದಲ್ಲಿ ಬಿಜೆಪಿ ಡಿ.ಎಸ್. ಸುರೇಶ್ ಆರಂಭದಲ್ಲೇ ಮುನ್ನಡೆ ಸಾಧಿಸಿದರು. ಅವರಿಗೆ ಪಕ್ಷೇತರ ಅಭ್ಯರ್ಥಿ ಗೋಪಿಕೃಷ್ಣ, ನಂತರದಲ್ಲಿ ಜಿ.ಎಚ್. ಶ್ರೀನಿವಾಸ್ ಪ್ರತಿಸ್ಪರ್ಧಿಯಾಗಿದ್ದರು.

ಮತ್ತೆ ಉದಯಿಸಿದ ರವಿ: 1999ರ ಮೊದಲ ಚುನಾವಣೆಯಲ್ಲಿ ಸಿ.ಟಿ. ರವಿ 982 ಮತಗಳ ಅಂತರದಲ್ಲಿ ಪರಾಭವಗೊಂಡಿದ್ದರು. 2004ರ ಚುನಾವಣೆಯಲ್ಲಿ ರವಿ 24,873 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. 2008ರಲ್ಲಿ 15084 ಮತಗಳ ಅಂತರದಿಂದ ಜಯಗಳಿಸಿದರು. 2013ರಲ್ಲಿ 10988 ಮತಗಳ ಅಂತರದಿಂದ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದರು. ಈ ಬಾರಿ ಗೆಲುವು ಸಾಧಿಸುವ ಮೂಲಕ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಸತತವಾಗಿ ನಾಲ್ಕನೇ ಬಾರಿಗೆ ಗೆಲುವು ಸಾಧಿಸಿರುವ ರಾಜಕೀಯ ಇತಿಹಾಸದ ಪುಟದಲ್ಲಿ ಸೇರಿದ್ದಾರೆ.
ಬೆಳ್ಳಿಗೆ ಚಿನ್ನ ಕೊಟ್ಟ ಕಡೂರು: ಈ ಚುನಾವಣೆ ಬೆಳ್ಳಿ ಪ್ರಕಾಶ್ ಪಾಲಿಗೆ ಚಿನ್ನದ ವರ್ಷ. ಮಾಜಿ ಸಿಎಂ ಯಡಿಯೂರಪ್ಪರವರ ಆಪ್ತರಾಗಿರುವ ಬೆಳ್ಳಿ ಪ್ರಕಾಶ್ 2013ರ ಚುನಾವಣೆಯಲ್ಲಿ ಕರ್ನಾಟಕ ಜನತಾ ಪಕ್ಷದಿಂದ ಸ್ಪರ್ಧಿಸಿದ್ದ ಅವರು 26300 ಮತ ಪಡೆದು ಮೂರನೇ ಸ್ಥಾನದಲ್ಲಿದ್ದರು. ವೈಎಸ್‌’ವಿ ದತ್ತ 43988 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಎಲ್ಲಾ ಜಾತಿಯವರು ದತ್ತ ಕೈ ಹಿಡಿದಿದ್ದರು. ದತ್ತ ಬಗ್ಗೆ ಕ್ಷೇತ್ರದಲ್ಲಿ ವೈಯಕ್ತಿಕವಾಗಿ ವಿರೋಧ ಇರಲಿಲ್ಲ. ಪಕ್ಷದ ಕಾರ್ಯಕರ್ತರು ಮುನಿಸಿಕೊಂಡಿದ್ದರು. ಇಲ್ಲಿ ಲಿಂಗಾಯಿತ ಸಮುದಾಯದ ಜತೆಗೆ ಉಪ್ಪಾರು ಜನಾಂಗದವರು ಬೆಳ್ಳಿ ಪ್ರಕಾಶ್ ಕೈ ಹಿಡಿದಿದ್ದಾರೆ.
ಮೂಡಿಗೆರೆಯಲ್ಲಿ ಕುಮಾರ ಪರ್ವ: ಎಂ.ಪಿ. ಕುಮಾರಸ್ವಾಮಿ ವಿಧಾನಸಭೆಗೆ ಮರು ಪ್ರವೇಶ ಮಾಡಿದ್ದಾರೆ. 2004ರಲ್ಲಿ ಪ್ರಥಮದಲ್ಲಿ ಗೆಲವು ಸಾಧಿಸಿದ್ದ ಕುಮಾರಸ್ವಾಮಿ 2008ರಲ್ಲಿ ಎರಡನೇ ಬಾರಿಗೆ ಜಯಗಳಿಸಿದ್ದರು. 2013ರಲ್ಲಿ ಜೆಡಿಎಸ್‌’ನ ಬಿ.ಬಿ. ನಿಂಗಯ್ಯ ಜಯಗಳಿಸಿದ್ದರು. ಆಗ, ಕುಮಾರಸ್ವಾಮಿಗೆ ಸೋಲಾಯಿತು. ಈಗ ಮತ್ತೆ ಅವರು ಗೆಲುವು ಸಾಧಿಸುವ ಮೂಲಕ ವಿಧಾನ ಸಭೆಗೆ ರೀ ಎಂಟ್ರಿ ಕೊಟ್ಟಿದ್ದಾರೆ. ಇಲ್ಲಿ ಶಾಸಕ ಬಿ.ಬಿ.ನಿಂಗಯ್ಯ ವಿರೋಧಿ ಅಲೆ, ಮೋಟಮ್ಮ ಬೆಂಗಳೂರಿನಲ್ಲಿ ನೆಲೆಸಿದ್ದಾರೆಂಬ ಕಾರಣಕ್ಕಾಗಿ ಸ್ಥಳೀಯವಾಗಿ ಕುಮಾರಸ್ವಾಮಿಗೆ ಮತದಾರರು ಗೆಲ್ಲಿಸಿದ್ದಾರೆಂಬ ಲೆಕ್ಕಚಾರ ರಾಜಕೀಯ ಪಂಡಿತರದ್ದಾಗಿದೆ.
ಕೆರೆಯ ದಡ ಏರಿದ ಸುರೇಶ್: 2008ರಲ್ಲಿ ನಡೆದ ತರೀಕೆರೆ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಡಿ.ಎಸ್. ಸುರೇಶ್ 52167 ಮತ ಪಡೆದು ಜಯ ಗಳಿಸಿದ್ದರು. 2013ರಲ್ಲಿ ಸುರೇಶ್ ಕೆಜೆಪಿಯಿಂದ ಸ್ಪರ್ಧೆ ಮಾಡಿದ್ದಾಗ 34919 ಮತ ಪಡೆದು ಎರಡನೇ ಸ್ಥಾನದಲ್ಲಿದ್ದರು. ಈ ಬಾರಿ ವೀರಶೈವ ಮತಗಳನ್ನು ಬೇರ್ಪಡಿಸಲು ಕಾಂಗ್ರೆಸ್ ಅನುಸರಿಸಿದ ತಂತ್ರಗಾರಿಕೆ ಯು ಟರ್ನ್ ಹೊಡೆದಿದೆ. ನೊಳಂಬ ಸಮಾಜದ ಕಾಂಗ್ರೆಸ್ ಅಭ್ಯರ್ಥಿ ಎಸ್.ಎಂ. ನಾಗರಾಜ್‌ರನ್ನು ಕೈಬಿಟ್ಟು ಬಿಜೆಪಿಯ ಸುರೇಶ್‌ರನ್ನು ತರೀಕೆರೆಯ ಮತದಾರರು ಆಶೀರ್ವಾದಿಸಿದ್ದಾರೆ.
ಶೃಂಗೇರಿಯ ರಾಜಕುಮಾರ: 2013ರ ಚುನಾವಣೆಯಲ್ಲಿ 3452 ಮತಗಳ ಅಂತರದಿಂದ ಪರಾಭವಗೊಂಡಿದ್ದ ಕಾಂಗ್ರೆಸ್‌ನ ಟಿ.ಡಿ. ರಾಜೇಗೌಡ ಈ ಬಾರಿ ಗೆಲುವು ಸಾಧಿಸುವ ಮೂಲಕ ಕಾಂಗ್ರೆಸ್ ಹೆಸರು ಉಳಿಸಿದ್ದಾರೆ. ಹ್ಯಾಟ್ರಿಕ್ ಹೀರೋ ಡಿ.ಎನ್. ಜೀವರಾಜ್‌ಗೆ ಪ್ರಬಲ ಸ್ಪರ್ಧೆ ನೀಡುವ ಮೂಲಕ 1100 ಮತಗಳ ಅಂತರದಿಂದ ಜಯ ತಮ್ಮದಾಗಿಸಿಕೊಂಡಿರೆ.
ಚಿಕ್ಕಮಗಳೂರು
ಕ್ಷೇತ್ರ               ಅಭ್ಯರ್ಥಿ                   ಪಕ್ಷ           ಗೆಲುವಿನ ಅಂತರ
ಕಡೂರು           ಬೆಳ್ಳಿ ಪ್ರಕಾಶ್             ಬಿಜೆಪಿ           15372
ಶೃಂಗೇರಿ         TD ರಾಜೇಗೌಡ          ಕಾಂಗ್ರೆಸ್        1989
ಮೂಡಿಗೆರೆ       M.P ಕುಮಾರಸ್ವಾಮಿ   ಬಿಜೆಪಿ             12512
ಚಿಕ್ಕಮಗಳೂರು  C.T ರವಿ                 ಬಿಜೆಪಿ              26314
ತರೀಕೆರೆ           D.S ಸುರೇಶ್           ಬಿಜೆಪಿ              11687

Follow Us:
Download App:
  • android
  • ios