ಹೆಬ್ಬಾಳದಲ್ಲಿ ಬಿಜೆಪಿಗೆ ಸಿಎಂ ಆಪ್ತ ಸವಾಲು

Hebbal Constituency Election
Highlights

ಹಲವು ಪ್ರಾಮುಖ್ಯತೆಗಳನ್ನು ಹೊಂದಿರುವ ಹೆಬ್ಬಾಳ ಈ ಬಾರಿ ಬೆಂಗಳೂರು ನಗರದ ವಿಧಾನಸಭಾ ಕ್ಷೇತ್ರಗಳಲ್ಲೇ ಅತಿ ಹೆಚ್ಚು ಸ್ಪರ್ಧಿಗಳು (28) ಕಣದಲ್ಲಿರುವ ಕ್ಷೇತ್ರವಾಗಿ ಗಮನ ಸೆಳೆದಿದೆ.

ಲಿಂಗರಾಜು ಕೋರಾ 

ಬೆಂಗಳೂರು : ಬೆಂಗಳೂರಿನ ಉತ್ತರ ಭಾಗದ ಪ್ರವೇಶ ದ್ವಾರ ‘ಹೆಬ್ಬಾಳ’. ನಗರದ ನಿರ್ಮಾತೃ ನಾಡಪ್ರಭು ಕೆಂಪೇಗೌಡರು 1537 ರಲ್ಲಿ ನಿರ್ಮಿಸಿದ ವಿಶಾಲವಾದ ಕೆರೆ ಇಲ್ಲಿದೆ. ಬೃಹತ್ ಮೇಲ್ಸೇತುವೆ, ದೊಡ್ಡ ದೊಡ್ಡ ವಸತಿ ಸಮುಚ್ಚಯಗಳು ಕ್ಷೇತ್ರದಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ರಾಷ್ಟ್ರೀಯ ಹೆದ್ದಾರಿ 7 ಬಳ್ಳಾರಿ ರಸ್ತೆ ಹಾದುಹೋಗಿದೆ.

ಇಂತಹ ಹಲವು ಪ್ರಾಮುಖ್ಯತೆಗಳನ್ನು ಹೊಂದಿರುವ ಹೆಬ್ಬಾಳ ಈ ಬಾರಿ ಬೆಂಗಳೂರು ನಗರದ ವಿಧಾನಸಭಾ ಕ್ಷೇತ್ರಗಳಲ್ಲೇ ಅತಿ ಹೆಚ್ಚು ಸ್ಪರ್ಧಿಗಳು (28) ಕಣದಲ್ಲಿರುವ ಕ್ಷೇತ್ರವಾಗಿ ಗಮನ ಸೆಳೆದಿದೆ. ಸಂಚಾರ ದಟ್ಟಣೆ, ಕಸದ ಸಮಸ್ಯೆ, ರಸ್ತೆಗಳ ಉನ್ನತೀಕರಣ ಸೇರಿದಂತೆ ಜೆ.ಸಿ ನಗರ,  ಗಂಗೇನಹಳ್ಳಿ, ಮನೋರಾಯನ ಪಾಳ್ಯ, ವಿಶ್ವನಾಥ ನಾಗೇನಹಳ್ಳಿ ಯ ಹಲವು ಪ್ರದೇಶಗಳು ಕಿರಿದಾದ ರಸ್ತೆ, ಆಟದ ಮೈದಾನ ಸೇರಿದಂತೆ ಇನ್ನಿತರ ಮೂಲಸೌಕರ್ಯ ಗಳ ಕೊರತೆ ಕ್ಷೇತ್ರದಲ್ಲಿವೆ. 

ಕ್ಷೇತ್ರದ 8 ವಾರ್ಡ್‌ಗಳ ಪೈಕಿ ನಾಲ್ಕರಲ್ಲಿ ಬಿಜೆಪಿ, ಎರಡರಲ್ಲಿ ಜೆಡಿಎಸ್ ಮತ್ತು ಇನ್ನೆರಡರಲ್ಲಿ ಕಾಂಗ್ರೆಸ್ ಪಾಲಿಕೆ ಸದಸ್ಯರಿದ್ದಾರೆ. ಹಿಂದುಳಿದ ವರ್ಗದ ಮತದಾರರೇ ಹೆಚ್ಚಿನ ಸಂಖ್ಯೆಯಲ್ಲಿರುವ ಕ್ಷೇತ್ರದಲ್ಲಿ ಗೆಲುವಿಗೆ ಮುಸ್ಲಿಂ ಮತಗಳೇ ನಿರ್ಣಾಯಕ. 2.52 ಲಕ್ಷಕ್ಕಿಂತ ಹೆಚ್ಚು ಮತದಾರರಿರುವ ಕ್ಷೇತ್ರದಲ್ಲಿ ಹಿಂದುಳಿದ ವರ್ಗದ 60 ಸಾವಿರ, ಮುಸ್ಲಿಂ ಸಮುದಾಯದ 35 ಸಾವಿರ, ಕುರುಬ ಮತ್ತು ಬಣಜಿಗರ 25 ಸಾವಿರ, ತೆಲುಗು ಬ್ರಾಹ್ಮಣರ 25  ಸಾವಿರ, ಕ್ರಿಶ್ಚಿಯನ್ ಸಮುದಾಯದ ೮ ಸಾವಿರ ಮತಗಳಿದ್ದು, ಕೊಳಗೇರಿ ಮತ್ತು ಮಧ್ಯಮ ವರ್ಗದ ಮತದಾರರೂ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ.

2013ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯಿಂದ ಗೆಲುವು ಸಾಧಿಸಿದ್ದ ಶಾಸಕ ಜಗದೀಶ್ ಕುಮಾರ್ ಅಕಾಲಿಕ ನಿಧನದಿಂದಾಗಿ  2016 ರಲ್ಲಿ ಕ್ಷೇತ್ರ ಉಪಚುನಾವಣೆ ಎದುರಿಸಬೇಕಾಯಿತು. ಕ್ಷೇತ್ರದಲ್ಲಿ ಈ ಬಾರಿ ಶ್ರೀಮಂತ ಅಭ್ಯರ್ಥಿಗಳ ನಡುವೆ ಭಾರೀ ಪೈಪೋಟಿ ಏರ್ಪಟ್ಟಿದೆ. ಉಪಚುನಾವಣೆಯಲ್ಲಿ ಬಿಜೆಪಿ ಗೆಲ್ಲುವ ಮೂಲಕ ಒಕ್ಕಲಿಗ ಸಮುದಾಯದ ಡಾ.ವೈ.ಎನ್. ನಾರಾಯಣಸ್ವಾಮಿ ಶಾಸಕರಾದರು. ಈಗ ಅವರು ಮತ್ತೆ ಆಯ್ಕೆ ಬಯಸಿ ಬಿಜೆಪಿಯಿಂದ ಮತ್ತೆ ಕಣಕ್ಕಿಳಿದಿದ್ದಾರೆ. ಬಿಜೆಪಿ ಸೋಲಿಸಲು ಕಾಂಗ್ರೆಸ್ ಈ ಬಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ಕುರುಬ ಸಮುದಾಯದ ಬಿ.ಎಸ್.ಸುರೇಶ್ ಅವರನ್ನು ಅಖಾಡಕ್ಕಿಳಿಸಿದೆ. ಇನ್ನು ಜೆಡಿಎಸ್‌ನಿಂದ ಒಕ್ಕಲಿಗ ಸಮುದಾಯಕ್ಕೆ ಸೇರಿದ ಹನುಮಂತೇಗೌಡ ಹುರಿಯಾಳು ಸಿ.ಕೆ.ಜಾಫರ್ ಷರೀಫ್ ಮೊಮ್ಮಗ ಅಬ್ದುಲ್ ರೆಹಮಾನ್ ಷರೀಫ್‌ಗೆ ಎರಡು ಬಾರಿ ಸೋತಿದ್ದರಿಂದ ಕಾಂಗ್ರೆಸ್ ಈ ಬಾರಿ ಟಿಕೆಟ್ ನೀಡಿಲ್ಲ. 

ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡದ್ದಕ್ಕೆ ಅಸಮಾಧಾನವೂ ಇದೆ. ಸಾರಿಗೆ ಸಚಿವ ಎಚ್.ಎಂ.ರೇವಣ್ಣ ಕೂಡ ಕ್ಷೇತ್ರದಿಂದ ಟಿಕೆಟ್ ಆಕಾಂಕ್ಷಿ ಯಾಗಿದ್ದರು. ಆದರೆ, ಉಪಚುನಾವಣೆಯಲ್ಲಿ ಕಾಂಗ್ರೆಸ್ ಸೋಲುಂಡ ಬೆನ್ನಲ್ಲೇ ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಬಿ.ಎಸ್.ಸುರೇಶ್‌ಗೆ ಟಿಕೆಟ್ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ನೇರವಾಗೇ ಘೋಷಿಸಿದ್ದರು. ಅಂದಿನಿಂದ ಸುರೇಶ್ ಕ್ಷೇತ್ರದಲ್ಲಿ ನೆಲೆಯೂರಿದ್ದಾರೆ. 

ಇನ್ನು ಬಿಜೆಪಿಯಲ್ಲಿ ಕ್ಷೇತ್ರದ ಅಭ್ಯರ್ಥಿಯನ್ನು ಗೆಲ್ಲಿಸುವ ಹೊಣೆಯನ್ನು ಸಂಸದ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡರಿಗೆ ಪಕ್ಷ ವಹಿಸಿದೆ. ಅವರು ನಾರಾಯಣಸ್ವಾಮಿ ಜತೆ ರೋಡ್ ಶೋ ಹಾಗೂ ಮನೆ ಮನೆ ಪ್ರಚಾರ ನಡೆಸಿದ್ದಾರೆ. ನಾರಾಯಣಸ್ವಾಮಿ  ಅವರು ಎರಡು ವರ್ಷದಲ್ಲಿ ಕ್ಷೇತ್ರದಲ್ಲಿ ಹೊಂದಿರುವ ಹಿಡಿತದಿಂದ ಬಿಜೆಪಿ ಸಾಂಪ್ರದಾಯಿಕ ಮತಗಳ ಜತೆಗೆ ತಮ್ಮದೇ ಸಮುದಾಯದ ಒಕ್ಕಲಿಗ ಹಾಗೂ  ಹಿಂದುಳಿದ, ದಲಿತ ಮತಗಳ ಜತೆಗೆ ಒಂದಷ್ಟು ಮುಸ್ಲಿಂ ಮತಗಳ ಮೇಲೂ ಕಣ್ಣಿಟ್ಟಿದ್ದು ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. 

ಒಕ್ಕಲಿಗ ಸಮುದಾಯದವರೇ ಆಗಿರುವ ಜೆಡಿಎಸ್‌ನ ಹನುಮಂತೇಗೌಡ ಅವರು ತಮ್ಮ ಸಮುದಾಯದ ಜತೆಗೆ ದಲಿತರ ಮತಗಳನ್ನು ಹೆಚ್ಚಾಗಿ ಪಡೆಯಲು ಕಸರತ್ತು ನಡೆಸಿದ್ದಾರೆ. ಅಲ್ಪಸಂಖ್ಯಾತ ಮತಗಳು ಹೆಚ್ಚಿರುವ ಹಾಗೂ ಒಕ್ಕಲಿಗ ಮತಗಳು ನಿರ್ಣಾಯಕವಾಗಿರುವ ಕ್ಷೇತ್ರದಲ್ಲಿ ಜೆಡಿಎಸ್ ಹಾಗೂ ಬಿಜೆಪಿಯಿಂದ ಒಕ್ಕಲಿಗ ಅಭ್ಯರ್ಥಿಗಳು ಹಾಗೂ ಕಾಂಗ್ರೆಸ್‌ನಿಂದ ಹಿಂದುಳಿದ ವರ್ಗದ ಅಭ್ಯರ್ಥಿ ಕಣದಲ್ಲಿದ್ದಾರೆ. 

ಜೆಡಿಎಸ್‌ನ ಹನುಮಂತೇಗೌಡ ಒಕ್ಕಲಿಗ ಮತಗಳನ್ನು ಕಸಿದರೆ  ಅದು ಕಾಂಗ್ರೆಸ್‌ಗೆ ಅನುಕೂಲ. ಆದರೆ, ಬಿಜೆಪಿ ಹಿಂದೂ ಮತಗಳ ಕ್ರೋಡಿಕರಣ ಮಾಡುವ ಹುಮ್ಮಸ್ಸಿನಲ್ಲಿದೆ. ಈ ಕಾರ್ಯತಂತ್ರ ಕೆಲಸ ಮಾಡಿದರೆ ಬಿಜೆಪಿಗೆ ಅನುಕೂಲ. ಹೀಗಾಗಿ ಈ ಕ್ಷೇತ್ರದಲ್ಲಿಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಅತ್ಯಂತ ತುರುಸಿನ ಪೈಪೋಟಿ ನಿರ್ಮಾಣವಾಗಿದೆ.

loader