ಚಿಂಚೋಳಿ[ನ.4]: 371(ಜೆ) ಕಲಂ ರುವಾರಿ ಮಾಜಿ ಸಚಿವ ವೈಜನಾಥ ಪಾಟೀಲರ ಅಂತ್ಯಕ್ರಿಯೆ ವೀರಶೈವ ಲಿಂಗಾಯತ ವಿಧಿವಿಧಾನಗಳೊಂದಿಗೆ ಹೋರಾಟದ ಕರ್ಮಭೂಮಿಯಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು. ಪಟ್ಟಣದ ಗಂಗಮ್ಮ ಭೀಮಶೆಟ್ಟಿ ಪಾಟೀಲ ಕಲ್ಯಾಣ ಮಂಟಪದ ಹತ್ತಿರ ಸಕಲ ಸರ್ಕಾರಿ ಗೌರವಗಳೊಂದಿಗೆ ಸಾವಿರಾರು ಕಾರ್ಯಕರ್ತರ ಕಣ್ಣೀರಿನ ಶೋಕಸಾಗರ ಮಧ್ಯೆ ನಡೆಯಿತು.

ಪ್ರಭು ಚನ್ನಬಸವ ಸ್ವಾಮೀಜಿ ಅಂತ್ಯಕ್ರಿಯೆ ಪ್ರಕ್ರಿಯೆ ಪೂರ್ಣಗೊಳಿಸಿದರು. ಪಾರ್ಥಿವ ಶರೀರವನ್ನಿಟ್ಟಿದ್ದ ಗಾಜಿನ ಪೆಟ್ಟಿಗೆಗೆ ಉದಯವಾಗಲಿ ಕಲ್ಯಾಣ ಕರ್ನಾಟಕ ನಾಡು ಎಂದು ಬರೆದು ಆರು ಜಿಲ್ಲೆಗಳ ನಕ್ಷೆಯನ್ನು ಚಿತ್ರಿಸಿದ ಬ್ಯಾನರ್ ಅಂಟಿಸುವ ಮೂಲಕ ಪ್ರತ್ಯೇಕ ರಾಜ್ಯದ ಕೂಗನ್ನು ಮೊಳಗಿಸಲಾಯಿತು. ಮಾಜಿ ಸಚಿವ ವೈಜನಾಥ ಪಾಟೀಲ್ ಪಾರ್ಥಿವ ಶವ ಯಾತ್ರೆಯನ್ನು ಪಟ್ಟಣದ ಅನೇಕ ಪ್ರಮುಖ ಬೀದಿಗಳಲ್ಲಿ ನಡೆಸಿದ ನಂತರ ಗಂಗಮ್ಮ ಭೀಮಶೆಟ್ಟಿ ಪಾಟೀಲ ಕಲ್ಯಾಣ ಮಂಟಪದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಮುಂಜಾನೆ 11 ಗಂಟೆಯಿಂದ ಮಧ್ಯಾಹ್ನ 3 ಗಂಟೆ ತನಕಇಡಲಾಗಿತ್ತು. 

ಹೈ-ಕ ಅಭಿವೃದ್ಧಿಗೆ ಶ್ರಮಿಸಿದ್ದ ಮಾಜಿ ಸಚಿವ ವೈಜನಾಥ ಪಾಟೀಲ ಇನ್ನಿಲ್ಲ

ತಾಲೂಕಿನ ಅನೇಕ ಕಾರ್ಯಕರ್ತರು ಹೂಮಾಲೆಯೊಂದಿಗೆ ಆಗಮಿಸಿ ಅಗಲಿದ ನಾಯಕ ವೈಜನಾಥ ಪಾಟೀಲ ಅವರ ಪಾರ್ಥಿವ ಶರೀರಕ್ಕೆ ನಮಸ್ಕರಿಸಿ ಅಂತಿಮ ದರ್ಶನ ಪಡೆದುಕೊಂಡರು. ಶನಿವಾರ ರಾತ್ರಿ 11 ಗಂಟೆಗೆ ಪಾಟೀಲ ಪಾರ್ಥಿವ ಶರೀರ ಅವರ ಮನೆಯಂಗಳದಲ್ಲಿ ಸಾರ್ವಜನಿಕ ದರ್ಶನಕ್ಕಾಗಿ ಇಡಲಾಗಿತ್ತು. ಅಂತಿಮ ದರ್ಶನ ಪಡೆದ ಪಟ್ಟಣದ ಅನೇಕ ಬಡಾವಣೆ ಸಾರ್ವಜನಿಕರು ಮಹಿಳೆಯರ ರೋಧನ ಮನಕಲಕುವಂತಿತ್ತು. ಈ ಮೊದಲು ಕಾಳಗಿ, ಕೋಡ್ಲಿ, ಸುಲೇಪೇಟ ಗ್ರಾಮಗಳಲ್ಲಿ ಅಭಿಮಾನಿಗಳು, ಕಾರ್ಯಕರ್ತರು ದರ್ಶನ ಪಡೆದು ಗೌರವ ಸೂಚಿಸಿದರು.

ಸಚಿವ ಪ್ರಭು ಚವ್ಹಾಣ ರಾಜ್ಯ ಸರ್ಕಾರದ ಪರವಾಗಿ ಆಗಮಿಸಿ ಹೂಗುಚ್ಛ ನೀಡಿ ಅಂತಿಮ ನಮನ ಸಲ್ಲಿಸಿದರು. ಸಂಸದ ಡಾ. ಉಮೇಶ್ ಜಾಧವ್, ಭಗವಂತ ಖೂಬಾ, ಶಾಸಕ ಡಾ. ಅವಿನಾಶ್ ಜಾಧವ್, ಶಾಸಕ ಬಸವರಾಜ ಮತ್ತಿಮುಡ, ಮಾಜಿ ಸಚಿವ ಶರಣಬಸಪ್ಪ ದರ್ಶನಾಪುರ, ಮಾಜಿ ಶಾಸಕ ಬಿ.ಆರ್. ಪಾಟೀಲ್, ಮಾಜಿ ಮಂತ್ರಿ ಎಸ್.ಕೆ. ಕಾಂತಾ, ಮಾಜಿ ಸಚಿವ ರಾಜಶೇಖರ ಪಾಟೀಲ್,ವಿಧಾನ ಪರಿಪತ ಸದಸ್ಯ ತಿಪ್ಪಣ್ಣಪ್ಪ ಕಮಕನೂರ, ಮಾಜಿ ಶಾಸಕ ಅಲ್ಲಮಪ್ರಭು ಪಾಟೀಲ, ಮಾಜಿ ಸಚಿವ ಸುನೀಲ್‌ ವಲ್ಯಾಪೂರೆ, ಮಾಜಿ ಸಚಿವ ಭೀಮಣ್ಣ ಖಂಡ್ರೆ, ಭಾಲ್ಕಿ ಶಾಸಕ ಈಶ್ವರ ಖಂಡ್ರೆ, ಜಿಲ್ಲಾಧಿಕಾರಿ ಬಿ. ಶರತ್, ಎಸ್ಪಿವಿನಯಕುಮಾರ್ ತಹಸೀಲ್ದಾರ್ ಪಂಡಿತ ಬೀರಾದಾರ,ಎಸಿ ರಮೇಶ ಕೋಲಾರ ಅಲ್ಲದೇ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಅಗಲಿದ ನಾಯಕನ ಅಂತಿಮ ದರ್ಶನ ಪಡೆದುಕೊಂಡರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಮಾಜಿ ಸಚಿವ ವೈಜನಾಥ ಪಾಟೀಲ್‌ರ ನಿಧನದಿಂದಾಗಿ ಪಟ್ಟಣದಲ್ಲಿ ಎಲ್ಲ ಅಂಗಡಿಗಳ ಮಾಲೀಕರು ತಮ್ಮ ವ್ಯಾಪಾರ ವಹಿವಾಟು ಸ್ವಯಂಪ್ರೇರಿತರಾಗಿ ಬಂದ್ ಮಾಡಿದ್ದರಿಂದ ಪ್ರಮುಖ ರಸ್ತೆಗಳು ನಿರವ ಮೌನದಿಂದ ಕೂಡಿತ್ತು. ಗಂಗಮ್ಮ ಭೀಮಶೆಟ್ಟಿ ಪಾಟೀಲ್ ಕಲ್ಯಾಣ ಮಂಟಪ ಬಳಿನಡೆದ ಅಂತ್ಯಕ್ರಿಯೆ ಸಂದರ್ಭದಲ್ಲಿ ಪೊಲೀಸರು ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ ಗೌರವ ಸೂಚಿಸಿದರು. ನಂತರ ವಿವಿಧ ಮಠಾಧೀಶರು ಲಿಂಗಾಯತ ಸಮಾಜದವಿಧಿ ವಿಧಾನಗಳಿಂದ ಪಾಟೀಲರ ಅಂತ್ಯಕ್ರಿಯೆ ನಡೆಸಿದರು.

ಮಾಜಿ ಸಚಿವ ವೈಜನಾಥ ಪಾಟೀಲರ ಪತ್ನಿ ಜ್ಞಾನೇಶ್ವರಿ ಪಾಟೀಲ, ಜಿಪಂ ಸದಸ್ಯ ಗೌತಮ್ ಪಾಟೀಲ, ಡಾ. ವಿಕ್ರಮ ಪಾಟೀಲ, ಡಾ. ಬಸವೇಶ ಪಾಟೀಲ, ಪುತ್ರಿಯರಾದ ಭಾರತಿ ಪಾಟೀಲ, ಅಳಿಯಂದಿರಾದ ಉಮೇಶ ಪಾಟೀಲ, ಸಹೋದರ ಬಾಬುರಾವ್ ಪಾಟೀಲ, ಪುತ್ರ ಅಜೀತ ಪಾಟೀಲ ಬಿಕ್ಕಿ ಬಿಕ್ಕಿ ಅಳುತ್ತಿರುವುದನ್ನು ಕಂಡು ನೆರೆದವರ ಕಣ್ಣುಗಳು ತೇವಗೊಂಡವು. 

ಪಾಟೀಲರ ಹುಟ್ಟೂರ ಔರಾದ್ ತಾಲೂಕಿನ ಹಕ್ಯಾಳ ಗ್ರಾಮದ ಅವರ ಸಂಬಂಧಿಕರು ಬೀದರ್ ಜಿಲ್ಲೆಯ ಸಹೋದರರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಪಟ್ಟಣದ ಅನೇಕ ಬೀದಿಗಳಲ್ಲಿ ಪಾರ್ಥಿವ ಯಾತ್ರೆ ಸಂದರ್ಭದಲ್ಲಿ ಅನೇಕ ಕಾರ್ಯಕರ್ತರು ವೈಜನಾಥ ಪಾಟೀಲ ಅಮರ ರಹೇಅಮರ ರಹೇ ಎಂದು ಘೋಷಣೆ ಕೂಗಿ ಅಗಲಿದ ನಾಯಕನಿಗೆ ಗೌರವ ಸೂಚಿಸಿದರು. 

ಚಂದ್ರಶೇಖರ ಪಾಟೀಲ, ಕೆ.ಎಂ. ಬಾರಿ, ಅಬ್ದುಲ ಬಾಸೀತ್, ಚಿತ್ರಶೇಖರ ಪಾಟೀಲ, ಸುಭಾಷ್ ರಾಠೋಡ್, ಗೋಪಾಲರಾವ ಕಟ್ಟಿಮನಿ, ರಾಮಶೆಟ್ಟಿ ಪವಾರ, ದೀಪಕನಾಗ ಪುಣ್ಯಶೆಟ್ಟಿಇನ್ನಿತರರು ಪಾಲುಗೊಂಡಿದ್ದರು. ಹಾರಕೂಡ ಮಠದ ಡಾ. ಚೆನ್ನವೀರ ಶಿವಾಚಾರ್ಯರು,ಗುರುನಂಜೇಶ್ವರ ಸ್ವಾಮೀಜಿ, ಕರುಣೇಶ್ವರ ಸ್ವಾಮೀಜಿ,ಅನೇಕ ಮಠಾಧೀಶರು ಭಾಗವಹಿಸಿದ್ದರು. ಡಿವೈಎಸ್ಪಿಅಕ್ಷಯ ಹಾಕೆ, ಸಿಪಿಐ ಮಹಾಂತೇಶ ಪಾಟೀಲ್ ಹಾಗೂ ಪೊಲೀಸರು ವ್ಯಾಪಕ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದರು.