Asianet Suvarna News

ಕಲಬುರಗಿಯಿಂದ ಬೆಂಗಳೂರಿಗಿಲ್ಲ ನೇರ ರೈಲು: ಪ್ರಯಾಣಿಕರ ಕಷ್ಟ ಕೇಳೋರೆ ಇಲ್ಲ!

ಬೆಂಗಳೂರಿನಿಂದ ದೆಹಲಿ, ಸೊಲ್ಲಾಪುರ, ಮುಂಬೈಗೆ ಹೋಗುವ ರೈಲುಗಳೇ ಕಲಬುರಗಿ ಮೂಲಕ ಸಾಗಿ ಹೋಗಬೇಕು|ನೇರ ರೈಲು ಸಂಪರ್ಕ ಇಲ್ಲದ್ದರಿಂದ ಕಲಬುರಗಿ ಮಂದಿಗೆ ರಾಜಧಾನಿ ರೈಲು ಪ್ರಯಾಣ ನಿತ್ಯವೂ ನರಕ ಯಾತನೆ ಅನುಭವ| ಕರುನಾಡು ಏಕೀಕರಣಗೊಂಡು ಆರೂವರೆ ದಶಕ ಕಳೆದರೂ ಬೆಂಗಳೂರಿನಿಂದ ಕಲಬುರಗಿಗಿಲ್ಲ ನೇರ ರೈಲು|

Does Not Has Direct Train From Bengaluru to Kalaburagi
Author
Bengaluru, First Published Nov 6, 2019, 12:15 PM IST
  • Facebook
  • Twitter
  • Whatsapp

ಶೇಷಮೂರ್ತಿ ಅವಧಾನಿ

ಕಲಬುರಗಿ[ನ.6]: ಕರುನಾಡು ಏಕೀಕರಣಗೊಂಡು ಆರೂವರೆ ದಶಕ ಕಳೆದರೂ ರಾಜ್ಯದ ರಾಜಧಾನಿ ಬೆಂಗಳೂರಿನಿಂದ ಹಿಂದುಳಿದ ನೆಲದ ಕೇಂದ್ರ ಸ್ಥಾನ, ವಿಭಾಗೀಯ ಕೇಂದ್ರ, ಕವಿರಾಜಮಾರ್ಗದ ನೆಲ ಕಲಬುರಗಿಗೆ ಇಂದಿಗೂ ನೇರ ರೈಲು ಸಂಪರ್ಕವೇ ಇಲ್ಲ. 650 ರಿಂದ 700 ಕಿ.ಮೀ. ದೂರದಲ್ಲಿರುವ ರಾಜಧಾನಿಗೆ ಹೋಗಿ ಬರಲು ಕಲಬುರಗಿ ಮಂದಿ ಪಡಬಾರದ ಪಾಡು ಪಡುತ್ತಿದ್ದಾರೆ. 

ದಾಮ್ ದುಪ್ಪಟ್ಟು ಹಣ ತೆತ್ತೋ ಬಸ್ ಹತ್ತಿ, ಕೂರಲು ಜಾಗವಿಲ್ಲದಿದ್ದರೂ ಪರವಾಗಿಲ್ಲ ಎಂದು ರೈಲಿನ ಟಾಯ್ಲೆಟ್‌ಗಳ ಅಕ್ಕಪಕ್ಕ, ಬಾಗಿಲುಗಳ ಆಸುಪಾಸಲ್ಲೇ ಬಿಡಾರ ಹೂಡುತ್ತ ಕಲಬುರಗಿ, ಯಾದಗಿರಿ ಜನ ಬಲು ಹೈರಾಣದಲ್ಲೇ ಬೆಂಗಳೂರು ತಲುಪುತ್ತಿದ್ದಾರೆ. 

ಬೆಂಗಳೂರು ಪ್ರವಾಸ ಪರ್ವತ ಪ್ರಯಾಸ: 

ಕಲಬುರಗಿಯಿಂದ ನಿತ್ಯ ಬೆಂಗಳೂರಿಗೆ ಉದ್ಯಾನ, ಬಸವ, ಸೊಲ್ಲಾಪುರ- ಯಶವಂತಪುರ ಸೂಪರ್‌ ಫಾಸ್ಟ್, ಕರ್ನಾಟಕ ಎಕ್ಸಪ್ರೆಸ್ ರೈಲುಗಳು ಓಡುತ್ತಿದ್ದರೂ ಇವುಗಳಲ್ಲಿ ಯಾವಂದು ರೈಲು ಕಲಬುರಗಿಯಿಂದಲೇ ಉಗಮವಾಗೋದಿಲ್ಲ. ಇವೆಲ್ಲವೂ ದೂರದ ಉರುಗಳಿಂದ ಉಗಮಗೊಂಡು ಕಲಬುರಗಿ ಮೂಲಕ ಸಾಗಿ ಹೋಗುತ್ತಿವೆ. ಇದರಿಂದಾಗಿಯೇ ಇಲ್ಲಿನ ಜನರನ್ನು ನಿತ್ಯ ಮಗ್ಗುಲ ಮುಳ್ಳಾಗಿ ಇದು ಚುಚ್ಚುತ್ತಿದೆ. ಹಬ್ಬ, ಹರಿದಿನ, ರಜೆ ಬಂದರೆ ಸಾಕು ರೈಲುಗಳಲ್ಲಿಓಡಾಡುವುದೇ ದುಸ್ತರವಾಗಿದೆ.

ಬೆಂಗಳೂರಿನಿಂದ ನಿತ್ಯ 24 ಸ್ಥಳಗಳಿಗೆ ನೇರ ರೈಲು: 

ಬೆಂಗಳೂರಿನಿಂದ ನಿತ್ಯ 24 ನಗರ, ಪಟ್ಟಣಗಳಿಗೆ ನೇರ ರೈಲು ಸಂಪರ್ಕವಿದ್ದರೂ ಈ ಭಾಗ್ಯ ಕಲಬುರಗಿಗೆ ಇಂದಿಗೂ ಒಲಿದಿಲ್ಲ. ಲಭ್ಯವಾಗಿರುವ ಮಾಹಿತಿ ಪ್ರಕಾರ ಹುಬ್ಬಳ್ಳಿ, ಚಾಮರಾಜನಗರ, ಶಿವಮೊಗ್ಗ, ಮೈಸೂರು, ಚಿತ್ರದುರ್ಗ,ಕೋಲಾರ, ತುಮಕೂರು, ಕಾರವಾರ, ಮಂಗಳೂರು, ಬೆಳಗಾವಿ, ಬೀದರ್, ಚಿಕ್ಕಜಾಜೂರು, ದೇವನಹಳ್ಳಿ, ರಾಮನಗರ, ಬಾಗಲಕೋಟೆ, ಧಾರವಾಡ, ತಾಳಗುಪ್ಪಾ, ಬಂಗಾರಪೇಟೆ, ಮಾರಿಕುಪ್ಪಮ್, ಹೊಸಪೇಟೆ, ಅರಸಿಕೇರೆ, ವಿಜಯಪುರ, ಚೆನ್ನಪಟ್ಟಣ, ಚಿಕ್ಕಬಳ್ಳಾಪುರಗಳಿಗೆ ನಿತ್ಯ ಎಕ್ಸಪ್ರೆಸ್, ಸೂಪರ್‌ ಫಾಸ್ಟ್, ಡೆಮು, ಮೆಮು ಇವುಗಳಲ್ಲಿ ಒಂದಿಲ್ಲೊಂದು ರೀತಿಯ ರೈಲುಓ ಡುತ್ತಿವೆ. ಆದರೆ ಕಲಬುರಗಿ, ಯಾದಗಿರಿ ಭಾಗಕ್ಕೆ ಇಂದಿಗೂ ರಾಜಧಾನಿಯಿಂದ ನೇರ ರೈಲು ಸಂಪರ್ಕ ಗಗನ ಕುಸುಮವಾಗಿದೆ. 

ಆದಾಯದಲ್ಲಿ ಕಲಬುರಗಿ 3ನೇ ಸ್ಥಾನ: 

ರಾಜ್ಯದ ಮಹಾನಗರಗಳ ಪೈಕಿ ಬೆಂಗಳೂರು ಹಾಗೂ ಮಂಗಳೂರು ನಂತರ ರೈಲ್ವೇ ಇಲಾಖೆಗೆ ಅತೀ ಹೆಚ್ಚಿನ ಪ್ರಯಾಣಿಕರ ಟಿಕೆಟ್ ಆದಾಯ ಸಂಗ್ರಹ ವಾಗೋದು ಕಲಬರಗಿಯಿಂದ. ಕಲಬುರಗಿಯಿಂದಲೇ ರೇಲ್ವೆ ಗಲ್ಲಾ ಪೆಟ್ಟಿಗೆ ತುಂಬುತ್ತಿದ್ದರೂ ಇಲ್ಲಿನ ಮಂದಿಗೆ ರಾಜಧಾನಿಗೆ ಹೋಗಲಿಕ್ಕೂ ನೇರ ರೈಲು ನೀಡದೆ ರೇಲ್ವೆ ಇಲಾಖೆ ಮಲತಾಯಿ ಧೋರಣೆ ಅನುಸರಿಸುತ್ತಿರೋದು ಕಟು ವಾಸ್ತವ. ರೈಲುಗಳ ಉಗಮಕ್ಕೆ ಕಲಬುರಗಿ ಎಲ್ಲ ರೀತಿಯ ಸವಲತ್ತು ಹೊಂದಿದೆ ಹೊಸ ರೈಲುಗಳ ಉಗಮ, ನಿರ್ವಹಣೆಗೆ ಕಲಬುರಗಿಯಲ್ಲಿ ಪಿಟ್ ಲೈನ್ ಸವಲತ್ತಿದೆ. ಡಾ.ಮಲ್ಲಿಕಾರ್ಜುನ್ ಖರ್ಗೆ ರೇಲ್ವೆ ಸಚಿವರಾಗಿದ್ದಾಗ ಬೆಂಗಳೂರು, ಮುಂಬೈ, ಹೈದ್ರಾಬಾದ್‌ಗೆ ಹೊಸ ರೈಲುಗಳು ಕಲಬುರಗಿಯಿಂದಲೇ ಉಗಮವಾಗಲಿ ಎಂಬ ಮಹದಾಸೆಯಿಂದ ಪಿಟ್‌ಲೈನ್ ಸವಲತ್ತು ಇಲ್ಲಿಗೆ ತಂದಿದ್ದರು. ಈಗ ಪಿಟ್‌ಲೈನ್ ಬಂತು, ಆದರೆ ಇಂದಿಗೂ ಹೊಸ ರೈಲುಗಳ ಉಗಮ ಕಲಬುರಗಿಯಿಂದ ಶುರುವಾಗುತ್ತಿಲ್ಲ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ನಿತ್ಯ ಓಡುವ ಕಲಬುರಗಿ-ಹೈದ್ರಾಬಾದ್ ರೈಲು ಹೊರತು ಪಡಿಸಿ ಇಂದಿಗೂ ಹೊಸ ಪಿಟ್‌ಲೈನ್ ಸವಲತ್ತು ಪೂರ್ಣಪ್ರಮಾಣದಲ್ಲಿ ಬಳಕೆ ಆಗುತ್ತಿಲ್ಲ. ಸೊಲ್ಲಾಪುರದಿಂದ ನಿತ್ಯ ಯಶವಂತಪುರದವರೆಗೂ ಓಡುವ ಸೂಪರ್ ಫಾಸ್ಟ್ ರೈಲನ್ನು ಸೊಲ್ಲಾಪುರ ಬದಲು ಕಲಬುರಗಿಯಿಂದಲೇ ಓಡಿಸಿ, ಇದಲ್ಲದೆ ಪ್ರತ್ಯೇಕ ಕಲಬುರಗಿಗೇ ಹೊಸ ಹಾಗೂ ನೇರ ರೈಲು ನೀಡಿ ಎಂಬುದು ಈ ಭಾಗದ ಜನರ ಬಹುದಿನಗಳ ಬೇಡಿಕೆಗೆ ರೇಲ್ವೆ ಇಲಾಖೆ ಕಿವುಡಾಗಿದೆ.

ಕಲಬುರಗಿ ಅಂದ್ರ ಎಲ್ಲಾರಿಗೂ ಅಲರ್ಜಿ ಯಾಕೋ!

ಸೊಲ್ಲಾಪುರದಿಂದ ಸಂಪೂರ್ಣ ಖಾಲಿ ಬರುವ ಸೂಪರ್ ಫಾಸ್ಟ್, ಬಾಗಲಕೋಟೆಯಿಂದಲೂ ಹೆಚ್ಚು ಕಮ್ಮಿ ಖಾಲಿ ಇರುವ ಬಸವ ಎಕ್ಸಪ್ರೆಸ್ ರೈಲುಗಳು ಬೆಂಗಳೂರಿಗೆ ಹೋಗುವ ಪ್ರಯಾಣಿಕರಿಂದ ಕಲಬುರಗಿಲ್ಲೇ ತುಂಬಿ ತುಳುಕೋದನ್ನ ರೇಲ್ವೆಯವರು ಕಂಡು ಕಾಣದಂತಿದ್ದಾರೆ. ಅಕ್ಟೋಬರ್ ಕೊನೆಯ ವಾರ ವಿಜಯಪುರಕ್ಕೆ ಬೆಂಗಳೂರಿನಿಂದ ನೇರ ರೈಲು ಓಡಿಸಲು ಶುರು ಮಾಡಿರುವ ಇಲಾಖೆ ಇದೀಗ ವಿಜಯಪುರದಿಂದಲೇ ಮಂಗಳೂರಿಗೂ ಹೊಸ ರೈಲು ಓಡಿಸಲು ಮುಂದಾಗಿದೆ. ಆದರೆ ಕಲಬುರಗಿ- ಬೆಂಗಳೂರು ಹೊಸ ರೈಲು ಬೇಡಿಕೆಗೆ ಕ್ಯಾರೆ ಎನ್ನದೆ ಅನ್ಯಾಯ ಮಾಡುತ್ತಿದ್ದಾರೆಂಬ ಭಾವನೆ ಇಲ್ಲಿನ ಜನಮನದಜಲ್ಲಿ ಗಟ್ಟಿಗೊಳ್ಳುತ್ತ ಸಾಗಿದೆ.

ಬೆಳಗಾವಿ ಸಂಸದ ಸುರೇಶ ಅಂಗಡಿ ಇದೀಗ ಕೇಂದ್ರದಲ್ಲಿ ರೇಲ್ವೆ ಖಾತೆ ರಾಜ್ಯ ಸಚಿವರು. ಇವರಾದರೂ ನಮ್ಮ ಬವಣೆ, ಬೇಗ ಕಿವಿಯಾಗುವರೆ? ಎಂಬುದು ಕಲಬುರಗಿ ಜನರ ನಿರೀಕ್ಷೆ ಇಟ್ಟಿದ್ದರೂ ಆದರೆ ಇಂದಿಗೂ ಅಂಗಡಿಯವರು ಇಂತಹ ವಿಚಾರದಲ್ಲಿ ಯಾವುದೇ ಹೇಳಿಕೆ ನೀಡದೆ ಮೌನಕ್ಕೆ ಮೊರೆ ಹೋಗಿದ್ದಾರಷ್ಟೆ. 

ಕಲಬುರಗಿ ಮಂದಿ ದುರಾದೃಷ್ಟ ಅಂತಲೇ ಹೇಳಬೇಕು. ನಮಗಿರುವ ಕೋಟಾ ಇನ್ನಿಲ್ಲದಂತೆ ಮಾಡಿದ್ದಾರೆ. ಇಲ್ಲಿಂದ ನೇರ ರೈಲು ರಾಜಧಾನಿಗೇ ಇಲ್ಲ. ನಾವು ಹೋಗಬೇಕಾದರೆ ಅನ್ಯ ರೈಲುಗಳೇ ಆಸರೆ. ಟಿಕೆಟ್ ಸಿಗೋದಿಲ್ಲ, ವೇಟಿಂಗ್ ಲಿಸ್ಟ್ ಕನ್‌ಫರ್ಮ್ ಮಾಡಲು ಹಣ ತೆರಬೇಕು. ಸಾಮಾನ್ಯ ಜನ ಬೆಂಗಳೂರಿಗೆ ಸ್ಲೀಪರ್ ಕ್ಲಾಸ್‌ನಲ್ಲಿ ಹೋಗಿ ಬರಲು 2300 ರಿಂದ 1500 ರು.ತೆರುವಂತಾಗಿದೆ. ಇದು ಹಗಲು ದರೋಡೆ. ನೇರರೈಲು ಕಲಬುರಗಿ- ಬೆಂಗಳೂರು ಓಡಿದರೆಎಲ್ಲರಿಗೂ ಅನುಕೂಲ. ರೇಲ್ವೆ ಸಚಿವ ಅಂಗಡಿ ಈ ಬಗ್ಗೆ ಗಮನ ಹರಿಸಿ ಕಲಬುರಗಿ ಭಾಗದ ಜನತೆಗೆ ಈ ಸವಲತ್ತು ಆದಷ್ಟು ಬೇಗನೆ ಒದಗಿಸಲಿ ಎಂದು ಕಲಬುರಗಿ ಮೂಲದ ಬೆಂಗಳೂರಿನಲ್ಲಿ ನೆಲೆಸಿರುವ ಸಾಫ್ಟವೇರ್‌ಎಂಜಿನಿಯರ್  ಸುನೀಲ ಕುಲಕರ್ಣಿ ಅವರು ಹೇಳಿದ್ದಾರೆ. 
 

Follow Us:
Download App:
  • android
  • ios