ಕಲಬುರಗಿ: ಪ್ರತ್ಯೇಕ ರಾಜ್ಯದ ಬೇಡಿಕೆ, 30 ಜನರು ಅರೆಸ್ಟ್
ಪ್ರತ್ಯೇಕ ರಾಜ್ಯದ ಕಿಡಿ| ನಗರದ ಪಟೇಲ್ ವೃತ್ತದಲ್ಲಿ ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಧ್ವಜಾರೋಹಣಕ್ಕೆ ಯತ್ನ| ಕ.ಕ ಕಡೆಗಣನೆಗೆ ಆಕ್ರೋಷ| ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಅಧ್ಯಕ್ಷ ಎಂ.ಎಸ್. ಪಾಟೀಲ್ ನರಿಬೋಳ ಸೇರಿದಂತೆ 30 ಕ್ಕೂ ಹೆಚ್ಚು ಸದಸ್ಯರ ಬಂಧನ|
ಕಲಬುರಗಿ[ನ.2]: ಪ್ರತ್ಯೇಕ ಧ್ವಜಾರೋಹಣಕ್ಕೆ ಯತ್ನಿಸಿದ ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಅಧ್ಯಕ್ಷ ಮಹಾದೇವಪ್ಪ ಗೌಡ ಪಾಟೀಲ್ ನರಿಬೋಳ್ ಸೇರಿದಂತೆ 30 ಕ್ಕೂ ಹೆಚ್ಚುಕಾರ್ಯಕರ್ತರನ್ನು ಶುಕ್ರವಾರ ಪೊಲೀಸರು ವಶಕ್ಕೆ ಪಡೆದು ನಂತರ ಬಿಡುಗಡೆ ಮಾಡಿದ್ದಾರೆ.
ಕನ್ನಡ ರಾಜ್ಯೋತ್ಸವ ದಿನದಂದೇ ಪ್ರತ್ಯೇಕ ಕಲ್ಯಾಣ ಕರ್ನಾಟಕ ರಾಜ್ಯಕ್ಕೆ ಆಗ್ರಹಿಸಿ ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ನಗರದ ಸರ್ದಾರ್ ಪಟೇಲ್ ವೃತ್ತದಲ್ಲಿ ಪ್ರತ್ಯೇಕ ಕಲ್ಯಾಣ ರಾಜ್ಯ ಧ್ವಜಾರೋಹಣಕ್ಕೆ ಮುಂದಾಗಿತ್ತು.ಈ ವೇಳೆ ಮುಂಜಾಗ್ರತಾ ಕ್ರಮವಾಗಿ ಧ್ವಜಾರೋಹಣಕ್ಕೆ ಮುಂದಾಗಿದ್ದ ಸಮಿತಿ ಸದಸ್ಯರನ್ನು ಪೊಲೀಸರು ವಶಕ್ಕೆ ಪಡೆದರು. ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಅಧ್ಯಕ್ಷ ಎಂ.ಎಸ್. ಪಾಟೀಲ್ ನರಿಬೋಳ ಸೇರಿದಂತೆ 30 ಕ್ಕೂ ಹೆಚ್ಚು ಸದಸ್ಯರನ್ನು ವಶಕ್ಕೆ ಪಡೆದರು. ಕಲ್ಯಾಣ ಕರ್ನಾಟಕಕ್ಕೆ ಪ್ರತಿಯೊಂದು ವಿಷಯದಲ್ಲಿ ಅನ್ಯಾಯ ಆಗಿದೆ. ರಾಜ್ಯಕ್ಕೆ ಚಿನ್ನ, ತೊಗರಿ,ವಿದ್ಯುತ್ ನೀಡುವವರು ಕಲ್ಯಾಣ ಕರ್ನಾಟಕದವರು. ಆದರೆ ಸತತವಾಗಿ ಕಲ್ಯಾಣ ಕರ್ನಾಟಕ ಭಾಗಕ್ಕೆ ಸಾಮಾಜಿಕ, ಆರ್ಥಿಕ, ರಾಜಕೀಯ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲಿಯೂ ಅನ್ಯಾಯವಾಗುತ್ತಿದೆ. 371 (ಜೆ) ವಿಧೇಯಕ ಜಾರಿಯಲ್ಲಿದ್ದರೂ ಸಮರ್ಪಕ ಜಾರಿಗೆ ತರದೆ ಅನ್ಯಾಯ ಮಾಡಲಾಗುತ್ತಿದೆ. ರಾಜ್ಯ ಸರ್ಕಾರಕ್ಕೆ ಈ ಭಾಗದ ಪ್ರಗತಿ ಬಗ್ಗೆ ಸಂಪೂರ್ಣ ನಿರ್ಲಕ್ಷ್ಯವಿದ್ದು, ಕಲ್ಯಾಣ ಕರ್ನಾಟಕ ಭಾಗಕ್ಕೆ ಪ್ರತ್ಯೇಕ ರಾಜ್ಯ ನೀಡುವಂತೆ ಕಾರ್ಯಕರ್ತರು ಆಗ್ರಹಿಸಿದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ರಾಜ್ಯ ಬಿಜೆಪಿ ನಾಯಕ ಉಮೇಶ್ ಕತ್ತಿ ಬಳಿಕ ಕಲ್ಯಾಣ ಕರ್ನಾಟಕದಲ್ಲಿ ಇದೀಗ ಮತ್ತೆ ಪ್ರತ್ಯೇಕ ರಾಜ್ಯದ ಕೂಗು ಎದ್ದಿದೆ. ಹಿಂದೆಯೂ ಈ ಕೂಗು ಇತ್ತಾದರೂ ಕಲಂ 371 (ಜೆ) ಜಾರಿಗೊಂಡ ನಂತರ ತುಸು ತಗ್ಗಿತ್ತು. ಆದರೀಗ ಬಿಜೆಪಿ ಸರ್ಕಾರದಲ್ಲಿ ಕ.ಕ ಪ್ರದೇಶ ಕಡೆಗಣಿಸಿರುವುದಕ್ಕೆ ಇಲ್ಲಿನ ಹೋರಾಟಗಾರರು ಪ್ರತ್ಯೇಕ ರಾಜ್ಯದ ಕೂಗು ಹಾಕಿದ್ದಾರೆ. ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಮೇಲಿಂದ ಮೇಲೆ ಅನ್ಯಾಯವಾಗುತ್ತಿದೆ. ಯಾವ ಪಕ್ಷದ ಸರ್ಕಾರ ಬಂದರು ಅನ್ಯಾಯ ಮುಂದುವರಿದಿದ್ದು,ಹೀಗಾಗಿ ಪ್ರತ್ಯೇಕ ರಾಜ್ಯದ ಕೂಗು ಹಾಕುತ್ತಿದ್ದೇವೆ ಎಂದು ಕ.ಕ. ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಅಧ್ಯಕ್ಷ ಮಹಾದೇವಪ್ಪಗೌಡ ಪಾಟೀಲ್ ನರಿಬೋಳ್ ದೂರಿದ್ದಾರೆ. ನಾಗಣ್ಣ ತಂಬೆ, ಮಂಜುನಾಥ ಅಂಕಲಗಿ,ಸಂತೋಷ ಪಾಟೀಲ್, ಅಶೋಕ, ರವಿ ಹೂಗಾರ್,ಶರಣು ಬಿರಾದಾರ್, ಜಗದೇವಿ, ಸಂತೋಷ್ ಗಂಗಸಿರಿ, ರಾಜು ಬಂಡೆ, ಸುಜಾತಾ, ಸವಿತಾ,ರವಿತಾ, ಮಮತಾ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.(ಸಾಂದರ್ಭಿಕ ಚಿತ್ರ)