ಚವಡಾಪುರ[ನ.12]: ಮುಜರಾಯಿ ಇಲಾಖೆಗೆ ಒಳಪಡುವ ದಕ್ಷಿಣ ಭಾರತದ ಐತಿಹಾಸಿಕ ಯಾತ್ರಾ ಸ್ಥಳ ಅಫಜಲ್ಪುರ ತಾಲೂಕಿನ ಸುಕ್ಷೇತ್ರ ದೇವಲ ಗಾಣಗಾಪುರಕ್ಕೆ ರಾಜ್ಯದ ಉಪಮುಖ್ಯಮಂತ್ರಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಮಂತ್ರಿ ಗೋವಿಂದ ಕಾರಜೋಳ ಭೇಟಿ ನೀಡಿ ದೇವಲ ಗಾಣಗಾಪುರ ಅಭಿವೃದ್ಧಿ ನೀಲನಕ್ಷೆ ವೀಕ್ಷಣೆ ಮಾಡಿದ್ದಾರೆ. 

ಬಳಿಕ ಮಾತನಾಡಿದ ಅವರು, ದೇವಲ ಗಾಣಗಾಪುರ ರಾಜ್ಯದ ಪ್ರಸಿದ್ಧ ಯಾತ್ರಾ ಸ್ಥಳವಾಗಿದೆ. ಇದು ಮುಜರಾಯಿ ಇಲಾಖೆಗೆ ಒಳಪಟ್ಟಿದ್ದು, ಈ ಕ್ಷೇತ್ರದ ಅಭಿವೃದ್ಧಿಗಾಗಿ ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬಹಳ ಮುತುವರ್ಜಿ ವಹಿಸಿ ಇಲ್ಲಿನ ಸ್ಥಳೀಯ ಮಾಜಿ ಶಾಸಕರು ಪಕ್ಷದ ಹಿರಿಯ ಮುಖಂಡರಾದ ಮಾಲೀಕಯ್ಯ ಗುತ್ತೇದಾರ ಅವರ ಅಪೇಕ್ಷೆಯ ಮೇರೆಗೆ 10 ಕೋಟಿ ಅನುದಾನ ಬಿಡುಗಡೆಗೊಳಿಸಿದ್ದಾರೆ. ಅಲ್ಲದೆ ದೇವಲ ಗಾಣಗಾಪುರವನ್ನು ಯಾವ ರೀತಿಯಲ್ಲಿ ಅಭಿವೃದ್ಧಿ ಪಡಿಸಬೇಕೆಂದು ನುರಿತ ತಂತ್ರಜ್ಞರು, ಅಧಿಕಾರಿಗಳಿಂದ ತ್ರಿಡಿ ಮಾದರಿ ನೀಲನಕ್ಷೆ ಸಿದ್ಧಪಡಿಸಲಾಗಿದೆ. ಇದರ ಪ್ರಕಾರ ಅಭಿವೃದ್ಧಿ ಕಾರ್ಯಗಳು ನಡೆಯಲಿವೆ ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಈ ಸಂದರ್ಭದಲ್ಲಿ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ (ಬಿ), ಬಸವರಾಜಮತ್ತಿಮೂಡ್, ಬಿಜೆಪಿ ಜಿಲ್ಲಾಧ್ಯಕ್ಷ ದೊಡ್ಡಪ್ಪಗೌಡ ಪಾಟೀಲ್, ಮಾಜಿ ಜಿಪಂ ಅಧ್ಯಕ್ಷ ನಿತೀನ್ ಗುತ್ತೇದಾರ, ಮುಖಂಡ ಗುರು ಸಾಲಿಮಠ, ಸಾಲಕಾರಿ ಪೂಜಾರಿ ವಸಂತ ಪೂಜಾರಿ ಇದ್ದರು.