ನವದೆಹಲಿ[ಸೆ.12]: ಇಂಗ್ಲೆಂಡ್‌ನಲ್ಲಿ ಶಿಕ್ಷಣ ಪಡೆಯುವ ಅನ್ಯ ರಾಷ್ಟ್ರದ ವಿದ್ಯಾರ್ಥಿಗಳಿಗೆ ಶಿಕ್ಷಣ ಪೂರ್ಣವಾದ ಬಳಿಕ ಅಲ್ಲೇ ಉದ್ಯೋಗ ಪಡೆಯಲು ಅನುಮತಿ ನೀಡುವ ಶಿಕ್ಷಣೋತ್ತರ ಉದ್ಯೋಗ ವೀಸಾ ಯೋಜನೆಯನ್ನು ಅಲ್ಲಿನ ಸರ್ಕಾರ ಬುಧವಾರ ಮತ್ತೆ ಜಾರಿಗೆ ತಂದಿದೆ. 2020-21 ರಲ್ಲಿ ಈ ಯೋಜನೆ ಜಾರಿಗೆ ಬರಲಿದ್ದು, ಇದರನ್ವಯ ಶಿಕ್ಷಣ ಪೂರ್ಣಗೊಳಿಸಿದ ಬಳಿಕ 2 ವರ್ಷಗಳ ಕಾಲ ಅಲ್ಲೇ ಉಳಿಯಬಹುದಾಗಿದೆ. ಇಂಗ್ಲೆಂಡ್‌ ಸರ್ಕಾರದ ಈ ನಿರ್ಧಾರ ಅಲ್ಲಿನ ಪ್ರತಿಷ್ಠಿತ ವಿಶ್ವವಿದ್ಯಾನಿಲಯಗಳಲ್ಲಿ ಶಿಕ್ಷಣ ಪಡೆಯುತ್ತಿರುವ ಅನ್ಯ ರಾಷ್ಟ್ರದ ವಿದ್ಯಾರ್ಥಿಗಳಿಗೆ ಅದರಲ್ಲೂ ಭಾರತೀಯ ವಿದ್ಯಾರ್ಥಿಗಳಿಗೆ ಭಾರೀ ಅನುಕೂಲವಾಗಲಿದೆ.

ಈ ಯೊಜನೆಯಡಿ ಪದವಿ ಹಾಗೂ ಸ್ನಾತಕೋತ್ತರ ಪದವಿ ಪಡೆಯುತ್ತಿರುವ ಇತರೆ ದೇಶಗಳ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಸಚಿವಾಲಯದ ಎಮಿಗ್ರೇಶನ್‌ ಮೂಲಕ ಅನುಮತಿ ನೀಡಲಿದ್ದು, ಶಿಕ್ಷಣ ಬಳಿಕ ಅಲ್ಲೇ ಉದ್ಯೋಗ ಪಡೆಯಲಿಚ್ಛಿಸುವ ವಿವಿಧ ಕ್ಷೇತ್ರಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಇದು ಅನುಕೂಲವಾಗಲಿದೆ. ಇಲ್ಲೇ ಕೆಲಸ ಮಾಡಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬಹುದು ಎಂದು ಇಂಗ್ಲೆಂಡ್‌ ಗೃಹ ಕಾರ್ಯದರ್ಶಿ ಪ್ರೀತಿ ಪಟೇಲ್‌ ಹೇಳಿದ್ದಾರೆ.

ವರ್ಷಪ್ರಂತಿ ಶಿಕ್ಷಣಕ್ಕಾಗಿ ಇಂಗ್ಲೆಂಡ್‌ಗೆ ತೆರಳುವ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆಯೂ ಹೆಚ್ಚಳವಾಗುತ್ತಿದ್ದು, 2018-19ರಲ್ಲಿ ಬರೋಬ್ಬರಿ 22000 ಭಾರತೀಯ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕೆ ಇಂಗ್ಲೆಂಡ್‌ಗೆ ತೆರಳಿದ್ದಾರೆ. ಇದು ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಶೇ.42 ರಷ್ಟುಅಧಿಕವಾಗಿದ್ದು, ಹಿಂದಿನ ಮೂರು ವರ್ಷಕ್ಕೆ ಹೋಲಿಸಿದರೇ ಹೆಚ್ಚು ಕಡಿಮೆ ಶೇ.100 ರಷ್ಟುಏರಿಕೆಯಾಗಿದೆ. ಅಲ್ಲದೇ ಕಳೆದ 10 ವರ್ಷಗಳಲ್ಲಿ ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್‌ ಹಾಗೂ ಗಣಿತಶಾಸ್ತ್ರದ ಶೇ.50ರಷ್ಟುವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕೆ ಇಂಗ್ಲೆಂಡ್‌ಗೆ ತೆರಳುತ್ತಿದ್ದಾರೆ.

ಭಾರತೀಯ ವಿದ್ಯಾರ್ಥಿಗಳಿಗೆ ಇದು ಶುಭ ಸುದ್ದಿಯಾಗಿದ್ದು, ಶಿಕ್ಷಣ ಬಳಿಕ ಇಂಗ್ಲೆಂಡ್‌ನಲ್ಲಿ ಉಳಿದುಕೊಂಡು ಕೌಶಲ್ಯ ಹಾಗೂ ಅನುಭವ ಹೆಚ್ಚಸಿಕೊಳ್ಳುವ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ಭಾರತದ ಬ್ರಿಟೀಶ್‌ ರಾಯಭಾರಿ ಡೊಮಿನಿಕ್‌ ಅಸ್‌ಖ್ವಿತ್‌ ಹೇಳಿದ್ದಾರೆ. 2012ರಲ್ಲಿ ಅಂದಿನ ಗೃಹ ಕಾರ್ಯದರ್ಶಿಯಾಗಿದ್ದ ಮಾಜಿ ಪ್ರಧಾನಿ ಥೆರೆಸಾ ಮೇ ಶಿಕ್ಷಣೋತ್ತರ ಉದ್ಯೋಗ ವೀಸಾ ಯೋಜನೆಯನ್ನು ರದ್ದು ಮಾಡಿದ್ದರು.