ಬೆಂಗಳೂರು [ಸೆ.17]:  ಅನುಕಂಪ ಆಧಾರದಡಿ ನೌಕರಿಗೆ ಅರ್ಜಿ ಸಲ್ಲಿಸಿದ ಮಹಿಳೆಯೊಬ್ಬರ ನೋವಿಗೆ ಸ್ಪಂದಿಸಿದ ವಸತಿ ಸಚಿವ ವಿ.ಸೋಮಣ್ಣ, ಅರ್ಧ ತಾಸಿನಲ್ಲಿ ಸಂತ್ರಸ್ತೆಗೆ ನ್ಯಾಯ ಕೊಡಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದ ಘಟನೆ ಸೋಮವಾರ ಕಾವೇರಿ ಭವನದಲ್ಲಿ ಜರುಗಿತು.

ನಗರದ ಕಾವೇರಿ ಭವನದ ಗೃಹ ಮಂಡಳಿ ಕಚೇರಿಯಲ್ಲಿ ವಸತಿ ಯೋಜನೆಗಳ ಕುರಿತು ತಮ್ಮ ಇಲಾಖೆಯ ಅಧಿಕಾರಿಗಳ ಸಭೆಯನ್ನು ಸಚಿವ ವಿ.ಸೋಮಣ್ಣ ಸಭೆ ಕರೆದಿದ್ದರು.

ಈ ವೇಳೆ ಸಚಿವರನ್ನು ಭೇಟಿಯಾದ ಸಂತ್ರಸ್ತೆ, ‘ನಮ್ಮ ಪತಿ ಮಂಜುನಾಥ್‌ ಗೃಹ ಮಂಡಳಿಯ ದ್ವಿತೀಯ ದರ್ಜೆ ಸಹಾಯಕರಾಗಿದ್ದರು. ಕರ್ತವ್ಯದಲ್ಲಿದ್ದಾಗಲೇ ರೈಲ್ವೆ ಅಪಘಾತದಲ್ಲಿ ಅವರು ಮೃತಪಟ್ಟಿದ್ದಾರೆ. ಅನುಕಂಪದ ಆಧಾರದಡಿ ಕೆಲಸ ನೀಡುವಂತೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾರೊಬ್ಬರು ಸ್ಪಂದಿಸುತ್ತಿಲ್ಲ’ ಎಂದು ನೋವು ತೋಡಿಕೊಂಡರು.

ಈ ಮನವಿಗೆ ಸ್ಪಂದಿಸಿದ ಸಚಿವ, ಅಧಿಕಾರಿಗಳನ್ನು ಸ್ಥಳದಲ್ಲೇ ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡರು. ‘ನಿಮ್ಮ ಕುಟುಂಬದ ಹೆಣ್ಣು ಮಗಳಿಗೆ ಇಂತಹ ಪರಿಸ್ಥಿತಿ ಎದುರಾಗಿದ್ದರೆ ಇದೇ ರೀತಿ ವರ್ತಿಸುತ್ತಿದ್ದೀರಾ?’ ಎಂದು ಸಚಿವರು ಹರಿಹಾಯ್ದಿದ್ದಾರೆ. ಅಲ್ಲದೆ, ‘ಇನ್ಮುಂದೆ ರೀತಿ ನಡವಳಿಕೆ ಸಹಿಸುವುದಿಲ್ಲ. ನೊಂದವರಿಗೆ ನ್ಯಾಯ ಕೊಡಬೇಕು. ಕೂಡಲೇ ಆ ಮಹಿಳೆಗೆ ನೌಕರಿ ಕೊಡಿಸುವ ಸಂಬಂಧ ಕಡತವು ವಿಲೇವಾರಿ ಮಾಡಿ’ ಎಂದು ಸೋಮಣ್ಣ ಸೂಚಿಸಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇನ್ನು ಅರ್ಧ ತಾಸಿನೊಳಗೆ ಆ ಮಹಿಳೆಗೆ ಉದ್ಯೋಗ ಸಿಗದೆ ಹೋದರೆ ನಾನೇ ನಿಮ್ಮ (ಅಧಿಕಾರಿಗಳ) ಮೇಲೆ ಕ್ರಿಮಿನಲ್‌ ಕೇಸ್‌ ದಾಖಲಿಸುತ್ತೇನೆ ಎಂದು ಸಚಿವರು ಎಚ್ಚರಿಕೆ ನೀಡಿದ್ದಾರೆ.

ನನ್ನ ಪತಿ ಸರ್ಕಾರಿ ಕರ್ತವ್ಯದಲ್ಲಿದ್ದಾಗಲೇ ಅಪಘಾತಕ್ಕೀಡಾದರು. ಅವರ ಅಗಲಿಕೆಗೆ ಬಳಿಕ ನಾನು ಚಿತ್ರದುರ್ಗದಲ್ಲಿರುವ ತಾಯಿ ಮನೆಯಲ್ಲಿ ನೆಲೆಸಿದ್ದೇನೆ. ಅನುಕಂಪದಡಿ ನೌಕರಿಗೆ ಅರ್ಜಿ ಸಲ್ಲಿಸಿ ಚಿತ್ರದುರ್ಗದಿಂದ ಬೆಂಗಳೂರಿಗೆ ಹತ್ತಾರು ಬಾರಿ ಬಂದರೂ ಪ್ರಯೋಜನವಾಗಿರಲ್ಲಿಲ್ಲ. ಈಗ ಸಚಿವರು ನನ್ನ ಮನವಿಗೆ ಸ್ಪಂದಿಸಿದ್ದಾರೆ ಎಂದು ನೊಂದ ಮಹಿಳೆ ಹೇಳಿದ್ದಾರೆ.