ವಿದೇಶಿ ಕಂಪನಿಗಳಲ್ಲಿ ಕನ್ನಡಿಗರಿಗೆ ನೌಕರಿ ಕೊಡಿಸಲು ಸರ್ಕಾರ ಬದ್ಧ
- ರಾಜ್ಯದಲ್ಲಿ ಸ್ಥಾಪನೆಯಾಗಿರುವ ವಿದೇಶಿ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಕಲ್ಪಿಸಲು ರಾಜ್ಯ ಸರ್ಕಾರ ಬದ್ಧ
- ಈ ನಿಟ್ಟಿನಲ್ಲಿ ಎಲ್ಲ ರೀತಿಯ ಪ್ರಯತ್ನ ಮಾಡುತ್ತಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನಿಲ್‌ಕುಮಾರ್
ಬೆಂಗಳೂರು (ಸೆ.02): ರಾಜ್ಯದಲ್ಲಿ ಸ್ಥಾಪನೆಯಾಗಿರುವ ವಿದೇಶಿ ಕಂಪನಿಗಳಲ್ಲಿ (Foreign Company) ಕನ್ನಡಿಗರಿಗೆ ಉದ್ಯೋಗ ಕಲ್ಪಿಸಲು ರಾಜ್ಯ ಸರ್ಕಾರ ಬದ್ಧವಾಗಿದ್ದು, ಈ ನಿಟ್ಟಿನಲ್ಲಿ ಎಲ್ಲ ರೀತಿಯ ಪ್ರಯತ್ನ ಮಾಡುತ್ತಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನಿಲ್‌ಕುಮಾರ್ (Sunil kumar) ತಿಳಿಸಿದರು.
ಕೊಂಡಜ್ಜಿ ಬಸಪ್ಪ (Basappa Kondajji) ಸಭಾಂಗಣದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಮ್ಮಿಕೊಂಡಿದ್ದ ‘ಬದಲಾದ ಉದ್ಯೋಗ ಪರ್ವ’ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
1984ರಲ್ಲಿ ಬಂದಂತಹ ಡಾ.ಸರೋಜಿನಿ ಮಹಿಷಿ (Sarojini Mahishi) ವರದಿ ಆ ಹೊತ್ತಿನ ಕಾಲಘಟ್ಟದ ಅಗತ್ಯತೆಗಳಿಗೆ ಮಾನ್ಯತೆ ನೀಡಿದೆ. ನಂತರದ ಕಾಲಘಟ್ಟದಲ್ಲಿ ಹೊಸ ಹೊಸ ಕಂಪನಿಗಳು ರಾಜ್ಯದಲ್ಲಿ ಸ್ಥಾಪನೆಯಾಗಿವೆ. ಅವುಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಸಿಗುವಂತೆ ಮಾಡಲು ಸರ್ಕಾರ ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡುತ್ತಿದೆ ಎಂದರು.
ಡಿಜಿ ಸಕ್ಷಮ್; ಉದ್ಯೋಗಾವಕಾಶ ಹೆಚ್ಚಿಸುವ ಡಿಜಿಟಲ್ ಕೌಶಲ್ಯ ಕಾರ್ಯಕ್ರಮಕ್ಕೆ ಚಾಲನೆ!
ಕರ್ನಾಟಕದಲ್ಲಿರುವ (Karnataka) ಎಲ್ಲ ಸಂಸ್ಥೆಗಳು ಕನ್ನಡಕ್ಕೆ ಮಾನ್ಯತೆ ನೀಡಬೇಕು. ಜೊತೆಗೆ ಸ್ಥಳೀಯರಿಗೂ ಉದ್ಯೋಗದಲ್ಲಿ ಆದ್ಯತೆ ನೀಡಬೇಕು. ಈ ಬಗ್ಗೆ ಯಾವ ಹಂತದಲ್ಲಿ ಏನೇನು ಕಾರ್ಯಗಳು ಆಗಬೇಕು ಎಂಬುದರ ಕುರಿತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪರಿಣಾಮಕಾರಿಯಾದ ನಿರ್ಣಯಗಳನ್ನು ತೆಗೆದುಕೊಳ್ಳಲಿದೆ. ಸ್ಥಳೀಯ ಕನ್ನಡಿಗರಿಗೆ ಉದ್ಯೋಗ ದೊರಕಿಸಿ ಕೊಡುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಹಾಗೂ ಕಾರ್ಮಿಕ ಇಲಾಖೆಯೊಂದಿಗೆ ಚರ್ಚಿಸುವುದಾಗಿ ಭರವಸೆ ನೀಡಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ಮಾತನಾಡಿ, ರಾಜ್ಯದ ಐಟಿ, ಬಿಟಿ ಕ್ಷೇತ್ರಗಳನ್ನು ಒಳಗೊಂಡಂತೆ ಖಾಸಗಿ ವಲಯದಲ್ಲಿ ಸ್ಥಳೀಯ ಕನ್ನಡಿಗರಿಗೆ ಪ್ರಾತಿನಿಧ್ಯ ಕಲ್ಪಿಸುವ ಮಸೂದೆ ರೂಪಿಸುವಂತೆ ರಾಜ್ಯ ಸರ್ಕಾರವನ್ನು ಪ್ರಾಧಿಕಾರ ಸತತವಾಗಿ ಒತ್ತಾಯಿಸುತ್ತಿದೆ. ಪ್ರಸ್ತಾಪಿತ ಮಸೂದೆಯಲ್ಲಿ ಲೋಕಲ್ ಪೀಪಲ್ ( Local People) ಎಂದರೆ ಕನ್ನಡವನ್ನು ಒಂದು ಭಾಷೆಯನ್ನಾಗಿ 1ನೇ ತರಗತಿಯಿಂದ 10ನೇ ತರಗತಿಯವರೆಗೆ ಓದಿ ತೇರ್ಗಡೆ ಹೊಂದಿರಬೇಕು. ಕರ್ನಾಟಕದಲ್ಲಿ 15 ವರ್ಷ ನೆಲೆಸಿದ್ದು, ಕನ್ನಡ ಓದಲು, ಬರೆಯಲು ಮಾತನಾಡಲು ಬರಬೇಕು ಎಂಬ ಅಂಶಗಳನ್ನು ಸೇರಿಸಬೇಕು ಎಂದು ಆಗ್ರಹಿಸಿದರು.
ರಾಜ್ಯಸಭಾ ಸದಸ್ಯ ಡಾ.ಎಲ್.ಹನುಮಂತಯ್ಯ ‘ಬದಲಾದ ಉದ್ಯೋಗ ಪರ್ವ’ ವಿಷಯ ಮಂಡನೆ ಮಾಡಿದರು. ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ತಾಂತ್ರಿಕ ಕೋಶದ ಜಂಟಿ ನಿರ್ದೇಶಕರಾದ ಎಚ್.ಎಸ್. ಜಯಕುಮಾರ್, ಕನ್ನಡಪರ ಚಿಂತಕ ರಾ.ನಂ.ಚಂದ್ರಶೇಖರ್, ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಯ ಅಧ್ಯಯನ ಸಂಸ್ಥೆಯ ನಿವೃತ್ತ ನಿರ್ದೇಶಕ ಪ್ರೊ. ಚಂದ್ರಕಾಂತ್, ಕೃಷಿ ಉದ್ಯೋಗ ಹಾಗೂ ಮಾಹಿತಿ ತಂತ್ರಜ್ಞಾನ ತಜ್ಞ ಟಿ.ಜಿ.ಶ್ರೀನಿಧಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕಾರ್ಯದರ್ಶಿ ಡಾ.ಸಂತೋಷ ಹಾನಗಲ್ಲ ಉಪಸ್ಥಿತರಿದ್ದರು.