Asianet Suvarna News Asianet Suvarna News

ಕರುನಾಡ ನೌಕರಿ ಸ್ಥಳೀಯರಿಗೇ ಸಿಗೋದೆಂದು?

ಕರ್ನಾಟದಲ್ಲಿ ಉದ್ಯೋಗ ಮೀಸಲಾತಿಗೆ ಮತ್ತೆ ಹಕ್ಕೊತ್ತಾಯ ಕೇಳಿಬರುತ್ತಿದೆ. ಇದೀಗ ಯಡಿಯೂರಪ್ಪ ನೇತೃತ್ವದ ಸರ್ಕಾರ ನ್ಯಾಯ ದೊರಕಿಸುವುದೇ ಎನ್ನುವ ನಿರೀಕ್ಷೆಯಲ್ಲಿದ್ದಾರೆ. 

Kannadigas Wants job Reservation in Karnataka
Author
Bengaluru, First Published Aug 8, 2019, 7:56 AM IST
  • Facebook
  • Twitter
  • Whatsapp

ಕರುನಾಡ ನೌಕರಿ ಸ್ಥಳೀಯರಿಗೇ ಸಿಗೋದೆಂದು?

ಶ್ರೀಕಾಂತ್‌.ಎನ್‌.ಗೌಡಸಂದ್ರ

ಬೆಂಗಳೂರು [ಆ.08]: ಮಾನ್ಯ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರೇ, ಸ್ಥಳೀಯರಿಗೆ ಉದ್ಯೋಗ ಮೀಸಲಾತಿ ಬೇಕು ಎಂಬ ದಶಕಗಳ ಹಕ್ಕೊತ್ತಾಯಕ್ಕೆ ನೀವಾದರೂ ನ್ಯಾಯ ದೊರಕಿಸುವಿರಾ?

ನಮ್ಮ ನೆರೆಯ ರಾಜ್ಯ ಆಂಧ್ರಪ್ರದೇಶದಲ್ಲಿ ಅಲ್ಲಿನ ಸರ್ಕಾರ ಸದ್ದುಗದ್ದಲವಿಲ್ಲದೇ ಸ್ಥಳೀಯರಿಗೆ ಶೇ.75ರಷ್ಟುಉದ್ಯೋಗ ಮೀಸಲಾತಿ ಕಲ್ಪಿಸಿದೆ. ಆದರೆ, ಮೂರು ದಶಕಗಳ ಹಿಂದೆಯೇ ಇಂತಹದೊಂದು ದನಿಯೆತ್ತಿ ಹೋರಾಟ ನಡೆಸಿದ್ದರೂ ಕರುನಾಡ ವಾಸಿಗಳಿಗೆ ಮಾತ್ರ ಇನ್ನೂ ನ್ಯಾಯ ದೊರಕಿಲ್ಲ.

ಹಾಗೆ ನೋಡಿದರೆ, ಸ್ಥಳೀಯರಿಗೆ ಉದ್ಯೋಗದಲ್ಲಿ ಮೀಸಲಾತಿಗಾಗಿ ದನಿಯೆತ್ತಿದ ದೇಶದ ಎರಡನೇ ರಾಜ್ಯ ಕರ್ನಾಟಕ. ಮಹಾರಾಷ್ಟ್ರದಲ್ಲಿ ನಡೆದ ಉಗ್ರ ಹೋರಾಟದ ನಂತರ ಕನ್ನಡಿಗರು ಗೋಕಾಕ್‌ ವರದಿ ಜಾರಿಗಾಗಿ ದೊಡ್ಡ ಆಂದೋಲನವನ್ನೇ ಮಾಡಿದರು. ದುರಂತವೆಂದರೆ, ಮೂರು ದಶಕದ ಹಿಂದೆಯೇ ಕರುನಾಡಿನಲ್ಲಿ ಇಂತಹದೊಂದು ಆಗ್ರಹ ಕೇಳಿಬಂದರೂ ಎಲ್ಲಾ ಸರ್ಕಾರಗಳು ಸ್ಥಳೀಯರ ಮೂಗಿಗೆ ಬೆಣ್ಣೆ ಹಚ್ಚಿದವೇ ಹೊರತು ನ್ಯಾಯ ಕೊಡಲಿಲ್ಲ.

ಆಂಧ್ರಪ್ರದೇಶ ಈ ವಿಚಾರದಲ್ಲಿ ದಾಪುಗಾಲಿಡುತ್ತಿದ್ದಂತೆಯೇ ಗೋವಾ ಹಾಗೂ ಮಹಾರಾಷ್ಟ್ರ ರಾಜ್ಯಗಳು ಸ್ಥಳೀಯರಿಗೆ ಉದ್ಯೋಗ ಮೀಸಲಾತಿ ಕಲ್ಪಿಸುವ ಬದ್ಧತೆ ಪ್ರದರ್ಶಿಸಿದ್ದು, ಈ ಬಗೆಗಿನ ಪ್ರಕ್ರಿಯೆ ಆರಂಭಿಸಿವೆ. ಆದರೆ, ಕರ್ನಾಟಕ ಮಾತ್ರ ಸ್ಥಳೀಯರಿಗೆ ಉದ್ಯೋಗ ಮೀಸಲಾತಿ ವಿಚಾರದಲ್ಲಿ ದಿವ್ಯ ನಿರ್ಲಕ್ಷ್ಯ ತಾಳಿದೆ. ಈ ನಿರ್ಲಕ್ಷ್ಯ ದ್ರೋಹ ನಿಲ್ಲಬೇಕು. ಸ್ಥಳೀಯರಿಗೆ ಉದ್ಯೋಗದಲ್ಲಿ ಮೀಸಲಾತಿ ದೊರಯಬೇಕು ಎಂಬುದು ಕನ್ನಡಪ್ರಭದ ಹಕ್ಕೊತ್ತಾಯ.

ಆಂಧ್ರದ ಬದ್ಧತೆ ದೇಶದ ಹಲವು ರಾಜ್ಯಗಳ ನಾಯಕರನ್ನು ಈ ದಿಸೆಯಲ್ಲಿ ಹೆಜ್ಜೆಯಿಡುವಂತೆ ಮಾಡಿದೆ. ಗುಜರಾತ್‌ ಮುಖ್ಯಮಂತ್ರಿ ವಿಜಯ್‌ ರೂಪಾನಿ, ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲನಾಥ್‌, ಗೋವಾ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌, ಮಹಾರಾಷ್ಟ್ರದ ಕೈಗಾರಿಕಾ ಸಚಿವ ಸುಭಾಷ್‌ ದೇಸಾಯಿ ಅವರು ಸ್ಥಳೀಯರಿಗೆ ಉದ್ಯೋಗ ಮೀಸಲಾತಿ ಪರ ಧ್ವನಿಯೆತ್ತಿದ್ದಾರೆ. ಅಷ್ಟೇ ಅಲ್ಲ, ಈ ದಿಸೆಯಲ್ಲಿ ಕಾರ್ಯೋನ್ಮುಖರೂ ಆಗಿದ್ದಾರೆ. ಆದರೆ ಯಡಿಯೂರಪ್ಪನವರೇ, ನೀವು ಮಾತ್ರ ಈ ವಿಚಾರದಲ್ಲಿ ಇನ್ನೂ ತುಟಿ ಬಿಚ್ಚಿಲ್ಲ.

ಕನ್ನಡಪ್ರಭದ ಹಕ್ಕೊತ್ತಾಯ ಕೇಳಿಯಾದರೂ ಸ್ಥಳೀಯರ ಅಳಲು ನಿಮ್ಮನ್ನು ತಟ್ಟಲಿ, ಸ್ಥಳೀಯ ಯುವ ಸಮೂಹ ನಿಮ್ಮತ್ತ ಆಶಾಭಾವನೆಯಿಂದ ನೋಡುತ್ತಿದೆ ಎಂಬುದು ನಿಮ್ಮ ಅರಿವಿಗೆ ಬರಲಿ ಎಂಬುದು ನಮ್ಮ ಆಶಯ.

ಏಕೆ ಈ ಹಕ್ಕೊತ್ತಾಯ:  ಆಂಧ್ರಪ್ರದೇಶ ಸರ್ಕಾರ ಜು.23ರಂದು ಸ್ಥಳೀಯರಿಗೆ ಉದ್ಯಮ, ಕಾರ್ಖಾನೆ ಹಾಗೂ ಪಿಪಿಪಿ ಯೋಜನೆಗಳಲ್ಲಿ ಶೇ.75ರಷ್ಟುಮೀಸಲಾತಿ ಕಲ್ಪಿಸುವುದಾಗಿ ಪ್ರಕಟಿಸಿದೆ. ಇದರ ಬೆನ್ನಲ್ಲೇ ಮಹಾರಾಷ್ಟ್ರ ಸರ್ಕಾರವು 2008ರಲ್ಲೇ ಜಾರಿಗೆ ತಂದಿರುವ ಶೇ.80ರವರೆಗಿನ ಮೀಸಲಾತಿಯ ಸಮರ್ಪಕ ಅನುಷ್ಠಾನಕ್ಕೆ ಪ್ರತ್ಯೇಕ ಕಾನೂನು ರೂಪಿಸುವುದಾಗಿ ಘೋಷಿಸಿದೆ. ಜತೆಗೆ, ಗೋವಾ ಸರ್ಕಾರವೂ ತನ್ನ ರಾಜ್ಯದ ಜನತೆಗೆ ಖಾಸಗಿ ಉದ್ಯೋಗಗಳಲ್ಲಿ ಶೇ.80ರಷ್ಟುಮೀಸಲಾತಿ ಕಲ್ಪಿಸಲಾಗುವುದು ಎಂದು ಪ್ರಕಟಿಸಿದೆ. ಅಲ್ಲದೆ, ಈ ಶೇ.80ರಷ್ಟುಉದ್ಯೋಗಗಳಲ್ಲಿನ ಶೇ.60 ಉದ್ಯೋಗಗಳು ಕಾಯಂ ಹುದ್ದೆಗಳಾಗಿರಬೇಕು ಎಂದು ಖುದ್ದು ಗೋವಾ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ ಘೋಷಿಸಿದ್ದಾರೆ.

ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್‌ಮೋಹನ ರೆಡ್ಡಿ ಅವರು, ವಿಧಾನಸಭೆ ಚುನಾವಣಾ ಪ್ರಚಾರದಲ್ಲಿ ನೀಡಿದ್ದ ಭರವಸೆಯನ್ನು ಅಧಿಕಾರಕ್ಕೆ ಬಂದ ಎರಡೇ ತಿಂಗಳಲ್ಲಿ ಪೂರೈಸಿದ್ದಾರೆ. ಆದರೆ, ಕಳೆದ 33 ವರ್ಷಗಳಿಂದ ಸತತವಾಗಿ ರಾಜಕೀಯ ಪಕ್ಷಗಳು, ಕನ್ನಡಪರ ಸಂಘಟನೆಗಳು, ಕಾರ್ಮಿಕ ಹಾಗೂ ಸಾಮಾಜಿಕ ಸಂಘಟನೆಗಳು ಹೋರಾಟ ಮಾಡುತ್ತಿದ್ದರೂ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಕಲ್ಪಿಸಲು ಕರ್ನಾಟಕದ ಸರ್ಕಾರಗಳು ಬದ್ಧತೆ ತೋರಿಲ್ಲ.

ಬದ್ಧತೆ ತೋರುತ್ತಿರುವ ರಾಜ್ಯಗಳು : ಮಹಾರಾಷ್ಟ್ರ ಸರ್ಕಾರವು 1968ರ ವರದಿ ಆಧರಿಸಿ 2008ರಲ್ಲೇ ಸ್ಥಳೀಯರಿಗೆ ಖಾಸಗಿ ಉದ್ಯೋಗಗಳಲ್ಲಿ ಮೀಸಲಾತಿ ಕಲ್ಪಿಸಿದೆ. ಖಾಸಗಿ ಉದ್ಯೋಗಗಳಲ್ಲಿ ಶೇ.50ರಷ್ಟುಸೂಪರ್‌ವೈಸರಿ ಹುದ್ದೆ ಹಾಗೂ ಶೇ.80ರಷ್ಟುನಾನ್‌-ಸೂಪರ್‌ವೈಸರಿ ಹುದ್ದೆಗಳ ಮೀಸಲಾತಿ ಕಲ್ಪಿಸಿದೆ. ಇದರಿಂದಾಗಿ ಪ್ರಸ್ತುತ ರಾಜ್ಯದಲ್ಲಿರುವ ಉದ್ಯೋಗಗಳ ಪೈಕಿ ಶೇ.84ರಷ್ಟುಉದ್ಯೋಗವನ್ನು ಸ್ಥಳೀಯರೇ ಅನುಭವಿಸುತ್ತಿದ್ದಾರೆ. ಇದೀಗ ಶೇ.80ರಷ್ಟುಮೀಸಲಾತಿ ಕಡ್ಡಾಯವಾಗಿ ಅನುಷ್ಠಾನಗೊಳಿಸಲು ಪ್ರತ್ಯೇಕ ಕಾನೂನನ್ನೂ ರೂಪಿಸಲಾಗುವುದು. ನಿಯಮ ಉಲ್ಲಂಘಿಸಿದರೆ ಜಿ.ಎಸ್‌.ಟಿ. ಸೌಲಭ್ಯ ತಡೆಯಲಾಗುವುದು ಎಂದು ಎರಡು ದಿನದ ಹಿಂದೆ ಮಹಾರಾಷ್ಟ್ರ ಕೈಗಾರಿಕಾ ಸಚಿವ ಸುಭಾಷ್‌ ದೇಸಾಯಿ ಘೋಷಿಸಿದ್ದಾರೆ.

ಇದಲ್ಲದೆ, ಫಾರ್ಮಸಿ ಹಬ್‌ ಎಂದೇ ಖ್ಯಾತಿ ಪಡೆದಿರುವ ಹಿಮಾಚಲ ಪ್ರದೇಶವು ಶೇ.70ರಷ್ಟುಮೀಸಲಾತಿಯನ್ನು ಸ್ಥಳೀಯರಿಗೆ ಕಲ್ಪಿಸಿದೆ. ಒಡಿಶಾ ಸರ್ಕಾರವು 2010ರಲ್ಲಿ ನಿರ್ವಹಣೆ (ಮ್ಯಾನೇಜ್‌ಮೆಂಟ್‌) ಹಂತದಲ್ಲಿ ಶೇ.30, ಶೇ.60 ಕೌಶಲ್ಯ ಉದ್ಯೋಗ, ಶೇ.90 ಕೌಶಲ್ಯರಹಿತ ಹಾಗೂ ಅರೆ ಕೌಶಲ್ಯದ ಕೆಲಸಗಳಲ್ಲಿ ಸ್ಥಳೀಯರಿಗೆ ಮೀಸಲಾತಿ ಈಗಾಗಲೇ ಕಲ್ಪಿಸಿದೆ.

ಇದಲ್ಲದೆ ಆಂಧ್ರಪ್ರದೇಶದಲ್ಲಿ ಶೇ.75ರಷ್ಟುಖಾಸಗಿ ಉದ್ಯಮ, ಕಾರ್ಖಾನೆ ಹಾಗೂ ಪಿಪಿಪಿ ಯೋಜನೆಗಳಲ್ಲಿ ಮೀಸಲಾತಿ ಕಲ್ಪಿಸಲಾಗಿದೆ. ಗೋವಾ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ ಖಾಸಗಿ ಉದ್ಯೋಗಗಳಲ್ಲಿ ಶೇ.80ರಷ್ಟನ್ನು ಸ್ಥಳೀಯರಿಗೆ ಮೀಸಲು ನೀಡುವುದಾಗಿ ಹಾಗೂ ಶೇ.80ರಷ್ಟುಉದ್ಯೋಗಗಳಲ್ಲಿನ ಶೇ.60 ಉದ್ಯೋಗಗಳನ್ನು ಕಾಯಂ ಆಧಾರದ ಮೇಲೆ ನೇಮಿಸುವುದಾಗಿ ಪ್ರಕಟಿಸಿದ್ದಾರೆ. ಇದರ ಬೆನ್ನಲ್ಲೇ ಗುಜರಾತ್‌ ಮುಖ್ಯಮಂತ್ರಿ ವಿಜಯ್‌ ರೂಪಾನಿ, ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲ್‌ನಾಥ್‌ ಸ್ಥಳೀಯ ಮೀಸಲಾತಿ ಪರ ಧ್ವನಿ ಎತ್ತಿದ್ದಾರೆ.

ದೇಶದಲ್ಲಿ ಸ್ಥಳೀಯರಿಗೆ ಉದ್ಯೋಗ ಮೀಸಲಾತಿಯ ನ್ಯಾಯ ಕಲ್ಪಿಸಲು ಇಷ್ಟೆಲ್ಲಾ ಆಗುತ್ತಿದ್ದರೂ ಕರ್ನಾಟಕದಲ್ಲಿ ಮಾತ್ರ ಯಾರೊಬ್ಬರೂ ಬದ್ಧತೆ ಪ್ರದರ್ಶಿಸುತ್ತಿಲ್ಲ.

33 ವರ್ಷಗಳ ಹೋರಾಟಕ್ಕೆ ಬೆಲೆ ಇಲ್ಲ:

ಕರ್ನಾಟಕದಲ್ಲಿ (1986) ಡಾ.ಸರೋಜಿನಿ ಮಹಿಷಿ ಅವರ ವರದಿ ಮೂಲಕ ರಾಜ್ಯದಲ್ಲಿ ಸ್ಥಳೀಯರಿಗೆ ಉದ್ಯೋಗ ಮೀಸಲಾತಿ ಕಲ್ಪಿಸುವ ಐತಿಹಾಸಿಕ ಶಿಫಾರಸು ಮಾಡಲಾಗಿತ್ತು. ವರದಿಯಲ್ಲಿ ರಾಜ್ಯದಲ್ಲಿರುವ ಕೇಂದ್ರ ಸರ್ಕಾರದ ಸಾರ್ವಜನಿಕ ವಲಯದ ಸಂಸ್ಥೆಗಳ (ಪಿಎಸ್‌ಯು) ಸಿ ಹಾಗೂ ಡಿ ದರ್ಜೆ ನೌಕರಿಗೆ ಶೇ.100, ಬಿ ವರ್ಗದ ಹುದ್ದೆಗಳಿಗೆ ಶೇ.80ರಷ್ಟುಹಾಗೂ ಎ ವರ್ಗದ ನೇಮಕಾತಿಗಳಲ್ಲಿ ಶೇ.65ರಷ್ಟುಮೀಸಲಾತಿ ಕಲ್ಪಿಸಬೇಕು. ಕರ್ನಾಟಕ ರಾಜ್ಯ ಸರ್ಕಾರಿ ಸಂಸ್ಥೆಗಳಲ್ಲಿ ಶೇ.100ರಷ್ಟುಕನ್ನಡಿಗರನ್ನು ಮಾತ್ರ ನೇಮಕ ಮಾಡಬೇಕು. ತಾಂತ್ರಿಕ ಅರ್ಹತೆ ಇನ್ನಿತರ ತೀರಾ ಅನಿವಾರ್ಯತೆ ಇರುವ ಸಂದರ್ಭಗಳಲ್ಲಿ ಮಾತ್ರ ಬೇರೆಯವರಿಗೆ ಅವಕಾಶ ನೀಡಬೇಕು. ಕನ್ನಡಿಗರ ಸಂಖ್ಯೆ ಕಡಿಮೆ ಇರುವ ಸಂಸ್ಥೆಗಳಲ್ಲಿ ಕಡ್ಡಾಯವಾಗಿ ಕನ್ನಡಿಗರನ್ನು ಮಾತ್ರವೇ ಆಯ್ಕೆ ಮಾಡಬೇಕು. ಉಳಿದಂತೆ ಖಾಸಗಿ ಕಾರ್ಖಾನೆಗಳಲ್ಲಿ ಎಲ್ಲಾ ಹುದ್ದೆಗಳಿಗೂ ಶೇ.100ರಷ್ಟುಕನ್ನಡಿಗರಿಗೆ ಮಾತ್ರವೇ ಉದ್ಯೋಗ ಅವಕಾಶ ನೀಡಬೇಕು. ಮ್ಯಾನೇಜ್‌ಮೆಂಟ್‌ ಹುದ್ದೆಗಳಿಗೆ ಮಾತ್ರ ವಿನಾಯತಿ ನೀಡಬಹುದು. ಈ ನಿಯಮ ಪಾಲಿಸದಿದ್ದರೆ ಭೂಮಿ, ನೀರು, ರಿಯಾಯ್ತಿಗಳನ್ನು ತಡೆಹಿಡಿಯಬಹುದು ಎಂದು ಶಿಫಾರಸು ಮಾಡಲಾಗಿತ್ತು.

ಸರೋಜಿನಿ ಮಹಿಷಿ ವರದಿಯಲ್ಲಿನ ಶಿಫಾರಸು ಪರಿಶೀಲನೆಗೆ 1988ರಲ್ಲಿ ಡಾ.ವಿ. ವೆಂಕಟೇಶ ನೇತೃತ್ವದಲ್ಲಿ ‘ಕನ್ನಡಿಗರ ಉದ್ಯೋಗ ಸಮಿತಿ’ ರಚನೆ ಮಾಡಲಾಯಿತು. ನಂತರ 1990ರಲ್ಲಿ ಸಚಿವ ಸಂಪುಟ ಉಪ ಸಮಿತಿ ರಚನೆ ಮಾಡಲಾಯಿತು. ಅದು ಸರೋಜಿನಿ ಮಹಿಷಿ ವರದಿ ಹಾಗೂ ಡಾ.ವಿ. ವೆಂಕಟೇಶ ಕನ್ನಡಿಗರ ಉದ್ಯೋಗ ಸಮಿತಿಯ ಒಟ್ಟು 45 ಶಿಫಾರಸಿಗಳಿಗೆ ಒಪ್ಪಿಗೆ ಸೂಚಿಸಿತು. ಈ ಸಂಬಂಧ ಸರ್ಕಾರಿ ಆದೇಶ ಹೊರಡಿಸಿ ಕೂಡಲೇ ಅನುಷ್ಠಾನಗೊಳಿಸುವಂತೆ 7 ಇಲಾಖೆಗಳಿಗೆ ವರ್ಗಾವಣೆ ಮಾಡಿತ್ತು. ಅಲ್ಲದೆ ಇದರ ಮೇಲೆ ನಿಗಾ ವಹಿಸಲು ಉನ್ನತ ಮಟ್ಟದ ಅಧಿಕಾರಿಗಳ ಸಮಿತಿಯನ್ನೂ ನೇಮಿಸಲಾಗಿತ್ತು.

ಬಳಿಕ 1993ರಲ್ಲಿ ಸರೋಜಿನಿ ಮಹಿಷಿ ವರದಿ ಅನುಷ್ಠಾನಗೊಳಿಸುವ ಸಲುವಾಗಿಯೇ ಜಿ.ನಾರಾಯಣ ಅವರ ನೇತೃತ್ವದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಲಾಯಿತು. ವರದಿ ಅನುಷ್ಠಾನದ ಬಗ್ಗೆ ಕ್ರಿಯಾಯೋಜನೆ ಸಿದ್ಧಪಡಿಸುವಂತೆ ಅದಕ್ಕೆ ತಿಳಿಸಲಾಯಿತು.

ಕಾಗದದಲ್ಲೇ ಇದೆ ಅನುಷ್ಠಾನ : ಸರೋಜಿನಿ ಮಹಿಷಿ ವರದಿ ಅನುಷ್ಠಾನದ ಅಂಶಗಳು ಕಾಗದದಲ್ಲೇ ಉಳಿದಿವೆ. ಕಣ್ಣೊರೆಸುವ ತಂತ್ರವಾಗಿ ಹಿಂದಿನ ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದ ಸರ್ಕಾರವು 2019ರ ಫೆಬ್ರವರಿ ತಿಂಗಳಲ್ಲೇ ರಾಜ್ಯದ ಖಾಸಗಿ ಕಂಪನಿಗಳ ಸಿ ಹಾಗೂ ಡಿ ಗ್ರೂಪ್‌ ಉದ್ಯೋಗಗಳಲ್ಲಿ ಸ್ಥಳೀಯರಿಗೆ ಶೇ.100ರಷ್ಟುಮೀಸಲಾತಿಗೆ ಆದ್ಯತೆ ಕಲ್ಪಿಸಿ ಸಂಪುಟ ಸಭೆ ಅನುಮೋದನೆ ನೀಡಿದೆ. ಇದಕ್ಕಾಗಿ ಕರ್ನಾಟಕ ಕೈಗಾರಿಕಾ ಉದ್ಯೋಗಗಳ ನಿಯಮಾವಳಿ - 1961ಕ್ಕೆ ತಿದ್ದುಪಡಿ ತರಲೂ ಒಪ್ಪಿಗೆ ನೀಡಿದೆ. ಇದರಿಂದ ಐಟಿ-ಬಿಟಿ ಸಂಸ್ಥೆಗಳು ಹೊರಗುಳಿಯಲಿವೆ. ಇದರಿಂದ ಯಾವುದೇ ಲಾಭ ಆಗುವುದಿಲ್ಲ ಎಂದು ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಇದರ ನಡುವೆಯೂ ಈ ಬಗ್ಗೆ ಕಾರ್ಮಿಕ ಇಲಾಖೆ ಆಕ್ಷೇಪಣೆಗಳನ್ನು ಆಹ್ವಾನಿಸಿದೆ. ಆಕ್ಷೇಪಣೆಗಳನ್ನು ಪರಿಶೀಲಿಸಿ ಸದ್ಯದಲ್ಲೇ ಅಧಿಸೂಚನೆ ಹೊರಡಿಸಲಾಗುವುದು ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.

ಕನ್ನಡಿಗರ ಉದ್ಯೋಗ ವಲಸಿಗರ ಪಾಲು:

ಇತ್ತೀಚೆಗೆ ಬಿಡುಗಡೆಯಾಗಿರುವ 2011ರ ಜನಗಣತಿ ವರದಿ ಪ್ರಕಾರ, ಬೆಂಗಳೂರು ನಗರದಲ್ಲಿ ಶೇ.50ರಷ್ಟುಮಂದಿ ವಲಸಿಗರೇ ತುಂಬಿದ್ದಾರೆ. ವಲಸಿಗರಲ್ಲಿ ಶೇ.50ರಷ್ಟುಮಂದಿ ಅನ್ಯ ರಾಜ್ಯದಿಂದ ಬಂದವರೇ ಆಗಿದ್ದಾರೆ. ಆರ್ಥಿಕ ಶಿಸ್ತು, ಜನಸಂಖ್ಯೆ ನಿಯಂತ್ರಣ, ಔದ್ಯಮಿಕ ವಲಯ, ಐಟಿ-ಬಿಟಿ ಕ್ಷೇತ್ರಕ್ಕೆ ಉತ್ತೇಜನ ನೀಡಿ ಅಗತ್ಯ ಉದ್ಯೋಗ ಸೃಷ್ಟಿಯಲ್ಲಿ ಆರು ದಶಕಗಳಿಂದ ರಾಜ್ಯ ಮಾಡಿರುವ ಸಾಧನೆಯ ಫಲ ಅನ್ಯ ರಾಜ್ಯದ ವಲಸಿಗರ ಪಾಲಾಗುತ್ತಿದೆ.

2011ರ ಜನಗಣತಿ ವರದಿ ಪ್ರಕಾರ ಬೆಂಗಳೂರಿನ 96.2 ಲಕ್ಷ ಜನಸಂಖ್ಯೆಯಲ್ಲಿ 44.3 ಲಕ್ಷ ಮಂದಿ ವಲಸಿಗರು. 2001ರಲ್ಲಿ 65.37 ಲಕ್ಷ ಜನಸಂಖ್ಯೆಯಲ್ಲಿ 20.8 ಲಕ್ಷ ಮಾತ್ರ ವಲಸಿಗರಿದ್ದರು. ಶೇ.31ರಷ್ಟಿದ್ದ ವಲಸಿಗರ ಸಂಖ್ಯೆ ಈಗ ಶೇ.50.16ರಷ್ಟಾಗಿದೆ. ಈ ಮೂಲಕ ವಲಸಿಗರ ಪ್ರಮಾಣ ಶೇ.175.8 ಹೆಚ್ಚಳ ಕಂಡಿದ್ದು, 25 ಲಕ್ಷ ಮಂದಿ ಬೇರೆ ರಾಜ್ಯಗಳಿಂದಲೇ ಬಂದಿದ್ದಾರೆ. ರಾಜ್ಯದಲ್ಲಿನ ಒಟ್ಟು ವಲಸಿಗರಲ್ಲಿ ಕೆಲಸಕ್ಕಾಗಿ 32.3 ಲಕ್ಷ ಮಂದಿ ಉದ್ಯೋಗಕ್ಕಾಗಿಯೇ ವಲಸೆ ಬಂದಿದ್ದು, ಕನ್ನಡಿಗರ ಅನ್ನ ಕಸಿಯುತ್ತಿದ್ದಾರೆ ಎಂಬುದು ಕನ್ನಡಪರ ಹೋರಾಟಗಾರರ ಅಂಬೋಣ.

ಸೆ.2ರಂದು ಬೃಹತ್‌ ಹೋರಾಟ

ಡಾ.ಸರೋಜಿನಿ ಮಹಿಷಿ ವರದಿ ಅನುಷ್ಠಾನಗೊಳಿಸಿ ಸ್ಥಳೀಯರಿಗೆ ಸರ್ಕಾರಿ, ಖಾಸಗಿ ಉದ್ಯೋಗಗಳಲ್ಲಿ ಮೀಸಲಾತಿ ಕಲ್ಪಿಸುವಂತೆ ದಶಕಗಳಿಂದ ಹೋರಾಟ ನಡೆಯುತ್ತಿದೆ. ಸಿದ್ದರಾಮಯ್ಯ, ಎಚ್‌.ಡಿ.ಕುಮಾರಸ್ವಾಮಿ ಅವರ ಸರ್ಕಾರಗಳನ್ನು ಹೋರಾಟಗಳಿಂದ ಎಚ್ಚರಿಸಿದರೂ ಪ್ರಯೋಜನವಾಗಿಲ್ಲ. ಬೇರೆ ರಾಜ್ಯಗಳೆಲ್ಲವೂ ಅವರ ಜನರಿಗೆ ಮೀಸಲಾತಿ ಕಲ್ಪಿಸುತ್ತಿವೆ. ನೂತನ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಾದರೂ ತಕ್ಷಣ ಸ್ಥಳೀಯರಿಗೆ ಮೀಸಲಾತಿ ಕಲ್ಪಿಸುವ ಬಗ್ಗೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಕರ್ನಾಟಕ ರಕ್ಷಣಾ ವೇದಿಕೆಯಿಂದ ಸೆಪ್ಟೆಂಬರ್‌ 2ರಂದು ಬೆಂಗಳೂರಿನಲ್ಲಿ ಬೃಹತ್‌ ಪ್ರತಿಭಟನಾ ರಾರ‍ಯಲಿ ನಡೆಸಲಾಗುವುದು.

- ಟಿ.ಎ. ನಾರಾಯಣಗೌಡ, ಅಧ್ಯಕ್ಷರು, ಕರ್ನಾಟಕ ರಕ್ಷಣಾ ವೇದಿಕೆ

ಸಂವಿಧಾನದ ಪರಿಚ್ಛೇದ 19(1)(ಜಿ) ಪ್ರಕಾರ ಖಾಸಗಿ ಕ್ಷೇತ್ರದಲ್ಲಿ ಸಾರ್ವಜನಿಕ ಹಿತಾಸಕ್ತಿ ದೃಷ್ಟಿಯಿಂದ ಸ್ಥಳೀಯರಿಗೆ ಉದ್ಯೋಗಾವಕಾಶ ನೀಡಲು ಅವಕಾಶವಿದೆ. ಆದರೆ ಇದನ್ನು ಅತ್ಯಂತ ಎಚ್ಚರಿಕೆಯಿಂದ ನಿಭಾಯಿಸಬೇಕು.

- ಪ್ರೊ.ರವಿವರ್ಮಕುಮಾರ್‌, ಮಾಜಿ ಅಡ್ವೋಕೇಟ್‌ ಜನರಲ್‌

ಸರೋಜಿನಿ ಮಹಿಷಿ ವರದಿ ಆಧರಿಸಿ ರಾಜ್ಯದಲ್ಲಿರುವ ಕೇಂದ್ರ ಸರ್ಕಾರದ ಸಂಸ್ಥೆಗಳು, ಸರ್ಕಾರಿ ಹಾಗೂ ಖಾಸಗಿ ಸೇವೆಗಳಲ್ಲಿ ಮೀಸಲಾತಿ ಕಲ್ಪಿಸುವಂತೆ ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ. ಸರ್ಕಾರಗಳು ಬೇಡಿಕೆಗೆ ಸೂಕ್ತವಾಗಿ ಸ್ಪಂದಿಸಬೇಕು. ಸರ್ಕಾರದಲ್ಲಿರುವ ಅಧಿಕಾರಿಗಳ ಬದ್ಧತೆ ಕೊರತೆಯಿಂದ ವಿನಾಕಾರಣ ವಿಳಂಬವಾಗುತ್ತಿದೆ. ಸ್ಥಳೀಯರಿಗೆ ಉದ್ಯೋಗ ಮೀಸಲಾತಿ ಕೂಡಲೇ ಅನುಷ್ಠಾನಗೊಳ್ಳಬೇಕು.

- ಎಸ್‌.ಜಿ.ಸಿದ್ದರಾಮಯ್ಯ, ನಿಕಟಪೂರ್ವ ಅಧ್ಯಕ್ಷರು, ಕನ್ನಡ ಅಭಿವೃದ್ಧಿ ಪ್ರಾಧಿಕಾರ

Follow Us:
Download App:
  • android
  • ios