ನವದೆಹಲಿ(ಫೆ.10): ದಿನಕ್ಕೆ 8 ತಾಸಿನಂತೆ ವಾರದ 6 ದಿನದ ಕೆಲಸದ ಬದಲು ದಿನಕ್ಕೆ 12 ತಾಸಿನಂತೆ ವಾರಕ್ಕೆ ನಾಲ್ಕೇ ದಿನ ಕಾರ್ಯನಿರ್ವಹಿಸಲು ಅವಕಾಶ ಮಾಡಿಕೊಡುವ ಕಾನೂನು ಜಾರಿಗೆ ಕೇಂದ್ರ ಸರ್ಕಾರ ಮುಂದಾಗಿದೆ.

ಕೇಂದ್ರ ಕಾರ್ಮಿಕ ಮತ್ತು ಉದ್ಯೊಗ ಸಚಿವಾಲಯ ನೂತನ ಕಾರ್ಮಿಕ ಸಂಹಿತೆ ಜಾರಿ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದ್ದು, ಅದರನ್ವಯ, ಕಂಪನಿಗಳು ನೌಕರರ ಕೆಲಸದ ದಿನವನ್ನು ವಾರಕ್ಕೆ 4 ದಿನಕ್ಕೆ ಇಳಿಸುವುದಕ್ಕೆ ಅವಕಾಶ ನೀಡಲಾಗಿದೆ. ಆದರೆ, ಕೆಲಸದ ಅವಧಿ ವಾರದಲ್ಲಿ 48 ಗಂಟೆ ಹಾಗೆಯೇ ಇರಲಿದೆ. ಇದೇ ವೇಳೆ ಕಂಪನಿಗಳು ವಿಮಾ ಸೌಲಭ್ಯದ ಮೂಲಕ ನೌಕರರಿಗೆ ಉಚಿತ ವೈದ್ಯಕೀಯ ಚಿಕಿತ್ಸೆ ಒದಗಿಸಬೇಕು ಎಂಬ ಪ್ರಸ್ತಾವನೆಯೂ ಪ್ರಸ್ತಾವನೆಯಲ್ಲಿದೆ.

ಸರ್ಕಾರಿ ಕಾಲೇಜಿನಲ್ಲಿ ಉಪನ್ಯಾಸಕರ ಕೊರತೆ: ವಿದ್ಯಾರ್ಥಿಗಳ ಅಭ್ಯಾಸ ಕುಂಠಿತ

ಕಂಪನಿಗಳು ಉದ್ಯೋಗಿಗಳ ಸಮ್ಮತಿಯ ಮೇರೆಗೆ ದಿನಕ್ಕೆ 12 ಗಂಟೆಗಳ ಕಾಲ ಕೆಲಸ ಮಾಡಿಸಿಕೊಳ್ಳಬಹುದಾಗಿದ್ದು, ವಾರದಲ್ಲಿ 3 ದಿನ ವೇತನ ಸಹಿತ ರಜೆಯನ್ನು ನೀಡಬೇಕು. ಕೆಲಸದ ದಿನಗಳಲ್ಲಿ ಹೊಂದಾಣಿಕೆ ಮಾಡಲು ಕಂಪನಿಗಳಿಗೆ ಅವಕಾಶ ನೀಡಲಾಗಿದೆ. ವಾರದಲ್ಲಿ ಕೆಲಸದ ದಿನಗಳನ್ನು ಅದನ್ನು 4,5 ಹಾಗೂ 6 ದಿನಗಳಾಗಿ ವಿಂಗಡಣೆ ಮಾಡಬಹುದಾಗಿದೆ. ಪ್ರಸ್ತಾವಿತ ಸಂಹಿತೆಯ ಪ್ರಕಾರ ದಿನಕ್ಕೆ 12 ಗಂಟೆಯ ಕೆಲಸದ ಅವಧಿಗೆ ವಾರದಲ್ಲಿ 4 ದಿನ, 10 ಗಂಟೆಯ ಕೆಲಸದ ಅವಧಿಗೆ ವಾರದಲ್ಲಿ 5 ದಿನ ಹಾಗೂ 8 ಗಂಟೆಯ ಕೆಲಸದ ಅವಧಿಗೆ ವಾರದಲ್ಲಿ 6 ದಿನದ ಕೆಲಸದ ದಿನಗಳು ಇರಲಿವೆ.

ಕರಡು ನೀತಿ ಅಂತಿಮ ಹಂತದಲ್ಲಿ ಇದ್ದು, ರಾಜ್ಯಗಳಿಂದ ಅಭಿಪ್ರಾಯ ಸಂಗ್ರಹಿಸಲಾಗುತ್ತಿದೆ ಎಂದು ಕಾರ್ಮಿಕ ಹಾಗೂ ಉದ್ಯೋಗ ಸಚಿವಾಲಯದ ಕಾರ್ಯದರ್ಶಿ ಅಪೂರ್ವಾ ಚಂದ್ರ ತಿಳಿಸಿದ್ದಾರೆ.