ಏಕಕಾಲಕ್ಕೆ ಪಿಎಸೈ ಹುದ್ದೆ ಪರೀಕ್ಷೆ ನಡೆಸಲು ಆಗ್ರಹ
- ಏಕಕಾಲಕ್ಕೆ ಪಿಎಸೈ ಹುದ್ದೆಗಳ ಪರೀಕ್ಷೆ ನಡೆಸಿ
- ಸಾವಿರಕ್ಕೂ ಹೆಚ್ಚು ಆಕಾಂಕ್ಷಿಗಳಿಂದ ಧಾರವಾಡದಲ್ಲಿ ಬೃಹತ್ ಪ್ರತಿಭಟನೆ
ಧಾರವಾಡ (ನ.26) : ಪಿಎಸೈ ಪರೀಕ್ಷಾ ಅಕ್ರಮದಿಂದಾಗಿ 545 ಹುದ್ದೆಗಳಿಗೆ ಮರು ಪರೀಕ್ಷೆ ಹಾಗೂ ಹೊಸದಾಗಿ 402 ಹುದ್ದೆಗಳಿಗೆ ಏಕಕಾಲಕ್ಕೆ ಪರೀಕ್ಷೆ ನಡೆಸಲು ಆಗ್ರಹಿಸಿ ಎರಡೂ ಸಾವಿರಕ್ಕೂ ಹೆಚ್ಚು ಆಕಾಂಕ್ಷಿಗಳು ಶುಕ್ರವಾರ ಧಾರವಾಡದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ಕರ್ನಾಟಕ ಕಾಲೇಜಿನಿಂದ ಜ್ಯುಬಿಲಿ ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ವಿದ್ಯಾರ್ಥಿಗಳು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಭ್ರಷ್ಟಾಚಾರ ರಹಿತ ಪಿಎಸೈ ಹುದ್ದೆ ನಿರ್ವಹಿಸುತ್ತೇವೆ ಎಂದು ಪ್ರಮಾಣ ಮಾಡಿ ಪರೀಕ್ಷೆಯಲ್ಲಿ ಭ್ರಷ್ಟಾಚಾರ ಮಾಡಿದವರ ಪ್ರತಿಕೃತಿ ದಹಿಸಿ ಏಕಕಾಲಕ್ಕೆ ಪರೀಕ್ಷೆ ನಡೆಸಲು ಆಗ್ರಹಿಸಿದರು.
Hubballi: ಮಂಗಳೂರು ಸ್ಪೋಟದ ಬಳಿಕ ಅವಳಿ ನಗರದಲ್ಲಿ ಹೈ ಅಲರ್ಟ್ ಆದ ಖಾಕಿ ಪಡೆ!
ರಾಜ್ಯದಲ್ಲಿ 545 ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಹುದ್ದೆಗಳ ನೇಮಕಾತಿಯಲ್ಲಿ ನಡೆದ ಅಕ್ರಮದ ತನಿಖೆ ಸಿಐಡಿ ನಡೆಸುತ್ತಿದೆ. ಈ ವರೆಗೆ ನೂರಕ್ಕೂ ಹೆಚ್ಚು ಆರೋಪಿಗಳ ಬಂಧನವಾಗಿದೆ. ತನಿಖೆ ಮುಂದುವರಿದಿದ್ದು, ಇನ್ನೂ ಅನೇಕರ ಬಂಧನ ಸಾಧ್ಯತೆಯಿದೆ. ಆ ಪರೀಕ್ಷೆಯಲ್ಲಿ ಅಷ್ಟೊಂದು ಅಕ್ರಮವಾಗಿದ್ದು ಸರ್ಕಾರ ಆ ಹುದ್ದೆಗಳ ನೇಮಕಾತಿಗೆ ವಿಳಂಬ ಮಾಡದೇ ಕೂಡಲೇ ಮರು ಪರೀಕ್ಷೆ ನಡೆಸಬೇಕು. ಇದನ್ನು ಬಿಟ್ಟು ರಾಜ್ಯ ಸರ್ಕಾರ ಈಗ 402 ಹುದ್ದೆಗಳ ಪರೀಕ್ಷೆಗೆ ಮುಂದಾಗಿರುವುದು ನಮಗೆಲ್ಲ ಆಘಾತ ಮೂಡಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೆಪಿಎಸ್ಸಿ ವತಿಯಿಂದ ಹೊಸದಾಗಿ 1000ಕ್ಕೂ ಹೆಚ್ಚು ಎಫ್‌ಡಿಎ, ಎಸ್‌ಡಿಎ, ಗ್ರೂಪ್ ಸಿ ಹುದ್ದೆಗಳು ಹಾಗೂ 500ಕ್ಕೂ ಅಧಿಕ ಕೆಎಎಸ್ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಬೇಕು ಎಂದು ಆಗ್ರಹಿಸಿದರು.
ವರ್ಷಗಟ್ಟಲೇ ಕುಳಿತು ಪ್ರಾಮಾಣಿಕವಾಗಿ ಪರೀಕ್ಷೆ ಬರೆದವರಿಗೆ ನೌಕರಿ ಸಿಗದೇ ಹಣದಿಂದ ಎಲ್ಲವೂ ನಡೆಯುತ್ತಿದೆ. ಈ ಬಗ್ಗೆ ಸರ್ಕಾರ ಮೌನವಾಗಿದ್ದು ಪ್ರಾಮಾಣಿಕ ಅಭ್ಯರ್ಥಿಗಳ ಜೀವನ ಹಾಳಾಗುತ್ತಿದೆ. ಭ್ರಷ್ಟಾಚಾರ ಮುಕ್ತ ಪರೀಕ್ಷೆ ನಡೆದು ಅರ್ಹ ಅಭ್ಯರ್ಥಿಗಳು ಸರ್ಕಾರದಲ್ಲಿ ಕೆಲಸ ನಿರ್ವಹಿಸುವಂತೆ ಯೋಚನೆ ಮಾಡಬೇಕು. ಇಲ್ಲದೇ ಹೋದಲ್ಲಿ ಉಗ್ರ ರೂಪದ ಹೋರಾಟದ ಹಾದಿ ತುಳಿಯಬೇಕಾಗುತ್ತದೆ ಎಂದು ಆಕಾಂಕ್ಷಿಗಳು ಎಚ್ಚರಿಸಿದರು.
PSI Recruitment Scam: 12 ಜನ ಆರೋಪಿಗಳಿಗೆ ಜಾಮೀನು ಮಂಜೂರು
ಪ್ರತಿಭಟನಾ ಪಾದಯಾತ್ರೆಯಲ್ಲಿ ಮುಖಂಡ ರವಿಶಂಕರ ಮಾಲಿ ಪಾಟೀಲ್, ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ, ಉಪಾಧ್ಯಕ್ಷ ನಾಗರಾಜ ಕಿರಣಗಿ, ಅರುಣ್ ಎಸ್.ಕೆ, ಕುರುವೆತ್ತಪ್ಪ ದೊಡ್ಡಮನಿ, ಕಿರಣ ಗೌಡ, ನಾಗರಾಜ ರೆಡ್ಡಿ, ವಿನೋದ ಶೆಟ್ಟಿ, ರಾಮನಗೌಡ ಸೇರಿದಂತೆ ಸಾವಿರಾರು ಆಕಾಂಕ್ಷಿಗಳಿದ್ದರು.