ಬೆಂಗಳೂರು [ಸೆ.13]:   ಬ್ಯಾಂಕಿಂಗ್‌ ನೇಮಕಾತಿಯಲ್ಲಿ ರಾಜ್ಯದ ಅಭ್ಯರ್ಥಿಗಳಿಗೆ ಆಗುತ್ತಿರುವ ಅನ್ಯಾಯ ಸರಿಪಡಿಸುವಂತೆ ಕಳೆದ ಐದು ವರ್ಷಗಳಿಂದ ನಡೆಯುತ್ತಿರುವ ಕನ್ನಡಿಗರ ಹೋರಾಟ ಹಾಗೂ ಆಗ್ರಹಗಳಿಗೆ ಕೇಂದ್ರ ಸರ್ಕಾರ ಸೊಪ್ಪು ಹಾಕಿಲ್ಲ.

ಕರ್ನಾಟಕದಲ್ಲಿನ 953 ಹುದ್ದೆ ಸೇರಿದಂತೆ ರಾಷ್ಟ್ರೀಕೃತ ಬ್ಯಾಂಕುಗಳ ಒಟ್ಟು 12,071 ಕ್ಲರ್ಕ್ ಹುದ್ದೆಗಳ ನೇಮಕಾತಿಗೆ ಐಬಿಪಿಎಸ್‌ ಅಧಿಸೂಚನೆ ಹೊರಡಿಸಿದ್ದು, ಕಡ್ಡಾಯವಾಗಿ ಹಿಂದಿ ಅಥವಾ ಇಂಗ್ಲಿಷ್‌ನಲ್ಲಿಯೇ ಪರೀಕ್ಷೆ ಬರೆಯಬೇಕು ಎಂದು ಷರತ್ತು ವಿಧಿಸಿದೆ. ತನ್ಮೂಲಕ ಈ ಬಾರಿಯಾದರೂ ಕನ್ನಡ ಸೇರಿದಂತೆ ಪ್ರಾದೇಶಿಕ ಭಾಷೆಯಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ಗಳ ಗುಮಾಸ್ತ ಹುದ್ದೆ ಪರೀಕ್ಷೆ ಬರೆಯಬಹುದು ಎಂಬ ನಿರೀಕ್ಷೆ ಹುಸಿಯಾಗಿದೆ.

ರಾಷ್ಟ್ರೀಕೃತ ಬ್ಯಾಂಕ್‌, ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳ ಖಾಲಿ ಹುದ್ದೆಗಳಿಗೆ ನೇಮಕಾತಿ ಮಾಡುವ ‘ಐಬಿಪಿಎಸ್‌’ ಪರೀಕ್ಷೆಗೆ ಕೇಂದ್ರ ಸರ್ಕಾರ 2014ರಲ್ಲಿ ತಿದ್ದುಪಡಿ ತರುವ ಮೂಲಕ ಕನ್ನಡಿಗರ ಬೆನ್ನುಮೂಳೆ ಮರಿದಂತಾಗಿತ್ತು. 2014ರವರೆಗೆ ಐಬಿಪಿಎಸ್‌ ಪರೀಕ್ಷೆ ಬರೆಯಲು 10ನೇ ತರಗತಿವರೆಗೆ ಕನ್ನಡದಲ್ಲಿ ವಿದ್ಯಾಭ್ಯಾಸ ಮಾಡಿರಬೇಕಾಗಿರುವುದು ಕಡ್ಡಾಯವಾಗಿತ್ತು. ಇದರಿಂದಾಗಿ ಕರ್ನಾಟಕದ ಬ್ಯಾಂಕ್‌ಗಳಲ್ಲಿ ಬಹುತೇಕ ಕನ್ನಡಿಗರೇ ಉದ್ಯೋಗ ಗಿಟ್ಟಿಸಿಕೊಳ್ಳುತ್ತಿದ್ದರು. 2014ರಲ್ಲಿ ನಿಯಮಾವಳಿಗೆ ತಿದ್ದುಪಡಿ ತಂದು ನೇಮಕಾತಿ ಆದ ಆರು ತಿಂಗಳೊಳಗಾಗಿ ಸ್ಥಳೀಯ ಭಾಷೆ ಕಲಿತರೆ ಸಾಕು ಎಂಬ ನಿಯಮ ರೂಪಿಸಲಾಯಿತು. ಇದರಿಂದಾಗಿ 2014ರ ಬಳಿಕ ರಾಷ್ಟ್ರೀಕೃತ ಬ್ಯಾಂಕ್‌, ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳಲ್ಲಿ ಸಾವಿರಾರು ಮಂದಿ ಹಿಂದಿ ಭಾಷಿಕರು ಹಾಗೂ ಅನ್ಯ ಭಾಷಿಕರು ನುಸುಳುವಂತಾಯಿತು. ಇದರಿಂದ ಕನ್ನಡಿಗರ ಸಾವಿರಾರು ಉದ್ಯೋಗಗಳು ಪರ ಭಾಷಿಕರ ಪಾಲಾದವು. ಅಲ್ಲದೆ, ಗ್ರಾಮಾಂತರ ಪ್ರದೇಶದಲ್ಲೂ ಇವರೇ ತುಂಬಿಕೊಂಡು ಕನ್ನಡ ಮಾತ್ರ ಬಲ್ಲ ಗ್ರಾಹಕರಿಗೆ ಸೂಕ್ತ ಸೇವೆಯೇ ದೊರೆಯದಂತಾಯಿತು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಈ ಹಿನ್ನೆಲೆಯಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ, ಪಕ್ಷಾತೀತವಾಗಿ ಎಲ್ಲಾ ಪಕ್ಷಗಳ ಸಂಸದರು, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಕನ್ನಡಪರ ಸಂಘಟನೆಗಳು ಕೇಂದ್ರ ಸಚಿವರು ಹಾಗೂ ಪ್ರಧಾನಮಂತ್ರಿಗಳಿಗೆ ಪತ್ರಗಳನ್ನು ಬರೆದು ಅನ್ಯಾಯ ಸರಿಪಡಿಸುವಂತೆ ಒತ್ತಾಯಿಸಿದ್ದರು.

ಆರ್‌ಆರ್‌ಬಿಗೆ ಮಾತ್ರ ಅವಕಾಶ ಏಕೆ:

ಐದು ವರ್ಷಗಳ ಕನ್ನಡಿಗರ ಹೋರಾಟದ ಫಲವಾಗಿ ಬ್ಯಾಂಕಿಂಗ್‌ ನೇಮಕಾತಿಯ ‘ಐಬಿಪಿಎಸ್‌’ ಪರೀಕ್ಷೆಯನ್ನು ಕನ್ನಡದಲ್ಲೇ ಬರೆಯಲು ಅವಕಾಶ ನೀಡುವುದಾಗಿ ಜುಲೈ ತಿಂಗಳಲ್ಲಿ ಕೇಂದ್ರ ಸರ್ಕಾರ ಘೋಷಿಸಿತ್ತು. ಸಂಸತ್‌ನಲ್ಲಿ ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್‌ ಅವರು ಐಬಿಪಿಎಸ್‌ನ ಆರ್‌ಆರ್‌ಬಿ (ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌) ಪರೀಕ್ಷೆಗಳನ್ನು ಇನ್ನು ಮುಂದೆ ಕನ್ನಡ ಸೇರಿದಂತೆ ಹದಿಮೂರು ಸ್ಥಳೀಯ ಭಾಷೆಗಳಲ್ಲಿ ಬರೆಯಲು ಅವಕಾಶ ನೀಡಲಾಗುವುದು ಎಂದು ಘೋಷಿಸಿದ್ದರು.

ರಾಷ್ಟ್ರೀಕೃತ ಬ್ಯಾಂಕ್‌ಗಳು ಹಾಗೂ ಆರ್‌ಆರ್‌ಬಿ ಎರಡೂ ನೇಮಕಾತಿ ಪರೀಕ್ಷೆಗಳನ್ನೂ ಐಬಿಪಿಎಸ್‌ ವತಿಯಿಂದಲೇ ನಡೆಸಲಾಗುತ್ತದೆ. ಆದರೆ, ಆರ್‌ಆರ್‌ಬಿ ಪರೀಕ್ಷೆಗಳಿಗೆ ಮಾತ್ರವೇ ಕನ್ನಡದಲ್ಲಿ ಅವಕಾಶ ನೀಡಲಾಗಿದೆ. ರಾಜ್ಯದಲ್ಲಿ ಕರ್ನಾಟಕ ಗ್ರಾಮೀಣ ಬ್ಯಾಂಕ್‌, ಕರ್ನಾಟಕ ಗ್ರಾಮೀಣ ವಿಕಾಸ್‌ ಬ್ಯಾಂಕ್‌ ಮಾತ್ರ ಆರ್‌ಆರ್‌ಬಿ ಬ್ಯಾಂಕ್‌ಗಳಾಗಿವೆ. ಇವುಗಳಲ್ಲಿ ಸೃಷ್ಟಿಯಾಗುವುದಕ್ಕಿಂತ ಹೆಚ್ಚು ಉದ್ಯೋಗ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಸೃಷ್ಟಿಯಾಗುತ್ತವೆ. ಆರ್‌ಆರ್‌ಬಿಗೆ ಅವಕಾಶ ನೀಡುವವರು ರಾಷ್ಟ್ರೀಕೃತ ಬ್ಯಾಂಕ್‌ಗಳಿಗೆ ಏಕೆ ಅವಕಾಶ ನೀಡುವುದಿಲ್ಲ ಎಂದು ಬನವಾಸಿ ಬಳಗದ ಸಂಚಾಲಕ ಅರುಣ್‌ ಜಾವಗಲ್‌ ಪ್ರಶ್ನಿಸುತ್ತಾರೆ.

ಆರ್‌ಆರ್‌ಬಿ ವಿಚಾರದಲ್ಲೂ ವಂಚನೆ?:

ಪ್ರಸ್ತುತ ಕನ್ನಡ ಭಾಷೆಯಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಿದ ತಕ್ಷಣ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯ ಸರಿಪಡಿಸಿದಂತಾಗುವುದಿಲ್ಲ. ವಾಸ್ತವವಾಗಿ 10ನೇ ತರಗತಿವರೆಗೆ ಕನ್ನಡ ಕಲಿಕೆ ಕಡ್ಡಾಯವಿದ್ದ ಹಳೆಯ ನಿಯಮದಿಂದ ಮಾತ್ರ ಕನ್ನಡಿಗರ ಹಕ್ಕುಗಳು ರಕ್ಷಣೆಯಾಗುತ್ತವೆ. ಇದೀಗ ಕನ್ನಡದಲ್ಲಿ ಪರೀಕ್ಷೆ ಬರೆಯುವುದಕ್ಕೇ ಕೇಂದ್ರ ಸರ್ಕಾರದ ಕಾಲಿಗೆ ಬೀಳುವ ಸ್ಥಿತಿ ನಿರ್ಮಾಣವಾಗಿದೆ. ಕೇಂದ್ರ ಸರ್ಕಾರ ಕನ್ನಡಿಗರ ಮೇಲೆ ಇದೇ ನಿರ್ಲಕ್ಷ್ಯ ಧೋರಣೆ ಮುಂದುವರೆಸಿದರೆ ಆರ್‌ಆರ್‌ಬಿ ಪರೀಕ್ಷೆಯಲ್ಲೂ ಕನ್ನಡ ಭಾಷೆಗೆ ಅವಕಾಶ ನೀಡುವ ಯಾವುದೇ ಲಕ್ಷಣ ಕಾಣುತ್ತಿಲ್ಲ. ಪ್ರತಿ ಹಂತದಲ್ಲೂ ಹಿಂದಿ ಹೇರಿಕೆ ಹಾಗೂ ಹಿಂದಿ ಭಾಷಿಕರಿಗೆ ಉದ್ಯೋಗ ದೊರೆಯುವಂತೆ ಮಾಡುವುದರಲ್ಲೇ ಕಾನೂನು ರೂಪಿಸುವವರು ತಲ್ಲೀನರಾಗಿದ್ದಾರೆ ಎಂದು ಕನ್ನಡಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.

ಸಂಸದರು ದನಿ ಎತ್ತಬೇಕಿದೆ

ಸ್ಥಳೀಯ ಯುವಕರಿಗೆ ಉದ್ಯೋಗ ಕಲ್ಪಿಸುವ ದೃಷ್ಟಿಯಿಂದ ಪ್ರಾದೇಶಿಕ ಭಾಷೆಗಳಲ್ಲೂ ಐಬಿಪಿಎಸ್‌ ಪರೀಕ್ಷೆ ನಡೆಸಬೇಕೆಂದು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ, ಮೈಸೂರು ಸಂಸದ ಪ್ರತಾಪ್‌ ಸಿಂಹ ಸೇರಿ ರಾಜ್ಯದ ಇತರೆ ಸಂಸದರು ನಿರ್ಮಲಾ ಸೀತಾರಾಮನ್‌ ಅವರನ್ನು ಆಗ್ರಹಿಸಿ, ಮನವಿ ಪತ್ರ ಸಲ್ಲಿಸಿದ್ದರು. ಇದರ ಬೆನ್ನಲ್ಲೇ ಆರ್‌ಆರ್‌ಬಿಯ ಸ್ಕೇಲ…-1 ಮತ್ತು ಕಚೇರಿ ಸಹಾಯಕ ಹುದ್ದೆಗಳಿಗೆ ಪ್ರಾದೇಶಿಕ ಭಾಷೆಗಳಲ್ಲೂ ಇನ್ನು ಪರೀಕ್ಷೆ ನಡೆಯುತ್ತದೆ ಎಂದು ನಿರ್ಮಲಾ ಹೇಳಿದ್ದರು. ಆದರೆ, ವಾಸ್ತವವಾಗಿ ಹೆಚ್ಚು ಬ್ಯಾಂಕ್‌ ಉದ್ಯೋಗ ಸೃಷ್ಟಿಯಾಗುವುದು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ. ಹೀಗಾಗಿ ರಾಷ್ಟ್ರೀಕೃತ ಬ್ಯಾಂಕ್‌ಗಳಿಗೆ ಐಬಿಪಿಎಸ್‌ ನಡೆಸುವ ನೇಮಕಾತಿಯಲ್ಲೂ ಮೀಸಲಾತಿ ದೊರೆಯಬೇಕು ಎಂದು ಸಂಸದರು ದನಿ ಎತ್ತಬೇಕು ಎಂದು ಐಬಿಪಿಎಸ್‌ ಕ್ರಮದಿಂದ ಉದ್ಯೋಗ ವಂಚನೆಗೆ ಒಳಗಾದ ಅಭ್ಯರ್ಥಿಗಳು ಆಗ್ರಹಿಸಿದ್ದಾರೆ.

ನೇಮಕಾತಿ ಅಧಿಸೂಚನೆಯಲ್ಲಿ ಏನಿದೆ?

ಕೆನರಾ ಬ್ಯಾಂಕ್‌, ಸಿಂಡಿಕೇಟ್‌ ಬ್ಯಾಂಕ್‌, ಅಲಹಾಬಾದ್‌ ಬ್ಯಾಂಕ್‌, ಆಂಧ್ರ ಬ್ಯಾಂಕ್‌ ಸೇರಿದಂತೆ ಹದಿನೇಳು ರಾಷ್ಟ್ರೀಕೃತ ಬ್ಯಾಂಕ್‌ಗಳ 12,071 ಕ್ಲರ್ಕ್ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದೆ. ಡಿಸೆಂಬರ್‌ 2019, 2020ರ ಜನವರಿ ತಿಂಗಳಲ್ಲಿ ಎರಡು ಹಂತದಲ್ಲಿ ಆನ್‌ಲೈನ್‌ ಪರೀಕ್ಷೆ ನಡೆಯಲಿದ್ದು, ಆನ್‌ಲೈನ್‌ ಅರ್ಜಿ ಸಲ್ಲಿಕೆಗೆ ಸೆಪ್ಟೆಂಬರ್‌ 17ರಿಂದ ಅಕ್ಟೋಬರ್‌ 9ರವರೆಗೆ ಕಾಲಾವಕಾಶ ನೀಡಲಾಗಿದೆ. ಇದರಲ್ಲಿ ಕರ್ನಾಟಕದಲ್ಲಿ 953, ತಮಿಳುನಾಡಿನಲ್ಲಿ 1379, ತೆಲಂಗಾಣದಲ್ಲಿ 612 ಹುದ್ದೆಗಳು ಖಾಲಿ ಇವೆ. ಕೂಡಲೇ ಈ ಅಧಿಸೂಚನೆ ಹಿಂಪಡೆದು ಕನ್ನಡದಲ್ಲೂ ಪರೀಕ್ಷೆಗೆ ಅವಕಾಶ ನೀಡಬೇಕು ಎಂಬುದು ಕನ್ನಡಿಗರ ಆಗ್ರಹ.