ಮತ್ತೆ ಸಂಕಲ್ಪಗಳ ಪಟ್ಟಿ ತಯಾರಿಸುವ ಸಮಯ ಬಂದೇ ಬಿಟ್ಟಿತು. ಕಳೆದ ವರ್ಷದ ರೆಸಲ್ಯೂಶನ್‌ಗಳಲ್ಲಿ ಅರ್ಧದಷ್ಟಾದರೂ ಪೂರೈಸಿರುವುದು ಡೌಟು. ಆದರೆ, ಈ ವರ್ಷ ಹಾಗಾಗಗೊಡುವುದಿಲ್ಲ ಎಂದುಕೊಂಡು ಪಟ್ಟಿ ಮಾಡಲು ಕುಳಿತಿದ್ದೀರಿ. ಏನೇನು ಸೇರಿಸಬೇಕು ಎಂದು ಯೋಚಿಸುತ್ತಿದ್ದೀರಾ? ಆಹಾರ, ಆರೋಗ್ಯ, ಲೈಫ್‌ಸ್ಟೈಲ್‌ಗೆ ಸಂಬಂಧಿಸಿದ ವೈಯಕ್ತಿಕ ಬದುಕಿನದ್ದು ಒಂದು ಪಟ್ಟಿ ಹಾಗೂ ನಿಮ್ಮ ವೃತ್ತಿ ಬದುಕಿಗೆ ಸಂಬಂಧಿಸಿದಂತೆ ಪ್ರತ್ಯೇಕವಾದ ಸಂಕಲ್ಪ ಪಟ್ಟಿ ತಯಾರಿಸಿ. ಏಕೆಂದರೆ, ದಿನದ ಬಹುಪಾಲನ್ನು ಕಚೇರಿಯಲ್ಲಿ ಕಳೆಯುತ್ತೀರಿ. ಹಾಗಾಗಿ, ಅದನ್ನು ಸಂತೋಷದಾಯಕವಾಗಿಯೂ, ಯಶಸ್ಸಿನ ಮೆಟ್ಟಿಲಾಗಿಯೂ ಇಟ್ಟುಕೊಳ್ಳುವುದು ಮುಖ್ಯ.

2020ಕ್ಕೆ ನಿಮ್ಮ ಅದೃಷ್ಟ ಖುಲಾಯಿಸಲು ಏನು ಮಾಡಬೇಕು ಗೊತ್ತಾ?

ಈ ಎರಡನೆಯ ವರ್ಗಕ್ಕೆ ಸಂಬಂಧಿಸಿದಂತೆ ಏಳ್ಗೆಗಾಗಿ ಏನೇನು ನಿಮ್ಮ ರೆಸಲ್ಯೂಶನ್ ಇರಬೇಕು ಎಂಬುದಕ್ಕಿಲ್ಲೊಂದು ಸಣ್ಣ ವಿವರವಿದೆ. 

ವೈಯಕ್ತಿಕ ಬ್ರ್ಯಾಂಡಿಂಗ್

ವರ್ಷವಿಡೀ ಕಷ್ಟ ಪಟ್ಟು ಕೆಲಸ ಮಾಡಿಯೂ ಅಪ್ರೈಸಲ್ ಸಮಯದಲ್ಲಿ ಮಾತ್ರ ಹಿಂದೆ ಬೀಳುವವರು ನೀವಾ? ಹೆಚ್ಚು ಕೆಲಸ ಮಾಡದ ನಿಮ್ಮ ಸಹೋದ್ಯೋಗಿ ನಿಮಗಿಂತ ಹೆಚ್ಚು ಹೈಕ್ ಪಡೆದು ಬೀಗುತ್ತಿರುವುದನ್ನು ನೋಡಿ ಎಲ್ಲಿ ತಪ್ಪಿದೆ ಎಂದು ಯೋಚಿಸುತ್ತಾ ಕೂರುವವರು ನೀವಾದಲ್ಲಿ ಈ ಬಾರಿ ಕೆಲಸದೊಂದಿಗೆ ಪರ್ಸನಲ್ ಬ್ರ್ಯಾಂಡಿಂಗ್‌ನತ್ತ ಗಮನ ಹರಿಸಿ. 
ಹೌದು, ಗುರಿ ತಲುಪುವ ಭರದಲ್ಲಿ ವೈಯಕ್ತಿಕ ಬ್ರ್ಯಾಂಡಿಂಗ್ ಕಡೆ ಗಮನ ನೀಡದೆ ಹೋಗುವವರು ಹಲವರು. ಇದರಿಂದ ಅವರೆಷ್ಟೇ ಕೆಲಸ ಮಾಡಿದರೂ ಯಾರೂ ಅವರನ್ನು ನೋಟಿಸ್ ಮಾಡುವುದಿಲ್ಲ. ಹಾಗಾಗಿ, ನೀವು ಕೆಲಸ ಮಾಡಿದ ಬಳಿಕ ಅದನ್ನು ಇತರರ ಗಮನಕ್ಕೆ ಬರುವಂತೆ ನಿಮ್ಮನ್ನು ನೀವು ಮಾರ್ಕೆಟಿಂಗ್ ಮಾಡಿಕೊಳ್ಳುವುದನ್ನು ಅಭ್ಯಾಸ ಮಾಡಿಕೊಳ್ಳಿ. ಮುಂದಿನ ಬಾರಿ ಪ್ರಮುಖವಾದ ಪ್ರಾಜೆಕ್ಟನನ್ನು ನಿಮ್ಮ ಟೀಂಗೆ ನೀಡುವಾಗ ಬಾಸ್‌ಗೆ ನಿಮ್ಮ ಹೊರತಾಗಿ ಮತ್ತೊಬ್ಬರ ಹೆಸರು ನೆನಪಿಗೆ ಬಾರಕೂಡದ- ಅಂಥ ಇಮೇಜ್ ಕಟ್ಟಿಕೊಳ್ಳುವತ್ತ ಈ ಬಾರಿ ಹೆಚ್ಚಿನ ಪ್ರಯತ್ನ ಹಾಕಿ. 

ಪ್ರಾಜೆಕ್ಟ್‌ಗಳ ಆಯ್ಕೆ

ಸ್ಮಾರ್ಟ್ ವರ್ಕರ್ ಆಗುತ್ತೀರೋ, ಹಾರ್ಡ್ ವರ್ಕರ್ ಆಗುತ್ತೀರೋ ಎಂಬ ಆಯ್ಕೆ ಯಾವಾಗಲೂ ನಿಮ್ಮದೇ ಆಗಿರುತ್ತದೆ. ಎರಡೂ ಆಗಿದ್ದರೆ ವೆಲ್ ಆ್ಯಂಡ್ ಗುಡ್. ಆದರೆ, ಕೇವಲ ಕತ್ತೆಯಂತೆ ಕೆಲಸ ಮಾಡುತ್ತಾ, ಅನು ಮಾಡುತ್ತಿದ್ದೇನೆ, ಯಾಕೆ ಮಾಡುತ್ತಿದ್ದೇನೆ, ಹೇಗೆ ಮಾಡುತ್ತಿದ್ದೇನೆ ಎಂಬ ಗಮನವಿಲ್ಲದೆ ಹೋದರೆ ನೀವು ಬೆಳೆಯಲು ಸಾಧ್ಯವಿಲ್ಲ. ಸುಮ್ಮನೆ ಮೇಲ್ ಕಳುಹಿಸುವ, ಫೋನ್ ಕಾಲ್‌ಗಳಿಗೆ ಉತ್ತರಿಸುವ ಕೆಲಸದಲ್ಲೇ ಕಾಲಹರಣ ಮಾಡಬೇಡಿ. ಟೀಂ ವರ್ಕ್ ಎಂದರೆ ಅಲ್ಲಿ ಪ್ರಮುಖವಾದ ಕೆಲಸಗಳು ಯಾವುವಿವೆ, ನಿಮ್ಮ ಭವಿಷ್ಯಕ್ಕೆ, ಕರಿಯರ್‌ಗೆ ಪ್ರಯೋಜನವಾಗುವಂಥ, ಹೊಸ ಕಲಿಕೆಗೆ ಅವಕಾಶವಿರುವಂಥ ಕೆಲಸಗಳು ಯಾವುವು ಎಂಬುದನ್ನು ಗಮನಿಸಿ ನೋಡಿ. ಅಂಥ ಕೆಲಸಗಳಲ್ಲಿ ನಿಮ್ಮ ಬೆವರನ್ನು ಹರಿಸಿ. ಮೆದುಳಿಗೆ ಕೆಲಸ ಕೊಡಿ. ನಿಮ್ಮ ತಟ್ಟೆಯಲ್ಲೇನಿರಬೇಕೆಂದು ನೀವೇ ಆಯ್ಕೆ ಮಾಡಿಕೊಳ್ಳುವುದನ್ನು ಅಭ್ಯಾಸ ಮಾಡಿಕೊಳ್ಳಿ. 

ಹೊಸ ವರ್ಷಕ್ಕೆ ತಯಾರಾಗಲು ಇಲ್ಲಿದೆ ಸಿಂಪಲ್ 20 ಟಿಪ್ಸ್!

ಕಂಫರ್ಟ್ ಝೋನ್‌ನಿಂದ ಹೊರಗೆ

ಹಲವರು ಎಡವುವುದೇ ಇಲ್ಲಿ. ಕೆಲಸವೊಂದು ಸಿಕ್ಕಿ ಅಲ್ಲಿಗೆ ಹೊಂದಿಕೊಂಡ ಮೇಲೆ ಪ್ರತಿದಿನ ಹೋಗಿ ಬಂದು ಅದನ್ನೇ ಮಾಡುತ್ತಾ, ಅಷ್ಟೇ ಜನರೊಂದಿಗೆ ಮಾತನಾಡುತ್ತಾ ಒಂದು ಕಂಫರ್ಟ್ ಝೋನ್ ಸೃಷ್ಟಿಸಿಕೊಂಡು ಬಿಡುತ್ತಾರೆ. ಅದರಿಂದ ಹೊರ ಬರಬೇಕೆಂದರೆ ಅವರಿಗೆ ಭಯ, ಆತಂಕ ಕಾಡಲಾರಂಭಿಸುತ್ತದೆ. ಇದರಿಂದ ಇರುವ ಗೂಡಿಗಿಂತ ಹಿಗ್ಗಿ ಬೆಳೆಯಲು ಸಾಧ್ಯವಿಲ್ಲ. ಈ ಹೊಸವರ್ಷದಲ್ಲಿ ನಿಮಗೆ ನೀವೇ ಸವಾಲೆಸೆದುಕೊಂಡು ಕಂಫರ್ಟ್ ಝೋನ್‌ನಿಂದ ಹೊರಬರಲು ಪ್ರಯತ್ನಿಸಿ. ನಿರಂತರ ಪ್ರಯತ್ನ ಖಂಡಿತಾಫಲ ನೀಡುತ್ತದೆ. ಹೊಸ ಹೊಸ ಜನರನ್ನು ಮಾತನಾಡಿಸಿ. ಕಚೇರಿಯಲ್ಲಿ ಹೊಸ ಗೆಳೆಯರನ್ನು ಮಾಡಿಕೊಳ್ಳಿ. ಮೀಟಿಂಗ್‌ನಲ್ಲಿ ಮಾತನಾಡಿ. ನಿಮ್ಮ ಅಭಿಪ್ರಾಯ, ಸಲಹೆಗಳನ್ನು ನೀಡಿ. ಕಚೇರಿಯಲ್ಲಿಯೇ ಬೇರೆ ಬೇರೆ ಕೆಲಸಗಳನ್ನು ಕಲಿಯಿರಿ. ಹೊಸ ಜವಾಬ್ದಾರಿಗಳನ್ನು ನೀವೇ ಮೈಮೇಲೆಳೆದುಕೊಳ್ಳಿ. ಉದ್ಯೋಗ ಬದಲಿಸಬೇಕೆಂದರೆ ಅದಕ್ಕಾಗಿ ಪ್ರಯತ್ನಿಸಿ. ಇವೆಲ್ಲದರಿಂದಾಗಿ ಕಚೇರಿಯಲ್ಲಿ ಎಲ್ಲರೂ ನಿಮ್ಮನ್ನು ಗುರುತಿಸುವಂತಾಗುತ್ತದೆ. ಜೊತೆಗೆ, ನೀವೂ ಮುಂದಿನ ಸ್ಥಾನಕ್ಕೆ ಏರಲು ಸ್ವಯಂ ಸಿದ್ಧರಾಗುವಿರಿ. 

ಉದ್ಯೋಗದ ಮೇಲೆ ಪ್ರೀತಿ

ಎಲ್ಲದಕ್ಕೂ 'ಯೆಸ್ ಬಾಸ್' ಎನ್ನುತ್ತಾ ಬಾಸ್‌ನ ಪ್ರೀತಿ ಗಳಿಸಬಹುದು. ಆದರೆ, ಇದರಿಂದ ಕತ್ತೆಯಂತೆ ದುಡಿಸಿಕೊಳ್ಳುತ್ತಾರೆಯೇ ಹೊರತು ಬೇರೇನೂ ಪ್ರಯೋಜನವಿಲ್ಲ. ಸುಮ್ಮನೆ ಬಾಸನ್ನು ಮೆಚ್ಚಿಸಲು ಕೆಲಸ ಮಾಡಬೇಡಿ. ನಿಮ್ಮ ಕೆಲಸಕ್ಕೆ ಪ್ರಾಮಾಣಿಕವಾಗಿರಿ. ಏಕೆಂದರೆ, ಬಾಸ್ ಹೇಳಿದಂತೆ ಕೇಳಿಕೊಂಡು ಹೋಗುವುದಷ್ಟರಿಂದ ಕೆಲಸದಲ್ಲಿ ಏಳ್ಗೆ, ಯಶಸ್ಸು ಸಾಧ್ಯವಿಲ್ಲ. ಆದರೆ, ನಿಮ್ಮ ಪ್ರಾಮಾಣಿಕತೆ, ಬದ್ಧತೆ ಹಾಗೂ ಪರಿಶ್ರಮ ಖಂಡಿತಾ ನಿಮ್ಮ ಕೈ ಬಿಡುವುದಿಲ್ಲ. ಇನ್ಫೋಸಿಸ್ ಸಂಸ್ಥಾಪಕ ನಾರಾಯಣಮೂರ್ತಿಯವರು ಹೇಳಿದ ಒಂದು ಮಾತನ್ನು ಆದರ್ಶವಾಗಿಟ್ಟುಕೊಳ್ಳಿ- "ಉದ್ಯೋಗವನ್ನು ಪ್ರೀತಿಸಿ. ಆದರೆ, ನಿಮಗೆ ಉದ್ಯೋಗ ಕೊಟ್ಟ ಕಂಪನಿಯೊಡನೆ ಪ್ರೀತಿಗೆ ಬೀಳಬೇಡಿ. ಏಕೆಂದರೆ, ನಿಮ್ಮ ಕಂಪನಿ ಯಾವಾಗ ಬೇಕಾದರೂ ನಿಮ್ಮನ್ನು ಪ್ರೀತಿಸುವುದು ಬಿಡಬಹುದು. ಅದರೆ, ಉದ್ಯೋಗದ ಮೇಲೆ ಪ್ರೀತಿಯಿದ್ದರೆ ಯಾವ ಕಂಪನಿಯಲ್ಲಿ ಕೂಡಾ ಕೆಲಸ ಸಂತೋಷ, ಯಶಸ್ಸು ನೀಡುತ್ತದೆ."

ಹೊಸ ವರ್ಷದಲ್ಲಿ ಈ ಸಿಂಪಲ್ ರೂಲ್ ಫಾಲೋ ಮಾಡಿ, ಸೇವಿಂಗ್ಸ್ ಹೆಚ್ಚಿಸಿ!

ಅತ್ಯುತ್ತಮ ಕೆಲಸ

ಯಶಸ್ಸಿಗೆ ಯಾವುದೇ ಶಾರ್ಟ್‌ಕಟ್ ಇಲ್ಲ ಎಂಬುದನ್ನು ನೀವೂ ಕೇಳಿರಬಹುದು. ಕೇವಲ ನಮ್ಮ ಪರ್ಫಾರ್ಮೆನ್ಸ್ ಅಷ್ಟೇ ನಮಗೆ ಹೆಸರು ತಂದುಕೊಡುತ್ತದೆ. ಎಲ್ಲರೂ ಗುರುತಿಸುವಂತೆ ಮಾಡುತ್ತದೆ. ಹಾಗಾಗಿ ಸಹೋದ್ಯೋಗಿಗಳು ಹಾಗೂ ಬಾಸ್‌ಗೆ ಎಷ್ಟೇ ಪ್ರೀತಿಪಾತ್ರರಾಗಿರಿ, ಅದರ ಜೊತೆಗೆ ಪ್ರೊಫೆಶನಲಿ ಬೆಳೆಯಲಿಲ್ಲವೆಂದರೆ ನೀವು ಕೆಲವೇ ವರ್ಷಗಳಲ್ಲಿ ವಿಫಲರಾಗುತ್ತೀರಿ. ಹಾಗಾಗಿ, ಗುರಿಗಳನ್ನು ಹಾಕಿಕೊಳ್ಳಿ ಹಾಗೂ ಅವನ್ನು ಸಾಧಿಸಲು ಕಷ್ಟ ಪಟ್ಟು ಕೆಲಸ ಮಾಡಿ. ಡೆಡ್‌ಲೈನ್‌ಗಳನ್ನು ಮಿಸ್ ಮಾಡಬೇಡಿ ಜೊತೆಗೆ, ಏನೇ ಮಾಡಿದರೂ ಅದನ್ನು ಅತ್ಯುತ್ತಮವಾಗಿ ಮಾಡಿ.