ಬಿಎಫ್‌ಸಿಗೆ ಇಟಲಿಯ ಮಾರ್ಕೊ ಪೆಜಯುಲಿ ಹೊಸ ಕೋಚ್
7ನೇ ಆವೃತ್ತಿಯ ಐಎಸ್‌ಎಲ್‌ನಲ್ಲಿ ನೀರಸ ಪ್ರದರ್ಶನ ತೋರಿದ ಬೆಂಗಳೂರು ಎಫ್‌ಸಿ ತಂಡದಲ್ಲಿ ಮೇಜರ್ ಸರ್ಜರಿಯಾಗಿದ್ದು, ಹೊಸ ಮುಖ್ಯ ಕೋಚ್ ನೇಮಕವಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಬೆಂಗಳೂರು(ಫೆ.13): ಭಾರತದ ಪ್ರತಿಷ್ಠ ಫುಟ್ಬಾಲ್ ಕ್ಲಬ್‌ಗಳಲ್ಲಿ ಒಂದಾದ ಬೆಂಗಳೂರು ಎಫ್‌ಸಿ(ಬಿಎಫ್‌ಸಿ) ತಂಡದ ನೂತನ ಕೋಚ್ ಆಗಿ ಇಟಲಿಯ ಮಾರ್ಕೊ ಪೆಜಯುಲಿ ಶುಕ್ರವಾರ ನೇಮಕಗೊಂಡಿದ್ದಾರೆ. 3 ವರ್ಷದ ಅವಧಿಗೆ ಮಾರ್ಕೊ ಪೆಜಯುಲಿಯರೊಂದಿಗೆ ಬಿಎಫ್‌ಸಿ ಒಪ್ಪಂದ ಮಾಡಿಕೊಂಡಿದೆ.
ಐಎಸ್‌ಎಲ್ 7ನೇ ಆವೃತ್ತಿಯ ಬಳಿಕ ಪೆಜಯುಲಿ ತಂಡದ ಜವಾಬ್ದಾರಿ ವಹಿಸಿಕೊಳ್ಳಲಿದ್ದು, ಫೆ.14ರಂದು ನಡೆಯಲಿರುವ ಎಎಫ್‌ಸಿ ಕಪ್ ಪ್ರಾಥಮಿಕ ಹಂತ 2ರ ಪಂದ್ಯ ಅವರ ಮೊದಲ ಸವಾಲಾಗಲಿದೆ. ಸದ್ಯ ಚಾಲ್ತಿಯಲ್ಲಿರುವ ಐಎಸ್‌ಎಲ್ ಟೂರ್ನಿಯಲ್ಲಿ ಬಿಎಫ್‌ಸಿ ತಂಡ ಕಳಪೆ ಪ್ರದರ್ಶನ ತೋರಿದ ಕಾರಣ ಸ್ಪೇನ್‌ನ ಕಾರ್ಲೊಸ್ ಕ್ವಾಡ್ರಾಟ್‌ರನ್ನು ಕೋಚ್ ಹುದ್ದೆಯಿಂದ ಕೆಳಗಿಳಿಸಲಾಗಿತ್ತು.
ಬಿಎಫ್‌ಸಿ ಡೈರೆಕ್ಟರ್ ಪಾರ್ಥ್ ಜಿಂದಾಲ್ ಈ ಬಗ್ಗೆ ಮಾತನಾಡಿದ್ದು, ಯೂರೋಪ್ ಹಾಗೂ ಏಷ್ಯಾದ ಪ್ರಮಖ ಫುಟ್ಬಾಲ್ ಕ್ಲಬ್‌ನೊಂದಿಗೆ ಕಾರ್ಯನಿರ್ವಹಿಸಿ ಅಪಾರ ಅನುಭವ ಹೊಂದಿರುವ ಮಾರ್ಕೊ ಅವರು ಜರ್ಮನ್ ರಾಷ್ಟ್ರೀಯ ವಯೋಮಿತಿ ಫುಟ್ಬಾಲ್ ತಂಡದೊಟ್ಟಿಗೂ ಕಾರ್ಯನಿರ್ವಹಿಸಿ ಯಶಸ್ವಿಯಾಗಿದ್ದಾರೆ. ನಮ್ಮ ಹಿರಿಕಿರಿಯ ಆಟಗಾರರನ್ನು ಸಮನ್ವಯಗೊಳಿಸಿ ಬಲಿಷ್ಠ ತಂಡ ಕಟ್ಟುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.
ಐಎಸ್‌ಎಲ್: 8 ಪಂದ್ಯಗಳ ಬಳಿಕ ಕೊನೆಗೂ ಗೆದ್ದ ಬಿಎಫ್‌ಸಿ..!
ಸುನಿಲ್ ಚೆಟ್ರಿ ನೇತೃತ್ವದ ಬೆಂಗಳೂರು ಎಫ್‌ಸಿ ತಂಡ 7ನೇ ಆವೃತ್ತಿಯ ಇಂಡಿಯನ್ ಸೂಪರ್ ಲೀಗ್ ಟೂರ್ನಿಯಲ್ಲಿ 17 ಪಂದ್ಯಗಳನ್ನಾಡಿ ಕೇವಲ 4 ಗೆಲುವು, 7 ಸೋಲು ಹಾಗೂ 6 ಪಂದ್ಯಗಳಲ್ಲಿ ಡ್ರಾಗೆ ತೃಪ್ತಿಪಟ್ಟುಕೊಂಡಿದೆ.