ಗೋವಾ(ಫೆ.03): ಇಂಡಿಯನ್‌ ಸೂಪರ್‌ ಲೀಗ್‌ (ಐಎಸ್‌ಎಲ್‌) ಫುಟ್ಬಾಲ್‌ ಟೂರ್ನಿಯ 7ನೇ ಆವೃತ್ತಿಯಲ್ಲಿ ಸತತ 8 ಪಂದ್ಯಗಳಲ್ಲಿ ಗೆಲ್ಲುವನ್ನೇ ಕಾಣದೆ ಕಂಗೆಟ್ಟಿದ್ದ ಬೆಂಗಳೂರು ಎಫ್‌ಸಿ (ಬಿಎಫ್‌ಸಿ), ಕೊನೆಗೂ ಗೆಲುವಿನ ಸಂಭ್ರಮ ಆಚರಿಸಿದೆ. ಮಂಗಳವಾರ ನಡೆದ ಈಸ್ಟ್‌ ಬೆಂಗಾಲ್‌ ಎಫ್‌ಸಿ ವಿರುದ್ಧದ ಪಂದ್ಯದಲ್ಲಿ 2-0 ಗೋಲುಗಳ ಗೆಲುವು ಸಾಧಿಸಿದ ಬಿಎಫ್‌ಸಿ, ಸೆಮಿಫೈನಲ್‌ ರೇಸ್‌ನಲ್ಲಿ ಉಳಿದುಕೊಂಡಿದೆ.

ಈ ಪಂದ್ಯಕ್ಕೂ ಮುನ್ನ 8 ಪಂದ್ಯಗಳಲ್ಲಿ 5ರಲ್ಲಿ ಸೋಲು, 3 ಡ್ರಾ ಕಂಡಿದ್ದ ಸುನಿಲ್‌ ಚೆಟ್ರಿ ಪಡೆಗೆ ಈಸ್ಟ್‌ ಬೆಂಗಾಲ್‌ ವಿರುದ್ಧದ ಪಂದ್ಯ ಮಾಡು ಇಲ್ಲವೇ ಮಡಿ ಪಂದ್ಯ ಎನಿಸಿತ್ತು. ನಿರ್ಣಾಯಕ ಪಂದ್ಯದ 11ನೇ ನಿಮಿಷದಲ್ಲೇ ಕ್ಲೈಟಾನ್‌ ಸಿಲ್ವಾ ಗೋಲು ಬಾರಿಸಿ ತಂಡಕ್ಕೆ ಉತ್ತಮ ಆರಂಭ ಒದಗಿಸಿದರು.

ಗೆಲ್ಲುವ ಪಂದ್ಯವನ್ನು ಡ್ರಾ ಮಾಡಿಕೊಂಡ ಬೆಂಗಳೂರು ಎಫ್‌ಸಿ

45ನೇ ನಿಮಿಷದಲ್ಲಿ ಈಸ್ಟ್‌ ಬೆಂಗಾಲ್‌ನ ದೆಬ್ಜಿತ್‌ ಮಜುಂದೆರ್‌ ಸ್ವಂತ ಗೋಲು ಬಾರಿಸಿದರು, ಪರಿಣಾಮ ಮೊದಲಾರ್ಧದ ಅಂತ್ಯಕ್ಕೆ ಬಿಎಫ್‌ಸಿ 2-0 ಮುನ್ನಡೆ ಪಡೆಯಲು ನೆರವಾದರು. ದ್ವಿತೀಯಾರ್ಧದಲ್ಲಿ ಗೋಲು ಬಿಟ್ಟುಕೊಡದೆ ಬಿಎಫ್‌ಸಿ ಪಂದ್ಯ ಜಯಿಸಿತು.

7ನೇ ಆವೃತ್ತಿಯ ಐಎಸ್‌ಎಲ್‌ ಟೂರ್ನಿಯಲ್ಲಿ 15 ಪಂದ್ಯಗಳಲ್ಲಿ 4 ಗೆಲುವುಗಳೊಂದಿಗೆ 18 ಅಂಕ ಗಳಿಸಿರುವ ಬೆಂಗಳೂರು ತಂಡ ಅಂಕಪಟ್ಟಿಯಲ್ಲಿ 6ನೇ ಸ್ಥಾನಕ್ಕೇರಿದೆ. ಲೀಗ್‌ ಹಂತದಲ್ಲಿ ತಂಡಕ್ಕೆ ಇನ್ನು 5 ಪಂದ್ಯಗಳು ಬಾಕಿ ಇವೆ.