ಹೈದ್ರಾಬಾದ್-ಜೆಮ್ಯೆಡ್‌ಪುರ ಐಎಸ್‌ಎಲ್ ಪಂದ್ಯ1-1 ಡ್ರಾ
ಜೆಮ್ಶೆಡ್‌ಪುರ ಎಫ್‌ಸಿ ಹಾಗೂ ಹೈದ್ರಾಬಾದ್ ಎಫ್‌ಸಿ ನಡುವಿನ ಪಂದ್ಯ 1-1 ಗೋಲುಗಳಿಂದ ಡ್ರಾನಲ್ಲಿ ಅಂತ್ಯವಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ವಾಸ್ಕೋ(ಡಿ.03): ಪಂದ್ಯ ಮುಕ್ತಾಯಕ್ಕೆ 5 ನಿಮಿಷ ಬಾಕಿ ಇದ್ದಾಗ ಆಕರ್ಷಕ ಫೀಲ್ಡ್ ಗೋಲು ದಾಖಲಿಸುವ ಮೂಲಕ ಜೆಮ್ಶೆಡ್‌ಪುರ ಎಫ್‌ಸಿಯನ್ನು ಸ್ಟೀಫನ್ ಈಜೆ ಸೋಲಿನಿಂದ ಪಾರು ಮಾಡಿದರು. ಇಂಡಿಯನ್ ಸೂಪರ್ ಲೀಗ್ 7ನೇ ಆವೃತ್ತಿಯಲ್ಲಿ ಬುಧವಾರ ಇಲ್ಲಿ ನಡೆದ ಹೈದ್ರಾಬಾದ್ ಎಫ್‌ಸಿ ಹಾಗೂ ಜೆಮ್ಶೆಡ್‌ಪುರ ಎಫ್‌ಸಿ ಪಂದ್ಯ 1-1 ಗೋಲುಗಳಿಂದ ಡ್ರಾದಲ್ಲಿ ಅಂತ್ಯವಾಯಿತು. ಟೂರ್ನಿಯಲ್ಲಿ ಡ್ರಾಗೊಂಡ 7ನೇ ಪಂದ್ಯ ಇದಾಗಿದೆ.
ಮೊದಲಾರ್ಧದ ಆಟದಲ್ಲಿ ಉಭಯ ತಂಡಗಳ ಆಟಗಾರರು ಗೋಲುಗಳಿಸುವ ಪ್ರಯತ್ನ ಸಫಲ ಕೊಡಲಿಲ್ಲ. ದ್ವಿತೀಯಾರ್ಧದ ಆಟ ಆರಂಭವಾಗಿ 5ನೇ ನಿಮಿಷಕ್ಕೆ ಅರಿಡಾನೆ (50ನೇ ನಿ.), ಜೆಮ್ಶೆಡ್‌ಪುರದ ಭದ್ರಕೋಟೆಯ ಒಳನುಗ್ಗಿ ಗೋಲುಗಳಿಸುವಲ್ಲಿ ಯಶಸ್ವಿಯಾದರು. ಗೆಲುವಿನ ಖಾತೆಯನ್ನೆ ತೆರೆಯದ ಜೆಮ್ಶೆಡ್‌ಪುರ ತಂಡಕ್ಕೆ ಹೆಚ್ಚಿನ ಒತ್ತಡ ಎದುರಾಯಿತು. ಚಾಕಚಕ್ಯತೆಯ ಆಟಕ್ಕೆ ಮುಂದಾದ ಜೆಮ್ಶೆಡ್‌ಪುರ, ಹೈದ್ರಾಬಾದ್ ಆಟಗಾರರನ್ನು ವಂಚಿಸುವ ಯತ್ನ ಕೈ ಕೊಡುತ್ತಿತ್ತು.
ISL 7: ಮುಂಬೈ ಸಿಟಿ ವಿರುದ್ಧ ಕಂಗಾಲಾದ ಈಸ್ಟ್ ಬೆಂಗಾಲ್ !
ಪೂರ್ಣಾವಧಿ ಆಟ ಅಂತ್ಯಕ್ಕೆ 5 ನಿಮಿಷ ಬಾಕಿ ಇದ್ದಾಗ ಸ್ಟೀಫನ್ ಈಜೆ (85ನೇ ನಿ.) ಗೋಲುಗಳಿಸಿ ಸಮಬಲ ಸಾಧಿಸಿದರು. ಅಂತಿಮ ಅವಧಿವರೆಗೂ ಇದೇ ಅಂತರ ಕಾಯ್ದುಕೊಂಡ ಉಭಯ ತಂಡಗಳು ಡ್ರಾಗೆ ತೃಪ್ತಿಪಟ್ಟವು.
ಇಂದಿನ ಪಂದ್ಯ:
ಎಟಿಕೆ ಮೋಹನ್ ಬಗಾನ್ ವರ್ಸಸ್ ಒಡಿಶಾ ಎಫ್‌ಸಿ
ಫತ್ರೋಡಾ ಸ್ಟೇಡಿಯಂ, ರಾತ್ರಿ 7.30ಕ್ಕೆ