ಶಾರ್ಜಾ(ಅ.07): ಹಾಲಿ ಚಾಂಪಿಯನ್‌ ಸೂಪರ್‌ನೋವಾಸ್‌, ಟ್ರಯಲ್‌ಬ್ಲೇಜರ್ಸ್‌ ವಿರುದ್ಧ ಇಲ್ಲಿ ಶನಿವಾರ ನಡೆಯಲಿರುವ ಮಹಿಳಾ ಚಾಲೆಂಜ್‌ ಟಿ20 ಟೂರ್ನಿಯ ಪಂದ್ಯದಲ್ಲಿ ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಈ ಪಂದ್ಯದಲ್ಲಿ ಸೂಪರ್‌ನೋವಾಸ್‌ ಗೆದ್ದರೇ ಮಾತ್ರ ಉಳಿಯಲಿದ್ದು, ಸೋತರೆ ಟೂರ್ನಿಯಿಂದ ಹೊರಬೀಳಲಿದೆ. 

ಮೂರು ತಂಡಗಳು ಪೈಕಿ, ಟ್ರಯಲ್‌ಬ್ಲೇಜರ್ಸ್‌ ಹಾಗೂ ವೆಲಾಸಿಟಿ ತಂಡಗಳು ತಲಾ 1 ಪಂದ್ಯ ಗೆದ್ದಿವೆ. ಟ್ರಯಲ್‌ಬ್ಲೇಜರ್ಸ್‌ ಹಾಗೂ ವೆಲಾಸಿಟಿ ತಂಡಗಳು ತಲಾ 2 ಅಂಕಗಳಿಸಿ ಪಟ್ಟಿಯಲ್ಲಿ ಕ್ರಮವಾಗಿ ಮೊದಲೆರಡು ಸ್ಥಾನದಲ್ಲಿವೆ. ಈಗಾಗಲೇ ಟ್ರಯಲ್‌ಬ್ಲೇಜರ್ಸ್‌ ಮೊದಲ ಪಂದ್ಯದಲ್ಲಿ ಗೆಲುವು ಪಡೆದಿದ್ದು, ಇದೀಗ 2ನೇ ಪಂದ್ಯದಲ್ಲಿ ಸೂಪರ್‌ನೋವಾಸ್‌ ಮಣಿಸಿ ಫೈನಲ್‌ಗೇರುವ ವಿಶ್ವಾಸದಲ್ಲಿದೆ. 

ಮಹಿಳಾ ಟಿ20 ಚಾಲೆಂಜ್; ರೋಚಕ ಪಂದ್ಯದಲ್ಲಿ ಗೆದ್ದು ಬೀಗಿದ ಮಿಥಾಲಿ ಪಡೆ!

ಮೊದಲ ಪಂದ್ಯದಲ್ಲಿ ಸೋತಿರುವ ಹರ್ಮನ್‌ಪ್ರೀತ್‌ ಕೌರ್‌ ನೇತೃತ್ವದ ಸೂಪರ್‌ನೋವಾಸ್‌, ತನ್ನ 2ನೇ ಪಂದ್ಯದಲ್ಲಿ ಟ್ರಯಲ್‌ಬ್ಲೇಜರ್ಸ್‌ ಎದುರು ಗೆದ್ದು ಉತ್ತಮ ನೆಟ್‌ ರನ್‌ರೇಟ್‌ನೊಂದಿಗೆ ವೆಲಾಸಿಟಿಯನ್ನು ಹಿಂದಿಕ್ಕುವ ಉತ್ಸಾಹದಲ್ಲಿದೆ.

ಪಿಚ್‌ ರಿಪೋರ್ಟ್‌: ಶಾರ್ಜಾ ಪಿಚ್‌ ನಿಧಾಗತಿಗೆ ತಿರುಗಿದ್ದು, ಆರಂಭದಲ್ಲಿ ವೇಗಿಗಳು ಯಶಸ್ಸು ಕಾಣಲಿದ್ದಾರೆ. ಸಮಯ ಕಳೆದಂತೆ ಪಿಚ್‌ ತಿರುವು ಪಡೆಯುವುದರಿಂದ ಸ್ಪಿನ್ನರ್‌ಗಳು ನಿರ್ಣಾಯಕ ಎನಿಸಲಿದ್ದಾರೆ. ಟಾಸ್‌ ಪ್ರಮುಖ ಪಾತ್ರವಹಿಸಲಿದೆ.

ಸಂಭವನೀಯ ಆಟಗಾರ್ತಿಯರ ಪಟ್ಟಿ

ಟ್ರಯಲ್‌ಬ್ಲೇಜರ್ಸ್‌: ಡೊಟಿನ್‌, ಸ್ಮೃತಿ (ನಾಯಕಿ), ರಿಚಾ, ಹರ್ಲಿನ್‌, ದೀಪ್ತಿ, ಹೇಮಲತಾ, ಚಂತಾಮ್‌, ಸಲ್ಮಾ, ಎಕ್ಲೆಸ್ಟೋನ್‌, ರಾಜೇಶ್ವರಿ, ಜೂಲನ್‌.

ಸೂಪರ್‌ನೋವಾಸ್‌: ಪ್ರಿಯಾ, ಅಟಪಟ್ಟು, ಜೆಮಿಮಾ, ಹರ್ಮನ್‌ (ನಾಯಕಿ), ಶಶಿಕಲಾ, ಪೂಜಾ, ರಾಧಾ, ಸೆಲ್ಮಾನ್‌, ತಾನಿಯಾ, ಪೂನಂ, ಅಯ್ಬೊಂಗಾ.

ಸ್ಥಳ: ಶಾರ್ಜಾ
ಆರಂಭ: ರಾತ್ರಿ 7.30ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್